Monday, 8th March 2021

ಆರೆಸ್ಸೆಸ್‌ ನಾಯಕರು ಕಣ್ಣಿಗೆ ಬಟ್ಟೆಕಟ್ಟಿ ಕುಳಿತಿದ್ಯಾಕೋ ?!

ಬೇಟೆ

ಜಯವೀರ ವಿಕ್ರಮ ಸಂಪತ್‌ ಗೌಡ, ಅಂಕಣಕಾರರು

ಅದು ಬಿಜೆಪಿ ಇರಬಹುದು, ಕಾಂಗ್ರೆಸ್ ಇರಬಹುದು, ಸಮಸ್ಯೆಯಿರುವುದು ಕರ್ನಾಟಕದಲ್ಲಿ ಅಲ್ಲ, ಪಕ್ಷದ ಹೈಕಮಾಂಡಿನಲ್ಲಿ. ದಿಲ್ಲಿಯಲ್ಲಿರುವ ನಾಯಕರಿಗೆ ಕರ್ನಾಟಕ ಎಂಬುದು ಮೂವತ್ತರಲ್ಲಿ ಒಂದು, ಅಷ್ಟೇ.

ಹೀಗಾಗಿ ಕರ್ನಾಟಕದಲ್ಲಿನ ಸಮಸ್ಯೆ ದಿಲ್ಲಿ ನಾಯಕರಿಗೆ ತಲೆ ತುರಿಸಿದಂತೆ, ಬೆನ್ನು ಕೆರೆದಂತೆ. ಆದರೆ ಕರ್ನಾಟಕದಲ್ಲಿರುವ
ನಾಯಕರಿಗೆ, ಶಾಸಕರಿಗೆ, ಕಾರ್ಯಕರ್ತರಿಗೆ ಇದೇ ದೊಡ್ಡ ಸಮಸ್ಯೆ. ಯಾವ ಪಕ್ಷದ ದಿಲ್ಲಿ ನಾಯಕರೂ ರಾಜ್ಯದ ಸಮಸ್ಯೆಗೆ
ತಲೆಕೆಡಿಸಿಕೊಳ್ಳುವುದಿಲ್ಲ. ಅದು ಮಿತಿ ಮೀರಿದಾಗ, ಮನೆಗೆ ಬೆಂಕಿ ಬಿದ್ದಾಗ, ಬಾವಿ ತೋಡಲು ಶುರುಮಾಡುತ್ತವೆ. ಇದಕ್ಕೆ
ಯಾವ ಪಕ್ಷವೂ ಹೊರತಲ್ಲ.

ಮೊನ್ನೆ ರಾಜ್ಯ ಬಿಜೆಪಿ ಸರಕಾರ ಸಂಪುಟವನ್ನು ವಿಸ್ತರಿಸಿತು. ಅದಕ್ಕಾಗಿ ಯಡಿಯೂರಪ್ಪನವರು ಮೂರು ತಿಂಗಳು ಪರದಾಡ ಬೇಕಾಯಿತಾ ಎಂಬುದನ್ನು ಯೋಚಿಸಿದರೆ, ಆಶ್ಚರ್ಯವಾಗುತ್ತದೆ. ಪ್ರತಿ ಸಲ ಸಂಪುಟ ವಿಸ್ತರಿಸುವಾಗ ಅಥವಾ ರಾಜ್ಯದ ಸಮಸ್ಯೆಗಳನ್ನು ತೆಗೆದುಕೊಂಡು ಹೋದಾಗ, ದಿಲ್ಲಿ ನಾಯಕರು ರಾಜ್ಯ ನಾಯಕರನ್ನು ಬಹಳ ಲಘುವಾಗಿ ಪರಿಗಣಿಸುವ ಪರಂಪರೆ ಬಿಜೆಪಿ ಹೈಕಮಾಂಡನ್ನೂ ಆವರಿಸಿದೆ.

