Sunday, 14th August 2022

ಸುದೀರ್ಘ ಪ್ರಯಾಣ ಮುಗಿಸಿ ನಿಲ್ದಾಣ ಸೇರಿದ ಜಾರ್ಜ್‌ ’ಎಕ್ಸ್ ಪ್ರೆಸ್’!

ನೂರೆಂಟು ವಿಶ್ವ

ಕಳೆದ ಭಾನುವಾರ ಬೆಳಗ್ಗೆ ‘ಇಂಡಿಯನ್ ಎಕ್ಸ್ ಪ್ರೆಸ್’ ಮತ್ತು ‘ಕನ್ನಡ ಪ್ರಭ’ ಪತ್ರಿಕೆಗಳನ್ನು ನೋಡಿದಾಗ ಸಣ್ಣ ಆಘಾತವಾಯಿತು. ಅದರಲ್ಲೂ ‘ಕನ್ನಡಪ್ರಭ’ ಮುಖಪುಟದ ಹಾಸಿನಲ್ಲಿ ‘ಇದು ಶುಭ ವಿದಾಯ ಹೇಳುವ ಸಮಯ!’ ಎಂಬ ಶೀರ್ಷಿಕೆ ನೋಡಿ ಗಾಬರಿ ಯಾಯಿತು.

‘ಇದು ಟಿಜೆಎಸ್ ಕೊನೆಯ ಅಂಕಣ’ ಎಂಬ ಅಡಿಶೀರ್ಷಿಕೆ ನೋಡಿ ಯಾಕೋ ಪಿಚ್ಚೆನಿ ಸಿತು. ನನ್ನ ಮೆಚ್ಚಿನ ಅಂಕಣಕಾರರಾದ ಟಿಜೆಎಸ್ ಎಂದೇ ಪರಿಚಿತರಾದ ತಾಯಿಲ್ ಜೇಕಬ್ ಸೋನಿ ಜಾರ್ಜ್ ತಮ್ಮ ಪೆನ್ನಿಗೆ ಕ್ಯಾಪ್ ತೊಡಿಸಿದ್ದರು. ನಾನು ಕಳೆದ ಇಪ್ಪತ್ತೈದು (1997 ರಿಂದ) ವರ್ಷಗಳಿಂದ ಪ್ರತಿ ಭಾನುವಾರ ತಪ್ಪದೇ ಅವರ  Point Of View ಅಂಕಣವನ್ನು ಓದಿದವನು. ಆ ಅಂಕಣಕ್ಕಾಗಿ ಭಾನುವಾರದ ಬೆಳಗಿನ ಚುಮುಚುಮು ನಿದ್ದೆ ಬಲಿಕೊಟ್ಟು, ಪತ್ರಿಕೆ ಬರುವವರೆಗೆ ಗೂಬೆಯಂತೆ ಕಾದವನು. ಟಿಜೆಎಸ್ ಯಾವ ನೆಪವನ್ನೂ ಹೇಳದೇ ನಿರಂತರವಾಗಿ ಕಾಲು ಶತಮಾನ ಕಾಲ ಬರೆದವರು.

ವರ್ಷಕ್ಕೆ ಐವತ್ತೆರಡು ವಾರದಂತೆ, ಇಪ್ಪತ್ತೈದು ವರ್ಷಗಳ ಕಾಲ 1300 ಅಂಕಣ ಬರೆದರು. ‘ಕನ್ನಡಪ್ರಭ’ದಲ್ಲಿ ಆ ಅಂಕಣ ‘ನೇರಮಾತು’ ಶೀರ್ಷಿಕೆಯಲ್ಲಿ ಪ್ರಕಟ ವಾಗುತ್ತಿತ್ತು. ಅವರಿಗೆ ಅದು ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಹೀಗಾಗಿ ಅದೊಂದನ್ನೇ ಚೆಂದವಾಗಿ, ಆಪ್ತವಾಗಿ ಮಾಡುತ್ತಾ ಬಂದರು. ಈ ದಿನಗಳಲ್ಲಿ ಒಂದು ಪತ್ರಿಕೆಯಲ್ಲಿ ಅಂಕಣವನ್ನು ಅಬಾಧಿತವಾಗಿ ಇಪ್ಪತ್ತೈದು ವರ್ಷ ಬರೆಯುವುದು ಸಣ್ಣ ಮಾತಲ್ಲ.

