Tuesday, 7th December 2021

ನಾನ್ಯಾಕೆ ಯೂಟ್ಯೂಬ್ ಚಾನೆಲ್ ಮಾಡಿಲ್ಲ

Youtube

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಇಂದು ನಾವು ಈ ಗದ್ದಲದ ಕರ್ಕಶ ಸಂತೆಯಲ್ಲಿ ಬದುಕುತ್ತಿದ್ದೇವೆ. ಒಂದೆರಡು ಒಳ್ಳೆಯ ಚಾನೆಲ್‌ಗಳಿಗಾಗಿ ಅರಸಿಕೊಂಡು ಹೋಗುವ ಭರದಲ್ಲಿ, ಉಳಿದ
ಚಾನೆಲ್ ಬಳ್ಳಿಗಳು ಕಾಲಿಗೆ ಸುತ್ತಿಕೊಂಡು ತಡಸಿ, ಮುಗ್ಗರಿಸಿ ಬೀಳುವಂತಾಗಿದೆ. ಈ ಚಾನೆಲ್ ಗೊಂಡಾರಣ್ಯದಲ್ಲಿ ಬರೀ ಮಾತುಗಳೇ, ಸದ್ದು-ಸಪ್ಪಳಗಳೇ.

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ, ಆಗಾಗ ನಾನು ಎದುರಿಸುವ ಪ್ರಶ್ನೆಗಳಲ್ಲಿ, ’ಭಟ್ರೇ, ನೀವ್ಯಾಕೆ ಒಂದು ಯೂಟ್ಯೂಬ್ ಚಾನೆಲ್ ಮಾಡಬಾರದು? ಇಲ್ಲೀತನಕ ನೀವ್ಯಾಕೆ ಅಂಥ ಪ್ರಯೋಗಕ್ಕೆ ಮುಂದಾಗಿಲ್ಲ?’ ಎಂಬುದು. ಅದಕ್ಕೆ ನಾನು, ‘ಹೌದು.. ಮಾಡಬೇಕಿತ್ತು. ಆದರೆ ನನಗೆ ಅಂಥದ್ದೊಂದು ಚಾನೆಲ್ ಮಾಡಬೇಕೆಂದು ಎಂದೂ ಅನಿಸಲೇ ಇಲ್ಲ ನೋಡಿ’ ಎಂದು ಹೇಳಿದಾಗ, ಆ ಪ್ರಶ್ನೆ ಕೇಳಿದವರು ನನಗೆ ಒಂದು ಬೌದ್ಧಿಕ್ ಕೊಡು ತ್ತಾರೆ. ‘ಈ ದಿನಗಳಲ್ಲಿ ಜನರಿಗೆ ಓದಲು ಪುರುಸೊ ತ್ತಿಲ್ಲ. ಎಲ್ಲರೂ ಡಿಜಿಟಲ್ ಮಾಧ್ಯಮದತ್ತ ವಾಲುತ್ತಿದ್ದಾರೆ.

ಯೂಟ್ಯೂಬ್ ನಲ್ಲಿ ಮಾತಾಡಿದರೆ, ನೀವು ಬರೆದಿದ್ದಕ್ಕಿಂತ ಹೆಚ್ಚು ಜನರಿಗೆ ತಲುಪುತ್ತದೆ. ಬಹಳ ಬೇಗ ವೈರಲ್ ಆಗುತ್ತದೆ. ಇದರಿಂದ ಹಣವನ್ನೂ ಗಳಿಸಬಹುದು. ಹೀಗಿರುವಾಗ ನೀವ್ಯಾಕೆ ಯೂಟ್ಯೂಬ್ ಚಾನೆಲ್ ಮಾಡ ಬಾರದು?’ ಎಂದು ಉಪದೇಶ ಕೊಡುತ್ತಾರೆ. ನನ್ನ ಬಗ್ಗೆ ಇಷ್ಟೆಲ್ಲ ಆಸ್ಥೆ ವಹಿಸುವ ಅವರ ಕಾಳಜಿಗೆ ವಂದಿಸಿ ಮುನ್ನಡೆಯುತ್ತೇನೆ. ಈ ಬೌದ್ಧಿಕ್ ನೀಡಿದ ಸ್ನೇಹಿತರು, ಹಿತೈಷಿಗಳು ಹೇಳುವುದು ಸುಳ್ಳಲ್ಲ. ಅವರ ಮಾತು ಗಳನ್ನು ತಳ್ಳಿ ಹಾಕುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ಪ್ರವರ್ಧಮಾನಕ್ಕೆ ಬರುತ್ತಿದೆ. ಯೂಟ್ಯೂಬ್ ಅತ್ಯಂತ ಜನಪ್ರಿಯ ಮಾಧ್ಯಮ.

