Wednesday, 5th October 2022

ಪರಿಷತ್ ಚುನಾವಣೆ: 12ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ – ಯಡಿಯೂರಪ್ಪ

ಶಿರಸಿ : ಮುಂಬರುವ ಪರಿಷತ್ ಚುನಾವಣೆಗೆ 20 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದು, ಅದರಲ್ಲಿ 12ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತ ಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಜನಸ್ವರಾಜ್ ಸಮಾವೇಶದ ಕುರಿತು ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಷತ್ ನಲ್ಲಿ ಒಟ್ಟೂ 75 ಸದಸ್ಯರಿದ್ದು, ಅದರಲ್ಲಿ 26 ಬಿಜೆಪಿ ಸದಸ್ಯರಿದ್ದಾರೆ. ಈಗ ನಡೆಯಲಿರುವ ಚುನಾವಣೆಯಲ್ಲಿ 12 ಸ್ಥಾನ ಗೆದ್ದಲ್ಲಿ ಬಿಜೆಪಿಗೆ ಬಹುಮತ ಬರಲಿದೆ. ಆದ ಕಾರಣ 12 ಕ್ಕೂ ಅಧಿಕ ಸ್ಥಾನ ನಾವು ಗೆಲ್ಲಲಿದ್ದು, ಬಹುಮತದೊಂದಿಗೆ ಹೆಚ್ಚಿನ ಅಭಿವೃದ್ಧಿ ಮಾಡಲಿದ್ದೇವೆ ಎಂದರು.

ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಜೋಳ, ಅಡಿಕೆ, ಭತ್ತ ಬೆಳೆಗೆ ಸಾಕಷ್ಟು ನಷ್ಟವಾಗಿದೆ‌. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡಲಾಗಿದೆ. ಅದಕ್ಕೆ ಅಗತ್ಯವಿರುವ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು, ಜಿಲ್ಲೆಯಲ್ಲಿ ಉಂಟಾಗಿರುವ ಬಸ್ಸಿನ ಡ್ರೈವರ್ ಗಳ ಕೊರತೆಗೆ ತಕ್ಷಣವೇ ತಾತ್ಕಾಲಿಕ ಸಿಬ್ಬಂದಿಗಳನ್ನು ಸೇವೆಗೆ ತೆಗೆದುಕೊಂಡು ಸಮಸ್ಯೆ ಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಅಲ್ಲಿಯೇ ಉಪಸ್ಥಿತರಿದ್ದ ಸಚಿವ ಶ್ರೀರಾಮುಲುಗೆ ಈ ಬಗ್ಗೆ ಸೂಚನೆ ನೀಡಿದರು.

ಬಿಟ್ ಕಾಯಿನ್ ಬಗ್ಗೆ ಯಾರಾದರೂ ಸರಿಯಾದ ಮಾಹಿತಿ ನೀಡಿದಲ್ಲಿ ಯಾವುದೇ ಪಕ್ಷದವರು ಆರೋಪಿಗಳಾಗಿದ್ದರೂ ತೀವ್ರ ಕ್ರಮ ಕೈಗೊಳ್ಳಲಾಗುತ್ತದೆ. ಅದೊಂದು ಅಕ್ಷಮ್ಯ ಅಪರಾಧ. ಅಂತವರ ವಿರುದ್ಧ ಕ್ರಮ ಆಗಲಿದೆ ಎಂದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಇ-ಸ್ವತ್ತು ಸಮಸ್ಯೆ ಬಗೆಹರಿಸಲು ಸಬ್ ಕಮಿಟಿಯನ್ನು ರಚನೆ ಮಾಡಲಾ ಗಿದೆ. ಅದರಲ್ಲಿ ನಾನೂ ಸಹ ಸದಸ್ಯನಾಗಿದ್ದೇನೆ. ಈಗಾಗಲೇ ಎರಡು ಸಭೆಯೂ ಸಹ ನಡೆದಿದೆ. ಪರಿಣಾಮ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲು ಕ್ರಮ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಸಚಿವ ಶ್ರೀರಾಮುಲು, ಶಾಸಕರಾದ ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ದಿನಕರ ಶೆಟ್ಟಿ, ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಮುಂತಾದವರು ಇದ್ದರು.

***

ಜಿಲ್ಲೆಯ ಪರಿಷತ್ ಅಭ್ಯರ್ಥಿಯ ಘೋಷಣೆ ಶೀಘ್ರದಲ್ಲಿ ಆಗಲಿದೆ. ಹೆಸರನ್ನು ಕೇಂದ್ರಕ್ಕೆ ಕಳಿಸಲಾಗಿದೆ. ನಾನು ಇದೇ ರೀತಿ ಅಧಿಕಾರ ಇಲ್ಲದೆಯೂ ರಾಜ್ಯದುದ್ದಕ್ಕೂ ಓಡಾಡಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ. ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ.
ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