Tuesday, 5th July 2022

ಬಿಳಿ ಹೆಂಡತಿಯನ್ನು ಕಟ್ಟಿಕೊಂಡ ರಾಜ

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಇಂದು ತಮಿಳುನಾಡಿನ ಭಾಗವಾಗಿರುವ ಪುದುಕೋಟೈ ರಾಜ್ಯವು ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟಿತ್ತು. 1915ರ ಸಮಯದಲ್ಲಿ ಅಲ್ಲಿನ ರಾಜನು ಆಸ್ಟ್ರೇಲಿ ಯಾದ ಯುವತಿಯನ್ನು ಪ್ರೀತಿಸಿ, ಮದುವೆಯಾದ. ಅದು ಆತ ಮಾಡಿದ ಬಹುದೊಡ್ಡ ತಪ್ಪು! ಅದರಿಂದ ಆತ ತನ್ನ ರಾಜ್ಯವನ್ನೇ ಕಳೆದುಕೊಳ್ಳಬೇಕಾಯಿತು.

ಮಾರ್ತಾಂಡ ಭೈರವ ತೊಂಡೈಮನ್ (1875-1928) ಎಂಬ ಹೆಸರನ್ನು ಕೇಳಿದರೆ, ತಕ್ಷಣ ಏನೂ ಹೊಳೆಯದಿರಬಹುದು. ಈತ ಮದರಾಸು ಪ್ರಾಂತ್ಯದಲ್ಲಿದ್ದ ಪುದುಕೋಟೈ ರಾಜ್ಯದ ಅರಸನಾಗಿದ್ದ ಮತ್ತು ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ (1884-1940) ಅವರ ಸಮಕಾಲೀನನಾಗಿದ್ದ. ರಾಜರ್ಷಿ ಎಂದೇ ಹೆಸರಾಗಿದ್ದ, ನಮ್ಮ ರಾಜ್ಯವನ್ನು ನಾನಾ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗೆ ಹೋಲಿಸಿದರೆ, ಮಾರ್ತಾಂಡ ಭೈರವ ತೊಂಡೈಮನ್‌ನ ಸಾಧನೆ ಏನೇನು ಅಲ್ಲ; ಬದಲಿಗೆ, ಆತ ತನ್ನ ಅಧಿಕಾರವನ್ನೇ ತ್ಯಾಗ ಮಾಡಬೇಕಾದ ಸ್ಥಿತಿಯನ್ನು ತಾನೇ ತಂದಿಟ್ಟು ಕೊಂಡ ನತದೃಷ್ಟ!

ನಮ್ಮ ದೇಶವನ್ನು ಕಠಿಣವಾದ ವಸಾಹತುಶಾಹಿ ಆಡಳಿತಕ್ಕೆ ಒಳಪಡಿಸಿದ್ದ ಬ್ರಿಟಿಷರು, ಮನಸ್ಸು ಮಾಡಿದರೆ ಸ್ಥಳೀಯ ರಾಜರುಗಳನ್ನು ಬೀದಿಪಾಲು ಮಾಡ ಬಹುದು ಎಂಬುದಕ್ಕೆ ಪುದುಕೋಟೆಯ ಈ ರಾಜನು ಒಂದು ಉದಾಹರಣೆ. ಬ್ರಿಟಿಷ್ ಆಡಳಿತವು ನಮ್ಮ ದೇಶದಲ್ಲಿ ಸಮಾನತೆಯನ್ನು ತರಲು ಪ್ರಯತ್ನ ನಡೆಸಿತ್ತು ಎಂಬ ಅಸ್ಪಷ್ಟ ತಿಳಿವಳಿಕೆ ನಮ್ಮಲ್ಲಿ ಬಹುಪಾಲು ಜನರಲ್ಲಿದೆ. ಆದರೆ ಈ ‘ಸಮಾನತೆ’ಯು ಎಷ್ಟು ಪಕ್ಷಪಾತಪೂರಿತ ವಾಗಿತ್ತು ಎಂಬುದಕ್ಕೆ ಪುದುಕೋಟೈ ರಾಜನನ್ನು ಅವರು ಆತಂಕಕ್ಕೆ ಒಳಪಡಿಸಿದ ರೀತಿಯು ಒಂದು ಸ್ಪಷ್ಟ ಉದಾಹರಣೆ. ಪುದುಕೋಟೈ ರಾಜ್ಯವು, ನಮ್ಮ ಮೈಸೂರು ರಾಜ್ಯದಂತೆಯೇ ಮದರಾಸಿ ನಲ್ಲಿದ್ದ ಬ್ರಿಟಿಷ್ ಸರಕಾರದ ಅಧೀನದಲ್ಲಿದ್ದ ರಾಜ್ಯ.