ಕೆಲವು ಸಲ ಕಾಂಗ್ರೆಸ್ ಹೈಕಮಾಂಡಿಗಿಂತಲೂ ಕೆಟ್ಟದಾಗಿ ಬಿಜೆಪಿ ಹೈಕಮಾಂಡ್ ವರ್ತಿಸುತ್ತಿರುವುದನ್ನು ನೋಡಿದ್ದೇವೆ. ಇದು ಒಂದು ರೀತಿಯಲ್ಲಿ ಅವನತಿಯ ಮತ್ತು ಅಹಂಕಾರದ ಸಂಕೇತ. ರಾಜ್ಯ ನಾಯಕರ ಬೇಡಿಕೆಗಳನ್ನು ಉದಾಸೀನದಿಂದ ನೋಡುವುದು, ರಾಜ್ಯ ನಾಯಕರನ್ನು ಪಡಚಾಕರಿ ಮಾಡುವವರಂತೆ ಪರಿಗಣಿಸುವುದು ಬಿಜೆಪಿ ಹೈಕಮಾಂಡ್ ಇತ್ತೀಚಿನ ದಿನಗಳಲ್ಲಿ ರೂಢಿಸಿಕೊಳ್ಳುತ್ತಿರುವ ಕೆಟ್ಟ ಗುಣ. ಯಡಿಯೂರಪ್ಪನವರಂಥ ನಾಯಕರು ದಿಲ್ಲಿಗೆ ಹೋಗಿ ಹೈಕಮಾಂಡ್ ನಾಯಕರ ಭೇಟಿಗಾಗಿ ಅಂಬೋ ಎಂದು ಕಾಯಬೇಕು. ಕೆಲವು ಸಲ ಬರಿಗೈಲಿ ಬಂದ ನಿದರ್ಶನಗಳಿವೆ.

ಇವೆ ಪಕ್ಷ ಸರಿಯಾದದಾರಿಯಲ್ಲಿ ಸಾಗುತ್ತಿರುವುದರ ಸೂಚನೆಯಲ್ಲ. ಮೊನ್ನೆ ರಾಜ್ಯ ಸಂಪುಟ ವಿಸ್ತರಣೆ ಆಯಿತು. ಅದಕ್ಕಾಗಿ ಅಷ್ಟೊಂದು ಕಸರತ್ತು ಮಾಡುವ ಅಗತ್ಯವಿತ್ತಾ? ಇಂಥ ವಿಷಯಗಳನ್ನು ತಿಂಗಳುಗಟ್ಟಲೆ ಎಳೆಯುವುದು ಸರ್ವಥಾ ಒಳ್ಳೆಯ ಬೆಳವಣಿಗೆಯಲ್ಲ. ಸಂಪುಟ ವಿಸ್ತರಣೆ ವಿಷಯ ಎದ್ದಾಗ, ಉಳಿದೆ ವಿಷಯಗಳೂ ಗೌಣವಾಗುತ್ತವೆ. ಇದನ್ನು ಅರಿತುಕೊಂಡು
ಬೇಗನೆ ವಿಷಂi ಇತ್ಯರ್ಥಪಡಿಸುವುದು ಜಾಣತನ.

ಅದು ಬಿಟ್ಟು, ತಿಂಗಳು, ಎರಡು ತಿಂಗಳು ಇದೇ ವಿಷಯವನ್ನು ಎಳೆದುಕೊಂಡು ಹೋಗುವುದು ಹೈಕಮಾಂಡಿನ ವರ್ಚಸ್ಸಿನ
ದೃಷ್ಟಿಯಿಂದಲೂ ಒಳ್ಳೆಯದಲ್ಲ. ಇದು ದಿಲ್ಲಿ ನಾಯಕರ ಎಡಬಿಡಂಗಿತನವನ್ನೂ ಪ್ರದರ್ಶಿಸಿದಂತಾಗುತ್ತದೆ. ಮೋದಿ ಮತ್ತು ಅಮಿತ್ ಶಾ ಅವರು ಎತ್ತರದ ಸ್ಥಾನದಲ್ಲಿದ್ದಾಗ, ಇಂಥ ಅಪಸವ್ಯಗಳಾಗಬಾರದು ಎಂದು ಎಲ್ಲರೂ ನಿರೀಕ್ಷಿಸುತ್ತಾರೆ. ಒಂದು ನಿರ್ಧಾರ ತೆಗೆದುಕೊಳ್ಳಲು ಇಷ್ಟೆ ಸರ್ಕಸ್ ಮಾಡಬೇಕಾ ಎಂದು ಜನ ಪ್ರಶ್ನೆ ಮಾಡುವಂತಾಗಬಾರದು.

