Tuesday, 31st January 2023

ನಡೆಯಿರಿ, ನಡೆಯಿರಿ…10000 ಹೆಜ್ಜೆ ನಡೆಯಿರಿ !

ವೈದ್ಯ ವೈವಿಧ್ಯ

drhsmohan@gmail.com

ನಡಿಗೆಯಿಂದ ಎಲ್ಲ ವಯಸ್ಸಿನ ಎಲ್ಲ ರೀತಿಯ ಜನರಿಗೆ ಆರೋಗ್ಯದ ದೃಷ್ಟಿಯಿಂದ ಹಲವು ಲಾಭಗಳಿವೆ. ಕೆಲವು ಕಾಯಿಲೆಗಳು ಬರದಿರುವಲ್ಲಿ, ಆಯುಷ್ಯವನ್ನು ದೀರ್ಘವಾಗಿಸುವಲ್ಲಿ ನಡಿಗೆ ನೆರವಾಗುತ್ತದೆ. ಆದ್ದರಿಂದ, ಯಾವುದೇ ಖರ್ಚಿಲ್ಲದ ವಾಕಿಂಗ್ ನಮ್ಮ ದೈನಂದಿನ ಅಭ್ಯಾಸವಾದಲ್ಲಿ ಒಳ್ಳೆಯದು.

ಕಳೆದ ೩೪ ವರ್ಷಗಳಿಂದ ನಾನು ಮುಂಜಾನೆ ನಡಿಗೆಯ ಅಭ್ಯಾಸ ಇಟ್ಟುಕೊಂಡಿದ್ದೇನೆ. ಆಗ ಕೆಲವೊಮ್ಮೆ 1/3 ಭಾಗದಷ್ಟು ದೂರ ನಿಧಾನವಾಗಿ ಓಡಿ ಉಳಿದ ದೂರವನ್ನು ವಾಕ್ ಮಾಡುತ್ತೇನೆ. ನಿಯತವಾಗಿ ನಡೆಯು ವುದು ಅಥವಾ ವಾಕ್ ಮಾಡುವುದು ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚಿನವರಿಗೆ ಗೊತ್ತಿದೆ (ಇದು ಈಗ ನಡೆಯುತ್ತಿರುವ ಕಾಂಗ್ರೆಸ್ಸಿನ ಜಾಥಾಕ್ಕೆ ಸಂಬಂಧಪಟ್ಟ ವಿಚಾರವಲ್ಲ!). ಈ ಬಗೆಗೆ ಅಧ್ಯಯನ ಮಾಡಿರುವ ಹಲವು ತಜ್ಞರು, ಪ್ರತಿದಿನ 10000 ಹೆಜ್ಜೆ ನಡೆಯುವುದು ಉತ್ತಮ ಎಂದು ಅಭಿಪ್ರಾಯಪಡುತ್ತಾರೆ.

ಆದರೆ ಕೆಲವರಿಗೆ ಕೆಲಸದ ಒತ್ತಡದಲ್ಲಿ ಸಮಯ ಮಾಡಿಕೊಂಡು ಇಷ್ಟು ಹೆಜ್ಜೆಹಾಕಲು ಸಾಧ್ಯವಾಗುವುದಿಲ್ಲ. ಅದಕ್ಕಿಂತ ಹಲವು ಸಾವಿರ ಹೆಜ್ಜೆಗಳಷ್ಟು ಕಡಿಮೆ ವಾಕ್ ಮಾಡಿದರೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ. ಅಲ್ಲದೆ, ನಾವು ವಾಕ್ ಮಾಡುವ ವೇಗವೂ ಈ ವಾಕಿಂಗ್‌ನಿಂದ ದಕ್ಕುವ ಆರೋಗ್ಯದ ಪ್ರಯೋಜನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು
ಇತ್ತೀಚಿನ ಬೃಹತ್ ಅಧ್ಯಯನವೊಂದರಲ್ಲಿ ಗೊತ್ತಾಗಿದೆ.