ಅಲ್ಲಿನ ರಾಜನಾಗಿದ್ದ ಮಾರ್ತಾಂಡ ಭೈರವ ತೋಂಡೈಮನ್ ನು ಮಾಡಿದ ತಪ್ಪೆಂದರೆ, ‘ಬಿಳಿ ಹೆಂಡ್ತಿ’ಯನ್ನು ಮನೆಗೆ ತಂದುಕೊಂಡದ್ದು. ತಮ್ಮ ಅಧೀನದಲ್ಲಿದ್ದ
ರಾಜನೊಬ್ಬನು, ಬಿಳಿ ಚರ್ಮದ ಹುಡುಗಿಯನ್ನು ಮದುವೆಯಾಗಿದ್ದನ್ನು ಬ್ರಿಟಿಷ್ ಸರಕಾರವು ಎಳ್ಳಷ್ಟೂ ಇಷ್ಟಪಡಲಿಲ್ಲ. ಈ ಕೃತ್ಯವು ತಮ್ಮ ಸಾರ್ವಭೌಮತ್ವಕ್ಕೆ
ಮಾಡಿದ ಅಪಮಾನ ಎಂದು ಆ ಸಾಮ್ರಾಜ್ಯ ಭಾವಿಸಿತು. ಬ್ರಿಟಿಷರು ನೀಡಿದ ಹಿಂಸೆಯಿಂದಾಗಿ, ಈ ರಾಜ ತನ್ನ ಅಧಿಕಾರವನ್ನು ಕಳೆದುಕೊಂಡು, ಕೊನೆಗೆ ನಮ್ಮ ದೇಶವನ್ನೇ ತೊರೆದು ದೂರದ ಯುರೋಪಿನಲ್ಲಿ ನೆಲಸಿ, ಅಲ್ಲೇ ಸಾಯಬೇಕಾಯಿತು. ಮಾತ್ರವಲ್ಲ, ಬ್ರಿಟಿಷರ ಚಿತಾವಣೆಯಿಂದಾಗಿ ಆತನ ಸಮಾಧಿಯನ್ನು ಸಹ ಯುರೋಪಿನಲ್ಲೇ ಮಾಡಬೇಕಾಯಿತು.

ರಾಮನಾಡಿನ ರಘುನಾಥ ಕೈಲವನ್ ಸೇತುಪತಿ (1673-1708) ಪುದುಕೋಟೈನಲ್ಲಿ ಸ್ಥಾಪಿಸಿದ ಅರಸೊತ್ತಿಗೆಯು, ಸಣ್ಣದಾಗಿದ್ದರೂ, ಸಾಕಷ್ಟು ಪ್ರಮುಖ ಎನಿಸಿತ್ತು. ಮೈಸೂರಿನಲ್ಲಿದ್ದ ಹೈದರ್ ಅಲಿಯ ಆಕ್ರಮಣವನ್ನು ತಡೆಯಲು ಬ್ರಿಟಿಷರ ಸಹಾಯ ಬಯಸಿದ್ದ ಈ ರಾಜ್ಯವು, ಕೊನೆಗೆ ಬ್ರಿಟಿಷರ ಅಧೀನಕ್ಕೆ ಒಳ ಪಟ್ಟಿತು. 17 ಗನ್ ಸೆಲ್ಯೂಟ್ ಮರ್ಯಾದೆಗೆ ಅರ್ಹವಾಗಿದ್ದ ಪುದುಕೋಟೈ ರಾಜ್ಯವು ಚಿಕ್ಕದು. 1901ರಲ್ಲಿ ಸುಮಾರು 4663 ಚದರ ಕಿಮೀ ವಿಸ್ತೀರ್ಣ ಹೊಂದಿದ್ದ ಇಲ್ಲಿ 380000 ಜನರಿದ್ದರು.