2005 ರ ಫೆಬ್ರವರಿಯಲ್ಲಿ ಯೂಟ್ಯೂಬ್ ಅಸ್ತಿತ್ವಕ್ಕೆ ಬಂದಿತು. ಅದರ ಸಂಸ್ಥಾಪಕರಬ್ಬರಾದ ಜಾವೆದ್ ಕರೀಂ Me at the zoo ಎಂಬ 18 ಸೆಕೆಂಡುಗಳ ವಿಡಿಯೋ ಕ್ಲಿಪ್ ಅಪ್ಲೋಡ್ ಮಾಡಿದರು. ಅದನ್ನು ಇಲ್ಲಿ ತನಕ ವಿಶ್ವದೆಡೆ ಸುಮಾರು 126 ದಶಲಕ್ಷ ಸಲ ವೀಕ್ಷಿಸಿದ್ದಾರೆ. ಇಂದು ಏನಿಲ್ಲವೆಂದರೂ 230 ಕೋಟಿ ಮಂದಿ ಕ್ರಿಯಾ ಶೀಲ ಯೂಟ್ಯೂಬ್ ಬಳಕೆದಾರರಿದ್ದಾರೆ. ವಿಶ್ವದ ಇಂಟರ್ನೆಟ್ ಬಳಸುವವರಲ್ಲಿ ಪ್ರತಿ ತಿಂಗಳು ಯೂಟ್ಯೂಬ್ ನ್ನು ಶೇ.43ರಷ್ಟು ಮಂದಿ ಬಳಸುತ್ತಾರೆ. ಪ್ರತಿದಿನ ಜಗತ್ತಿನಾದ್ಯಂತ ನೂರು ಕೋಟಿಗಿಂತ ಹೆಚ್ಚು ಗಂಟೆ ಯೂಟ್ಯೂಬ್‌ಗಾಗಿ ವ್ಯಯವಾಗುತ್ತಿದೆ.

2006ರಲ್ಲಿ 20 ದಶಲಕ್ಷದಷ್ಟಿದ್ದ ಯೂಟ್ಯೂಬ್ ಬಳಕೆದಾರರ ಸಂಖ್ಯೆ, 2020ರ ಹೊತ್ತಿಗೆ ಇನ್ನೂರು ಕೋಟಿ ದಾಟಿದ್ದು ಅಸಾಧಾರಣ ಸಾಧನೆಯೇ. ಇದು ಯೂಟ್ಯೂಬ್ ಲೋಕಪ್ರಿಯತೆಗೆ ಹಿಡಿದ ಕನ್ನಡಿ. ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್‌ಗೆ ಅಗ್ರತಾಂಬೂಲ. ನಂತರದ ಎರಡನೇ ಸ್ಥಾನ ಯೂಟ್ಯೂಬ್‌ಗೆ.
ಮುಂದಿನ ಮೂರನೇಯದು ವಾಟ್ಸಾಪ್‌ಗೆ. ವಿಶ್ವದಲ್ಲಿ ಭಾರತದ ಅತಿಹೆಚ್ಚು ಅಂದರೆ 225 ದಶಲಕ್ಷ ಯೂಟ್ಯೂಬ್ ಬಳಕೆದಾರರಿದ್ದಾರೆ. ಅಮೆರಿಕದಲ್ಲಿ ಈ ಪ್ರಮಾಣ 197 ದಶಲಕ್ಷ. 15 ರಿಂದ 35 ವರ್ಷದವರು ಹೆಚ್ಚಾಗಿ ಯೂಟ್ಯೂಬ್ ಅನ್ನು ವೀಕ್ಷಿಸುತ್ತಾರೆ. ಗಂಡಸರಿಗಿಂತ ಹೆಂಗಸರೇ ಹೆಚ್ಚಾಗಿ ಯೂಟ್ಯೂಬ್ ವೀಕ್ಷಿಸುತ್ತಾರೆ. ನಾಲ್ಕು ತಿಂಗಳಿಗೆ ಯೂಟ್ಯೂಬ್ ಆದಾಯ ಏಳು ಶತಕೋಟಿ ಡಾಲರ್.

