Tuesday, 27th July 2021

ನಾವು ಈಗಲ್ಲ, ಎಂದಿಗೂ ಹೀಗೆ ಇದ್ದೇವೆ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ನಾವು ಜೀವಿಸುತ್ತಿರುವ ಈ ಕಾಲಾವಧಿಯೂ ಅತಿ ಕೆಟ್ಟದ್ದು ಎಂದು ಆಗಾಗ ಎಲ್ಲರಿಗೂ ಅನಿಸುತ್ತಿರುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ಪ್ರಕೃತಿ ನಾಶದಿಂದ ಹೆಚ್ಚು ತ್ತಿರುವ ಭೂಮಿಯ ತಾಪಮಾನ, ಜತೆಜತೆಗೆ ಶಬ್ದ ಮಾಲಿನ್ಯ, ಬೂಟಾಟಿಕೆಯ ಬದುಕುವ ರೀತಿ, ಕರೋನಾ ಬಂದು ಹೋಗಿ, ಬಂದು ಹೋಗಿ, ಮಾಡುತ್ತಿರುವು ದಂತೂ ಇನ್ನೂ ಬದುಕನ್ನು ಅಸಹನೀಯಗೊಳಿಸಿದೆ.

ಹೀಗಾಗಿ ದೇವರು, ವ್ರತ, ಪೂಜೆಗಳನ್ನು ದೇವರು ಇದಕ್ಕಾಗಿಯೇ ಕಾದು ಕೂತಿದ್ದಾನೆನೋ ಎನ್ನುವಂತೆ ಕಂಡ ಕಂಡ ದೇವರು, ಕಂಡ ಕಂಡ ಕ್ಷೇತ್ರಗಳಿಗೆ ದಾಳಿ ಮಾಡುತ್ತಿದ್ದಾರೆನೋ ಎನ್ನುವಂತೆ ಜನ ನುಗ್ಗುತ್ತಿದ್ದಾರೆ. ಗುಡಿಗಳಲ್ಲಿ ದೇವರಿಲ್ಲ, ಕ್ಷೇತ್ರಗಳಲ್ಲಿ ದೇವರಿಲ್ಲ, ಕಲ್ಲು ದೇವರು ದೇವರಲ್ಲ ಎಂದರೆ, ಹಾಗೆ ಅಂದವನ ತಲೆ ಮೇಲೆ ಕಲ್ಲು ಎತ್ತಿಹಾಕಲು ರೆಡಿಯಾಗಿದ್ದಾರೆ, ದೇವರು ಹೊರಗಿಲ್ಲ, ನಿಮ್ಮ ಹೃತ್ಕಮಲದಲ್ಲಿದ್ದಾನೆ ಎನ್ನುವವ ನಿಗಂತೂ ಅವನ ಎದೆ ಮೇಲೆ ಕೂತು ಅವನ ಹೃದಯ ವನ್ನೇ ಕಮಲದ ಹೂವನ್ನು ಕಿತ್ತುವಂತೆ ಕಿತ್ತು ಕಾಲಲ್ಲಿ ತುಳಿಯುವ ಮದಗಜದಂತೆ ಮಾಡಿದರೂ ಮಾಡಿದರೇ!

ಇವು ಸಾಮಾನ್ಯ ಭಕ್ತರ ಪಾಡಾಯಿತು. ಇನ್ನು ಸ್ವಲ್ಪ ಯೋಚಿಸುವವರು ಯೋಗ, ಧ್ಯಾನ, ಮೌನ, ಪ್ರಾಣಾ ಯಾಮ ಎಂದೆಲ್ಲ ಆಚರಿಸುತ್ತಿದ್ದಾರೆ. ಪಿರಮಿಡ್ ಯೋಗ, ಆರ್ಟ್ ಆಫ್ ಲಿವಿಂಗ್, ಬ್ರಹ್ಮಕುಮಾರಿ, ಸಹಜ ಸ್ಥಿತಿಯೋಗ, ವಿಪಶ್ಯನಾ ಇತ್ಯಾದಿ ಧ್ಯಾನ ಕೇಂದ್ರಗಳಲ್ಲಿ  ಅವರ ಅಭಿರುಚಿ, ವಯಸ್ಸು, ಸಮಯಕ್ಕೆ ತಕ್ಕಂತೆ ನೆಮ್ಮದಿಗಾಗಿ ಇವನ್ನು ಆರಿಸಿಕೊಂಡಿದ್ದಾರೆ. ಇನ್ನುಳಿದವರು ಏನನ್ನೂ ಆಯ್ದುಕೊಳ್ಳದೇ ಮನಬಂದಂತೆ ತಿಂದು, ಕುಡಿದು, ತಮ್ಮ ಜೀವನದ ಆಯ್ಕೆ ಯನ್ನು ಯಮನಿಗೇ ಬಿಟ್ಟಿದ್ದಾರೆ. ಈ ದೇಶದ ಕೃಷಿ ಕಾಯಕವು ಸರ್ವ ರೀತಿ ಯಲ್ಲೂ ಧ್ಯಾನ, ವ್ಯಾಯಾಮ, ಯೋಗ, ಶ್ರಮ, ಸಹನೆಗಳ ಸಂಕೇತವಾಗಿತ್ತು.