ಮದರಾಸಿನ ಬ್ರಿಟಿಷ್ ಸರಕಾರದ ನಿಯಂತ್ರಣದಲ್ಲಿದ್ದ ಈ ರಾಜ್ಯದ ರಾಜನಾಗಿದ್ದ ಮಾರ್ತಾಂಡ್ ಭೈರವ ತೊಂಡೈಮನ್ ಒಬ್ಬ ಕ್ರಿಕೆಟ್ ಆಟಗಾರ, ಆಂಗ್ಲ ವಿದ್ಯಾಭ್ಯಾಸ ಪಡೆದು ಯುರೋಪಿಯನ್ ಶೈಲಿಯ ಆಧುನಿಕ ಜೀವನ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದ. ತನ್ನ ಹನ್ನೊಂದನೆಯ ವಯಸ್ಸಿನಲ್ಲಿ, ಮದರಾಸು ಸರಕಾರದ ಸಹಮತದೊಂದಿಗೆ 27.11.1894ರಂದು ರಾಜ್ಯಾಧಿಕಾರವನ್ನು ವಹಿಸಿಕೊಂಡ. ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ರೀತಿ ಯಲ್ಲೇ, 30 ಸದಸ್ಯರಿದ್ದ ಆಡಳಿತ ಮಂಡಳಿಯನ್ನು ತನ್ನ ರಾಜ್ಯದಲ್ಲಿ ಸ್ಥಾಪಿಸಿದ್ದ.

ರಾಜ್ಯಾಡಳಿತವನ್ನು ನೋಡಿಕೊಳ್ಳಲು ದಿವಾನರೂ ಇದ್ದರು. 1913ರಲ್ಲಿ ಬ್ರಿಟಿಷರು ಆತನನ್ನು ನೈಟ್ ಗ್ರಾಂಡ್ ಕಮಾಂಡರ್ ಎಂದು ಗೌರವಿಸಿದರು. ಆದರೆ ಆತ ಮಾಡಿದ ತಪ್ಪೆಂದರೆ ಬಿಳಿ ಚರ್ಮದ ಹುಡುಗಿಯನ್ನು ಪ್ರೀತಿಸಿದ್ದು. 1915ರಲ್ಲಿ ಮಾರ್ತಾಂಡ ಭೈರವ ತೋಂಡೈಮನ್‌ನು ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ. ಅಲ್ಲಿ ಮೊಲ್ಲಿ ಫ್ರಾಂಕ್ ಎಂಬ ಮಹಿಳೆಯ ಪರಿಚಯವಾಯಿತು. ಸಾಕಷ್ಟು ಓಡಾಟದ ನಂತರ ಅವರಿಬ್ಬರೂ ಪ್ರೀತಿಸಿದರು. ಮೆಲ್ಬೋರ್ನ್‌ನ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಗಸ್ಟ್ 1915ರಲ್ಲಿ ಅವರ ವಿವಾಹವೂ ಆಯಿತು. ಆದರೆ, ಆಸ್ಟ್ರೇಲಿಯಾದ ಪತ್ರಿಕೆಗಳು ತಮ್ಮ ಸಾಮ್ರಾಜ್ಯಕ್ಕೆ ಬೆಂಕಿ ಬಿದ್ದಂತೆ ಹುಯಿಲೆಬ್ಬಿಸಿದವು! ಮಾರ್ತಾಂಡ ಭೈರವ ತೋಂಡೈಮನ್‌ನು ಇಂಗ್ಲಿಷ್ ಕಲಿತು, ತಾನು ಯುರೋಪಿಯನ್ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದೇನೆ, ಆದ್ದರಿಂದ, ಬ್ರಿಟಿಷ್ ಸಾಮಾಜ್ಯದ ಭಾಗವೇ ಆಗಿದ್ದ ಆಸ್ಟ್ರೇಲಿಯಾದ ಯುವತಿಯನ್ನು ಪ್ರೀತಿಸುವ ಅರ್ಹತೆ ತನಗೆ ಇದೆ ಎಂದು ತಪ್ಪಾಗಿ ಭಾವಿಸಿದ್ದ.