ಸರಾಸರಿ ಪ್ರತಿ ಒಂದು ಸಾವಿರ ಮಂದಿ ವೀಕ್ಷಿಸಿದರೆ, ಮೂರರಿಂದ ಐದು ಡಾಲರ್ ಹಣ ಕಂಟೆಂಟ್ ಅಪ್ಲೋಡ್ ಮಾಡಿದ ವ್ಯಕ್ತಿಗೆ ಸಿಗುತ್ತದೆ. ಇಷ್ಟಾದ ಬಳಿಕ ಇನ್ನೊಂದು ಮಹತ್ವದ ಸಂಗತಿ ಹೇಳುತ್ತೇನೆ. ಅದೇನೆಂದರೆ, ಶೇ.96 ರಷ್ಟು ಯೂಟ್ಯೂಬ್ ಚಾನೆಲ್‌ಗಳು 1000 ಕ್ಕಿಂತ ಕಡಿಮೆ ಸದಸ್ಯರನ್ನು ಅಥವಾ ಚಂದಾ ದಾರರನ್ನು ಹೊಂದಿವೆ. ಸ್ಮಾರ್ಟ್ ಫೋನ್ ಸಾರ್ವತ್ರಿಕವಾಗುತ್ತಿದ್ದಂತೆ, ಯೂಟ್ಯೂಬ್ ಅದೃಷ್ಟವೂ ಖುಲಾಯಿಸಿತು.

ಗೂಗಲ್ ಪ್ಲೇ ಸ್ಟೋರ್ಸ್‌ನಲ್ಲಿ ಒಂದೂ ಮುಕ್ಕಾಲು ಶತಕೋಟಿ ಯೂಟ್ಯೂಬ್ ಆಪ್ ಡೌನ್ ಲೋಡ್ ಆಗಿದೆ ಅಂದರೆ ಅದರ ಬೆಳವಣಿಗೆಯ ಅಗಾಧತೆಯನ್ನು ಊಹಿಸಬಹುದು. ಭಾರತದ ಟಿ-ಸೀರಿಸ್ (ಮ್ಯೂಸಿಕ್) ಅತಿ ಹೆಚ್ಚು ಅಂದರೆ, 192 ದಶಲಕ್ಷ ಚಂದಾದಾರನ್ನು ಹೊಂದಿದೆ. ಯೂಟ್ಯೂಬ್ ಯಶಸ್ಸಿನ ಸಮರ್ಥನೆಗೆ ಇದಕ್ಕಿಂತ ಮಿಗಿಲಾದ ಅಂಶಗಳೇನು ಬೇಕು? ಕ್ಷಣಮಾತ್ರದಲ್ಲಿ ವಿಶ್ವದಾದ್ಯಂತ ಒಂದು ವಿಡಿಯೋವನ್ನು ಪರಿಣಾಮಕಾರಿಯಾಗಿ ವೈರಲ್ ಮಾಡಲು ಸಾಧ್ಯ ವಾಗುವುದು ಯುಟ್ಯೂಬಿನಿಂದ ಸಾಧ್ಯ. ಆ ಪ್ರಮಾಣದಲ್ಲಿ ಅದು ಬೆಳೆದಿದೆ. ಯಾರು ಬೇಕಾದರೂ ಇಂದು ಯೂಟ್ಯೂಬ್ ಚಾನೆಲ್ ಹೊಂದುವುದು ಸಾಧ್ಯವಾಗಿದೆ. ಕೇವಲ ಐದಾರು ನಿಮಿಷಗಳಲ್ಲಿ ನಮ್ಮದೇ ಆದ ಚಾನೆಲನ್ನು ಹೊಂದಬಹುದು.