ಅಷ್ಟು ಶಿಸ್ತಿಗೆ ಒಳಪಡುವುದು ಅಂಕಣಕಾರರಿಗೂ ಕಷ್ಟ. ಅಷ್ಟು ವರ್ಷಗಳ ಕಾಲ ಅಂಕಣಕಾರರನ್ನು ಸಹಿಸಿಕೊಳ್ಳುವುದು ಪತ್ರಿಕೆ ಆಡಳಿತ ಮಂಡಳಿಗೂ ಕಷ್ಟ. ಇನ್ನು ಓದುಗರಿಗೆ ಅಷ್ಟು ವರ್ಷಗಳ ಕಾಲ ಒಬ್ಬರನ್ನೇ, ಅದೇ ಜಾಗದಲ್ಲಿ ವಾರವಾರವೂ ಸ್ವೀಕರಿಸುವುದು ಇನ್ನೂ ಕಷ್ಟ. ಆದರೆ ಟಿಜೆಎಸ್ ಇದನ್ನು ಒಂದು ವ್ರತದಂತೆ, ತಪಸ್ಸಿನಂತೆ, ಆಪ್ತವಾಗಿ ಎದೆಗೊತ್ತಿಕೊಂಡು ಮಾಡಿದರು. ಈ ಸುದೀರ್ಘ ಅವಧಿಯಲ್ಲಿ ಅವರಿಗೆ ತೊಡಕುಗಳು, ಸಮಸ್ಯೆಗಳು ಎದುರಾಗದೇ ಇರಲಿಲ್ಲ. ಆದರೆ ಅವು ಅವರ ಬರವಣಿಗೆಯ ಹರವಿಗೆ ಅಡ್ಡಿ ಮಾಡಲಿಲ್ಲ.

ಆದರೆ ಕರ್ತವ್ಯದ ಕರೆ ಯಾವತ್ತೂ ಗೆದ್ದಿತು. ಪತ್ರಿಕೋದ್ಯಮದಲ್ಲಿ ತಪ್ಪು ಮಾಡುವ ಆಯ್ಕೆ ಇರುವುದಿಲ್ಲ. ಕಾರಣ ಅಂಕಣಕಾರ ಓದುಗರ ಗುಡ್ ವಿಲ್‌ನಲ್ಲಿ ಬದುಕುತ್ತಾನೆ. ಜಾರ್ಜ್ ಅವರ ಲೇಖನಿ ಸುಸ್ತಾಗಲಿಲ್ಲ, ಬಳಲಲಿಲ್ಲ. ಕೊನೆಯ ಅಂಕಣದ ತನಕ, ಅವರು ಓದುಗರನ್ನು ಒಂದು ದೀರ್ಘ ನಿಟ್ಟುಸಿರಿನ ತನಕ ತುದಿಗಾಲಲ್ಲಿ ನಿಲ್ಲಿಸಿ ಕೈಬಿಟ್ಟರು.

ನಾವೆ ಒಂದು ಧಾಟಿಯಲ್ಲಿ ಯೋಚಿಸುತ್ತಿದ್ದರೆ, ಟಿಜೆಎಸ್ ನಮಗೆ ಗೊತ್ತಿಲ್ಲದ ಹೊರಳು ಹಾದಿಗೆ ತಿರುಗಿಸಿ, ಸಂದಿಗೊಂದಲಗಳಲ್ಲಿ ಸುತ್ತಾ ಡಿಸಿ, ನಾವು ನೋಡಿರದ ಮಗ್ಗುಲನ್ನು ತೋರಿಸುತ್ತಿದ್ದರು. ಹಾಗಂತ ಜಾರ್ಜ್ ಹೇಳುವುದೆಲ್ಲವನ್ನೂ ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ. ಅವರ ವಿಚಾರ ಅಷ್ಟೊಂದು ಪ್ರಖರ, ತೀಕ್ಷ್ಣವಾಗಿರುತ್ತಿತ್ತು. ಅವರೂ ಸರಿ, ಇವರೂ ಸರಿ, ಮುಂದೆ ನೋಡೋಣ, ಎಲ್ಲರೂ ಸರಿದೂಗಿಸಿ ಕೊಂಡು ಹೋಗೋಣ ಧಾಟಿಯ ಮಾತುಗಳು ಅವರ ಬಾಯಿಂದ ಬರುತ್ತಿರಲಿಲ್ಲ.

