Tuesday, 29th September 2020

ತಾನಾರೆಂದು ತಿಳಿದೊಡೆ-36

ಕ್ಷಿತಿಜ್ ಬೀದರ್

ಧ್ಯಾನದಲ್ಲಿ ಸಾಮಾನ್ಯವಾಗಿ ಉಸಿರಾಟ ಕ್ರಮವು ಹೆಚ್ಚಿನ ಮಹತ್ವ ಪಡೆದಿರುವುದು ಎಲ್ಲರೂ ತಿಳಿದ ವಿಷಯ. ಆದರೆ ಉಸಿರಾಟಕ್ಕೆ ಬೇಕಾದ ವಾಯುವಿನ ಬಗ್ಗೆ ಯಾರೂ ಹೆಚ್ಚು ಜಾಗರೂಕತೆ ವಹಿಸದಿರುವುದು ವಿಷಾದನೀಯ. ವಾಯುಶಕ್ತಿಯಲ್ಲಿಯೇ ವ್ಯಕ್ತಿಯ ಚೈತನ್ಯವೂ ಅಡಗಿದೆ.

ಶರೀರದ ಸ್ವಾಸ್ಥ್ಯಕ್ಕಾಗಿ ಸಮತೋಲನ ಆಹಾರ ಸೇವಿಸುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಪ್ರೊಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ ಎಂದು ಸಪ್ಲಿಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತದೆ. ಸ್ಪರ್ಧಾತ್ಮಕ ಕಂಪನಿಗಳ ಉತ್ಪನ್ನಗಳಿಗೆ ಕೊರತೆ ಇಲ್ಲ. ಆಹಾರದ ಕಾಳಜಿಯನ್ನು ಮೆಚ್ಚಬೇಕಾದ್ದೇ! ನೀರಿನ ಬಗ್ಗೆೆ ಆಹಾರದಷ್ಟೇ ಗಮನ ನೀಡುವುದಿಲ್ಲ. ಕೆಲವರು ಮಾತ್ರ ಮಿನರಲ್ ನೀರು, ಶುದ್ಧ ನೀರು ಎಂಬ ಪರಿಜ್ಞಾನ ಹೊಂದಿರುತ್ತಾರೆ. ರೋಗಾಣು ಮುಕ್ತತೆ ಬಗ್ಗೆ ಚಿಂತಿಸುವುದಿಲ್ಲ. ಇದಕ್ಕಿಂತಲೂ ಕಡೆಯಾಗಿ ಅಜ್ಞಾನಿಗಳಗಿರುವುದು ಮಾತ್ರ ವಾತಾವರಣದ ಆಮ್ಲಜನಕದ ಬಗ್ಗೆೆ!

ಶರೀರದ ಆರೋಗ್ಯಕ್ಕಾಗಿ ಬೆಳಗಿನ ಜಾವ ರಸ್ತೆದ್ದಕ್ಕೂ ಓಡುತ್ತಾರೆ. ವ್ಯಾಯಾಮ ಕಸರತ್ತು ಮಾಡುತ್ತಾರೆ. ತೇಗುತ್ತಾರೆ. ಭರದ ಉಸಿರಾಟಕ್ಕೆ ಲಭ್ಯವಾಗುತ್ತಿರುವ ಗಾಳಿ ಎಂಥದ್ದು ಎನ್ನುವ ಬಗ್ಗೆ ಚಿಂತನೆ ಮಾಡುವುದಿಲ್ಲ. ಉಸಿರಾಟವೇ ಬದುಕು ಅಲ್ಲವೇ? ಗಾಳಿಯೇ ಪ್ರಾಣವಾಗಿರುವ ಸಂಗತಿಯನ್ನು ಆಹಾರ ನೀರಿಗಿಂತ ಕಡೆಯಾಗಿ ಪರಿಗಣಿಸುವುದೇ? ರಸ್ತೆಯಲ್ಲಿ ಓಡಾಡುವ ವಾಹನಗಳ ಕಾರ್ಬನ್ ವಿಷ ವಾಯುವನ್ನೇ ಉಸಿರಾಡುತ್ತಾರೆ. ದುರ್ಗಂಧ ವಾಯುವನ್ನೇ ಸೇವಿಸುತ್ತಾರೆ. ಮಲ ಮೂತ್ರಗಳ ಚರಂಡಿ ವಾಸನೆಯನ್ನೇ ಕುಡಿಯುತ್ತಾರೆ. ಶುದ್ಧ ಗಾಳಿಯನ್ನು ಅಪೇಕ್ಷಿಸುವ ಚಡಪಡಿಕೆಯೂ ಇಲ್ಲದ ಮನಸ್ಥಿತಿಯನ್ನು ಕಾಣುತ್ತೇವೆ.