ಆದರೆ ಸ್ವಾತಂತ್ರ್ಯ ನಂತರದಲ್ಲಿ ಬ್ರಿಟಿಷರನ್ನೆನೋ ಓಡಿಸಿದೆವು, ಆದರೆ ಅವರ ಆಹಾರ ಪದ್ಧತಿ, ಶಿಕ್ಷಣ, ಜೀವನ ಪದ್ಧತಿ, ಡೌಲು, ದೌಲತ್ತುಗಳನ್ನು ಓಡಿಸಲಾಗದೇ ಎಲ್ಲವನ್ನೂ ವಿಜ್ಞಾನಕ್ಕೊಪ್ಪಿಸಿ ನಮ್ಮ ನೆಮ್ಮದಿಯನ್ನೇ ಒತ್ತೆಯಿಟ್ಟು, ಈಗೀಗಂತೂ ಕಳೆದುಕೊಂಡೇ ಬಿಟ್ಟಿದ್ದೇವೆ. ಆಧ್ಯಾತ್ಮ, ತತ್ವಜ್ಞಾನಗಳನ್ನಂತೂ ಅಪಹಾಸ್ಯ ಮಾಡಿ ನಗುವ ಮಟ್ಟಕ್ಕೆ ನಮ್ಮ ಲದ್ದಿ ಜೀವಿಗಳು ತಂದಿಟ್ಟು ಬಿಟ್ಟರು. ಸತ್ಯಗಳನ್ನು, ವಾಸ್ತವಗಳನ್ನು ಒಪ್ಪಿಕೊಳ್ಳದೇ ತರ್ಕ, ವಾದ, ಹೀಗಳೆಯುವಿಕೆಯೇ ಬುದ್ಧಿ ವಂತರ ಲಕ್ಷಣ ಎನ್ನುವಂತೆ ಮಾಡಿಬಿಟ್ಟರು. ಜ್ಞಾನ, ಭಕ್ತಿ, ವೈರಾಗ್ಯ, ಶ್ರವಣ, ಕೀರ್ತನ, ಜಪ, ತಪ, ಉಪದೇಶ, ಅಗ್ನಿಹೋತ್ರ, ಸ್ವಾಧ್ಯಾಯ, ಸಜ್ಜನಸಂಗ, ಮಂತ್ರ, ಹೋಮ, ಹವನ ಎಂಬುವುಗಳೆಲ್ಲ ಕೆಲಸಕ್ಕೆ ಬಾರದ ಮೈಗಳ್ಳರ, ಉಚ್ಛ ಜಾತಿಯವರ ಸೋಮಾರಿತನದ ಸಂಕೇತ ಎಂಬಂತೆ ಸಂತೆಕೂಡಿಸಿ ಬೊಬ್ಬೆ ಹೊಡೆಯುವವರ ಕೆಲಸವಾಗಿ ಹೋಯಿತು.