ಅವರು ಹೇಳಬೇಕಾದುದನ್ನು ಸಣ್ಣ ಮೆಣಸಿನಕಾಯಿಯಲ್ಲಿ ನುರಿದು, ಜಜ್ಜಿ ಕೊಡುತ್ತಿದ್ದರು. ಒಂಥರದ ‘ಬುಲ್ಡೋಜರ್ ನ್ಯಾಯ’ ಅವರ ವಾದದಲ್ಲಿ ಇರುತ್ತಿತ್ತು. ಅದಕ್ಕೇ ಜಾರ್ಜ್ ಇಷ್ಟವಾಗುತ್ತಿದ್ದುದು. ಎಲ್ಲರನ್ನೂ ಸಂಪ್ರೀತಗೊಳಿಸುವ ‘ಪೂರ್ಣಚೂರ್ಣ ಮಂಜರಿ’ ವಾದ
ಅವರಿಗೆ ಗೊತ್ತಿರಲಿಲ್ಲ. ಬೇರೆಯವರನ್ನು ಬೇಸರಗೊಳಿಸಲು ಇಷ್ಟವಿಲ್ಲದಿದ್ದರೆ, ಅನಿಸಿದ್ದನ್ನು ನೇರವಾಗಿ ಹೇಳುವ ತಾಕತ್ತಿಲ್ಲದಿದ್ದರೆ, ತಪ್ಪನ್ನು ನೇರಾನೇರ ಖಂಡಿಸುವ ಛಾತಿ ಇಲ್ಲದಿದ್ದರೆ, ಅಂಕಣಕಾರರಾಗಿ ಪತ್ರಿಕೆಯ ಅಮೂಲ್ಯ, ಪವಿತ್ರ ಜಾಗವನ್ನು ನಿರರ್ಥಕ ಗೊಳಿಸ ಬಾರದು ಎಂದು ನಂಬಿದ್ದರು. ಅದನ್ನು ಅವರ ಅಂಕಣದಲ್ಲಿ ಢಾಳಾಗಿ ಕಾಣಬಹುದಿತ್ತು.

ನನಗೆ ತಿಳಿದಂತೆ, ಅಮೆರಿಕದ ಸಿಡ್ ಹಾರ್ಟ್ ಮನ್ ಕಳೆದ ೭೪ ವರ್ಷಗಳಿಂದ ಬರೆಯುತ್ತಿರುವ ಸುದೀರ್ಘ ಅಂಕಣಕಾರ. ಅಮೆರಿಕದ ‘ಸ್ಟಾರ್ ಟ್ರಿಬ್ಯೂನ್’ ಪತ್ರಿಕೆಯಲ್ಲಿ ಆತನ ಅಂಕಣ ಈಗಲೂ ಪ್ರಕಟವಾಗುತ್ತಿದೆ. ಆತನಿಗೆ ಇನ್ನೇನು ಕೆಲ ದಿನಗಳಲ್ಲಿ ನೂರು ವರ್ಷ ತುಂಬ ಲಿದೆ. ಇವರನ್ನು ಬಿಟ್ಟರೆ, ಆರ್ಟ್ ಬುಚ್ವಾಲ್ಡ ಸುಮಾರು ನಲವತ್ತೆಂಟು ವರ್ಷಗಳ ಕಾಲ ನಿರಂತರವಾಗಿ ಬರೆದರು. ಜನಪ್ರಿಯತೆಯ ಉತ್ತುಂಗದಲ್ಲಿ ಅವರ ಸಿಂಡಿಕೇಟೆಡ್ ಅಂಕಣ ವಿಶ್ವದ ಐನೂರಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಏಕಕಾಲಕ್ಕೆ ಪ್ರಕಟವಾಗುತ್ತಿತ್ತು. ಲಮ್ ಶನ್ ಮುಕ್ ಎಂಬ ಪತ್ರಕರ್ತ ಮತ್ತು ಪತ್ರಿಕಾ ಮಾಲೀಕ ‘ಹಾಂಗ್ ಕಾಂಗ್ ಎಕನಾಮಿಕ್ ಜರ್ನಲ್’ ಪತ್ರಿಕೆಯಲ್ಲಿ ಸುಮಾರು ಐವತ್ತು ವರ್ಷ ಗಳವರೆಗೆ ಅಂಕಣ ಬರೆದರು.