ರಾಜ್ಯ ಸಂಪುಟ ವಿಸ್ತರಣೆಯಾಗಿ ಒಂದು ವಾರವಾಯಿತು. ಆದರೆ ಇನ್ನೂ ಯಾವ ಸಚಿವರಿಗೂ ಖಾತೆ ಹಂಚಿಕೆ ಆಗಿಲ್ಲ.
ಸಾಮಾನ್ಯವಾಗಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಇಪ್ಪತ್ನಾಲ್ಕು ಗಂಟೆಯೊಳಗೆ ಖಾತೆ ಹಂಚಿಕೆ ಆಗುತ್ತದೆ. ಇದು ವಿಳಂಬವಾದಷ್ಟೂ ಸಮಸ್ಯೆ ಉಲ್ಭಣಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಒಂದು ವಾರ ವಿಳಂಬವಾಗುವುದು ಒಳ್ಳೆಯ ಲಕ್ಷಣವಲ್ಲ. ಮುಖ್ಯಮಂತ್ರಿಗಳಾದವರಿಗೆ ತಮಗೆ ಬೇಕಾದ ಸಚಿವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಂತೂ ಇಲ್ಲವೇ ಇಲ್ಲ.

ಇನ್ನು ಅವರಿಗೆ ಖಾತೆ ಹಂಚುವ ಅಧಿಕಾರವೂ ಇಲ್ಲ, ಅದಕ್ಕೂ ದಿಲ್ಲಿ ನಾಯಕರನ್ನೇ ಕೇಳಬೇಕು ಅಂದರೆ ಅದು ಅಸಹ್ಯದ ಪರಮಾವಧಿ. ಬಿಜೆಪಿ ಹೈಕಮಾಂಡ್ ಒಂದು ಕಾಲದ ಕಾಂಗ್ರೆಸ್ ಹೈಕಮಾಂಡ್ ದಾರಿಯಲ್ಲಿ ಅಥವಾ ಅದಕ್ಕಿಂತ ಕೆಟ್ಟದಾಗಿ ವರ್ತಿಸುತ್ತಿದೆ. ಎಲ್ಲಾ ಅಧಿಕಾರವನ್ನೂ ಒಂದೆಡೆ ಇಟ್ಟುಕೊಳ್ಳುವ ಮನೋಭಾವ ಪ್ರಜಾಪ್ರಭುತ್ವಕ್ಕೆ ಮಾರಕ. ಈ ವಿಷಯದಲ್ಲಿ ಬಿಜೆಪಿ ಕಾಂಗ್ರೆಸ್ಸಿಗಿಂತ ಸ್ವಲ್ಪವೂ ಭಿನ್ನವಾಗಿಲ್ಲ.

ಮೊನ್ನೆಯ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿ ಹೈಕಮಾಂಡ್ ಹೇಗೆ ನಡೆದುಕೊಂಡಿತು ಎಂಬುದನ್ನು ರಾಜ್ಯದ ಜನತೆ ನೋಡಿ ದ್ದಾರೆ. ಅದೇನೇ ಇರಲಿ, ಕಾಂಗ್ರೆಸ್ಸಿನಿಂದ ಬಿಜೆಪಿಗೆ ವಲಸೆ ಬಂದ, ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಎಲ್ಲರೂ ಅವರು ಸಚಿವರಾಗುತ್ತಾರೆ ಎಂದು ಭಾವಿಸಿದ್ದರು. ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿ, ನಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ಧಾಗಲೇ ಅವರಿಗೆ ಸಚಿವ ಸ್ಥಾನ ಕಟ್ಟಿಟ್ಟ ಬುತ್ತಿ ಎಂದು ಪರಿಗಣಿಸಲಾಗಿತ್ತು.