ಯಾಂತ್ರಿಕ ಬದುಕಿನಲ್ಲಿ ಶ್ವಾಸೋಚ್ಛಾಸದ ಮಹತ್ವವೇ ಇಲ್ಲದಂತಾಗಿದೆ. ಪರ್ವತ ಶ್ರೇಣಿಯ ಶುದ್ಧ ಆಮ್ಲಜನಕದ ಪರಿಕಲ್ಪನೆ ಬೇಡವಾಗಿದೆ. ಅಂತಹ ಶುದ್ಧ ವಾಯುಪಾನವು ಹುಟ್ಟಿಸುವ ಚೈತನ್ಯವನ್ನು ಅನುಭವಿಸಬಾರದೇ? ಧ್ಯಾನದ ಪ್ರದೇಶವು ಪ್ರಕೃತಿಯ ಶುದ್ಧ ವಾತಾವರಣದ ಪ್ರಾಣವಾಯುವಿನಿಂದ ಸಮೃದ್ಧವಾಗಿದ್ದರೆ ಹೆಚ್ಚು ಫಲಕಾರಿ ಎನ್ನುವುದು ಸ್ವಯಂವೇದ್ಯ ಸಂಗತಿಯೇ.

ಧ್ಯಾನದ ಉಸಿರಾಟ ಕ್ರಿಯೆಯನ್ನು ಗಂಟೆಯ ನಾದಕ್ಕೆ ಹೋಲಿಸಬಹುದು. ಕಬ್ಬಿಣದ ರಾಡಿನಿಂದ ಗಂಟೆಗೆ ಬಾರಿಸಿದರೆ ಪ್ರಾರಂಭಕ್ಕೆ ದೊಡ್ಡ ಸದ್ದು ಕೇಳಿ ಬಂದು ನಂತರ ನಿಧಾನಕ್ಕೆ ಅದು ಸೂಕ್ಷ್ಮ ತರಂಗದಲ್ಲಿ ಲೀನವಾಗುತ್ತದೆಯಲ್ಲವೇ? ಮೂಗಿನ ತುದಿಯಲ್ಲಿ ಕೇಂದ್ರೀಕರಿಸಿದ ದೃಷ್ಟಿಗೆ ಪ್ರಾರಂಭದಲ್ಲಿ ಉಸಿರಾಟದ ವೇಗ ಗೋಚರವಾದರೂ ನಂತರ ಸೂಕ್ಷ್ಮವಾಗಿ ನಿಗೂಢವಾಗಿ ಲೀನವಾಗುತ್ತದೆ.

