Friday, 27th May 2022

ಎಲ್ಲಿ ನನ್ನ ಕಂದಮ್ಮಗಳು ?

ಬದುಕು ಭಾವ

ವೀರೇಶ್ ಮಾಡ್ಲಾಕನಹಳ್ಳಿ

ನಮ್ಮ ಮನೆಯಲ್ಲಿ ಬೆಕ್ಕೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಅದನ್ನ ನಾವು ಸಾಕಿರಲಿಲ್ಲ, ಆ ತಾಯಿ ಬೆಕ್ಕು ಯಾರದ್ದು ಅಂತ ಸಹ ನಮಗೆ ಗೊತ್ತಿರಲಿಲ್ಲ. ಆ ತಾಯಿ ಒಂದು ದಿನ ನಾಲ್ಕು ಮರಿಗಳನ್ನು ಇಟ್ಟಿದ್ದಷ್ಟೇ ಗೊತ್ತು!

ಆ ಚಿಕ್ಕ ಮರಿಗಳು ಮನೆ ತುಂಬಾ ಚಿನ್ನಾಟ ಆಡುವುದು ಕಂಡು ನನ್ನ ಮಕ್ಕಳ ಖುಷಿ ಮತ್ತು ಸಂತೋಷಕ್ಕೆ ಪಾರವೇ ಇರಲಿಲ್ಲ. ಮಕ್ಕಳಿಗೆ ಚಿಕ್ಕಮರಿ ಗಳನ್ನು ಎತ್ತಿ ಮುದ್ದಾಡಬೇಕೆಂಬಾಸೆ, ಆದರೆ ಅದರ ತಾಯಿ ಎಂದಿಗೂ ಯಾರನ್ನ ಹತ್ತಿರ ಬಿಟ್ಟು ಕೊಳ್ಳುತ್ತಿರಲಿಲ್ಲ. ಯಾರಾದರೂ ಅವುಗಳ ಬಳಿ ಧೈರ್ಯ ಮಾಡಿ ಹೋದರೆ, ತನ್ನ ವ್ಯಾಘ್ರ ಸ್ವರೂಪವನ್ನು ತೋರಿಸುತ್ತಿತ್ತು!

ಮುಟ್ಟಲು ಹೋದ ಮಕ್ಕಳಿಗೆ ಪರಚಿ ಗಾಯ ಮಾಡುತ್ತಿತ್ತು. ತನ್ನ ಮರಿಗಳನ್ನು ಬೇರೆಯವರು ಕಿತ್ತುಕೊಳ್ಳಲು ಬಂದಿದ್ದಾರೆ ಎಂಬ ಭಾವನೆಯಿಂದ ಅದು ಕೂಗಾಡುವುದನ್ನು ನೋಡಿದಾಗ, ಅಚ್ಚರಿ ಎನಿಸುತ್ತಿತ್ತು. ನನ್ನ ಮಕ್ಕಳು ಬೆಕ್ಕಿನ ಮರಿಗಳ ಜೊತೆ ಆಟವಾಡಲು ಸಾಕಷ್ಟು ಪ್ಲಾನ್ ಮಾಡುತ್ತಿದ್ದರು. ಆದರೆ, ಆ ತಾಯಿ ಕಿಲಾಡಿ! ಅವರ ಪ್ಲಾನ್‌ ಗಳನ್ನ ಒಂದೇ ಕ್ಷಣದಲ್ಲಿ ತಲೆ ಕೆಳಗೆ ಮಾಡಿ ಬಿಡುತ್ತಿತ್ತು. ದೂರದಲ್ಲಿ ಅದಕ್ಕೆ ಅನ್ನ ಇಟ್ಟು ಒಬ್ಬೊಬ್ಬರಾಗಿ ಕಾಯುತ್ತಾ ಮರಿಗಳ ಜೊತೆ ಆಟವಾಡಲು ಮಕ್ಕಳು ಹವಣಿಸುತ್ತಿದ್ದರು. ಆದರೆ, ಇವರು ತನ್ನ ಮರಿಗಳ ಹತ್ತಿರ ಹೋದ ಸಣ್ಣ ಸುಳಿವು ಸ್ವಲ್ಪ ಸಿಕ್ಕರೆ ಸಾಕು, ತಿನ್ನುತ್ತಿದ್ದ ಊಟವನ್ನು ಬಿಟ್ಟು ದುಡು ದುಡು ಮರಿಗಳ ಬಳಿಗೆ ಓಡಿ ಬಂದು, ಗುರ್ ಗುರ್ ಎನ್ನುತ್ತಾ, ಬಾಲವನ್ನು ಅಲ್ಲಾಡಿಸುತ್ತಾ, ನಮ್ಮ ಮಕ್ಕಳನ್ನೇ ಓಡಿಸಿಬಿಡುತ್ತಿತ್ತು.