ಭಾರತದ ರಾಜನೊಬ್ಬ ಬಿಳಿಯ ಹುಡುಗಿಯನ್ನು ಪ್ರೀತಿಸಿದ್ದು, ಅವಳನ್ನು ಮದುವೆಯಾಗಿದ್ದು ಸರ್ವಥಾ ಸರಿಯಲ್ಲ ಎಂದು ಅಲ್ಲಿ ಪತ್ರಿಕೆಗಳು ದೊಡ್ಡ ವಿವಾದವನ್ನೇ ಎಬ್ಬಿಸಿದವು. ಇತ್ತ ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಸರಕಾರವು ಸಹ ಈ ಮದುವೆಯನ್ನು ತನ್ನ ಸಾಮ್ರಾಜ್ಯಕ್ಕೆ ಹಾಕಿದ ಸವಾಲು ಎಂದೇ ಪರಿಗಣಿಸಿತು. ಮಾತ್ರವಲ್ಲ, ಪುದುಕೋಟೈ ರಾಜನ ಈ ಮದುವೆಯನ್ನು ತಾನು ಮಾನ್ಯ ಮಾಡುವುದಿಲ್ಲ ಎಂದು ಘೋಷಿಸಿತು. ಜತೆಗೆ, ಮೊಲ್ಲಿ -ಂಕ್‌ಳನ್ನು ‘ಮಹಾರಾಣಿ’ (ಹರ್
ಹೈನೆಸ್) ಎಂದು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದೂ ಹೇಳಿತು.

ಪುದುಕೋಟೈ ರಾಜ್ಯಕ್ಕೆ ‘ಬಿಳಿ ಹೆಂಡ್ತಿ’ಯನ್ನು ಕರೆದುಕೊಂಡು ಬಂದ ರಾಜನಿಗೆ ಜನರು ಭವ್ಯ ಸ್ವಾಗತ ನೀಡಿದರು. ಆದರೆ, ಬ್ರಿಟಿಷ್ ಸರಕಾರದ ಅನುಮತಿ ಇಲ್ಲದಿದ್ದರೆ, ಈ ದಂಪತಿ ಇಲ್ಲಿ ಬಾಳುವುದು ಕಷ್ಟ ಎಂದು ಅರಮನೆಯವರು ಗುರುತಿಸಿದರು. ಇವರಿಬ್ಬರೂ ಕೇವಲ ಐದು ತಿಂಗಳು ಪುದುಕೋಟೈನಲ್ಲಿದ್ದರು. ಈ ಅವಽಯಲ್ಲಿ ಆಕೆ ಗರ್ಭಿಣಿಯಾದಳು. ಅವಳಿಗೆ ವಿಷ ನೀಡಿ ಕೊಲ್ಲಲು ಪ್ರಯತ್ನ ನಡೆಸಲಾಯಿತು. ಆಕೆ ವಾಂತಿ ಮಾಡಿಕೊಂಡಾಗ, ಅದರಲ್ಲಿ ಓಲಿಯಾಂಡರ್ (ಕಣಗಿಲು) ಗಿಡದ ವಿಷ ಪತ್ತೆಯಾಯಿತು.

ಪುದುಕೋಟೈ ಅರಮನೆಯಲ್ಲಿದ್ದರೆ ತನ್ನ ಪತ್ನಿಯ ಜೀವಕ್ಕೆ ಅಪಾಯವಿದೆ ಎಂದು, ರಾಜನು ಊಟಿಯಲ್ಲಿ ಬಾಡಿಗೆ ಮನೆ ಮಾಡಿದೆ. ಅಲ್ಲೇ ಒಂದು ಬಂಗಲೆ ಖರೀದಿಸಲು ನಿಶ್ಚಯಿಸಿದ. ಆದರೆ, ಮಾರ್ತಾಂಡ ಭೈರವನು ಊಟಿಯಲ್ಲಿ ಬಂಗಲೆ ಖರೀದಿಸುವಂತಿಲ್ಲ ಎಂದು ಬ್ರಿಟಿಷ್ ಸರಕಾರ ಹೇಳಿತು! ಇನ್ನು ಈ ದೇಶದಲ್ಲಿ ತಮಗೆ ಭವಿಷ್ಯವಿಲ್ಲ ಎಂದರಿತ ಅವರಿಬ್ಬರೂ 16.4.1916 ರಂದು ಭಾರತ ತೊರೆದು, ಆಸ್ಟ್ರೇಲಿಯಾದ ಸಿಡ್ನಿಗೆ ಹೋದರು. 22.7.1916ರಂದು ಅವರಿಗೊಬ್ಬ ಮಗ ಹುಟ್ಟಿದ. ಅವನಿಗೆ ಮಾರ್ತಾಂಡ ಸಿಡ್ನಿ ತೊಂಡೈಮನ್ ಎಂದು ನಾಮಕರಣ ಮಾಡಿದರು.