ಮುನಿರತ್ನ ಅವರನ್ನು ಬಿಜೆಪಿಗೆ ಸೆಳೆಯುವಾಗಲೇ, ಮರು ಚುನಾವಣೆಯಲ್ಲಿ ಟಿಕೆಟ್ ನೀಡಿ, ಆರಿಸಿ ತಂದು, ಸಚಿವ ಸ್ಥಾನ
ನೀಡುವುದಾಗಿ ಬಿಜೆಪಿ ವಾಗ್ದಾನ ಮಾಡಿತ್ತು. ಈ ವಾಗ್ದಾನ ನಂಬಿಕೊಂಡೇ ಮುನಿರತ್ನ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡುವ
ದುಸ್ಸಾಹಸಕ್ಕೆ ಮುಂದಾದರು. ಇಲ್ಲದಿದ್ದರೆ ಅವರಿಗೇನು ಹುಚ್ಚು ನಾಯಿ ಕಡಿದಿತ್ತಾ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಲು?
ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರವನ್ನು ಪತನಗೊಳಿಸಿ, ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮುನಿರತ್ನ ಅವರ ಕೊಡುಗೆಯಿದೆ.

ಒಬ್ಬೊಬ್ಬ ಶಾಸಕ ಮನಸ್ಸು ಬದಲಾಯಿಸಿದಾಗಲೆ ಸರಕಾರ ಪತನವಾಗುವ ಸಾಧ್ಯತೆ ಉಜ್ವಲವಾಗುತ್ತಾ, ಮತ್ತೊಬ್ಬ ಮನಸ್ಸು ಬದಲಾಯಿಸಲು, ಬಿಜೆಪಿ ಸೇರಲು ಪ್ರೇರಕವಾಯಿತು. ಮುನಿರತ್ನಅವರು ಬೆಂಗಳೂರಿನ ಉಳಿದ ಶಾಸಕರು ಪಕ್ಷ ತೊರೆಯಲು
ನೆರವಾದವರು. ಇಂದು ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದರೆ, ಅದರಲ್ಲಿ ಮುನಿರತ್ನ
ಅವರ ಕೊಡುಗೆ ದೊಡ್ಡದು. ಅವರು ಪಕ್ಷಕ್ಕೆ ಬರುವುದು ಬೇಡವಾಗಿದ್ದರೆ, ಅದನ್ನು ಮೊದಲೇ ತಿಳಿಸಬೇಕಿತ್ತು.

ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾದಾಗಲೇ ಅವರಿಗೆ ನೀವು ಬರುವುದು ಬೇಡ ಎಂದು ಹೇಳಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಅವರ ಮನೆಗೆ ಹೋಗಿ, ಅವರ ಕಾಲು ಹಿಡಿದು ಕರೆದುಕೊಂಡು ಬಂದು, ಅವರು ಬಂದ ನಂತರ, ಅವರಿಗೆ ಟಿಕೆಟ್ ಕೊಡಲು ಮೀನಮೇಷ ಎಣಿಸಿದ ರೀತಿ ನಂಬಿಕೆ ದ್ರೋಹದ ಮೊದಲ ಚರಣ. ರಾಜರಾಜೇಶ್ವರಿನಗರ ಕ್ಷೇತ್ರ ಮರು ಚುನಾ ವಣೆಗೆ ಅವರು ಅದೆಷ್ಟು ಹರಸಾಹಸ ಪಟ್ಟು ಟಿಕೆಟ್ ಪಡೆದರೆಂಬುದನ್ನು ರಾಜ್ಯದ ಜನ ನೋಡಿದ್ದಾರೆ.