ಉಸಿರು ನಿಂತು ಹೋಯಿತು ಎಂದು ಗಾಬರಿಯಾಗಬಾರದು. ಧ್ಯಾನದ ಏಕಾಗ್ರತೆ ಸ್ಪಷ್ಟವಾಗತೊಡಗುತ್ತದೆ. ಮನತುಂಬಿ ಭಾವಪ್ರಜ್ಞೆಯೊಂದಿಗೆ ಅಭ್ಯಾಸ ಮಾಡುತ್ತಾ ನಂಬಿಕೆ, ವಿಶ್ವಾಸ, ಬುದ್ಧಿ ಇರುವಿಕೆಯಲ್ಲಿ ಚೈತನ್ಯ ಶಕ್ತಿಯನ್ನು ನಿಯಂತ್ರಿಸುತ್ತಿರ ಬೇಕು. ಇಲ್ಲದಿದ್ದರೆ ಸಮಾಧಿ ಅವಸ್ಥೆಯಲ್ಲಿ ಪ್ರಜ್ಞೆ ಕಳೆದುಕೊಳ್ಳುವ ಸಂಭವವಿರುತ್ತದೆ. ಸಮಾಧಿ ಸುಖ ಅಂದರೆ ನಮೂನೆಗಾಗಿ ಹೆಸರಿಸಬಹುದಾಗಿದ್ದು ಸಂಭೋಗ ಸುಖ ಅಥವಾ ದುಶ್ಚಟಗಳಾದ ಕುಡಿತ, ಹೊಗೆಸೊಪ್ಪು ಸೇವನೆ ಅನುಭವಗಳು! ಶಾಶ್ವತ ಆನಂದದ ಪರಿ ತಿಳಿಯಪಡಿಸಲು ಕ್ಷಣಿಕ ನಮೂನೆಗೆ ನೀಡಿರುವ ಸುಖಗಳು. ಇದರಲ್ಲಿಯೇ ಹಾಳಾಗುವುದಲ್ಲ. ಒಬ್ಬೊಬ್ಬರಿಗೆ
ಒಂದೊಂದು ತೆರನಾದ ಅನುಭವಗಳಾಗುತ್ತವೆ. ಸ್ವರ್ಗ ಸುಖದ ವಿಧಗಳು ಹಲವಾರು. ಪೂಜೆ ಪುನಸ್ಕಾರಗಳಿಂದ
ತೃಪ್ತರಾಗುವ ಆಚರಣೆಗಳು ಪ್ರಾರಂಭಿಕ ಹಂತದ ಭಕ್ತಿಯಾಗಿರುತ್ತದೆ. 48 ದಿನ ಪೂಜೆ, 108 ಸಲ ಜಪ ಎನ್ನುವ ಸೀಮಿತ
ಆಚರಣೆಗಳಿಗೆ ಅವರದೇ ವಿವರಣೆಯೂ ದೊರೆಯುತ್ತದೆ.

ಅಖಂಡ ಪೂಜೆ ಎನ್ನುವ ಹೆಸರಿನಲ್ಲಿ ಕೈಗೊಳ್ಳುವ ಭಕ್ತಿಯನ್ನು ಅಲ್ಲಗಳೆಯಲಾಗದು. ಅವರ ಸಂಖ್ಯಾ ವಿಶೇಷತೆ ಗಮನಿಸುವು ದಾದರೆ 27 ನಕ್ಷತ್ರಗಳು, 9ಗ್ರಹಗಳು, 12ರಾಶಿಗಳ ಒಟ್ಟು ಮೊತ್ತ 48 ಮತ್ತೆೆ 60 ಸಂವತ್ಸರಗಳನ್ನು ಸೇರಿಸಿ 108 ಎಂದು ವ್ಯಾಖ್ಯಾ ನಿಸುತ್ತಾರೆ. ಆತ್ಮವನ್ನು ಜಾಗೃತಗೊಳಿಸಿ ಪರಮಾತ್ಮನನ್ನು ಒಲಿಸಿಕೊಳ್ಳುವುದೇ ಅಖಂಡ ಪೂಜೆ ಎನ್ನುವುದು. ಇದು ಉಸಿರಾಟ ಕ್ರಿಯೆಗೆ ಸಂಬಂಧಿಸಿರುವುದಿಲ್ಲ. ಪೂಜೆ ಆಚರಣೆಗಳೇ ಬೇರೆ. ಧ್ಯಾನವೇ ಬೇರೆ.

ಮೈ ಮನಸ್ಸು ಒಂದನ್ನೊಂದು ಸಾಮರಸ್ಯದಲ್ಲಿ ಕಾರ್ಯ ನಿರ್ವಹಿಸುವುದನ್ನು ಅರಿತು ಧ್ಯಾನದಲ್ಲಿ ಭೌತಿಕ ಕಾಯದ ಮೇಲೆ ಅಭ್ಯಾಸ ಮಾಡಿ ಮನಸ್ಸಿನ ಕೌಶಲ್ಯವನ್ನು ತೀವ್ರಗತಿಯಲ್ಲಿ ಅಭಿವೃದ್ಧಿಪಡಿಸಿಕೊಳ್ಳಬಹುದು. ಶರೀರದಲ್ಲಿ ನೋವು ಅನ್ನಿಸ ದಂತೆ ಬಹಳ ಹೊತ್ತು ಚಲನೆ ಇಲ್ಲದೆ ಹಾಯಾಗಿರುವ ಭಂಗಿಯಾದರೆ ಮನಸ್ಸು ಸ್ಥಿರಗೊಳ್ಳಲು ಸಾಧ್ಯವಾಗುತ್ತದೆ. ನಿದ್ರೆ ಬಾರದಂತಿರುವ ಆಸನದಲ್ಲಿ ಧ್ಯಾನಾವಸ್ಥೆಗೆ ಕುಳಿತರೆ ಮನಸ್ಸಿನ ಸ್ಥಿತಿ ಆಹ್ಲಾದಕರವಾಗಿರುತ್ತದೆ. ಧ್ಯಾನದಲ್ಲಿಯೂ ಹಲವಾರು ಪದ್ಧತಿಗಳಿವೆ.

