Sunday, 17th October 2021

ನ.1ಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ: ಮಸಾಲೆ ಜಯರಾಮ್

ನಯಾಪೈಸೆಯಿಲ್ಲದ ಸಾಂಬಾರು ಮಂಡಳಿ ನನಗೆ ಬೇಡ

ತುಮಕೂರು: ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಆದರೆ ಹಾಲಿ ನೀಡಲಾಗಿರುವ ಸಾಂಬಾರು ಮಂಡಳಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲು ನಾನು ಸಿದ್ಧನಿಲ್ಲ. ಉತ್ತಮ ಕಾರ್ಯ ಮಾಡುವ ಅಭಿವೃದ್ಧಿ ನಿಗಮ ನೀಡದಿದ್ದರೆ ನವಂಬರ್ 1ಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನಾವೇ ನಿಗಮದ ಸಿಬ್ಬಂದಿಗೆ ಸ್ವಂತ ಖರ್ಚಿನಲ್ಲಿ ಕಾಫಿ ಟೀ ಕೊಡಿಸುವ ಪರಿಸ್ಥಿತಿ ಇದೆ. ಒಂದು ನಯಾಪೈಸೆ ಅನುದಾನ ಕೊಟ್ಟಿಲ್ಲ. ಕೊಡುವುದಾದರೆ ಜನಪರ ಕೆಲಸ ಮಾಡುವ ಅವಕಾಶ, ಯೋಜನೆಗಳುಳ್ಳ ಉತ್ತಮ ನಿಗಮ ಮಂಡಳಿ ಕೊಡಲಿ. ಈ ಕುರಿತು ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿಯೂ ಪ್ರಸ್ತಾಪಿಸಿದ್ದು, ಅಕ್ಟೋಬರ್ ಅಂತ್ಯದವರೆಗೆ ಕಾದು ನೋಡು ತ್ತೇನೆ. ಮನವಿಗೆ ಸ್ಪಂದಿಸದಿದ್ದಲೂ ನ.1ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ ಎಂದು ನೇರವಾಗಿ ತಿಳಿಸಿದರು.

ಕಳೆದ ಮೂರುವರೆ ವರ್ಷದಲ್ಲಿ ತುರುವೇಕೆರೆ ಕ್ಷೇತ್ರವನ್ನು ರಸ್ತೆ, ಕುಡಿಯುವ ನೀರು ಸೇರಿದಂತೆ ಕ್ಷೇತ್ರವನ್ನು ಮಾದರಿ ಯಾಗಿ ಅಭಿವೃದ್ಧಿ ಪಡಿಸಿದ್ದು, ತಾಲೂಕಿನ ಶೇ.80ರಷ್ಟು ಕೆರೆಗಳನ್ನು ತುಂಬಿಸಿರುವೆ. ಸಿ.ಎಸ್.ಪುರ ಕೆರೆ ಸೇರಿದಂತೆ ತಾಲೂಕಿನ ಹಲವು ಕೆರೆಗಳನ್ನು ತುಂಬಿಸುವ ವಿಚಾರದಲ್ಲಿ ಮಾಧು ಸ್ವಾಮಿ ಅವರು ನೀಡಿದ ಸಹಕಾರ ಅಭಿನಂದ ನೀಯ. ಕ್ಷೇತ್ರದ ಜನ ನನ್ನೊಂದಿಗಿದ್ದಾರೆ. ಹಾಲಿ-ಮಾಜಿ ಮುಖ್ಯಮಂತ್ರಿಗಳು ನೀಡಿರುವ ಭರವಸೆಯಂತೆ ಒಳ್ಳೆಯ ನಿಗಮ ಮಂಡಳಿ ಕೊಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯ ಎಂದು ಹೇಳಿ ಕುತೂಹಲ ಮೂಡಿಸಿದರು.

ಕೆಲ ದಿನಗಳ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿ.ಸುರೇಶ್ ಗೌಡ ಅವರು ರಾಜೀನಾಮೆ ನೀಡಿದ್ದು, ಈಗ ಬಿಜೆಪಿ ಶಾಸಕ ಮಸಾಲೆ ಜಯರಾಮ್ ರಾಜೀನಾಮೆ ಮಾತುಗಳನ್ನಾಡುತ್ತಿರುವುದು ಹೈಕಮಾಂಡ್ ಮಟ್ಟದಲ್ಲಿ ನುಂಗಲಾರದ ತುತ್ತಾಗಿದೆ.

Leave a Reply

Your email address will not be published. Required fields are marked *