ದರ್ಪ, ದಾರ್ಷ್ಟ್ಯ, ದೌರ್ಜನ್ಯ, ದಬ್ಬಾಳಿಕೆಗಳನ್ನೇ ದುಡಿಮೆ ಮಾಡಿಕೊಂಡ ದಾಂಡಿಗರೇ ಸಾತ್ವಿಕರನ್ನು ಆಳುವ ಧಣಿಗಳಾದರು. ಮೌಲ್ಯಗಳು ಮಕಾಡೆ ಮಲಗಿ ಬಿಟ್ಟವು. ಇವೆಲ್ಲ ಈಗ ನಡೆಯುತ್ತಿದೆ ಎಂದು ನಾನು, ನೀವು ನಂಬಿದ್ದೇವೆ ಆದರೆ, ಇದು 1480ರಲ್ಲಿ ಜನಿಸಿ ನೂರಾ ಇಪ್ಪತ್ತು ವರ್ಷ ಬಾಳಿದ ಶಿರಸಿ ಬಳಿಯ ಯತಿ ಗಳಾದ ಶ್ರೀ ವಾದಿರಾಜ ಸ್ವಾಮಿಗಳು ಬರೆದ ಒಂದು ಕೀರ್ತನೆಯಲ್ಲಿ ಓದಿದ ನನಗೆ ಎಂದಿಗೂ ನಾವು ಹೀಗೆ ಇದ್ದೇವೆ ಎನ್ನುವಂತೆ ಈ ಲೇಖನಕ್ಕೆ ಪ್ರೇರಣೆ ಸಿಕ್ಕಿತು. ಸೋಂದಾ, ಸ್ವಾದಿ, ಶ್ರೀಕ್ಷೇತ್ರ ಸೋದೆ ಎಂದೆಲ್ಲ ಪ್ರಸಿದ್ಧವಾಗಿರುವ ಈ ಊರು ವಿಜಯ ನಗರದ ಸಾಮಂತ ರಾಜನಾಗಿದ್ದ ಅರಸಪ್ಪ ನಾಯಕನ ರಾಜಧಾನಿ ಯಾಗಿತ್ತು. ಆರ್ಥಿಕವಾಗಿ ಸುಸಂಪನ್ನವಾಗಿಯೂ, ಸುಭದ್ರವಾಗಿದ್ದ ಈ ರಾಜ್ಯದಲ್ಲಿ ಪ್ರಜೆಗಳು ನೆಮ್ಮದಿಯಾಗಿದ್ದರು.

ದೊರೆಗಳು ಸ್ವಧರ್ಮ ನಿರತರೂ, ಪರಧರ್ಮ ಸಹಿಷ್ಣುಗಳೂ ಆಗಿದ್ದರು. ಇಂಥ ಧರ್ಮ ನಿಷ್ಠ ದೊರೆಗಳಿಗೆ ರಾಜಗುರುಗಳಾಗಿದ್ದ ಶ್ರೀ ವಾದಿರಾಜರು ಸೋದೆ ಕ್ಷೇತ್ರವನ್ನು ತಮ್ಮ ಅವತಾರದ ಕಾರ್ಯಕ್ಷೇತ್ರ ಮಾಡಿಕೊಂಡಿದ್ದರು. ಭಾರತದಲ್ಲಿನ ಎಲ್ಲ ತೀರ್ಥಕ್ಷೇತ್ರಗಳನ್ನು ಸುತ್ತಿದ ಶ್ರೀ ವಾದಿರಾಜರಾಜರು ಬರೆದ, ತೀರ್ಥ ಪ್ರಬಂಧ ಎಂಬ ಗ್ರಂಥವು ಭಾರತದ ಮೊಟ್ಟಮೊದಲ ಪ್ರವಾಸ ಕಥನ, ಇವರ ಭೂಗೋಳ ವರ್ಣನೆ ಗ್ರಂಥವು ಭೂಮಿಯ ವಿಸ್ತೀರ್ಣವನ್ನು ಅತ್ಯಂತ ಕರಾರುವಕ್ಕಾಗಿ ಐವತ್ತೈದು ಕೋಟಿ ಮೈಲುಗಳೆಂದು ಸಾರಿ ಹೇಳಿದ್ದಾರೆ.

