Friday, 18th June 2021

ಹೃದಯ ಬಾಯಿಗೆ ಬಂದ ಕ್ಷಣ !

ಮಂಜುನಾಥ್‌ ಡಿ.ಎಸ್‌.

ದ ಲೆಡ್ಜ್ ಎಂಬ ಹೆಸರಿನ ಗಾಜಿನ ಮೇಲೆ ನಿಂತರೆ, ಪದ ಕುಸಿಯುವ ಅನುಭವ! ಜನ ನಿಂತಿದ್ದಾಗಲೇ ಹಿಂದೊಮ್ಮೆ ಈ ಗಾಜು ಬಿರುಕು ಬಿಟ್ಟಿತ್ತು ಎಂದು ಕೇಳಿ ಹೃದಯ ಬಾಯಿಗೆ ಬಂತು!

ಆಗಾಜಿನ ಹಲಗೆಯ ಮೇಲೆ ಪದಾರ್ಪಣ ಮಾಡುವ ಘಳಿಗೆ ಸನಿಹವಾಗುತ್ತಿದ್ದಂತೆ, ಒಂದು ಕ್ಷಣ ‘ಪದ ಕುಸಿಯೆ ನೆಲವಿಹುದು
ಮಂಕುತಿಮ್ಮ’ ಎಂಬ ಕಗ್ಗದ ಸಾಲು ನೆನಪಾಯಿತು.

ಮರುಕ್ಷಣವೇ, ನೆಲವೇ ಪಾತಾಳದಲ್ಲಿದೆಯೇನೋ ಎಂಬ ಅನಿಸಿಕೆ ಮೂಡಿ ಇದ್ದ ಅಲ್ಪ ಧೈರ್ಯವೂ ಉಡುಗಿತು. ಅಪೂರ್ವ ಅನುಭವ ಪಡೆಯುವುದೋ ಬೇಡವೋ ಎಂಬ ದ್ವಂದ್ವ ಶುರುವಾಯಿತು! ತೆವಳಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದವರು, ಪರಸ್ಪರ ಕೈಗಳನ್ನು ಹಿಡಿದುಕೊಂಡು ಅಳುಕುತ್ತಲೇ ಅಂಗುಲಂಗುಲ ಸರಿ ಯುತ್ತಿದ್ದವರು, ಕಣ್ಮುಚ್ಚಿಕೊಂಡು ಒಂದೆರಡು ಹೆಜ್ಜೆ ಹೋಗಿ ವಾಪಸಾಗು ತ್ತಿದ್ದವರು, ಅಂಜಿಕೆಯನ್ನು ಬದಿಗಿರಿಸಿ ಮುನ್ನುಗ್ಗಿ ಗಾಜಿನ ಫಲಕದ ಮೇಲೆ ನಿಂತು ಗೆಲುವಿನ ನಗೆ ಬೀರು ತ್ತಿದ್ದವರು, ಗಾಜಿನ ಹಲಗೆಯ ಮೇಲೆ ಕುಣಿದು ಕುಪ್ಪಳಿಸುತ್ತಿದ್ದವರು, ಹೀಗೆ ನಾನಾ ಬಗೆಯ ಪ್ರವಾಸಿಗರನ್ನು ಅಲ್ಲಿದ್ದ ಅಲ್ಪ ಸಮಯದಲ್ಲಿ ಗಮನಿಸಿದ್ದಾಗಿತ್ತು.

ಸುರಕ್ಷತೆ ಇಲ್ಲದಿದ್ದರೆ ಲಕ್ಷಗಟ್ಟಲೆ ಜನ ಅದರ ಮೇಲೆ ನಿಲ್ಲುತ್ತಿರಲಿಲ್ಲ ಎಂಬ ವಾಸ್ತವವನ್ನು ಅರಿತು ನಾನು ಸಹ ಸಾಹಸಕ್ಕೆ ಮುಂದಾದೆ. ನಾನು ಹೇಳ ಹೊರಟಿರುವುದು ಷಿಕಾಗೋ ನಗರದ ಸ್ಕೈಡೆಕ್‌ನ ಗಾಜಿನ ಪೆಟ್ಟಿಗೆಯ ಬಗ್ಗೆ. ದ ಲೆಡ್ಜ್ ಎಂದು ಕರೆಯಲ್ಪಡುವ ಈ ಗಾಜಿನ ಪೆಟ್ಟಿಗೆ ವಿಲ್ಲಿಸ್ ಟವರ್‌ನ 103ನೆಯ ಮಹಡಿಯ ಗೋಡೆಯಿಂದ ಸುಮಾರು ನಾಲ್ಕು ಅಡಿಗಳಷ್ಟು ಹೊರಕ್ಕೆ ಚಾಚಿಕೊಂಡಿದೆ.