‘10000 ಹೆಜ್ಜೆಗಳು ನಡೆಯಬೇಕು ಎಂಬುದು ಕೆಲವು ದಶಕಗಳಿಂದ ಸೂಚಿತವಾದ ಗುರಿ; ಇದರಿಂದ ಇಂಥದೇ ನಿರ್ದಿಷ್ಟ ಲಾಭ ದೊರಕುತ್ತದೆ ಎಂದು ಹೇಳುವುದು ಕಷ್ಟ’ ಎನ್ನುತ್ತಾರೆ ಈ ಅಧ್ಯಯನದ ಮುಖ್ಯಸ್ಥರಾದ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಪ್ರೊಫೆಸರ್ ಎಮಾನುಯೆಲ್ ಸ್ಟಮಟಕೀಸ್. ‘ಎಲ್ಲ ಕಾರಣಗಳಿಂದ ಬರುವ ಒಬ್ಬ ವ್ಯಕ್ತಿಯ ಮರಣದ ಸಾಧ್ಯತೆ, ಪ್ರತಿ 2000 ಹೆಜ್ಜೆ ನಡೆದಾಗ ಶೇ. ೮ರಿಂದ ೧೧ರಷ್ಟು ಕಡಿಮೆಯಾಗುತ್ತದೆ.

ಪ್ರತಿದಿನ ನಾವು ಹೆಜ್ಜೆಯ ಸಂಖ್ಯೆ ಹೆಚ್ಚು ಮಾಡಿದಷ್ಟೂ ನಮ್ಮ ದೇಹಕ್ಕೆ ಒಳ್ಳೆಯದು. ಕನಿಷ್ಠ ಸಂಖ್ಯೆಯಿಂದ ಪ್ರತಿ 1000 ಹೆಜ್ಜೆ ಹೆಚ್ಚುಮಾಡುತ್ತ ಹೋದ ಹಾಗೆಲ್ಲ ದೇಹದ ಆರೋಗ್ಯಕ್ಕೆ ಒಳ್ಳೆಯದು’ ಎಂದು ಅಭಿಪ್ರಾಯಪಡುತ್ತಾರೆ ಈ ಅಧ್ಯಯನದಲ್ಲಿ ಒಳಗೊಳ್ಳದ ಸ್ಕಿಡ್‌ಮೋರ್ ಕಾಲೇಜಿನ ಫಿಸಿಯಾಲಜಿ ವಿಭಾಗದ ಪ್ರೊ.ಪಾಲ್ ಆರ್ಸಿರಿಯೋ. ವಾಕಿಂಗ್ ಮಾಡದ, ಹೊಸದಾಗಿ ಮಾಡಲು ತೊಡಗಿದ ಬಹಳಷ್ಟು ಉತ್ಸುಕರಿಗೆ ಇದು ಬಹಳ ಉತ್ತೇಜನಕಾರಿಯಾದವಿಷಯ ಎಂದು ಅವರು ಈ ಅಧ್ಯಯನದ ಮಹತ್ವವನ್ನು ಎತ್ತಿ ಹೇಳುತ್ತಾರೆ.

ಇತ್ತೀಚಿನ ಜಾಮಾ ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ಈ ಅಧ್ಯಯನ ಪ್ರಕಟಗೊಂಡಿದೆ. ಪ್ರತಿದಿನ 10000 ಹೆಜ್ಜೆಗಳನ್ನು ನಡೆಯಲು ಸಾಧ್ಯವಿಲ್ಲದಿದ್ದರೆ ಹೀಗೂ ಮಾಡಬಹುದು-ವೇಗವಾಗಿ ೨-೩ ನಿಮಿಷಗಳಷ್ಟು ನಡೆದು, ಪುನಃ ಎಂದಿನ ಸಹಜ ನಡಿಗೆ ನಡೆದು ಈ ತರಹದ ವೇಗದ ನಡಿಗೆಯನ್ನು ಕೆಲವು ಬಾರಿ ಪುನರಾವರ್ತಿಸಿದರೆ ದೇಹದಾರ್ಢ್ಯತೆ ಉತ್ತಮಗೊಳ್ಳುತ್ತದೆ. ಹಾಗೆಯೇ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಬಹಳಷ್ಟು ಕಡಿಮೆಯಾಗುತ್ತವೆ ಎಂಬುದು ಮೇಲಿನ ಅಧ್ಯಯನದ ಮುಖ್ಯಸ್ಥ ಸ್ಟಮಟಕೀಸ್‌ರ ಅಭಿಮತ.