ವೈಕುಂಠ ವರ್ಣನೆ ಎಂಬ ಗ್ರಂಥವು ಭೂಮಿ ಅಲ್ಲದೇ ಬೇರೆ ಲೋಕಗಳೂ ಇವೆಯೆಂಬುದನ್ನು ಸಾರಿ ಹೇಳುತ್ತಿದೆ. ಹೀಗೆ ಪ್ರಖ್ಯಾತ ಪಂಡಿತರಾಗಿದ್ದ ಶ್ರೀ ಸೋಂದಾ
ವಾದಿರಾಜರು ಅಂದಾಜು ನೂರು ಕೃತಿಗಳನ್ನು ರಚಿಸಿದ್ದಾರೆ. ಇದರೊಟ್ಟಿಗೆ ಇವರ ಅಂದಿನ ಕೀರ್ತನೆಯೊಂದು ಹಾಸ್ಯಮಯವಾಗಿರುವುದು ಹಾಗೂ ಅವರ ಜೀವನದ ಆರೇಳು ನೂರು ವರ್ಷದ ನಂತರ ಇಂದಿಗೂ ಕೂಡಾ ಅದು ನಿಜವೆನಿಸಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿ ಇದನ್ನು ಬರೆಯಲು ಪ್ರೇರೇ ಪಿಸಿತು. ಹಾಸ್ಯರಸವು ಸರ್ವಕಾಲಕ್ಕೂ ಸಹ್ಯ ಎಂಬುದು ಖಾತ್ರಿಯಾಗುವುದರ ಜತೆಗೆ ಸಾಮಾನ್ಯ ಮನುಷ್ಯ ಎಲ್ಲ ಕಾಲಕ್ಕೂ ಒಂದೇ ಮನೋಭಾವವನ್ನು
ಹೊಂದಿದ್ದ ಕೂಡಾ ಎನಿಸುತ್ತದೆ.

ಸಕಲ ಸಾಧನವೆನೆಗೆ ಕೈ ಸೇರಿತು, ಮುಕುತಿ ಸಾಧನಕೆ ತುಸು ಬಾರದ ಧನವು. ಸಂಸಾರದಲಿ ಜ್ಞಾನ, ಸತಿ ಸುತರಲಿ ಭಕ್ತಿ, ಕಂಸಾರಿ ಪೂಜೆಯಲಿ ವೈರಾಗ್ಯವು.
ಸಂಶಯದ ಜನರಲಿ ಸಖತನವ ಮಾಡುವೆನು, ಹಿಂಸೆ ಪಡಿಸುವೆನು ಸುಜನರ ಸಂಘವನು. ವಿಷಯಂಗಳಲಿ ಧ್ಯಾನ, ಲೌಕಿಕದಲ್ಲಿ ಮನವು, ವಸುಧೆ ದುರ್ಜನರ ಕಥೆ ಕೇಳುವುದೆ ಶ್ರವಣ. ಹಸನಾಗಿ ಎಣಿಸುವ ಹಣ ಹೊನ್ನಿನ ಜಪವು, ಬಿಸಿಲಿನೊಳಗೆ ತಿರುಗುವುದೇ ತಪವು. ಪೀಠಪೂಜೆಯೆಂಬುದು ಲಾಜ ಚೂರಣವು,
ಮಾಟದ ಪಯೋಧರವೇ ಕಲಶ ಪೂಜೆ.