ಪ್ರಪಂಚದಲ್ಲಿ ಇದಕ್ಕಿಂತ ಮಿಗಿಲಾದ ಪ್ರಜಾಸತ್ತಾತ್ಮಕ, ವಿಶಾಲ ವೇದಿಕೆ ಮತ್ತೊಂದು ಇರಲಾರದು. ಯೂಟ್ಯೂಬ್ ಯಶಸ್ಸಿಗೆ ಇದೇ ಕಾರಣ. ಹೀಗಾಗಿ ಯಾರಿ ಗಾದರೂ ತಾನೂ ಒಂದು ಯೂಟ್ಯೂಬ್ ಚಾನೆಲ್ ಹೊಂದಬೇಕು ಎಂದು ಅನಿಸುವುದು ಸಹಜ. ಇದರ ಪರಿಣಾಮ ಇಂದು ಜನಸಾಮಾನ್ಯರಿಗೂ ಯೂಟ್ಯೂಬ್ ಚಾನೆಲ್ ಆರಂಭಿಸು ವುದು ಸಾಧ್ಯವಾಗಿದೆ. ಜಿ ಮೇಲ್ ಅಕೌಂಟ, ಒಂದು ಸ್ಮಾರ್ಟ್ ಫೋನ್, ಕಾಲರ್ ಮೈಕ್ ಇದ್ದರೆ ಸಾಕು, ಯಾರು ಬೇಕಾದರೂ ಯೂಟ್ಯೂಬ್ ಚಾನೆಲ್ ಆರಂಭಿಸಬಹುದು.

ಕೇರಳದ ಮೀನುಗಾರನ ಪತ್ನಿಯೊಬ್ಬಳು ಒಂದು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾಳೆ. ಪ್ರತಿ ದಿನ ಬೆಳಗ್ಗೆ ಹತ್ತು ಗಂಟೆಗೆ ಮತ್ತು ಸಾಯಂಕಾಲ ಆರು ಗಂಟೆಗೆ ಆಕೆ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾಳೆ. ತನ್ನ ಗಂಡ ಬೆಳಗ್ಗೆ ಮತ್ತು ಸಾಯಂಕಾಲ ಸಮುದ್ರಕ್ಕೆ ಹೋಗಿ ಹಿಡಿದ ಮೀನಿನ ವಿವರಗಳನ್ನು ನೀಡು ತ್ತಾಳೆ. ಆಕೆ ವಿಡಿಯೋ ಅಪ್ಲೋಡ್ ಮಾಡುವುದನ್ನು ವೀಕ್ಷಿಸಲು ಸಾವಿರಾರು ಜನ ಕುತೂಹಲದಿಂದ ಕಾದು ಕುಳಿತಿರುತ್ತಾರೆ. ಅವಳ ಯೂಟ್ಯೂಬ್ ವಿಡಿಯೋ
ಲಿಂಕ್ ಅನ್ನು ಸಾವಿರಾರು ಮಂದಿ ವಾಟ್ಸಾಪ್ ಮೂಲಕ ಶೇರ್ ಮಾಡುತ್ತಾರೆ. ಅವಳ ಗಂಡ ಹಿಡಿದು ತಂದ ಮೀನುಗಳು ಅರ್ಧ ಗಂಟೆಯಲ್ಲಿ ಖಾಲಿ! ಜನ ಸರತಿ ಸಾಲಿನಲ್ಲಿ ನಿಂತು ಕಚ್ಚಾಡಿ ಖರೀದಿಸುತ್ತಾರೆ.