ವಾಕ್ ಮಾಡಲು ಕಡಿಮೆ ಸಮಯ ಇದ್ದವರಿಗೆ ಇದು ಮತ್ತೊಂದು ಸುಲಭೋಪಾಯ. ಹೆಚ್ಚು ಹೆಜ್ಜೆಗಳು ವಾಕ್ ಮಾಡಿದಷ್ಟೂ ಉತ್ತಮ. ಪ್ರತಿದಿನ 4000 ಹೆಜ್ಜೆ ಹಾಕುವುದರಿಂದಲೂ ದೇಹ ಮತ್ತು ಆರೋಗ್ಯಕ್ಕೆ ಸಿಗಬೇಕಾದ ಲಾಭ ಲಭ್ಯವಾಗುತ್ತದೆ. ಪ್ರತಿದಿನ 9800 ಹೆಜ್ಜೆ ಹಾಕುವುದರಿಂದ ಚಿತ್ತವೈಕಲ್ಯ ಬರುವ ಸಾಧ್ಯತೆ ಶೇ. 50ರಷ್ಟು, 3800 ಹೆಜ್ಜೆ ಹಾಕುವುದರಿಂದ ಶೇ. ೨೫ರಷ್ಟು ಕಡಿಮೆ ಆಗುತ್ತದೆ ಎಂಬುದು ಈ ಅಧ್ಯಯನದಲ್ಲಿ ಕಂಡುಬಂದ ಇನ್ನೊಂದು ಮುಖ್ಯವಿಚಾರ. ಹಾಗೆಯೇ ಈ
ವಾಕಿಂಗ್‌ನಿಂದಾಗುವ ಆರೋಗ್ಯದ ಲಾಭವು ವ್ಯಕ್ತಿಯ ವಯಸ್ಸನ್ನು ಅವಲಂಬಿಸಿಲ್ಲ.

ಕಡಿಮೆ ವಯಸ್ಸಿನವರು ತಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಇನ್ನೂ ಹೆಚ್ಚಿನ ಹೆಜ್ಜೆ ಮತ್ತು ಶ್ರಮ ಹಾಕಬೇಕು ಎಂಬುದು ಹಿಂದಿನ ಕೆಲವು ಅಧ್ಯಯನಗಳಲ್ಲಿ ಕಂಡುಬಂದಿತ್ತು. ಯು.ಕೆ. ಬಯೋಬ್ಯಾಂಕ್‌ನ 78500 ವ್ಯಕ್ತಿಗಳಲ್ಲಿ ಈ ಅಧ್ಯಯನ ಕೈಗೊಳ್ಳಲಾಯಿತು. ಅವರೆಲ್ಲ ೭ ದಿನಗಳ ಕಾಲ ದಿನದ ೨೪ ಗಂಟೆಯೂ ನಿರ್ದಿಷ್ಟಪಡಿಸಿದ ಫಿಟ್‌ನೆಸ್ ಟ್ರ್ಯಾಕರ್ ಧರಿಸಿದ್ದರು.
ಇವರೆಲ್ಲರ ಸರಾಸರಿ ವಯಸ್ಸು ೬೧ ವರ್ಷ. ಇದು 10000 ಹೆಜ್ಜೆಗಳ ವಾಕಿಂಗ್ ಮಾಡಿಸಿ ಕೈಗೊಳ್ಳಲಾದ ಅತಿದೊಡ್ಡ ಅಧ್ಯಯನ. ಸದರಿ ವ್ಯಕ್ತಿಗಳನ್ನು ಈ ಅಧ್ಯಯನದಲ್ಲಿ ೭ ವರ್ಷ ನಿರಂತರವಾಗಿ ಗಮನಿಸಲಾಯಿತು, ಫಾಲೋ-ಅಪ್ ಮಾಡಲಾಯಿತು.