ಉದರದ ಯಾತ್ರೆಯೇ ಮಹಾಯಾತ್ರೆ, ಬೂಟಕತನದಲ್ಲಿ ಅನೃತ ಪೇಳ್ವದೇ ಮಂತ್ರ. ಹೆಂಡತಿಯ ಕೊಂಡಯದ ಮಾತುಗಳೇ ಉಪದೇಶ, ಚಂಡಕೋಪ ವೆಂಬುದೇ ನಿತ್ಯ ಅಗ್ನಿ ಹೋತ್ರ. ಪಂಡಿತನೆನಿಸುವುದೇ ಕುವಿದ್ಯ ಪಠನೆಗಳು, ಕಂಡಕಂಡಲ್ಲಿ ಎಲ್ಲದಕೂ ವಾದಿಸುವುದೇ ತರ್ಕ. ಓದುವುದು ಎಲ್ಲಣ್ಣ ಕಲ್ಲಣ ನೆಂಬುವದು, ಸ್ವಾಧ್ಯಾಯವೆಂಬುವುದು ಪಗಡಿ ಪಂಜೀ. ಸಾಧಿಸೀ ಪರಿಯಲ್ಲಿ ಧನವನ್ನು ಕೂಡ್ಹಾಕಿ, ಮೋದಿಶ್ರೀ ಹಯವದನ ನಾ ನಿನ್ನ ಮರೆತೆ. ನೋಡಿದಿರಾ? ಐದಾರು ನೂರು ವರ್ಷದ ಹಿಂದಿನ ಈ ಮಾವನ ಸ್ವಭಾವಗಳ ಚಿತ್ರ ಇಂದಿಗೂ, ಈ ದಿನಕ್ಕೂ ಅನ್ವಯವಾಗುವ ಈ ವಿಡಂಬನೆ ಮನುಷ್ಯ ಸ್ವಭಾವಗಳ ತಿದ್ದುವಿಕೆ ದುಸ್ಸಾಧ್ಯವೆಂಬುದನ್ನು ಹೇಳುತ್ತಿದೆ. ಈಗ ಈ ಕೀರ್ತನೆಯ ಅರ್ಥ ನೋಡೋಣ. ಇಂದು ನಮ್ಮ ಸಾಧನೆಯೆಂದರೆ, ಖರ್ಚಿಗೆ ಹಣ, ಮಕ್ಕಳು, ಸ್ವಂತ ಮನೆ
ಮುಗಿಯಿತು.

ಕಣ್ಣೆದುರಿಗೆ ಊರೇ ಉರಿದು ಹೋದರೂ ಮನೆಗೆ ಬಂದು ಬಾಗಿಲು ಮುಚ್ಚಿ, ಇವರ ಎದುರಿಗೆ ಕುಳಿತರೆ ಸಾಕು ಎಂಬುದೇ ಸಾಧನೆ. ಇಂಥದನ್ನೇ ವಾದಿರಾಜರು
ಸಾಧಿಸಲು ತುಸು ಬಾರದ ಧನ, ಸಂಪತ್ತು ಎಂದಿದ್ದಾರೆ. ಇನ್ನು ಜ್ಞಾನ, ಭಕ್ತಿ ಗಳಿಸಿ ಎಂದರೆ? ಸಂಸಾರದ್ದೇ ಜ್ಞಾನ, ಸತಿ ಸುತರಿಗಾಗಿಯೇ ಅವರ ಬೇಡಿಕೆ ಈಡೇರಿಸುವಿಕೆಯೇ ಭಕ್ತಿ. ಇನ್ನು ವೈರಾಗ್ಯ, ಕಂಸಾರಿ ಎಂದರೆ ಕೃಷ್ಣ, ದೇವರ ಪೂಜೆಯೇ ಒಲ್ಲೆನಿಸುವುದು ವೈರಾಗ್ಯ. ಸಖತನ ಅಂದರೆ ಸ್ನೇಹ ಯಾರೊಂದಿಗೆ? ಸಜ್ಜನ, ಸದ್ಭಕ್ತರ ಜತೆಗಲ್ಲ, ಸಂಶಯ ಪಿಶಾಚಿಗಳು, ಎಲ್ಲದಕ್ಕೂ ಕೊಕ್ಕೆ ಹಾಕುವವರೊಂದಿಗೇ ಸ್ನೇಹ.

ಸಜ್ಜನರು, ಸಾತ್ವಿಕರನ್ನು ಕಂಡರೆ ಅಪಹಾಸ್ಯ ಮಾಡುವದು, ಇನ್ನು ಧ್ಯಾನ? ಸದಾ ಇಂದಿಗೆ ಏನು ತಿನ್ನಲಿ, ನಾಳೆಗೆ ಏನು ತಿನ್ನಲಿ, ಯಾವಾಗ ಮಲಗಲಿ ಎಂಬುದೇ
ಧ್ಯಾನ, ಲೌಕಿಕದಲ್ಲಿ ಮನವು ಅಂದರೆ, ಮನಸ್ಸೆಲ್ಲ ಇನ್ನೊಂದು ಸೈಟುಕೊಳ್ಳಲೆ? ಬಂಗಾರದ ರೇಟು ಇಳಿದಿದೆಯಂತೆ ಈಗಲೇ ಕೊಂಡುಕೊಳ್ಳಲೆ? ಎಂಬುದೇ ಸದಾ ಮಥನ ಮನದಲ್ಲಿ. ಇನ್ನು ಕಿವಿಯಿಂದ ಕೇಳುವುದು ಸದಾ ನ್ಯೂಸ್ ಚಾನೆಲ್ ಹಾಕಿ ಭ್ರಷ್ಟ ರಾಜಕಾರಣಿಗಳ ಸಂಪತ್ತಿನ ಗಳಿಕೆ, ಜೈಲುವಾಸದ ಕಥೆಗಳನ್ನು ಕೇಳುವುದೇ ದುರ್ಜನ ಶ್ರವಣ. ಇನ್ನು ಜಪ? ಜಪಮಣಿ ಎಣಿಸುವದಲ್ಲ, ನೋಟುಗಳನ್ನು, ಒಡವೆಗಳನ್ನು ಬೀರುವಿನ ಮುಂದೆ ಕುಳಿತು ಹೊರತೆಗೆದು ಒಂದೊಂದೇ
ಎಣಿಸುವುದೇ ಬಹುದೊಡ್ಡ ಜಪವು.