ಹಲವು ದಿನ ಪ್ರಯತ್ನಿಸಿದರೂ, ಮಕ್ಕಳಿಗೆ ಒಂದು ಮರಿಯನ್ನು ಸಹ ಎತ್ತಿಕೊಂಡು ಮುದ್ದಾಡುವ ಅವಕಾಶ ಸಿಗಲಿಲ್ಲ. ಹಾಗಿದ್ದರೂ, ದೂರದಿಂದ ಅವುಗಳ ಚಿನ್ನಾಟ ನೋಡಿ ಖುಷಿ ಪಡುತ್ತಿದ್ದರು. ಆ ಮರಿಗಳು ಒಂದರ ಹಿಂದೆ ಓಡುವುದೇನು, ಬಾಲ ಎತ್ತರಿಸಿಕೊಂಡು ಕುಣಿಯುವುದೇನು, ತಾಯಿ ಬಂದಾಗ ನೆಗೆಯುತ್ತಾ ಹಾಲು ಕುಡಿಯುವು ದೇನು, ತಾಯಿಯ ಮಡಿಲಲ್ಲಿ ಮಲಗಿ ಪುರುಪುರು ಎನ್ನುತ್ತಾ ಕಳ್ಳ ನೋಟದಲ್ಲಿ ನಮ್ಮನ್ನು ನೋಡುವುದೇನು! ಅವುಗಳ ಆಟವನ್ನು ನೋಡುತ್ತಿದ್ದರೆ, ಮನಸ್ಸಿನ ದುಗಡ, ಒತ್ತಡ ಎಲ್ಲವೂ ಮಾಯ!

ಆದರೆ ದೊಡ್ಡವಾದಂತೆ ಮರಿಗಳ ಗಲಾಟೆ ಜಾಸ್ತಿಯಾಯಿತು. ನಿಧಾನವಾಗಿ ಕುಣಿದಾಡುತ್ತಾ, ಮನೆಯ ಒಳಗೇ ಬಂದುಬಿಟ್ಟವು! ಮಕ್ಕಳು ಊಟ ಮಾಡು ವಾಗ ಮಕ್ಕಳ ತಟ್ಟೆಗೆ ಬಾಯಿ ಇಟ್ಟವು! ಆದರೆ, ಇದೇ ಸಮಯ ಎಂದು ಮಕ್ಕಳು ಅದನ್ನು ಮುಟ್ಟಲು ಹೋದರೆ, ‘ಪಿಸ್’ ಎಂದು ಗದರಿ, ಮಕ್ಕಳನ್ನು ಪರಚಲು ಶುರು ಮಾಡಿದವು. ಕ್ರಮೇಣ ಅವುಗಳ ಆಟಾಟೋಪ ಎಲ್ಲೇ ಮೀರಿತು. ಹಗಲು-ರಾತ್ರಿ ಮನೆತುಂಬಾ ಮ್ಯಾವ್… ಮ್ಯಾವ್…. ಎಂಬ ಶಬ್ದ. ಒಂದು ದಿನ ಬೆಳಿಗ್ಗೆ ಎದ್ದು ನೋಡಿದರೆ ಇಡೀ ಮನೆಯ ಒಂದು – ಎರಡರ ದುರ್ವಾಸನೆ. ರಾತ್ರಿ ಬಾಗಿಲು ಹಾಕಿದ್ದರಿಂದ, ಅಲ್ಲೇ ಮೂಲೆಯ ಫೋಟ್ ರಗ್‌ನ ಮೇಲೆ ಎಲ್ಲಾ ಮಾಡಿ ಇಟ್ಟಿದ್ದವು. ಅದನ್ನು ನೋಡಿ ಮಕ್ಕಳಿಗೆ ಕಿಸಿ ಕಿಸಿ ನಗು!

ಆದರೆ ನನ್ನ ಮನೆಯವರ ತಾಳ್ಮೆಯ ಕಟ್ಟೆಯೊಡೆಯಿತು. ‘ಇವನ್ನ ಎಲ್ಲಿಗಾದರೂ ಬಿಟ್ಟು ಬರ್ತಿರಾ…. ಇಲ್ಲ ನೀವೇ ಕ್ಲೀನ್ ಮಾಡ್ತೀರಾ!’ ಎಂದಾಗ, ನನ್ನವಳ ಗರ್ಜನೆಯು ಮಾರ್ಜಾಲನ ಗುರ್ ಗುರ್‌ಗಿಂತ ಭಯಂಕರ ಎನಿಸಿತು! ‘ಎಲ್ಲಿಗಾದರೂ ಹೊರಟರೆ ಸಾಕು, ಇವುಗಳ ಮುಖ ನೋಡಬೇಕು, ಇವು ಮನೆಗೆ ಬಂದಾಗಿನಿಂದ ಒಂದೂ ಕೆಲಸ ಸರಿಯಾಗಿ ಆಗ್ತಾ ಇಲ್ಲ. ಶನಿ ಮುಂಡೇವು’ ಎಂದು ನನ್ನ ಅಮ್ಮ ನನ್ನವಳ ಮಾತಿಗೆ ಒಗ್ಗರಣೆ ಹಾಕಿದರು. ಇನ್ನೇನು ಮಾಡುವುದು, ಮಾರ್ಜಾಲಗಳಿಗೆ ಬೀಳ್ಕೊಡುವುದು ಎಂದು ನಿರ್ಧಾರವಾಯಿತು. ನನ್ನ ತಮ್ಮ ಅವುಗಳನ್ನು ಒಂದು ಚೀಲದಲ್ಲಿಟ್ಟುಕೊಂಡು, ಬೈಕ್‌ನಲ್ಲಿ ತೆಗೆದುಕೊಂಡು ಪಕ್ಕದ ಊರಿನ ಬಳಿ ಬಿಟ್ಟು ಬಂದ.