ಆಗ, ಪುರುಷರು-ಮಹಿಳೆಯರು ಇಬ್ಬರಲ್ಲೂ ಕೆಲವು ವಿಧದ ಕ್ಯಾನ್ಸರ್, ಹೃದಯದ ಕಾಯಿಲೆಗಳು, ಮರಣ ಸಂಭವಿಸುವ ಸಾಧ್ಯತೆ ಬಹಳ ಕಡಿಮೆಯಾಗಿದ್ದು ಕಂಡುಬಂದಿತು. ಈ ಅಧ್ಯಯನದ ಪೂರ್ವದಲ್ಲಿ ಹೃದಯದ ಕಾಯಿಲೆಗಳು ಮತ್ತು ಕ್ಯಾನ್ಸರ್
ಇರುವವರನ್ನು ಅಧ್ಯಯನದಿಂದ ಹೊರಗಿಡಲಾಯಿತು. ಯಾವುದೇ ವಯಸ್ಸಿನಲ್ಲಿಯೂ ಸಂದರ್ಭದಲ್ಲಿಯೂ ನಮ್ಮ ಆರೋಗ್ಯ ವನ್ನು ಸುಸ್ಥಿರವಾಗಿಡಲು, ಹೆಚ್ಚುಮಾಡಲು ನಿಯತವಾದ ನಡಿಗೆ ಅಥವಾ ವಾಕಿಂಗ್, ಅದೂ ಹೆಚ್ಚು ಸಂಖ್ಯೆಯ ಹೆಜ್ಜೆಗಳು ತುಂಬ ಮುಖ್ಯವಾದ ಪಾತ್ರ ವಹಿಸುತ್ತವೆ ಎಂಬುದು ಈ ಅಧ್ಯಯನ ಕೈಗೊಂಡವರ ಅಭಿಪ್ರಾಯ.

ಇದರಲ್ಲಿಯೂ ಹಲವಾರು ಮಿತಿಗಳಿವೆ ಎಂದು ಒಪ್ಪುತ್ತ ಇದು ಕೇವಲ ಕೆಲವು ಮಾಪನಗಳನ್ನು ಇಟ್ಟುಕೊಂಡು ಸಮೀಕ್ಷೆಯ ರೀತಿ ಕೈಗೊಂಡ ಅಧ್ಯಯನವಾಗಿದ್ದು, ಇದನ್ನು ದೃಢೀಕರಿಸಲು Randomized Controlled Study ಯನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಮಾಡಬೇಕು ಎಂಬುದು ಅಧ್ಯಯನಕಾರರ ಅಭಿಮತ.

ಹೆಜ್ಜೆಯ ಸಂಖ್ಯೆಗಳನ್ನು ಮತ್ತು ವೇಗವನ್ನು ಫಿಟ್ ನೆಸ್ ಟ್ರ್ಯಾಕರ್ ಎಂಬ ಉಪಕರಣವಿಲ್ಲದೆ ಖಚಿತವಾಗಿ ಅಳೆಯುವುದು ಸುಲಭವಲ್ಲ ಹಾಗೂ ಅದು ನಿಖರವೂ ಅಲ್ಲ. ಅದಕ್ಕೆ ಜನಸಾಮಾನ್ಯರು ಯಾರ ಜತೆಗೂ ಮಾತನಾಡದೆ ವೇಗವಾಗಿ ನಡೆಯಬೇಕು ಅಥವಾ ನಿರ್ದಿಷ್ಟ ದೂರವನ್ನು ಗುರುತಿಸಿ ಅದನ್ನು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಕ್ರಮಿಸಲು
ಯತ್ನಿಸಬೇಕು (ನಾನು ನಡೆಯುವುದು ಇದೇ ರೀತಿಯಲ್ಲಿ). ನಡಿಗೆಯ ಲಾಭಗಳು: ನಡಿಗೆಯ ಪ್ರಕ್ರಿಯೆಯು ಎಲ್ಲ ವಯಸ್ಸಿನ ಎಲ್ಲ ರೀತಿಯ ಜನರಿಗೆ ಆರೋಗ್ಯದ ದೃಷ್ಟಿಯಿಂದ ಹಲವು ಲಾಭಗಳನ್ನು ನೀಡುತ್ತದೆ.