ಇನ್ನು ದೇಹ ಕೃಶ ಮಾಡಿಕೊಳ್ಳುವಂಥ ತಪಸ್ಸು ಯಾವುದು? ಬಿಸಿಲಲ್ಲಿ ಹೆಲ್ಮೆಟ್ ಇಲ್ಲದೇ ಗಾಡಿಯ ಮೇಲೆ ತಿರುಗಾಡಿ ಬರುವುದೇ ತಪಸ್ಸು, ಹಸಿವಾದಾಗ ಒಳ್ಳೊಳ್ಳೆ ಹೋಟೆಲ್ ಹುಡುಕುತ್ತಾ ತಿರುಗಾಡುವುದೇ ಉದರ ಯಾತ್ರೆ, ಇನ್ನು ಮಂತ್ರವೋ? ಸದಾ ಸುಳ್ಳು ಹೇಳುವುದೇ ಮಂತ್ರವು. ಇನ್ನು ಉಪದೇಶಗಳನ್ನು ಕೇಳುವುದೆಂದರೆ? ಅದು ಹೆಂಡತಿಯು ಅದನ್ನು ಕೊಂಡು ತಾ, ಇದನ್ನು ಕೊಂಡು ತಾ ಎನ್ನುವುದನ್ನು ಕೇಳಿಸಿಕೊಳ್ಳುವುದೇ ಉಪದೇಶ. ಇನ್ನು ಅಗ್ನಿಹೋತ್ರ ವೆಂದರೆ? ಚಂಡ ಕೋಪವೇ, ಹಸಿವಾದಾಗ ಅಡಿಗೆ ಬೇಗ ಆಗದಿದ್ದರೆ, ರಾತ್ರಿ ಮುಗಿದರೂ ನಿದ್ದೆ ಬರದಿದ್ದರೆ, ಭರ್ತಿ ಕ್ರಿಕೆಟ್ ನಡೆದಾಗ ಕರೆಂಟ್ ಹೋಗಿ ಆಟ ನೋಡುವುದು ತಪ್ಪಿದಾಗ ಬರುವ ಕೋಪಾಗ್ನಿಯೇ ಅಗ್ನಿಹೋತ್ರ.