ಅದೇ ರೀತಿ ನಲವತ್ತೆರಡು ವರ್ಷಗಳ ಕಾಲ ನಿರಂತರವಾಗಿ ಬರೆದವರು, ‘ಡೆಕ್ಕನ್ ಹೆರಾಲ್ಡ’ ಸೇರಿದಂತೆ ಸುಮಾರು ಮೂವತ್ತು ಪತ್ರಿಕೆ ಗಳ ಸಂಪಾದಕರಾಗಿದ್ದ ಪೊತೆನ್ ಜೋಸೆಫ್. ಅವರು ಯಾವ ಪತ್ರಿಕೆ ಸೇರಿದರೂ, ’’Over A Cup of Tea’ ಮಾತ್ರ ತಪ್ಪದೇ
ಪ್ರಕಟ ವಾಗುತ್ತಿತ್ತು. ಇವರ ಸಾಲಿನಲ್ಲಿ ಜಾರ್ಜ್ ಕೂಡ ನಿರಂತರ ಬರೆದರು. ಜಾರ್ಜ್ ಬರೆದಿzಲ್ಲವೂ ಗಟ್ಟಿಕಾಳು. ಸಾವಿರದ ಮುನ್ನೂರು
ಕಂತುಗಳಲ್ಲಿ ಯಾವುದನ್ನೂ ಬಿಡುವಂತಿಲ್ಲ. ಅವನ್ನೆ ಸೇರಿಸಿ ಪುಸ್ತಕ ಮಾಡುವವರಿಗೆ ಅಷ್ಟು ಸುಲಭ. ಜೊಳ್ಳನ್ನು ಹೆಕ್ಕುವ ಸಮಸ್ಯೆಯೇ ಇಲ್ಲ. ಜಾರ್ಜ್ ತಮ್ಮ ಅಂಕಣದಲ್ಲೂ ರಾಜಿ ಆಗಲಿಲ್ಲ. ಬರೆದೂ ಬರೆದು ಮೆತ್ತಗಾಲಿಲ್ಲ. ಮೊದಲಿಗಿಂತ ಹೆಚ್ಚು ಪ್ರಖರವಾಗುತ್ತಾ ಹೋದರು. ಮತ್ತಷ್ಟು ಪ್ರತಿಗಾಮಿಯಾಗುತ್ತಾ ಹೋದರು.

ಪ್ರಭುತ್ವದ ಜತೆಗೆ ಹೊಂದಾಣಿಕೆಯನ್ನು ಮಾಡಿಕೊಳ್ಳಲೇ ಇಲ್ಲ. ಪತ್ರಕರ್ತನಿಗೆ ಮಧ್ಯಪಥ ಸುರಕ್ಷಿತ, ಹೀಗಾಗಿ ಆ ಪಥ ತುಳಿಯಬಾರದು ಎಂಬುದು ಜಾರ್ಜ್ ವಾದವಾಗಿತ್ತು. ನಮ್ಮ ವಾದವನ್ನು ಹೇಳುವ ಎದೆಗಾರಿಗೆ, ಪ್ರಾಮಾಣಿಕತೆ ಇಲ್ಲದಿದ್ದರೆ ಬರೆಯಬಾರದು, unpopu lar  ಆದರೂ ಆಗಲಿ, ಒಂಟಿದನಿಯಾದರೂ ಪರವಾಗಿಲ್ಲ ಎಂಬ ದಾಢಸಿತನವಿಲ್ಲದಿದ್ದರೆ, ವ್ಯವಸ್ಥೆ ಬಗ್ಗೆ ಒಂದು ದಿವ್ಯ ಅಗೌರವ (irreverence) ಇಲ್ಲದಿದ್ದರೆ ಅಂಕಣ ಬರೆಯುವ ಗೋಜಿಗೆ ಹೋಗಬಾರದು ಎನ್ನುತ್ತಿದ್ದ ಅವರಿಗೆ ಒಂದು ಅಸಡ್ಡೆ, ನಿರ್ವಿಕಲ್ಪ ಧೋರಣೆ ಇದ್ದಂತಿತ್ತು.

ಈ ಕಾರಣದಿಂದ ಅವರು ಬೇರೆಯವರಿಗೆ ಬೇಸರವಾಗಬಹುದೇನೋ ಎಂಬ ನಾಜೂಕಯ್ಯನ ಥರ ಬರೆಯಲಿಲ್ಲ. ತಮ್ಮ ಬರಹದಿಂದ ಕೆಲವರಿಗಾದರೂ ನೋವು, ಬೇಸರ ಆಗದಿದ್ದರೆ ಹೇಗೆಂಬ ಚಿವುಟುತನದಿಂದಲೇ ಬರೆದರು. ಅದಕ್ಕೆ ಸರಿ ಹೊಂದುವ ಅವರ ಖಾರ ಖಾರ ಭಾಷೆ. ವ್ಯಂಗ್ಯಭರಿತ ಕಹಿ ಕಹಿ ಕಷಾಯ. ರಾಜಕಾರಣಿಗಳನ್ನಂತೂ ಕೇಳಲೇಬೇಡಿ, ಹಿಂಜಿ ಹಿಪ್ಪಲಿ. This is too much ಎಂದು ಅನಿಸಿ ದರೂ ಪರವಾಗಿಲ್ಲ, ಜಾರ್ಜ್ ರಾಜಿ ಮಾಡಿಕೊಳ್ಳಲಿಲ್ಲ. ಹೇಳಬೇಕಾದ ಮಾತುಗಳನ್ನು ಕೊನೇಕ್ಷಣದಲ್ಲೂ ನುಂಗಲಿಲ್ಲ. ಈ ಕಾರಣಗಳಿಂದ ಜಾರ್ಜ್ ಅವರನ್ನು ಅಂಕಣಕಾರರನ್ನಾಗಿ ಬಹಳ ವರ್ಷ ಇಟ್ಟುಕೊಳ್ಳುವುದು ಕಷ್ಟವೇ.