ಕೆಲವು ಕಾಯಿಲೆಗಳು ಬರದಿರುವಲ್ಲಿ ಹಾಗೂ ನಮ್ಮ ಆಯುಷ್ಯವನ್ನು ದೀರ್ಘವಾಗಿಸುವಲ್ಲಿ ಇದು ಸಹಾಯ ಮಾಡುತ್ತದೆ. ಆದ್ದರಿಂದ, ಯಾವುದೇ ಖರ್ಚಿಲ್ಲದ ಈ ವಾಕಿಂಗ್ ಅನ್ನು ನಮ್ಮ ದೈನಂದಿನ ಅಭ್ಯಾಸವಾಗಿಸಿಕೊಳ್ಳುವುದು ಒಳ್ಳೆಯದು.
೧) ದೇಹದ ಕ್ಯಾಲೊರಿಯನ್ನು ಕಡಿಮೆ ಮಾಡುತ್ತದೆ (ದಹಿಸುತ್ತದೆ): ನಿಯತವಾದ ನಡಿಗೆಯು ದೇಹದ ಕ್ಯಾಲೊರಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಪರಿಣಾಮ, ವ್ಯಕ್ತಿಯ ದೇಹತೂಕ ಕಡಿಮೆಯಾಗುತ್ತದೆ. ಆದರೆ ಈ ಕ್ಯಾಲೊರಿ ದಹನದ ಪ್ರಕ್ರಿಯೆಯು ಹಲವಾರು ವಿಷಯಗಳನ್ನು ಅವಲಂಬಿಸಿದೆ. ಮುಖ್ಯವಾಗಿ ನಡಿಗೆಯ ವೇಗ, ನಡೆದಾಡುವ ದೂರ, ವ್ಯಕ್ತಿಯ ಮೊದಲಿನ ತೂಕ, ನಡೆದಾಡುವ ಸ್ಥಳ ಅಂದರೆ ಏರುಪ್ರದೇಶವಾದರೆ ಕ್ಯಾಲೊರಿ ಹೆಚ್ಚು ದಹನವಾಗುತ್ತದೆ.

೨) ಹೃದಯವನ್ನು ಪ್ರಬಲಗೊಳಿಸುತ್ತದೆ: ವಾರ ದಲ್ಲಿ ೫ ದಿನ, ಪ್ರತಿದಿನ ೩೦ ನಿಮಿಷ ವಾಕ್ ಮಾಡುವುದರಿಂದ ಕಾರೋನರಿ ಹೃದಯ ಕಾಯಿಲೆ ಬರುವ ಸಂಭವ ಶೇ. ೧೯ರಷ್ಟು ಕಡಿಮೆಯಾಗುತ್ತದೆ. ವಾಕಿಂಗ್‌ನ ಅವಧಿ ಮತ್ತು ದೂರ ಜಾಸ್ತಿಮಾಡಿದರೆ
ಈ ರಿಸ್ಕ್ ಇನ್ನೂ ಕಡಿಮೆಯಾಗುತ್ತದೆ.