ಆಕೆಯ ಚಾನೆಲ್‌ಗೆ ಲಕ್ಷಾಂತರ ಮಂದಿ ಚಂದಾದಾರರಿದ್ದಾರೆ. ಮೀನು ಖರೀದಿಸದೇ ಇರುವವರೂ, ಕುತೂಹಲಕ್ಕೆ ಅವಳ ಚಾನೆಲ್ ವೀಕ್ಷಿಸುತ್ತಾರೆ. ವಿದೇಶ ಗಳಲ್ಲಿರುವವರೂ ಆಸಕ್ತಿಯಿಂದ ಅವಳ ಚಾನೆಲನ್ನು ಫಾಲೋ ಮಾಡುತ್ತಾರೆ. ಇವಳು ಪ್ರತಿ ತಿಂಗಳು ಯುಟ್ಯೂಬ್ ಜಾಹೀರಾತಿನಿಂದ ಐವತ್ತು ಸಾವಿರಕ್ಕಿಂತ ಹೆಚ್ಚು ಹಣವನ್ನು ಗಿಟ್ಟಿಸುತ್ತಾಳೆ. ಇವಳಿಂದ ಪ್ರಭಾವಿತರಾದ ಲಕ್ಷಾಂತರ ಮಂದಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳು ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.

ಇಂದು ಯೂಟ್ಯೂಬ್ ಚಾನೆಲ್ ಆರಂಭಿಸದಿರುವವರೇ ಇಲ್ಲ. ಬೆಳಗಾವಿ ಜಿಯೊಂದರ ಎಂಬತ್ತು ಸಾವಿರ ಮಂದಿ ಯೂಟ್ಯೂಬ್ ಚಾನೆಲ್ ಹೊಂದಿzರಂತೆ. ಈ ಪೈಕಿ
ಸುಮಾರು ಆರು ಸಾವಿರ ಮಂದಿ ಗೃಹಿಣಿಯರು. ಯಾವುದೇ ಊರಿಗೆ ಹೋದರೂ, ಅಲ್ಲಿ ಐದಾರು ಪತ್ರಕರ್ತರು ತಮ್ಮದೇ ಚಾನೆಲ್ ಹೊಂದಿರುತ್ತಾರೆ. ನಾನು ಇತ್ತೀಚೆಗೆ ಬೀದರ ಜಿಲ್ಲೆಯ ಭಾಲ್ಕಿಗೆ ಹೋಗಿದ್ದೆ. ಅಷ್ಟೇನೂ ಮುಂದುವರಿಯದ ಆ ತಾಲೂಕಿನಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಮಂದಿ ಯೂಟ್ಯೂಬ್ ಚಾನೆಲ್ ಹೊಂದಿzರೆಂದು ನನಗೆ ಅಲ್ಲಿನ ಪತ್ರಕರ್ತರೊಬ್ಬರು ತಿಳಿಸಿದರು. ರೊಟ್ಟಿ ತಟ್ಟಿ ಮನೆಮನೆಗೆ ಸರಬರಾಜು ಮಾಡುವವರು, ತರಕಾರಿ ಬೆಳೆಯುವವರು,
ಹಸುಗಳನ್ನು ಸಾಕಿದವರು, ಹಣ್ಣು ಬೆಳೆಗಾರರು, ಬಾಳೆ ಎಲೆ ವ್ಯಾಪಾರಿಗಳು, ಪುರೋಹಿತರು ಸಹ ತಮ್ಮದೇ ಚಾನೆಲ್ ಆರಂಭಿಸಿzರಂತೆ. ಇವರೆಲ್ಲರಿಗೂ ನೂರಾರು ಮಂದಿ ಚಂದಾದಾರರಿದ್ದಾರಂತೆ.