ಇದು ನೆಲದಿಂದ 1353 ಅಡಿಗಳ ಎತ್ತರದಲ್ಲಿ ನಿರ್ಮಾಣಗೊಂಡಿದೆ. ಪಾರದರ್ಶಕ ಗಾಜಿನ ಫಲಕದಿಂದ ಕಾಲ ಕೆಳಗಿನ ಹಾಗು ಸುತ್ತಲಿನ ದೃಶ್ಯಗಳನ್ನು ಕಾಣುವ ಅನುಭವ ಅವರ್ಣನೀಯ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿಯೇ ಅತಿ ಎತ್ತರದ ಈ ವೀಕ್ಷಣಾ ವೇದಿಕೆಯಿಂದ ಇಲಿ ನಾಯ್, ಮಿಚಿಗನ್, ಇಂಡಿಯಾನ, ವಿಸ್ಕಾನ್ಸಿನ್ ರಾಜ್ಯಗಳನ್ನು ನೋಡಬಹುದು. ನಿರ್ಮಲ ವಾತಾ ವರಣ
ವಿದ್ದಾಗ ಐವತ್ತು ಮೈಲಿಗಳವರೆಗಿನ ದೃಶ್ಯಗಳು ಕಾಣಸಿಗುತ್ತವೆ. ಈ ಅಟ್ಟಣಿಗೆಯಿಂದ ಲೇಕ್ ಮಿಚಿಗನ್, ಆ ಸರೋವರದಲ್ಲಿನ ದೋಣಿಗಳು, ಷಿಕಾಗೊ ನಗರ, ಕಾಲುವೆಗಳು, ಗಗನಚುಂಬಿ ಕಟ್ಟಡಗಳು, ರಸ್ತೆಗಳು, ಪಾದಚಾರಿ ಮಾರ್ಗಗಳು, ಸೇತುವೆಗಳು, ಮೈದಾನಗಳು, ವಾಹನ ನಿಲ್ದಾಣಗಳು, ಗಗನಚುಂಬಿ ಕಟ್ಟಡಗಳ ವಿಹಂಗಮ ನೋಟ, ಹೀಗೆ ಎಲ್ಲವನ್ನೂ ಕಣ್ತುಂಬಿಕೊಳ್ಳ ಬಹುದು.

1974ರ ಜೂನ್ 22ರಂದು ಕಾರ್ಯಾರಂಭ ಮಾಡಿದ ಸ್ಕೈಡೆಕ್ ಷಿಕಾಗೋ ನಗರದ ಜನಪ್ರಿಯ ಪ್ರವಾಸಿ ತಾಣವೆನಿಸಿಕೊಂಡಿದೆ. ಸುಮಾರು ಮೂವತ್ತೈದು ವರ್ಷಗಳ ನಂತರ ಇದನ್ನು ನವೀಕರಣಗೊಳಿಸಿದಾಗ ಸ್ಕೈಡೆಕ್‌ಗೆ ಗಾಜಿನ ಬಾಲ್ಕನಿಗಳನ್ನು ಅಳವಡಿಸ ಲಾಯಿತು. ಅರ್ಧ ಅಂಗುಲ ದಪ್ಪದ ಮೂರು ಗಾಜಿನ ಪದರಗಳನ್ನು ಸೇರಿಸಿ ನಿರ್ಮಿಸಲಾದ ‘ದ ಲೆಡ್ಜ್’ ಸುಮಾರು ಐದು ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿದೆ.