೩) ಬಿ.ಪಿ. ಕಡಿಮೆ ಮಾಡುತ್ತದೆ: ಇದು ಎಲ್ಲರಿಗೂ ಅನ್ವಯವಾಗುತ್ತದೆ. ಮುಟ್ಟಾಗುವುದು ಸ್ಥಗಿತವಾದ ಮಹಿಳೆಯರು ಪ್ರತಿದಿನ ೧.೫-೨.೫ ಕಿ.ಮೀ.ನಷ್ಟು ವಾಕ್ ಮಾಡಿದರೆ ೨೪ ವಾರಗಳಲ್ಲಿ ಅವರ ರಕ್ತ ದೊತ್ತಡ ೧೧-೧೨ ಪಾಯಿಂಟ್‌ನಷ್ಟು ಕಡಿಮೆ
ಯಾಗುತ್ತದೆ.

೪) ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡಲು ನೆರವಾಗುತ್ತದೆ: ಬೆಳಗ್ಗೆಯ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟಗಳ ನಂತರ ೧೫ ನಿಮಿಷಗಳ ಕಾಲ ವಾಕ್ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶ ಗಮನಾರ್ಹವಾಗಿ ಕಡಿಮೆಯಾಗುತ್ತದೆ
ಎನ್ನಲಾಗಿದೆ. ಈ ಬಗೆಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ.

೫) ಸಂದುನೋವನ್ನು ಕಡಿಮೆಮಾಡುತ್ತದೆ: ಕಾಲಿನ ಸಂದುಗಳನ್ನು, ಮುಖ್ಯವಾಗಿ ಮೊಳಕಾಲು ಮತ್ತು ಸೊಂಟದ ಸಂದು ಗಳನ್ನು ಈ ವಾಕಿಂಗ್ ಪ್ರಕ್ರಿಯೆ ರಕ್ಷಿಸುತ್ತದೆ. ಈ ಭಾಗದ ಮಾಂಸಖಂಡಗಳನ್ನು ಸಕ್ರಿಯವಾಗಿಸಿ ಅವುಗಳ ದ್ರವಗಳನ್ನು
ಹೆಚ್ಚಿಸುತ್ತದೆ. ಸಂದುಗಳನ್ನು ಆಧರಿಸುವ ಮಾಂಸಖಂಡಗಳನ್ನು ಸಬಲಗೊಳಿಸುತ್ತದೆ. ಹಾಗೆಯೇ ಸಂದುನೋವು ಇರುವ ವ್ಯಕ್ತಿಗಳಲ್ಲಿ ಆ ನೋವನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ೮-೧೦ ಕಿ.ಮೀ. ನಡೆಯುವವರಲ್ಲಿ ಸಂದುನೋವು (Arthritis))
ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಆಸ್ಟಿಯೋ ಪೋರೋಸಿಸ್ ಎನ್ನಲಾಗುವ ಮೂಳೆ ಮೃದುವಾಗುವ ಕಾಯಿಲೆ ಇರುವವರಲ್ಲಿ ಮೂಳೆಯ ಅಂಶ ಸವೆಯುವ ಪ್ರಕ್ರಿಯೆಯನ್ನು ಈ ವಾಕಿಂಗ್ ಕಡಿಮೆ ಮಾಡುತ್ತದೆ ಅಥವಾ ನಿಲ್ಲಿಸುತ್ತದೆ.