ತಾಯಿ ಬೆಕ್ಕು ಎಂದಿನಂತೆ ಬಂತು. ಮರಿಗಳಿಲ್ಲ! ‘ಅರೆ, ಬೆಳಗ್ಗೆ ಮೊಲೆಯೂಡಿಸಿ ಹೋಗಿದ್ದೇನೆ, ಈಗ ಎಲ್ಲಿ ನನ್ನ ಕಂದಮ್ಮಗಳು?’ ಎಂದು ದೊಡ್ಡ ದನಿಯಲ್ಲಿ ಅಳಲು ಶುರುವಿಟ್ಟುಕೊಂಡಿತು ಆ ತಾಯಿ! ತಾಯಿ ಕರುಳು ಎಂದರೆ ಎಲ್ಲರಿಗೂ ಒಂದೇ ತಾನೆ. ಆ ತಾಯಿ ಬೆಕ್ಕಿನ ರೋದನ ನಿಜಕ್ಕೂ ಕರುಳು ಕಿತ್ತು ಬರುವಂತಿತ್ತು. ಅಲ್ಲಿಂದ- ಇಲ್ಲಿಗೆ ಇಲ್ಲಿಂದ-ಅಲ್ಲಿಗೆ ವಿಚಿತ್ರವಾಗಿ ‘ಮ್ಯಾವ್! ಮ್ಯಾವ್’ ಎಂದು ಕೂಗುತ್ತಾ ಓಡಾಡುವುದನ್ನ ನೋಡಿದರೆ ಎಂಥಾ ಕಲ್ಲು ಹೃದಯವಾದರೂ ಕರಗ ಬೇಕು. ಮರಿಗಳು ಓಡಾಡಿದ ಜಾಗ, ಕುರ್ಚಿಯ ಅಡಿ, ಸೋ-ದ ಹಿಂಭಾಗ, ಬಾಗಿಲಿನ ಹಿಂದೆ ಎಲ್ಲಾ ಪದೇಪದೇ ಹೋಗಿ, ಇಣುಕಿ ನೋಡಿ, ಮಿಂಯಾವ್ ಎಂದು ಅದು ಕೂಗುವಾಗ ‘ಛೆ, ಎಂಥಾ ತಪ್ಪು ಮಾಡಿಬಿಟ್ಟೆವು’ ಎನಿಸಿತು.

ನನ್ನ ಮಕ್ಕಳಂತೂ ತಾಯಿ ಬೆಕ್ಕಿನ ಅಳುವಿನಂತಹ ರೋದನ ಕಂಡು, ಅಳುಮೋರೆ ಮಾಡಿಕೊಂಡು ಒಂದು ಮೂಲೆಯಲ್ಲಿ ಕೂತುಬಿಟ್ಟರು. ಬೆಳಿಗ್ಗೆ ಎದ್ದು ನನ್ನ ತಮ್ಮನನ್ನು ಕರೆದುಕೊಂಡು ಬೈಕಿನಲ್ಲಿ ಕುಳಿತು, ಬೆಕ್ಕಿನ ಮರಿಗಳನ್ನು ಹುಡುಕುತ್ತಾ ಹೊರಟೆ. ಆ ಬಡ ತಾಯಿಯ ರೋದನಕ್ಕೆ ದೇವರು ‘ತಥಾಸ್ತು!’ ಎಂದಿರಬೇಕು. ನನ್ನ ತಮ್ಮ ಬೆಕ್ಕುಗಳನ್ನು ಬಿಟ್ಟ ಜಾಗದ ಸ್ವಲ್ಪ ದೂರದಲ್ಲಿ ಎರಡು ಮರಿಗಳು ಸಿಕ್ಕವು. ಇನ್ನೆರಡರ ಸುಳಿವಿರಲಿಲ್ಲ. ಕೈಗೆ
ಸಿಕ್ಕ ಎರಡು ಮರಿಗಳನ್ನು ತಂದು ಮನೆಗೆ ಬಿಟ್ಟಾಗ, ಪ್ರೀತಿಯಿಂದ ಅವುಗಳ ಮೈನೇವರಿಸುತ್ತಾ ಕೃತಜ್ಞತಾ ಭಾವದಿಂದ ತಾಯಿ ಬೆಕ್ಕು ನಮ್ಮನ್ನೇ
ನೋಡುತ್ತಿದ್ದಾಗ, ನನ್ನ ಮಕ್ಕಳ ಕಣ್ಣಲ್ಲಿ ನೀರು. ನನ್ನವಳ ಕಣ್ಣಲ್ಲೂ ನೀರು!