ಮುನಿರತ್ನ ಅದೆಂಥ ಪಾಪ ಮಾಡಿದ್ದಾರೆ? ಅಷ್ಟಕ್ಕೂ ಅವರು ಮಾಡಿದ ಅಪರಾಧವಾದರೂ ಏನು? ಅವರಿಗ್ಯಾಕೆ ಈ ಶಿಕ್ಷೆ, ಯಾತನೆ, ಅಪಮಾನ? ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಕ್ಕೆ ಇದೇ ಪ್ರತಿಫಲವಾ ? ಅವರಿಗೆ ಟಿಕೆಟ್ ವಂಚಿಸುವ ಅಗತ್ಯವಾದರೂ ಏನಿತ್ತು? ಇದು ನಿಜಕ್ಕೂ ವಚನಭ್ರಷ್ಟತೆಯ ಪರಾಕಾಷ್ಠೆ ಎಂದೆನಿಸಿಕೊಳ್ಳುತ್ತಿತ್ತು. ಅದೃಷ್ಟವಶಾತ್, ಕೊನೆ ಗಳಿಗೆಯಲ್ಲಿ ಮುನಿರತ್ನ ಟಿಕೆಟ್ ಪಡೆಯಲು ಯಶಸ್ವಿಯಾದರು.

ನಂತರ ನಡೆದ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆದ್ದೂ ಗೆದ್ದರು. ಸಹಜವಾಗಿ ಅವರು ಮಂತ್ರಿಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಭಾಷೆ ಕೊಟ್ಟಿದ್ದಕ್ಕೆ ಅವರನ್ನು ಮಂತ್ರಿ ಮಾಡುವುದು ಬಿಜೆಪಿ ನಾಯಕರ ಕರ್ತವ್ಯವಾಗಿತ್ತು. ಮುನಿರತ್ನ ಆರಿಸಿ ಬಂದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಮಂತ್ರಿ ಮಾಡುವೆ ಎಂದು ಯಡಿಯೂರಪ್ಪನವರು ಮರುಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದರು. ಅದರನೂ ಹೆಚ್ಚುಗಾರಿಕೆಯಿರಲಿಲ್ಲ. ಕಾರಣ ಅವರಿಗೆ ವಚನ ಕೊಟ್ಟಿದ್ದೇ ಹಾಗೆ.

ಆದರೆ ಮುನಿರತ್ನ ಶಾಸಕರಾಗಿ ಎರಡೂವರೆ ತಿಂಗಳಾದರೂ, ಅವರನ್ನು ಮಂತ್ರಿ ಮಾಡುವ ಸುಳಿವು ಇರಲಿಲ್ಲ. ಅಂತೂ ಇಂತೂ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಯಿತು. ಸಹಜವಾಗಿ, ಬೇರೆ ಯಾರು ಆಗುತ್ತಾರೋ ಇಲ್ಲವೋ ಮುನಿರತ್ನ ಅವರಂತೂ ಮಂತ್ರಿ ಆಗೇ ಆಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಸಂಪುಟ ವಿಸ್ತರಣೆ ಮುನ್ನಾ ದಿನ ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿ ಇಲ್ಲದಾಗ, ಅವರು ಕಂಗಾಲಾದರು.

ಮುಖ್ಯಮಂತ್ರಿ ಮನೆಗೆ ದೌಡಾಯಿಸಿದರು. ತಮ್ಮ ಹೆಸರು ಇಲ್ಲದ್ದನ್ನು ಕಂಡು ದಿಗ್ಭ್ರಾಂತರಾದರು. ಮುಖ್ಯಮಂತ್ರಿಯವರನ್ನು ಪರಿಪರಿಯಾಗಿ ಬೇಡಿಕೊಂಡರು. ತಮ್ಮನ್ನು ಮಂತ್ರಿ ಮಾಡುವಂತೆ ಗೋಗರೆದರು. ಹಾಗೆ ನೋಡಿದರೆ, ಈ ವಿಷಯದಲ್ಲಿ ಮುನಿ ರತ್ನ ಅವರಷ್ಟೇ, ಯಡಿಯೂರಪ್ಪನವರೂ ಅಸಹಾಯಕರಾಗಿದ್ದರು. ಮುನಿರತ್ನ ರಾಂಗ್ ಅಡ್ರೆಸ್ಸಿನ ಮನೆ ಬಾಗಿಲು ಬಡಿಯು ತ್ತಿದ್ದರು !