ಆಸ್ಟ್ರೇಲಿಯಾ, ಭಾರತ ಎಲ್ಲವೂ ಬ್ರಿಟಿಷರ ನಿಯಂತ್ರಣದಲ್ಲಿರುವ ದೇಶಗಳಾಗಿದ್ದವು ತಾನೆ! ಒಂದೇ ಸಾಮ್ರಾಜ್ಯದ ಭಾಗಗಳಾಗಿದ್ದವು. ಆದರೆ ರಾಜನ
ಮಗನಿಗೆ ‘ಯುವರಾಜ’ನ ಸ್ಥಾನಮಾನವನ್ನು ತಾನು ಮಾನ್ಯ ಮಾಡುವುದಿಲ್ಲ ಎಂದು ಬ್ರಿಟಿಷ್ ಸರಕಾರ ಸ್ಪಷ್ಟವಾಗಿ ಹೇಳಿತು. ಮಾರ್ತಾಂಡ ಭೈರವ ತೋಂಡೈ ಮನ್‌ನು, ತನ್ನ ರಾಜಾಧಿಕಾರವನ್ನು ಅದುವರೆಗೆ ಹೊಂದಿದ್ದ. ಬ್ರಿಟಿಷ್ ಸರಕಾರದ ಒತ್ತಡದಿಂದಾಗಿ, ತನ್ನ ಅಧಿಕಾರವನ್ನು ತ್ಯಜಿಸಿ, ತನ್ನ ರಕ್ತಸಂಬಂಧಿ ರಾಜ ಗೋಪಾಲ ತೋಂಡೈಮನ್‌ನ್ನು ರಾಜನನ್ನಾಗಿ ಮಾಡಬೇಕಾದ ಅನಿವಾರ್ಯತೆಗೆ ಈ ರಾಜ ಸಿಲುಕಿದ. 1928ರಲ್ಲಿ ಕೇವಲ ಆರು ವರ್ಷದ ರಾಜಗೋಪಾಲ ತೊಂಡೈಮನ್‌ನಿಗೆ ಅಽಕಾರ ವಹಿಸಿಕೊಡಬೇಕಾಯಿತು.

ಆದರೆ ಈ ದಂಪತಿ ತಮ್ಮ ಹೋರಾಟವನ್ನು ಮುಂದುವರಿಸಿದರು. ಲಂಡನ್‌ಗೆ ಹೋಗಿ ಲಾರ್ಡ್ ವೆಲ್ಲಿಂಗ್ಟನ್‌ನ್ನು ಭೇಟಿ ಮಾಡಿ, ತಮಗೆ ನ್ಯಾಯ ದೊರಕಿಸುವಂತೆ ಮನವಿ ಮಾಡಿದರು. ತಾವಿಬ್ಬರೂ ಬ್ರಿಟಿಷ್ ಸಾಮ್ರಾಜ್ಯದ ಪ್ರಜೆಗಳು, ಒಬ್ಬರು ಭಾರತದವರು, ಇನ್ನೊಬ್ಬರು ಆಸ್ಟ್ರೇಲಿಯಾದವರು, ಆದ್ದರಿಂದ, ಬ್ರಿಟಿಷ್ ಸರಕಾರದ ಅಧೀನದಲ್ಲಿದ್ದುಕೊಂಡೇ, ರಾಜ್ಯಾಡಳಿತ ಮಾಡುತ್ತೇವೆ ಎಂದು ಭಿನ್ನವಿಸಿದರು. ಜತೆಗೆ, ಮಗನನ್ನು ಅಽಕೃತ ಯುವರಾಜ ಎಂದು ಮಾನ್ಯ ಮಾಡು ವಂತೆ ಕೇಳಿ ಕೊಂಡರು.