ಬೆಂಗಳೂರಿನಂಥ ಮಹಾನಗರದಲ್ಲಿ ಮನೆಗೆಲಸದವರು, ಟಿವಿ ದುರಸ್ತಿ ಮಾಡುವವರು, ಗಾರ್ಡನರ್‌ಗಳು, ಎಲೆಕ್ಟ್ರಿಷಿಯನ್‌ಗಳು ಕೂಡ ಯೂಟ್ಯೂಬ್ ಚಾನೆಲ್
ಆರಂಭಿಸಿzರೆ. ಇನ್ನು ಕಲಾವಿದರು, ಸಂಗೀತಗಾರರು, ಗಾಯಕರು, ನೃತ್ಯ ಕಲಾವಿದರು, ಬ್ಯುಟಿಷಿಯನ್ಸ್, ಮೆಹಂದಿ ಆರ್ಟಿಸ್ಟ್‌ಗಳು, ಫೋಟೋಗ್ರಾಫರುಗಳು ಸಹ ಹಿಂದೆ ಬಿದ್ದಿಲ್ಲ. ಇವರೆಲ್ಲರೂ ತಮ್ಮ ವಿಸಿಟಿಂಗ್ ಕಾರ್ಡುಗಳಲ್ಲಿ ಯೂಟ್ಯೂಬ್ ಚಾನೆಲ್ ವಿಳಾಸ ನೀಡಿರುತ್ತಾರೆ. ಮೊದಲು ಇಮೇಲ್ ಐಡಿ ನೀಡುವಂತೆ, ಈಗ ಯೂಟ್ಯೂಬ್ ಲಿಂಕ್ ನೀಡುವುದು ಸಾಮಾನ್ಯವಾಗಿದೆ. ಹೊಸದುರ್ಗ ತಾಲೂಕಿನ ಹಳ್ಳಿಯೊಂದರಲ್ಲಿ ದನ ಮತ್ತು ಕುರಿ ಕಾಯುವ ಅವಳಿ ಸಹೋದರರು ಆರಂಭಿ ಸಿದ ಯೂಟ್ಯೂಬ್ ಚಾನೆಲ್‌ಗೆ ಐವತ್ತು ಸಾವಿರ ಚಂದಾದಾರರಾಗಿದ್ದು, ಅವರು ಹಾಡಿದ ಹಾಡುಗಳು ವೈರಲ್ ಆಗಿದ್ದನ್ನು ಕನ್ನಡದ ಟಿವಿ ಚಾನೆಲ್ ಗಳು ಮತ್ತು ಪತ್ರಿಕೆಗಳು ವ್ಯಾಪಕವಾಗಿ ವರದಿ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು.

ಈಗ ಹೇಳುತ್ತೇನೆ, ನಾನು ಈ ಎಲ್ಲ ಕಾರಣಗಳಿಗಾಗಿಯೇ ಯೂಟ್ಯೂಬ್ ಚಾನೆಲ್ ಮಾಡಿಲ್ಲ. ಎಲ್ಲಿ ಹೊಸತನಕ್ಕೆ ಸಾಧ್ಯವಾಗುವುದಿಲ್ಲವೋ, ಎಲ್ಲಿ ಹೊಸ ಹೊಸ ಪ್ರಯೋಗ ಗಳಿಗೆ ಆಸ್ಪದ ಇರುವುದಿಲ್ಲವೋ ಅಲ್ಲಿ ನಾನಿರುವುದಿಲ್ಲ. ಇಂದು ಯೂಟ್ಯೂಬ್ ನಲ್ಲಿ ಹೊಸ ಪ್ರಯೋಗ ಮಾಡಲು ಏನೂ ಉಳಿದಿಲ್ಲ. ಏನೇ ಮಾಡಿದರೂ ಆದು ಬೇರೆಯವರು ಮಾಡಿದ್ದನ್ನೇ ಮಾಡಬೇಕು. ಅಂದರೆ ಒಂದು ರೀತಿಯಲ್ಲಿ ಕಾಪಿ ಮಾಡಬೇಕು, ನಕಲು ಹೊಡೆಯಬೇಕು. ಏನೇ ಮಾಡಿದರೂ ಅದನ್ನು ಯಾರೋ ಮಾಡಿ ಮುಗಿಸಿದ್ದೇ ಆಗಿರುತ್ತದೆ.