೬) ದೇಹದ ಪ್ರತಿರೋಧ ಶಕ್ತಿಯನ್ನು ಪುಷ್ಟೀಕರಿಸುತ್ತದೆ: ಆಗಾಗ ಥಂಡಿ, ಶೀತ, – ಆಗುವವರಲ್ಲಿ ದೇಹದ ಪ್ರತಿರೋಧ ಶಕ್ತಿಯನ್ನು ವೃದ್ಧಿಸಿ ಮೇಲಿನ ಲಕ್ಷಣಗಳು ಉಂಟಾಗುವ ಸಂಭವವನ್ನು ತೀವ್ರವಾಗಿ ತಗ್ಗಿಸುತ್ತದೆ. – ಋತುವಿನಲ್ಲಿ 1000 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಸಾಮಾನ್ಯ ವೇಗದಲ್ಲಿ ದಿನಕ್ಕೆ ೩೦-೪೫ ನಿಮಿಷ ವಾಕ್ ಮಾಡುವವರನ್ನು ಏನೂ ವಾಕ್ ಮಾಡದವರಿಗೆ ಹೋಲಿಸಿದಾಗ ಶೇ. ೪೩ರಷ್ಟು ಅನಾರೋಗ್ಯದ ದಿವಸಗಳು ಕಡಿಮೆಯಾಗಿದ್ದವು.

೭) ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ: ವಾಕ್ ಮಾಡುವುದರಿಂದ ಉಸಿರಾಟದ ಕ್ರಿಯೆ ಹೆಚ್ಚಾಗುತ್ತದೆ. ಅದು ದೇಹದಲ್ಲಿ ಹರಿದಾಡುವ ಆಮ್ಲಜನಕದ ಅಂಶವನ್ನು ಜಾಸ್ತಿಮಾಡುತ್ತದೆ. ಹಾಗೆಯೇ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುವ
ಕಾರ್ಟಿಸೋಲ್ ಎಪಿನೆ-ನ್ ಮತ್ತು ನಾರ್ ಎಪಿ ನೆ-ನ್ ಹಾರ್ಮೋನುಗಳ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಹಾಗೆಯೇ ಯಾವುದೇ ಕಾಯಿಲೆ ಗುಣವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

೮) ಮೂಡ್ ವೃದ್ಧಿಸುತ್ತದೆ: ವಾಕಿಂಗ್‌ನಿಂದ ವ್ಯಕ್ತಿಯ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಆತನ ಕಳವಳ, ಆತಂಕ, ಮಾನಸಿಕ ಖಿನ್ನತೆ ಮತ್ತುಋಣಾತ್ಮಕ ಮೂಡ್ ಅನ್ನು ವಾಕಿಂಗ್ ಬಹಳಷ್ಟು ಕಡಿಮೆ ಮಾಡುತ್ತದೆ. ವ್ಯಕ್ತಿಯ ಆತ್ಮಶಕ್ತಿಯನ್ನು
ವೃದ್ಧಿಸುತ್ತದೆ, ಸಾಮಾಜಿಕ ಏಕಾಂಗಿತನದ ಭಾವನೆ ಯನ್ನು ಹೋಗಲಾಡಿಸುತ್ತದೆ. ವಾಕಿಂಗ್ ಅವಽಯಲ್ಲಿ ದೇಹದ ಸಹಜ ನೋವುನಿವಾರಕಗಳಾದ ಎಂಡಾರ್ಫಿನ್‌ಗಳು ಸ್ರವಿಸಲ್ಪಡುತ್ತವೆ. ಇದು ಯಾವುದೇ ದೈಹಿಕ ವ್ಯಾಯಾಮದಿಂದ ದೊರಕುವ
ಭಾವನಾತ್ಮಕವಾದ ಪ್ರಯೋಜನ, ಹಿತವಾದ ಅಂಶ.

೯) ಆಯುಷ್ಯ ಹೆಚ್ಚಿಸುತ್ತದೆ: ನಮ್ಮ ಮರಣದ ಸಾಧ್ಯತೆಯನ್ನು ಸಾಮಾನ್ಯ ನಡಿಗೆಯು ನಿಧಾನ ನಡಿಗೆಗಿಂತ ಶೇ. ೨೦ರಷ್ಟು ಕಡಿಮೆ ಮಾಡಿದರೆ, ಅದೇ ವೇಗವಾದ ನಡಿಗೆಯು (ಕನಿಷ್ಠ ೧ ಗಂಟೆಗೆ ೪ ಮೈಲು ದೂರ) ಇನ್ನೂ ಶೇ. ೨೪ರಷ್ಟು ಕಡಿಮೆ ಮಾಡುತ್ತದೆ. ಎಲ್ಲ ಕಾರಣಗಳಿಂದ ಬರುವ ಮರಣ, ಹೃದಯದ ಕಾಯಿಲೆ, ಕ್ಯಾನ್ಸರ್ ಕಾಯಿಲೆಯಿಂದ ಬರುವ ಮರಣ ಇದನ್ನೆಲ್ಲ ಈ ಸಂಶೋಧನೆಯಲ್ಲಿ ತೆಗೆದುಕೊಂಡು ಲೆಕ್ಕ ಹಾಕಲಾಗಿದೆ.