ದಿಲ್ಲಿಯಿಂದ ಬಂದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಮುನಿರತ್ನ ಹೆಸರು ಇರಲಿಲ್ಲ. ಆಗ ಮುನಿರತ್ನಗಿಂತ ಹೆಚ್ಚು ಆಘಾತ ಕ್ಕೊಳಗಾದವರು ಯಡಿಯೂರಪ್ಪನವರು. ಕಾಂಗ್ರೆಸ್ಸಿನಿಂದ ವಲಸೆ ಬಂದ ಎಲ್ಲಾ ಶಾಸಕರನ್ನು ಚುನಾವಣೆಯಲ್ಲಿ ನಿಲ್ಲಿಸಿ, ಗೆಲ್ಲಿಸಿ, ಮಂತ್ರಿ ಮಾಡುವುದು ಅವರ ಆಶಯವಾಗಿತ್ತು. ಕೊಟ್ಟ ಮಾತಿಗೆ ಏನೇ ಆದರೂ ಅವರು ತಪ್ಪುವವರಲ್ಲ. ಇದು ರಾಜ್ಯ ರಾಜ ಕಾರಣದಲ್ಲಿ ಜನಜನಿತವಾದ ಸಂಗತಿ. ಹೀಗಾಗಿ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು, ಬಿಜೆಪಿ ಸೇರಲು ನಿರ್ಧರಿಸಿದ್ದು. ಆದರೆ ಮುನಿರತ್ನ ಹೆಸರು ಇಲ್ಲದ್ದನ್ನು ನೋಡಿ ಆಘಾತಕ್ಕೊಳಗಾದ ಯಡಿಯೂರಪ್ಪ, ಪಕ್ಷದ ಹೈಕಮಾಂಡ್ ನಾಯಕರನ್ನು ಸಂಪರ್ಕಿ ಸಲು ಪ್ರಯತ್ನಿಸಿ ವಿಫಲರಾದರು.

ಒಂದು ವೇಳೆ ಸಂಪರ್ಕಕ್ಕೆ ಸಿಕ್ಕಿದ್ದರೂ ವಿಶೇಷ ಬದಲಾವಣೆಯೇನೂ ಆಗುತ್ತಿರಲಿಲ್ಲ. ಮುನಿರತ್ನಗೆ ಮಂತ್ರಿ ಪಟ್ಟ ತಪ್ಪಿಸಿದ್ದು ಯಾರು ಮತ್ತು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಇದು ನಿಜಕ್ಕೂ ನಂಬಿಕೆ ದ್ರೋಹದ ಪರಾಕಾಷ್ಠೆ. ಬಿಜೆಪಿ ನಾಯಕರು ಅವರನ್ನು ಈ ರೀತಿ ಅವಮಾನಿ ಬಾರದಿತ್ತು. ನಂಬಿಸಿ ಕತ್ತು ಕುಯ್ಯಬಾರದಿತ್ತು. ಅವರು ಅವರ ಪಾಡಿಗೆ ಕಾಂಗ್ರೆಸ್ ಪಕ್ಷದಲ್ಲಿ ಇರುತ್ತಿದ್ದರು. ಇದು ಪರರನ್ನು ಬಾವಿಗೆ ತಳ್ಳಿ ಚೆಂದ ನೋಡಿದಂತೆ. ಇದು ಭಗವಂತ ಮೆಚ್ಚುವ ನಡೆಯಲ್ಲ. ತಾನು ಮಾಡಿದ್ದು ಸರಿಯಾ ಎಂದು ನಾಲ್ಕು ಮಂದಿ ಕೇಳಿದರೂ, ಅವರು ಹೇಳುವುದೂ ಇದನ್ನೇ.