ಇನ್ನು ಪಾಂಡಿತ್ಯ ಯಾವುದರಲ್ಲಿ? ಶೇರು ಮಾರ್ಕೇಟ್, ಮಟ್ಕಾ ನಂಬರ್ ತೆಗೆಯುವುದು, ಕುದುರೆ ಬಾಲಕ್ಕೆ ಹಣ ಕಟ್ಟುವುದು, ಇಸ್ಪೀಟ್ ರಮ್ಮಿ ಆಟದಲ್ಲಿ ಸೋಲದಿರುವುದೇ ಪಾಂಡಿತ್ಯ. ಇನ್ನು ತರ್ಕಜ್ಞಾನ ಯಾವುದರಲ್ಲಿ? ಯಾರು ಏನು ಹೇಳಿದರೂ ಒಪ್ಪದೇ, ಹಾಗಾಗದೆ ಹೀಗಾದರೆ ಏನು ಮಾಡುತ್ತೀ ಎಂದು ಮಾಡುತ್ತಿರುವ ಅವನನ್ನೂ ಅಂಜಿಸಿ ಸುಮ್ಮನೆ ಕೂಡಿಸುವ ಈ ಕೊಂಕು ತೆಗೆಯುವುದೇ ತರ್ಕಪಾಂಡಿತ್ಯ. ಓದೆಂದರೆ, ಗ್ರಂಥಗಳನ್ನಲ್ಲ, ಏನು ಓದಿದರೆ ನಾನು
ಕಷ್ಟಪ ಡದೇ ಹಣಗಳಿಸಿಯೇನು? ಹೇಗೆ ಜನರನ್ನು ಯಾಮಾರಿಸಿ ದುಡ್ಡು ಮಾಡಿಯೇನು? ಕಲ್ಲಣ್ಣ ಯಲ್ಲಣ್ಣನ ಹೆಸರಲ್ಲಿ ಅಕೌಂಟ್ ಮಾಡಿ, ತೆರಿಗೆ ತಪ್ಪಿಸಿ ಕೊಂಡೇನು? ಇದೇ ಓದು.

ಇವೆಲ್ಲ ಸಚ್ಚಾಸಗಳನ್ನು ಕುವಿದ್ಯೆ ಎಂದು ಕರೆಯುತ್ತೇವೆ. ಇದರಿಂದ ನಿಮಗೊಬ್ಬರಿಗೇ ಅಲ್ಲ, ನಿಮ್ಮ ಪೂರ್ವಿಕರಿಗೂ ನರಕ ವಾಸ ತಪ್ಪಿದ್ದಲ್ಲ, ನಿಮ್ಮ ಮುಂದಿನ ಪೀಳಿಗೆಗೂ ಅಂದರೆ, ಮಕ್ಕಳು, ಮೊಮ್ಮಕ್ಕಳಿಗೂ ದಾರಿದ್ರ್ಯ ತಪ್ಪಿದ್ದಲ್ಲ, ಕಂಡವರ ಮೇಲೆಲ್ಲ ನೀವು ಸವಾರಿ ಮಾಡಿದರೆ, ಯಾಮಾರಿ ಹೇಳಿದರೆ ನಿಮ್ಮ
ಸಂತಾನಕ್ಕೆ ನೀವೆಷ್ಟು ಸಂಪತ್ತು ಕೂಡಿಟ್ಟರೂ ಅವರು ಅದನ್ನು ಕಳೆದುಕೊಳ್ಳುತ್ತಾರೆ. ಇಂಥವುಗಳನ್ನೇ ಧರ್ಮ ಸೂಕ್ಷ್ಮವೆಂದು ಕರೆಯುತ್ತಾರೆ. ಇವುಗಳನ್ನು
ಸಾವಿರಾರು ವರ್ಷಗಳಿಂದಲೂ ಸಂತರು, ಜ್ಞಾನಿಗಳು ಹೇಳುತ್ತಲೇ ಬಂದಿದ್ದರೂ ಅವನ್ನು ಓದದೇ, ಓದಿದವರನ್ನು ಕೇಳಿಸಿಕೊಳ್ಳದೇ ನಾವು ಮತ್ತೇ ದುರ್ಮಾರ್ಗ,
ದುರ್ವ್ಯಸನಗಳಿಗೆ ಹೋಗುತ್ತಿರುವುದೇ ದೀಪದ ಬೆಳಕಿಗೆ ಮರುಳಾಗಿ ಅದು ಬೆಳಕಲ್ಲ, ಬೆಂಕಿ ಎಂದು ಅರಿಯದೇ ಎರಗಿ ಸಾಯುವ ಪತಂಗಗಳಂತೆ ಆಗಿದ್ದೇವೆ.

ಡಿ.ವಿ.ಜಿ ಯವರ ಕಗ್ಗದ ಈ ಸಾಲುಗಳಿಗೆ ಸಾವಿಲ್ಲ. ‘ವಿಭುದರು ನೀತಿ ನೊರೆದರು ಶತಶತಮಾನಗಳ ಹಿಂದೆ, ಆದರೂ ಜನರಿರರ್ಪರು ಹಿಂದಿನ ತೆರದೆ’

Leave a Reply

Your email address will not be published. Required fields are marked *