೧೦) ಕಾಲಿನ ಮಾಂಸಖಂಡಗಳನ್ನು ಸದೃಢಗೊಳಿಸುತ್ತದೆ: ಮಾಂಸಖಂಡಗಳನ್ನು ಇನ್ನೂ ಜಾಸ್ತಿ ಬಲಗೊಳಿಸಲು ಗುಡ್ಡಬೆಟ್ಟಗಳ ಪ್ರದೇಶದಲ್ಲಿ, ಟ್ರೆಡ್ ಮಿಲ್ ಮೇಲೆ ಅಥವಾ ಮೇಲೇರುವ ಮೆಟ್ಟಿಲುಗಳ ಮೇಲೆ ನಡಿಗೆ ಮಾಡಿದರೆ ಇನ್ನೂ ಉತ್ತಮ. ಸೈಕಲ್ ಸವಾರಿ, ನಿಧಾನವಾಗಿ ಓಡುವುದು ಇವುಗಳನ್ನು ವಾಕಿಂಗ್ ಜತೆಯೂ ಮಾಡಬಹುದು.

೧೧) ಸೃಜನಾತ್ಮಕ ಮನಸ್ಥಿತಿ ವೃದ್ಧಿಸುತ್ತದೆ: ನಿಯತವಾದ ವಾಕಿಂಗ್ ಮಿದುಳನ್ನು ಸ್ವಚ್ಛವಾಗಿಡುತ್ತದೆ. ಸೃಜನಾತ್ಮಕವಾಗಿ ಯೋಚಿಸಲು ಪ್ರೇರೇಪಿಸುತ್ತದೆ. ಮನೆ, ಕಟ್ಟಡದ ಹೊರಗಡೆ ನಡಿಗೆ ಮಾಡುವವರಲ್ಲಿ, ಒಳಗೆ ಇರುವವರಿಗಿಂತ ಹೆಚ್ಚು ಹೊಸ ಆಲೋಚನೆಗಳು, ಯೋಜನೆಗಳು ಸುರಿಸುತ್ತವೆ.

೧೨) ಇನ್ನಿತರ ಲಾಭಗಳು: ಇಳಿವಯಸ್ಸಿನಲ್ಲಿ ನಿದ್ರೆ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಯಾವುದೇ ಕಾಯಿಲೆ ಗುಣವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಒಟ್ಟಾರೆ ಹೇಳುವುದಾದರೆ, ನೀವು ನಡೆಯುವ ಪ್ರತಿಯೊಂದು ಹೆಜ್ಜೆಯೂ ಮುಖ್ಯವೇ. ಇದರಿಂದ ದೊರೆಯುವ ಆರೋಗ್ಯದ ಲಾಭ ನಾವು ನಡೆಯುವ ಮೊದಲ ಹೆಜ್ಜೆಯಿಂದಲೇ ಆರಂಭವಾಗುತ್ತದೆ. ಹಾಗಾದರೆ ತಡವೇಕೆ? ನೀವಿನ್ನೂ ವಾಕಿಂಗ್
ಮಾಡುತ್ತಿಲ್ಲವಾದರೆ ನಡೆಯಲು ಆರಂಭಿಸಿ, ವೇಗವಾಗಿ ನಡೆಯಿರಿ.

error: Content is protected !!