ಮುನಿರತ್ನ ಅವರಲ್ಲಿ ಈಗ ಐಬು ಕಾಣುವಂಥದ್ದೇನಿದೆ? ಬಿಜೆಪಿಯನ್ನು ನಂಬಿ ಬಂದವರಿಗೆ ಆ ಪಕ್ಷ ಕೊಡುವ ಉಡುಗೊರೆ ಇದೇನಾ ? ಇನ್ನು ಮುಂದೆ ಬಿಜೆಪಿಯನ್ನು ನಂಬಿ ಯಾರು ಬರುತ್ತಾರೆ ? ಹಿರಿಯ ನಾಯಕರೇ ಮಾತಿನಂತೆ ನಡೆದುಕೊಳ್ಳದಿದ್ದರೆ, ಇವರೇನು ಹಿಂದೂ ರಾಷ್ಟ್ರ ಕಟ್ಟುತ್ತಾರಾ ? ಸುಳ್ಳಿನ ತಳಹದಿಯಲ್ಲಿ, ವಚನ ಭ್ರಷ್ಟತೆಯಲ್ಲಿ, ನಂಬಿಕೆ ದ್ರೋಹದ ಆಧಾರದಲ್ಲಿ ಆದರ್ಶ ಸಮಾಜ ನಿರ್ಮಿಸಲು ಸಾಧ್ಯವಾ? ಮುನಿರತ್ನ ಏನೇ ಇರಲಿ, ಅವರ ವ್ಯಕ್ತಿತ್ವ ಹೀಗೆಯೇ ಇರಲಿ, ಅವರನ್ನು ಪಕ್ಷದೊಳಗೆ ಸೇರಿಸಿಕೊಂಡ ನಂತರ, ಅವರು ಉಳಿದವರಂತೆ ಬಿಜೆಪಿಯವರೇ.

ಅವರ ಬಗ್ಗೆ ತಕರಾರುಗಳಿದ್ದರೆ, ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ಯೋಚಿಸಬೇಕಿತ್ತು. ಯಡಿಯೂರಪ್ಪನವರು ಮುನಿರತ್ನ ಅವರನ್ನು ಸೇರಿಸಿಕೊಳ್ಳಲು ಮುಂದಾದಾಗ, ದಿಲ್ಲಿ ನಾಯಕರು, ಅವರಿಗೆ(ಯಡಿಯೂರಪ್ಪನವರಿಗೆ) ಹೇಳಬೇಕಿತ್ತು, ಯಾವ
ಕಾರಣಕ್ಕೂ ಮುನಿರತ್ನ ಅವರನ್ನು ಸೇರಿಸಿಕೊಳ್ಳಬೇಡಿ ಎಂದು. ತಾಳಿಕಟ್ಟಿ ಮದುವೆಯಾದ ನಂತರ, ಮೊದಲ ರಾತ್ರಿ ಹೆಂಡತಿ
ಸರಿ ಇಲ್ಲ ಅಂದರೆ ಹೇಗೆ ? ಇದು ದೇವರು ಮೆಚ್ಚುವ ನಡೆ ಅಲ್ಲ. ಇದು ವಿಶ್ವಾಸ ಘಾತಕತನ !

ಸಾರ್ವಜನಿಕ ಜೀವನದಲ್ಲಿ ಮಾತು, ಭಾಷೆ, ವಾಗ್ದಾನ, ಭರವಸೆಗೆ ಬೆಲೆಯೇ ಇಲ್ಲವೇ? ನಂಬಿಸಿ ಕತ್ತು ಕುಯ್ಯಿರಿ ಎಂದು ಡಾ.ಶಾಮ ಪ್ರಸಾದ ಮುಖರ್ಜಿ ಅಥವಾ ದೀನದಯಾಳ ಉಪಾಧ್ಯಾಯ ಹೇಳಿದ್ದಾರಾ? ಇದು ಯಾವ ಸೀಮೆಯ ಹೊಲಸು, ನೀಚ ರಾಜ ಕಾರಣ? ಆದರ್ಶ, ಮೌಲ್ಯಗಳ ಬಗ್ಗೆ ಮಾತಾಡುವ ಬಿಜೆಪಿಯಿಂದ ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಮುಂದಿನ ಚುನಾವಣಾ ಹೊತ್ತಿಗೆ ಮುನಿರತ್ನ ಮತ್ತೆ ಕಾಂಗ್ರೆಸ್ಸಿಗೆ ಹೋಗಬಹುದು, ಅವರಿಗೆ ಮಂತ್ರಿ ಪದವಿ ನೀಡಿದರೆ ಮುಂದೆ ಪಕ್ಷಕ್ಕೆ ಹಾನಿಯಾಗ ಬಹುದು, ಅವರ ಜಾತಿಯವರು ಬೆಂಗಳೂರಿನಲ್ಲಿ ಹೆಚ್ಚು ಮತದಾರರಿಲ್ಲ, ಹೀಗಾಗಿ ಅವರಿಗೆ ಮಂತ್ರಿ ಪದವಿ ತಪ್ಪಿಸಿದರೆ ಅದರಿಂದ ರಾಜಕೀಯವಾಗಿ ಹಾನಿಯೇನಿಲ್ಲ ಎಂದು ವಾದಿಸಬಹುದು.