ಒಲ್ಲದ ಮನಸ್ಸಿನಿಂದ ಬರೆಯುವುದೂ ಅವರಿಗೆ ಕಷ್ಟವೇ. ಈ ಹಿನ್ನೆಲೆಯಲ್ಲಿ ಅವರ ಕಾಲು ಶತಮಾನದ ಆ ಅಂಕಣವನ್ನು ಗಮನಿಸಿಬೇಕು. ಜಾರ್ಜ್ ಬರೆಯುವುದನ್ನು ಬಿಟ್ಟಿಲ್ಲ. ಅಂಕಣದ ಚೌಕಟ್ಟಿಗೆ, ಡೆಡ್ ಲೈನ್‌ಗೆ ಕಟ್ಟುಬಿದ್ದು ವಾರವಾರ ಬರೆಯದಿರಬಹುದು. ಆದರೆ ವಿದಾಯದ ಅಂಕಣದ ಕೊನೆಯಲ್ಲಿ ತಮ್ಮ ಹೋರಾಟ ಮಾತ್ರ ಮುಂದುವರಿಯುತ್ತದೆ ಎಂದು ಹೇಳಿರುವುದು ಇದ್ದುದರ ಸ್ವಲ್ಪ ಸಮಾಧಾನ. ಕಾರಣ ಜಾರ್ಜ್ ಅವರಂಥವರು ಸುಮ್ಮನಿರುವುದಿಲ್ಲ, ಇನ್ನು ಸುಮ್ಮನಿರಿಸುವುದಂತೂ ಸಾಧ್ಯವೇ ಇಲ್ಲ. ಬದುಕಿರುವ ತನಕ ಅವರು ಪ್ರಶ್ನಿಸುತ್ತಲೇ ಇರುವವರು. ಪತ್ರಕರ್ತ ಇರಬೇಕಾದುದೇ ಹಾಗೆ ಎಂದು ಬಲವಾಗಿ ನಂಬಿದವರು.

ಇಲ್ಲಿ ಅಲ್ಲದಿದ್ದರೆ, ಮತ್ತೆ. ಈ ತೊಂಬತ್ನಾಲ್ಕರ ಇಳಿವಯಸ್ಸಿನಲ್ಲೂ ಅವರ ದನಿ ಕ್ಷೀಣವಾಗಿರಬಹುದು. ಆದರೆ ಅವರ ಸಾಕ್ಷಿಪ್ರe ಮಾತ್ರ ಶಿಥಿಲವಾಗಿಲ್ಲ. ಜಾರ್ಜ್ ಅವರನ್ನು ಒಬ್ಬ ಬಂಡಾಯಗಾರನಾಗಿ, ಪ್ರತಿಗಾಮಿಯಾಗಿ, ಅತೃಪ್ತ ಜೀವಿಯಾಗಿ ನೋಡುವುದೇ ಚೆಂದ. ಈ ವ್ಯವಸ್ಥೆ ಬಗ್ಗೆ ಸದಾ ತಕರಾರು ಇಟ್ಟುಕೊಂಡೇ ತಮ್ಮ ಬರಹದ ಬದುಕನ್ನು ಪೊರೆದುಕೊಂಡು ಬಂದವರು. ಜಾರ್ಜ್ ಯಾರನ್ನೂ ಬಿಟ್ಟವ ರಲ್ಲ. ಸ್ನೇಹದಲ್ಲೂ ಕನಿಷ್ಠ ತಮ್ಮ ಸಣ್ಣ ಅಪಸ್ವರವನ್ನಾದರೂ ಹೇಳಲು ಸಾಧ್ಯವಾಗುವ ಒಂದು ಸಂಬಂಧವನ್ನು ಕಟ್ಟಿಕೊಂಡವರು. ಜಾರ್ಜ್ ಇಷ್ಟವಾಗುವುದೇ ಈ ಕಾರಣಕ್ಕೆ.