2009ರ ಜುಲೈ 2ರಂದು ಸಾರ್ವಜನಿಕರಿಗೆ ಮುಕ್ತವಾದ ಈ ಗಾಜಿನ ಪೆಟ್ಟಿಗೆಯನ್ನು ವೀಕ್ಷಿಸಲು ವಾರ್ಷಿಕ ಹದಿನೇಳು ಲಕ್ಷಕ್ಕೂ
ಅಧಿಕ ಪ್ರವಾಸಿಗರು ಆಗಮಿಸುತ್ತಾರೆ. ಈ ಪೆಟ್ಟಿಗೆಯಲ್ಲಿ ನಿಂತು ತೆಗೆಸಿಕೊಂಡ ಛಾಯಾಚಿತ್ರಗಳನ್ನು ಜತನದಿಂದ ಇರಿಸಿಕೊಂಡು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ. ವಾಸ್ತುಶಿಲ್ಪ ತಜ್ಞ ಬ್ರೂಸ್ ಗ್ರಹಾಂ ಮತ್ತು ತಂತ್ರಜ್ಞ ಫಜ್ಲುರ್ ರಹಮಾನ್ ಖಾನ್ ಜೊತೆಯಾಗಿ 108 ಮಹಡಿಗಳ ಗಗನಚುಂಬಿ ಕಟ್ಟಡವನ್ನು ನಾಲ್ಕು ವರ್ಷಗಳಲ್ಲಿ ನಿರ್ಮಿಸಿದರು.

ಇದುವೇ 1450 ಅಡಿ ಎತ್ತರದ ಸೀಯರ್ಸ್ ಟವರ್. ಇದು 1974ರಲ್ಲಿ ಪೂರ್ಣಗೊಂಡಾಗ ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಕೀರ್ತಿಗೆ ಭಾಜನವಾಗಿತ್ತು ಹಾಗು 1998ರ ವರೆಗೆ ಈ ಪಟ್ಟವನ್ನು ಉಳಿಸಿಕೊಂಡು ಬಂದಿತ್ತು. ಯುನೈಟೆಡ್ ಏರ್‌ಲೈನ್ಸ್ ಸೇರಿದಂತೆ ವಿಶ್ವದ ಹಲವು ಪ್ರಮುಖ ಸಂಸ್ಥೆಗಳು ಇಲ್ಲಿಂದ ಕಾರ್ಯ ನಿರ್ವಹಿಸುತ್ತವೆ. 2009ರ ಜುಲೈ 16ರಂದು ಸೀಯರ್ಸ್ ಟವರ್ ವಿಲ್ಲಿಸ್ ಟವರ್ ಎಂಬ ಹೊಸ ಹೆಸರು ಪಡೆಯಿತು.

ಸುಮಾರು 45 ಲಕ್ಷ ಚದರಡಿ ವಿಸ್ತೀರ್ಣ ಹೊಂದಿರುವ ಈ ಬೃಹತ್ ಭವನದಲ್ಲಿ 104 ಲಿಫ್ಟ್‌ಗಳಿವೆ. ಪ್ರವಾಸಿಗರ ಪ್ರವೇಶ ದ್ವಾರವು ಕಟ್ಟಡದ ದಕ್ಷಿಣ ದಿಕ್ಕಿನ ಜಾಕ್ಸನ್ ಬುಲೆವಾರ್ಡ್ ಕಡೆಗಿದೆ. ನೆಲಮಟ್ಟದಿಂದ 103ನೆಯ ಮಹಡಿಯನ್ನು ತಲುಪಲು ಇಲ್ಲಿನ ಲಿಫ್ಟ್‌ಗಳು ತೆಗೆದುಕೊಳ್ಳುವ ಸಮಯ ಕೇವಲ ಒಂದು ನಿಮಿಷ!

ದ ಲೆಡ್ಜ್‌ನ ಗಾಜಿನ ನೆಲ 2014ರ ಮೇ 29ರಂದು ಪ್ರವಾಸಿಗರು ಇದ್ದಾಗಲೇ ಬಿರುಕುಬಿಟ್ಟಿತು! ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಲಿಲ್ಲ. 2019ರ ಜೂನ್ 12ರಂದು ಮತ್ತೊಮ್ಮೆ ಗಾಜು ಒಡೆದಿತ್ತು.ಆಗಲೂ ಎಲ್ಲರೂ ಸುರಕ್ಷಿತವಾಗಿದ್ದರು. ಈ ಪ್ರಸಂಗಗಳನ್ನು ಅಲ್ಲಿ ನಿಂತು ನೆನಪಿಸಿಕೊಂಡರೆ ಹೃದಯ ಬಾಯಿಗೆ ಬರುತ್ತದೆ! ದ ಲೆಡ್ಜ್‌ನ ವೀಕ್ಷಣೆಯ ಅನುಭವ ಅವಿಸ್ಮರ ಣೀಯ.

Leave a Reply

Your email address will not be published. Required fields are marked *