ಸಿದ್ಧಾಸನ ಸ್ವಸ್ತಿಕಾಸನ ಪದ್ಮಾಸನ ಅರ್ಧ ಚಂದ್ರಾಸನ ಪಯರ್ಂಕಾಸನ ಈ ಐದು ಆಸನ ಯೋಗಗಳಲ್ಲಿ ಸುಸ್ಥಿರ ಚಿತ್ತನಾಗಿ
ಮೂರ್ತಿಗೊಂಡು ಶಿವಾರ್ಚನೆಯ ಮಾಡುವದೀಗ ಆಸನಯೋಗ ಎಂಬ ವಿವರಣೆ ವಚನದಲ್ಲಿ ಬರುತ್ತದೆ. ಧ್ಯಾನದಲ್ಲಿ ವಿಚಾರಗಳು ಬರುವುದು ಸಹಜ. ಈ ವಿಚಾರದ ಬಗ್ಗೆೆ ಚಿಂತಿಸುವುದಕ್ಕೂ ಒಂದು ಚಿಂತನೆ ಬಗ್ಗೆ ಜಾಗ್ರತೆ ಹೊಂದುವುದಕ್ಕೂ ವ್ಯತ್ಯಾಸವಿದೆ. ಈ ವ್ಯತ್ಯಾಸವು ತುಂಬಾ ಸೂಕ್ಷ್ಮ ಮತ್ತು ನಿಗೂಢ. ವಿಚಾರ ಅಂದರೆ ಭಾವನೆ, ಇದರ ರಚನೆ ಮತ್ತು ಪ್ರಜ್ಞೆಯ ನಡುವೆ ಇಂದ್ರಿಯಾನುಭವ ಗುಳ್ಳೆಯ ರೂಪದಲ್ಲಿ ಕಾಣಿಸಿಕೊಂಡು ಮರೆಯಾಗುತ್ತದೆ.

ಮುಂದಿನ ವಿಚಾರಕ್ಕೆ ಮತ್ತೆ ಅವಕಾಶ ನೀಡುತ್ತದೆ. ವಿಚಾರ ಸರಪಳಿ ಶಕ್ತಿಶಾಲಿ ಮತ್ತು ಆದೇಶಪೂರಿತವಾಗಿದ್ದು, ಪ್ರಜ್ಞೆಯನ್ನೇ ನುಂಗಿ ಬಿಡುತ್ತದೆ. ಇನ್ನೊಂದು ವಿಚಾರಕ್ಕೆ ಜಿಗಿದು ಮುಂದುವರೆಯುತ್ತದೆ. ಪ್ರಜ್ಞಾಪೂರ್ವಕ ವಿಚಾರವು ಶರೀರದಲ್ಲಿ ಒತ್ತಡ ನಿರ್ಮಾಣ ಮಾಡುತ್ತದೆ. ಸ್ನಾಯು ಸೆಳೆತ ಅಥವಾ ಹೃದಯ ಬಡಿತ ಕಾಣಿಸಿಕೊಳ್ಳಬಹುದು. ಈ ವಿಚಾರವು ಕಾಮನೆಯಿಂದ ಕೂಡಿದರೆ ಮುಂದಾಗುವ ಫಲಿತಾಂಶದ ಬಗ್ಗೆೆ ಗಮನವಿರದಿದ್ದರೆ ಅದು ನೋವು ನೀಡುವುದಾಗಿರುತ್ತದೆ. ಆದುದರಿಂದ ಆ ವಿಚಾರದ ಬಗ್ಗೆ ಅರಿವು ಹೊಂದುವುದು ಹೆಚ್ಚು ಕಷ್ಟಕರವಾದ ಅನುಭವವಾಗಿರುತ್ತದೆ. ಇದನ್ನು ಏಕಾಗ್ರತೆಯಿಂದ ಮಾತ್ರ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ.

Leave a Reply

Your email address will not be published. Required fields are marked *