ಇಷ್ಟು ವರ್ಷಗಳ ಕಾಲ ಜಾರ್ಜ್ ಬರೆದಿರಬಹುದು. ಆದರೆ ಅವರ ಫೋಟೋವನ್ನು ಮಾತ್ರ ಅವರ ಅಂಕಣದ ಜತೆಗೆ ಯಾರೂ ನೋಡಿಲ್ಲ. ಅವರ ಅಂಕಣ ಪ್ರಕಟವಾಗುವ ಪುಟಗಳಲ್ಲಿ ಇನ್ನಿತರ ಅಂಕಣಕಾರರ ಫೋಟೋ ಪ್ರಕಟವಾದರೂ, ಫೋಟೋವಿಲ್ಲದೇ ಪ್ರಕಟವಾಗು ತ್ತಿದ್ದುದು ಜಾರ್ಜ್ ಅಂಕಣವೊಂದೇ. ಯಾವ ಕಾರಣಕ್ಕೂ ತಮ್ಮ ಫೋಟೋ ಪ್ರಕಟವಾಗಬಾರದು ಎಂಬ ತಾಕೀತಿನೊಂದಿಗೆ ಬರೆಯುತ್ತಿ
ದ್ದರು. ಮೂಲತಃ ಜಾರ್ಜ್ ಬರೆಯುತ್ತಿದ್ದುದು ಇಂಗ್ಲಿಷಿನಲ್ಲಿ.

ಅದರ ಅನುವಾದ ಇಂಡಿಯನ್ ಎಕ್ಸ್ಪ್ರೆಸ್ ಜತೆಗೆ ‘ಕನ್ನಡಪ್ರಭ’ದಲ್ಲೂ ಪ್ರಕಟವಾಗುತ್ತಿತ್ತು. ಆದರೆ ಫೋಟೋ ಮಾತ್ರ ಇಲ್ಲ. ನಾನು ‘ಕನ್ನಡ ಪ್ರಭ’ದ ಸಂಪಾದಕನಾದಾಗ, ಆರಂಭದಲ್ಲಿ ಜಾರ್ಜ್ ಅಂಕಣದ ಜತೆ ಅವರ ಫೋಟೋವನ್ನು ಪ್ರಕಟಿಸಿದ್ದೆ. ಸೋಮವಾರ ನಾನು ಕಚೇರಿಗೆ ಬರುತ್ತಿದ್ದಂತೆ, ನನ್ನ ಟೇಬಲ್ ಮೇಲೆ ಜಾರ್ಜ್ ಲೆಟರ್ ಹೆಡ್‌ನಲ್ಲಿ ಅವರ ಹಸ್ತಾಕ್ಷರವಿರುವ ಸಣ್ಣ ಟಿಪ್ಪಣಿ ಇತ್ತು – ‘ಯಾವ ಕಾರಣಕ್ಕೂ ನನ್ನ ಅಂಕಣದೊಂದಿಗೆ ನನ್ನ ಫೋಟೋ ಪ್ರಕಟವಾಗಕೂಡದು. ನನ್ನ ಅನುಮತಿ ಇಲ್ಲದೇ ನನ್ನ ಫೋಟೋ ಹಾಕಿದ್ದೇಕೆ?’ ಅದಾಗಿ ಹತ್ತು ನಿಮಿಷ ಗಳ ಬಳಿಕ.. ಇಂಟರ್‌ಕಾಮ್‌ನಲ್ಲಿ ಜಾರ್ಜ್ ಮಾತಾಡುತ್ತಿದ್ದರು.