ಈ ವಾದವೇ ಸರಿಯಲ್ಲ. ಅವರನ್ನು ಪಕ್ಷಕ್ಕೆ ಕರೆದುಕೊಂಡು ಬರುವಾಗ ಈ ವಾದ ಮಾಡುವವರು ಬತ್ತಿ ಹೊಸೆಯುತ್ತಿದ್ದಾರಾ? ಆಗಲೇ ಈ ಕಾರಣ ನೀಡಿ ಅವರು ಬರದಂತೆ ತಡೆಯಬಹುದಿತ್ತು. ಈಗ ಕರೆದುಕೊಂಡು ಬಂದನಂತರ ಈ ರೀತಿ ಅವಮಾನಿಸಿ, ದ್ರೋಹ ಬಗೆಯುವುದು ಶೋಭೆ ತರುವಂಥದ್ದಲ್ಲ. ಮುಂದೆ ಬಿಜೆಪಿ ಮುನಿರತ್ನಅವರನ್ನು ಮಂತ್ರಿ ಮಾಡುತ್ತದೋ ಇಲ್ಲವೋ. ಮಾಡಿದರೂ ಮಾಡಬಹುದು.

ಆದರೆ ನನಗಂತೂ ಆ ಭರವಸೆ, ವಿಶ್ವಾಸ ಇಲ್ಲ. ಆದರೆ ಈಗಂತೂ ಅವರ ಬೆನ್ನಿಗೆ ಚಾಕು ಇರಿದಿದೆ. ಇದು ಹಲ್ಕಾ ರಾಜಕಾರಣ. ಇದನ್ನು ಯಾರೂ ಮಾಡಬಾರದು. ಇದರಿಂದ ಸಾರ್ವಜನಿಕ ಜೀವನದಲ್ಲಿ ಯಾರನ್ನೂ ನಂಬದ ಸ್ಥಿತಿ ನಿರ್ಮಾಣವಾಗುತ್ತದೆ. ನಂಬಿಕೆದ್ರೋಹವೂ ರಾಜಕಾರಣದ ಒಂದು ಲಕ್ಷಣವಾಗಿ ಪರಿಗಣಿಸುವಂತಾಗಬಹುದು. ಇನ್ನು ಮುಂದೆ ಬಿಜೆಪಿ ನಾಯಕರ ಮಾತು ನಂಬಿಯಾರು ಪಕ್ಷಕ್ಕೆ ಬರುತ್ತಾರೆ? ಇವನ್ನೆ ನೋಡುವ, ಅಳೆದು ತೂಗಿ ಪಕ್ಷವನ್ನು ಸರಿಪಡಿಸುವ ದೊಡ್ಡ ಜವಾಬ್ದಾರಿ ಹೊತ್ತಿರುವ ಆರೆಸ್ಸೆಸ್ ನಾಯಕರೂ, ಗಾಂಧಾರಿಯಂತೆ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಅಸಹಾಯಕರಾಗಿ ಸುಮ್ಮನೆ ಕುಳಿತಿದ್ಯಾಕೋ ?!

ಗೊತ್ತಾಗುತ್ತಿಲ್ಲ. ಅಷ್ಟಕ್ಕೂ ನನಗೆ ಇಲ್ಲಿ ಮುನಿರತ್ನ ಮುಖ್ಯವಲ್ಲ. ಸಾರ್ವಜನಿಕ ಜೀವನದಲ್ಲಿ ವಚನ ಪಾಲನೆ ಆದರ್ಶದ ಬಗ್ಗೆ
ನಾನು ಮಾತಾಡಿದ್ದೇನೆ, ಅಷ್ಟೇ.

Leave a Reply

Your email address will not be published. Required fields are marked *