ಆದರೆ, ಅಂದಿನ ಬ್ರಿಟಿಷ್ ಸರಕಾರ ಇಂತಹ ಮನವಿಗಳಿಗೆ ಜಪ್ಪಯ್ಯ ಅನ್ನಲಿಲ್ಲ. ಮಾರ್ತಾಂಡ ಭೈರವ ತೊಂಡೈಮನ್‌ನು ಬಿಳಿ ಹುಡುಗಿಯನ್ನು ಪ್ರೀತಿಸಿ, ಮದುವೆಯಾದದ್ದೇ ಮಹದಪರಾಧ ಎಂದು ಪರಿಗಣಿಸಿತು. ಪ್ರೀತಿಸಿ ಮದುವೆಯಾದ ಈ ರಾಜನು, ಕೊನೆಗೆ ತನ್ನ ರಾಜಾಧಿಕಾರವನ್ನೇ ತ್ಯಾಗ ಮಾಡ ಬೇಕಾಯಿತು. ಅಽಕಾರ ತ್ಯಾಗ ಮಾಡಿದ ರಾಜ ಮಾರ್ತಾಂಡ ತೊಂಡೈಮನ್‌ಗೆ ಬ್ರಿಟಿಷ್ ಸರಕಾರವು ಸಾಕಷ್ಟು ಪಿಂಚಣಿಯನ್ನು ನೀಡಿತು. ಇವರಿಬ್ಬರೂ ಮಗನೊಂದಿಗೆ ಫ್ರಾನ್ಸ್‌ಗೆ ಹೋದರು. ಅಲ್ಲೊಂದು ಬಂಗಲೆಯನ್ನು ಖರೀದಿಸಿದರು. ರಾಜನ ಹೆಂಡತಿಯು ಫ್ಯಾಷನ್ ವಲಯದಲ್ಲಿ ಹೆಸರು ಗಳಿಸಿದಳು.
ಈ ನಡುವೆ, 28.5.1928ರಂದು ಮಾರ್ತಾಂಡ ಭೈರವ ತೊಂಡೈಮನ್‌ನು ಆಕಸ್ಮಿಕವಾಗಿ ನಿಧನನಾದ.

ಆತನ ಅಂತ್ಯಸಂಸ್ಕಾರವನ್ನು ಭಾರತದಲ್ಲಿದ್ದ ಆತನ ರಾಜ್ಯ ಪುದುಕೋಟೈನಲ್ಲಿ ನಡೆಸಬೇಕು ಎಂದು ಮಡದಿ ಮೊಲ್ಲಿ ಫಿಂಕ್ ನಿರ್ಧರಿಸಿದಳು. ಆದರೆ, ಇದಕ್ಕೆ ಬ್ರಿಟಿಷ್ ಸರಕಾರವು ಅನುಮತಿ ನೀಡಲಿಲ್ಲ! ಆದ್ದರಿಂದ, ಹಿಂದೂ ಪದ್ಧತಿಯಂತೆ ಲಂಡನ್‌ನಲ್ಲಿ ರಾಜನ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು. ಇಂದಿಗೂ ಆತನ ಸಮಾಧಿ ಅಲ್ಲಿದೆ. 1930ರ ನಂತರ ಮೊಲ್ಲಿ ಫಿಂಕ್ ಲಂಡನ್‌ನಲ್ಲಿ ವಾಸಿಸತೊಡಗಿದಳು. ಜತೆಗೆ, ಫ್ರಾನ್ಸ್, ಅಮೆರಿಕ ಮೊದಲಾದ ದೇಶಗಳಿಗೆ ಭೇಟಿ ನೀಡುತ್ತಲೇ ಇದ್ದಳು.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಆಕೆ ಆರ್ಥಿಕ ಸಂಕಷ್ಟವನ್ನು ಎದುರಿಸಿದಾಗ, ನ್ಯೂಯಾರ್ಕ್‌ನಲ್ಲಿ ಫ್ಯಾಷನ್ ಬಟ್ಟೆಗಳ ತಯಾರಿಯಲ್ಲಿ ತೊಡಗಿಕೊಂಡು, ಜೀವನ ನಿರ್ವಹಿಸಿದಳು. ಜತೆಗೆ, ಯುದ್ಧದ ನಿರ್ವಹಣೆಗಾಗಿ, ಜನರಿಂದ ದಾನವನ್ನು ಸಂಗ್ರಹಿಸುವ ಕೆಲಸದಲ್ಲೂ ತೊಡಗಿಕೊಂಡಳು. ತನ್ನ ಕೊನೆಯ ದಿನಗಳಲ್ಲಿ ಆಕೆಗೆ ಒಂಟಿತನ ಕಾಡತೊಡಗಿತ್ತು. ಕೇನ್ಸ್‌ನಲ್ಲಿ 1967ರಲಿ ಕ್ಯಾನ್ಸರ್ ನಿಂದ ಮೃತಪಟ್ಟಳು. ಲಂಡನ್‌ನಲ್ಲಿ ಪತಿಯ ಸಮಾಧಿಯ ಪಕ್ಕದಲ್ಲೇ ಈಕೆಯ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಪುದುಕೋಟೈ ರಾಜ್ಯದ ರಾಜನಾಗಿದ್ದ ಮಾರ್ತಾಂಡ ಭೈರವ ತೊಂಡೈಮನ್‌ನ ಮಗ ಮಾರ್ತಾಂಡ ಸಿಡ್ನಿ ತೊಂಡೈಮನ್‌ನದ್ದು ಇನ್ನೊಂದು ದುರಂತ.
ಬ್ರಿಟಿಷರು ಕನಿಕರ ತೋರಿ ಅನುಮತಿ ನೀಡಿದ್ದರೆ, ಆತ ಪುದುಕೋಟೈ ರಾಜ್ಯದ ಯುವರಾಜನಾಗಬಹುದಿತ್ತು. ಆದರೆ, ಆ ಭಾಗ್ಯ ಅವನ ಹಣೆಯಲ್ಲಿ ಬರೆದಿರಲಿಲ್ಲ. ಅವನನ್ನು ಸ್ವಿಜರ್‌ಲೆಂಡ್‌ನ ಉತ್ತಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ತೊಡಗಿಸಲಾಗಿತ್ತು. ವಿದ್ಯಾಭ್ಯಾಸದ ನಂತರ, ಆತ ತಾಯಿಯ ಜತೆ ಅಮೆರಿಕಕ್ಕೆ ಹೋಗಿದ್ದ. ಆದರೆ ಆತ ಉಡಾಳನಾಗಿದ್ದ. 1945ರಲ್ಲಿ ಅಮೆರಿಕದ ಪೊಲೀಸರು ಅವನನ್ನು ಬಂಽಸಿದರು.