‘ನನ್ನ ಫೋಟೋ ಹಾಕಿದ್ದೇಕೆ?’ ಎಂದು ಕೇಳಿದರು. ನಾನು ಸಮಜಾಯಿಷಿ ನೀಡಿದೆ. ಆದರೆ ಆಸಾಮಿ ಕೇಳಬೇಕಲ್ಲ. ‘ಅಂಕಣಕಾರ ಗಂಡಸೋ, ಹೆಂಗಸೋ, ಶಂಡನೋ, ಭಂಡನೋ, ಲಕ್ಷಣವಂತನೋ, ಅನಾಮಧೇಯನೋ, ಮುಖೇಡಿಯೋ ಎಂಬುದಾದರೂ ಓದುಗರಿಗೆ ತಿಳಿಯಬೇಡವೇ, ಅದಕ್ಕಾಗಿ ಫೋಟೋ ಬೇಕಲ್ಲ, ಸಾರ್’ ಎಂದು ವಾದಿಸಿದೆ. ಆದರೆ ಜಾರ್ಜ್ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ‘ಅಂಕಣಕಾರರ ಫೋಟೋ ಪ್ರಕಟಿಸುವುದು ನಿಮ್ಮ ಬ್ರಾಂಡ್ ಆಫ್ ಜರ್ನಲಿಸಂ ಆದರೆ, ನನ್ನ ಅಂಕಣವನ್ನು ಮುಂದಿನ ವಾರದಿಂದ ತೆಗೆದುಕೊಳ್ಳಬೇಡಿ. ಈ ವಿಷಯದಲ್ಲಿ ಚರ್ಚೆ ಬೇಡ’ ಎಂದು ಫೋನಿಟ್ಟು ಬಿಟ್ಟರು. ಈ ವಿಷಯದಲ್ಲಿ ನಾನೇ ಮಣಿದೆ. ಅವರ ಫೋಟೋ ಇಲ್ಲದೇ ಅಂಕಣ ಮುಂದುವರಿಯಿತು. ಕಳೆದ ವಾರ ಅವರು ‘ಶುಭ ವಿದಾಯ’ ಹೇಳಿದಾಗಲೇ, ಕೊನೆಯ ಬಾರಿಗೆ ‘ಕನ್ನಡ ಪ್ರಭ’ದಲ್ಲಿ ಅವರ ಫೋಟೋ ಪ್ರಕಟವಾಗಿದ್ದು!

ಜಾರ್ಜ್ ಆ ವಿಷಯದಲ್ಲಿ ಅಷ್ಟು ಕಠೋರ, ಜಿಗುಟು. ಬರಹಗಾರ ಅeತನಾಗಿರಬೇಕು, ಆತ ತನ್ನ ವೈಯಕ್ತಿಕತೆಯನ್ನು, ಖಾಸಗಿತನವನ್ನು ಮೀರಿ ಪ್ರದರ್ಶಿಸಿಕೊಳ್ಳಕೂಡದು, ಆತನಿಗೆ ಪ್ರೈವಸಿ ಬಹಳ ಮುಖ್ಯ, ಕಾರಣ ಆತ ರಾಜಕಾರಣಿಯಲ್ಲ, ಬರಹಗಾರ. ಹೀಗಿರುವಾಗ
ಅಂಕಣಕಾರನಿಗೇಕೆ ಬೇಕು ಫೋಟೋ ಕೊಂಬು ಎಂಬುದು ಅವರ ವಾದವಾಗಿತ್ತು. ಹೀಗಾಗಿ ಜಾರ್ಜ್ ಯಾವ ವೇದಿಕೆಯಲ್ಲೂ ಕಾಣಿಸಿ ಕೊಂಡವರಲ್ಲ. ಎಲ್ಲೂ ಭಾಷಣ ಮಾಡಿದವರಲ್ಲ. ಅಪ್ಪಿತಪ್ಪಿ ಮಾತಾಡಲೇಬೇಕಾದ ಅನಿವಾರ್ಯ ಬಂದಾಗ, ತಮ್ಮ ಫೊಟೋ ಪತ್ರಿಕೆ ಗಳಲ್ಲಿ ಪ್ರಕಟವಾಗದಂತೆ ನೋಡಿಕೊಂಡರು. ಹಾಗೆ ವರದಿಯೂ. ಹಿಂದೊಮ್ಮೆ ನಾನು ಅವರನ್ನು ನನ್ನ ಪುಸ್ತಕ ಬಿಡುಗಡೆಗೆ ಆಹ್ವಾನಿಸಿ ದಾಗಲೂ, ‘ಭಾಷಣ ಮಾಡುವುದಾದರೆ ಬೇರೆಯವರನ್ನು ಕರೆಯಿರಿ.