ಹಾಗೆಂದು ಎಲ್ಲರೂ ನಿಂತು ಮಾತಾಡಿದ್ದಾರೆಂದು, ನಾವು ತಲೆಕೆಳಗಾಗಿ ಮಾತಾಡಲು ಆಗುವುದಿಲ್ಲ. ಹೊಸತನದ ಹೊರತಾಗಿಯೂ, ಬೇರೆ ವಿಷಯಗಳನ್ನು ಹೇಳಲು ಆಗದಷ್ಟು ಮಾಹಿತಿದಟ್ಟಣೆ ಆಗಿಬಿಟ್ಟಿದೆ. ಕೇಳುವವರಿಗಿಂತ ಹೇಳುವವರೇ ಜಾಸ್ತಿಯಾಗಿಬಿಟ್ಟಿದ್ದಾರೆ. ಯಾರಿಗೂ ಕೇಳಲು, ಓದಲು ಪುರುಸೊತ್ತಿಲ್ಲ. ಎಲ್ಲರಿಗೂ ಹೇಳುವ ತರಾತುರಿ. ಒಮ್ಮೆ ನೀವು ಹೇಳುವ ತವಕಕ್ಕೆ ಸಿಲುಕಿದರೆ, ಮಾತು ಹಲುಬಾಟವಾಗುತ್ತದೆ. ಆಗ ಅಂಥ ಮಾತು ಶುಷ್ಕ ಮತ್ತು ಗದ್ದಲ ವಾಗುತ್ತದೆ. ಇಂದು ನಾವು ಈ ಗದ್ದಲದ ಕರ್ಕಶ ಸಂತೆಯಲ್ಲಿ ಬದುಕುತ್ತಿದ್ದೇವೆ. ಹತ್ತು ಜನ ಸೇರಿರುವ ವೇದಿಕೆಯಲ್ಲಿ, ಕೊನೆಯಲ್ಲಿ ಒಬ್ಬರ ಮಾತುಗಳನ್ನು ಕೇಳಲು, ಎಲ್ಲರ ಮಾತುಗಳನ್ನು ಕೇಳುವ ಕರ್ಮದಂತಾಗಿದೆ ನಮ್ಮ ಪಾಡು. ಒಂದೆರಡು ಒಳ್ಳೆಯ ಚಾನೆಲ್ ಗಳಿಗಾಗಿ ಅರಸಿಕೊಂಡು ಹೋಗುವ ಭರದಲ್ಲಿ, ಉಳಿದ ಚಾನೆಲ್ ಬಳ್ಳಿಗಳು ಕಾಲಿಗೆ ಸುತ್ತಿಕೊಂಡು ತಡಸಿ, ಮುಗ್ಗರಿಸಿ ಬೀಳುವಂತಾಗಿದೆ. ಈ ಚಾನೆಲ್ ಗೊಂಡಾರಣ್ಯದಲ್ಲಿ ಬರೀ ಮಾತುಗಳೇ, ಸದ್ದು-ಸಪ್ಪಳಗಳೇ.
ಈ ಗದ್ದಲದಿಂದಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಸವಿಯಲು ಸಾಧ್ಯವಾಗದಂಥ ಸ್ಥಿತಿ. ಮಾತು ಯಾವತ್ತೂ ವಾಚ್ಯವಾಗಬಾರದು.

ಎರಡು ವಾಕ್ಯಗಳ ನಡುವಿನ ಸಂದಿಯಷ್ಟೇ ಮೌನವಾಗಬಾರದು. ಈ ಕಾರಣಕ್ಕೆ ಮಾತಿಗಿಂತ ಓದು, ಅಧ್ಯಯನ ಮತ್ತು ಬರಹ ಆಪ್ತವಾಗುತ್ತದೆ. ಬರಹ
ಮತ್ತು ಓದು ಯಾವತ್ತೂ ಏಕಾಂತದಲ್ಲಿ ಹುಟ್ಟಿ, ಏಕಾಂತದಲ್ಲಿಯೇ ಮುಂದಕ್ಕೆ ವರ್ಗವಾಗುವಂಥವು. ಓದು ಯಾವತ್ತೂ ನಮ್ಮೊಳಗೊಂದು ಮೌನವನ್ನು ಸೃಷ್ಟಿಸುತ್ತದೆ. ಮೌನ ಮತ್ತು ಶಾಂತಿಯಲ್ಲಿ ಯಾವತ್ತೂ ಸಂಯಮ, ಸಾವಧಾನ ಮತ್ತು ಸಮತೋಲನವಿದೆ. ಓದು-ಬರಹ ಯಾವತ್ತೂ ಅಧ್ಯಾತ್ಮ ಅನುಭೂತಿಗೆ ಸಮಾನವಾದುದು. ಓದು ಕೊಡುವಷ್ಟು ಸಮಾಧಾನವನ್ನು ಮಾತು ಕೊಡಲು ಸಾಧ್ಯವಿಲ್ಲ.