ಆತನ ಮೇಲೆ ಹೊರಿಸಿದ್ದ ಅಪರಾಧ ವೆಂದರೆ, ಆಭರಣದ ಅಂಗಡಿಯಲ್ಲಿ ಕಳ್ಳತನ! ಆತನ ಮೋಜಿನ ಮತ್ತು ವಿಲಾಸಿ ಜೀವನಕ್ಕಾಗಿ ಕಳ್ಳತನಕ್ಕೆ ಇಳಿದಿದ್ದ ಎನ್ನಲಾಗಿದೆ. ಆ ಅಪರಾಧಕ್ಕಾಗಿ ಆತನಿಗೆ ಒಂದು ವರ್ಷ ಜೈಲು ಶಿಕ್ಷೆಯಾಗಿ ಬಿಡುಗಡೆಯಾಗಿ, ಹೊರಬಂದು ನೋಡಿದರೆ, ಆತನ ಅಮೆರಿಕದ ನಾಗರಿಕತ್ವವನ್ನು ರದ್ದು ಮಾಡಲಾಗಿತ್ತು! ಆಗ ಸಹಾಯಕ್ಕೆ ಬಂದವನು ಕ್ಯೂಬಾದ ಅಧ್ಯಕ್ಷ ರೋಮನ್ ಗ್ರೂ. ಅಮೆರಿಕದ ಶತ್ರುದೇಶವಾಗಿದ್ದ ಕ್ಯೂಬಾದಲ್ಲಿ ಹೋಗಿ ನೆಲೆಸುವ ಅನಿವಾರ್ಯತೆ ಈ ‘ರಾಜಪುತ್ರ’ನಿಗೆ! 1948ರಲ್ಲಿ ಯುರೋಪಿಗೆ ಮರಳಿದ ಈತನು, ವಿವಿಧ ದೇಶಗಳನ್ನು ಸುತ್ತಾಡುತ್ತಾ ಕಾಲ ಕಳೆಯುತ್ತಿದ್ದ.