ಮಾತಿನಲ್ಲಿ ಮೌನವಿರುವುದಿಲ್ಲ. ಆದರೆ ಮೌನದ ಬದುವಿನ ಓದು ಮತ್ತು ಬರಹ ಸಾಗುತ್ತದೆ ಮತ್ತು ಗಟ್ಟಿಯಾಗುತ್ತದೆ. Mind can hear a song sung by heart when no sound is heard by the ears.. ಎಂಬ  ಮಾತಿದೆ. ಯಾವನೋ ಕವಿ ಕೇಳಿದ ಮಾತುಗಳು ಮನನೀಯ – The silence of the forest is different; the silence of the desert is different; the silence of the cave is different! Silences in different places are not the same silences because silence is not only the absence of the sounds but also it is the presence of different
feelings in the absence of the sounds!

ಹೀಗಾಗಿ ಅಕ್ಷರಗಳ ಮುಂದೆ ಮಾತು ಶರಣಾಗಲೇಬೇಕು. ಒಂದು ಕ್ಷಣ ಊಹಿಸಿ, ಯೂಟ್ಯೂಬ್ ಚಾನೆಲ್ ಗಳಲ್ಲಿರುವ ಮಾತುಗಳೆ ಹೊರ ಬಂದರೆ ಹೇಗಾಗ ಬಹುದು? ಮಾತಾಡುವವರು ಮಾತಾಡಲಿ, ಆಪ್ತವಾಗಿದ್ದರೆ ಕೇಳೋಣ. ಆದರೆ ಅಕ್ಷರಗಳ ಸಾಂಗತ್ಯ ವರ್ಣಿಸಲಸಾಧ್ಯ. ಅದು ಸಾಕ್ಷಾತ್ಕಾರಕ್ಕೆ ಮುಖ ಮಾಡಿ ದಂತೆ. ಓದು ನಮ್ಮೊಳಗಿನ ಆಳಕ್ಕೆ ಇಳಿಯುತ್ತಾ ಹೋಗಿ ತುಂಬಿಕೊಂಡಂತೆ. ಅದೇ ಮಾತು ನಮ್ಮನ್ನು ಬರಿದು ಮಾಡಿಕೊಂಡಂತೆ. ಹೀಗಾಗಿ ನನಗೆ ಅದು
ಒಗ್ಗುವಂಥದ್ದಲ್ಲ. ಈ ಜಗತ್ತು ಮಾತಾಡುವವರ ಪರವಾಗಿದ್ದರೂ ಪರವಾಗಿಲ್ಲ. ನಾನಂತೂ ಓದುವವರ ಮೈನಾರಿಟಿ ಗುಂಪಿಗೆ ಸೇರುತ್ತೇನೆ. ನಮ್ಮ ಬರಹ ಇಡೀ ಜಗತ್ತನ್ನೇ ಆವರಿಸಬೇಕಿಲ್ಲ. ಅದು ಯಾರನ್ನು ಸೇರಬೇಕೋ ಅವರನ್ನು ಸೇರಿದರೆ ಸಾಕು, ಪ್ರೇಯಸಿಯೊಬ್ಬಳನ್ನೇ ತಲುಪುವ ಪ್ರೇಮ ಪತ್ರದಂತೆ.