1984ರಲ್ಲಿ ಫ್ಲಾರೆನ್ಸ್‌ನಲ್ಲಿ ಮೃತ ನಾದ ಈತನನ್ನು ಲಂಡನ್‌ನಲ್ಲಿ ತಂದೆಯ ಸಮಾಧಿಯ ಬಳಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ. ಮೊಲ್ಲಿ ಫಿಂಕ್ ಅಥವಾ ಮಾರ್ತಾಂಡ ಸಿಡ್ನಿ ತೋಂಡೈಮನ್ ಅವರ ಬದುಕು ಯಾರಿಗೂ ಆದರ್ಶವಾಗಬೇಕಿಲ್ಲ. ಹಾಗೆಯೇ ಬಿಳಿ ಚರ್ಮದ ಹುಡುಗಿಯನ್ನು ಪ್ರೀತಿಸಿದ, ಪುದುಕೋಟೈ ರಾಜನಾಗಿದ್ದ ಮಾರ್ತಾಂಡ ಭೈರವ ತೊಂಡೈಮನ್‌ನ ಜೀವನವೂ ಯಾರಿಗೂ ಮಾದರಿಯಾಗಬೇಕಿಲ್ಲ. ಆದರೆ, ಇಲ್ಲಿ ಕಾಡುವುದು ಆ ರಾಜ ಒಳಗಾದ ದುರಂತದ ಆಯಾಮಗಳು. ಬ್ರಿಟಿಷರ ವಸಾಹತುಶಾಹಿ ನೀತಿ, ನಮ್ಮ ದೇಶದವರು ಬಿಳಿ ಚರ್ಮದವರಿಗೆ ಸಮಾನರಲ್ಲ ಎಂಬ ದುರಹಂಕಾರಪೂರಿತ ಆಡಳಿತ, ಸ್ಥಳೀಯ ರಾಜರುಗಳನ್ನು ಸಣ್ಣ ಪುಟ್ಟ ಕಾರಣಗಳಿಗೂ ಹಿಂಸಿಸುವ ಪರಿ ಇವೆಲ್ಲವೂ ಪುದುಕೋಟೈ ರಾಜ್ಯದ ಆ ರಾಜನ ಬದುಕನ್ನು ನೀರು ಪಾಲು ಮಾಡಿದವು. ಮಾರ್ತಾಂಡ ಭೈರವನು ಇಂಗ್ಲಿಷರ ದಿನಚರಿಯನ್ನು ತನ್ನದಾಗಿಸಿಕೊಂಡಿದ್ದ. ಉತ್ತಮ ಇಂಗ್ಲಿಷ್ ಕಲಿತು, ಕ್ರಿಕೆಟ್ ಆಟ ಕಲಿತಿದ್ದ ಈತ ಪಕ್ಕಾ ‘ಕಂದು ಸಾಹೇಬ’ನೇ ಆಗಿದ್ದ.

ಆದರೂ ಬ್ರಿಟಿಷರು ಇವನ ಮೇಲೆ ಕನಿಕರ ತೋರಲಿಲ್ಲ. 1915-1920ರ ಸಮಯವು ಬ್ರಿಟಿಷರು ನಮ್ಮ ದೇಶದಲ್ಲಿ ಅತಿ ಪ್ರಬಲರಾಗಿದ್ದ ಕಾಲ. 1919 ರಲ್ಲಿ ಜಲಿಯನ್‌ವಾಲಾ ಬಾಗ್‌ನಲ್ಲಿ ನಾಲ್ಕುನೂರು ಅಮಾಯಕ ಭಾರತೀಯರನ್ನು ಬಂದೂಕು ಚಲಾಯಿಸಿ, ಕೊಂದು ಹಾಕಿ, ಅದು ಸರಿ ಎಂದು ಸಮರ್ಥಿಸಿ ಕೊಂಡು ಮೆರೆಯುತ್ತಿದ್ದ ಕಾಲ. ಈ ರಾಜನ ಮನವಿಯನ್ನು ತಿರಸ್ಕರಿಸಲು ಅವರಲ್ಲಿ ಅಷ್ಟೊಂದು ಅಧಿಕಾರ, ಗರ್ವ, ಸೇನಾಬಲ ಅಂದು ಅವರಲ್ಲಿತ್ತು. ಅವರ ಈ ನೀತಿ ಯಿಂದಾಗಿ, ಪುದುಕೋಟೈ ರಾಜನು ತನ್ನ ರಾಜ್ಯವನ್ನೇ ಕಳೆದುಕೊಂಡು, ದೂರದ ಯುರೋಪಿನಲ್ಲಿ ಮಣ್ಣಾಗಬೇಕಾಗಿದ್ದು ಒಂದು ಪುಟ್ಟ ದುರಂತವೇ ಸರಿ. ಪುದುಕೋಟೈನಲ್ಲಿ ಆದರ್ಶ ರಾಜ್ಯವನ್ನು ಸ್ಥಾಪಿಸುವ ಅವಕಾಶವಿದ್ದ ಆ ರಾಜನು, ಅಬ್ಬೇಪಾರಿಯಂತೆ ಜೀವಿಸಬೇಕಾಯಿತು.