ನಾನು ಬರ್ತೇನೆ, ಆದರೆ ಭಾಷಣ ಮಾಡುವುದಿಲ್ಲ. ನಾನು ಪತ್ರಕರ್ತ, ಭಾಷಣಕಾರನಲ್ಲ. ನಾನು ಅಕ್ಷರಗಳ ಮೂಲಕವೇ ಮಾತಾಡು ವವನು’ ಎಂದಿದ್ದರು. ಜಾರ್ಜ್ ಭಾಷಣ ಮಾಡಿದ್ದನ್ನು ಕೇಳಿಸಿಕೊಂಡವರಿಲ್ಲ. (ಮಾತಾಡಿದರೆ ತಾನೇ ಕೇಳಿಸಿಕೊಳ್ಳುವುದು?) ಹಾಗಂತ ಅವರು ಒಳ್ಳೆಯ ಮಾತುಗಾರರು, ಒಳ್ಳೆಯ ಹರಟೆಕೋರರು. ಅವರ ಬರಹ ‘ಕನ್ನಡಪ್ರಭ’ದಲ್ಲಿ ಪ್ರಕಟವಾಗುತ್ತಿದ್ದುದರಿಂದ ಜಾರ್ಜ್ ಕನ್ನಡದಲ್ಲೂ ಚೆನ್ನಾಗಿ ಬರೆಯುತ್ತಾರೆ ಎಂದು ಭಾವಿಸಿದವರಿದ್ದರು. ಆದರೆ ಅವರನ್ನು ನೋಡಿದ್ದೇವೆ ಎಂದು ಹೇಳುವವರು ವಿರಳ. ಪಕ್ಕದಲ್ಲಿಯೇ ಹಾದು ಹೋದರೂ, ಅವರೇ ಜಾರ್ಜ್ ಎಂದು ಗುರುತಿಸಿಕೊಳ್ಳದಷ್ಟು ಖಾಸಗಿತನ, ಸಂಕೋಚವನ್ನು ಕಾಪಾಡಿಕೊಂಡರು. ‘ಇಂಡಿಯನ್ ಎಕ್ಸ್ ಪ್ರೆಸ್’ ಕಚೇರಿಯಲ್ಲಿ ಜಾರ್ಜ್ ಅವರನ್ನು ನೋಡದ ಪತ್ರಕರ್ತರೂ ಇದ್ದರು.

ಅವರು ಯಾವಾಗ ಬರುತ್ತಾರೆ, ಹೋಗುತ್ತಾರೆ, ಇರುತ್ತಾರೆ ಎಂಬುದು ಗೊತ್ತಾಗುತ್ತಿರಲಿಲ್ಲ. ಆದರೆ ಜಾರ್ಜ್ ಆಫೀಸಿನಲ್ಲಿ ಕಾಲಿಟ್ಟರೆ ಸಾಕು,
ಮೋದಿಯವರನ್ನು ಕಂಡ ಬಿಜೆಪಿ ನಾಯಕರ ಥರ, ಇಡೀ ಕಚೇರಿ ಬಾಲಮುದುರಿಕೊಂಡು ಸುಮ್ಮನಾಗುತ್ತಿತ್ತು. ಎಡೆಮೌನ. ಹಾಗಂತ ಅವರು ಅದ್ಯಾವುದನ್ನೂ ನಿರೀಕ್ಷಿಸುತ್ತಿರಲಿಲ್ಲ. ನಾನು ಏಶಿಯನ್ ಕಾಲೇಜ್‌ನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿ ಸೇರಲು ಕಾರಣರಾದವರು ವೈಎನ್ಕೆ ಅವರಂತೆ, ಜಾರ್ಜ್ ಕೂಡ. ಏಶಿಯನ್ ಕಾಲೇಜ್ ಜಾರ್ಜ್ ಅವರ ಕೂಸು. ಪತ್ರಿಕಾ ಸಂಸ್ಥೆ ಮತ್ತು ಪತ್ರಕರ್ತರೇ ಪತ್ರಿಕೋದ್ಯಮ ಶಿಕ್ಷಣ ನೀಡಬೇಕೆಂಬ ಅವರ ಒತ್ತಾಸೆಯ ಫಲವಾಗಿ ಹುಟ್ಟಿಕೊಂಡಿದ್ದು ಆ ಕಾಲೇಜ. ನನ್ನ ಹೆಸರನ್ನು ವೈಎನ್ಕೆ ಸೂಚಿಸಿದಾಗ, ಜಾರ್ಜ್
ನನ್ನನ್ನು ಸುಮಾರು ಎರಡು ಗಂಟೆ ಸಂದರ್ಶನದ ನೆಪದಲ್ಲಿ ಚೆನ್ನಾಗಿ ರುಬ್ಬಿ, ಅರೆದಿದ್ದರು.

ಇಂಥ ಘಾಟಿ ಮನುಷ್ಯನ ಜತೆ ನಿತ್ಯ ಏಗುವುದು ಸಾಧ್ಯವಾ ಎಂದು ನಾನು ಆತಂಕಪಟ್ಟಿದ್ದೆ. ಒಂದು ವೇಳೆ, ಇದೇ ಕಾರಣಕ್ಕೆ ಎಂದಿದ್ದರೆ, ನನ್ನ ಪತ್ರಿಕೋದ್ಯಮ ವೃತ್ತಿಗೆ ನಾನೇ ಚಪ್ಪಡಿಕಲ್ಲು ಎಳೆದುಕೊಳ್ಳುತ್ತಿದ್ದೆ. ಜಾರ್ಜ್ ಗರಡಿಯಲ್ಲಿ ಪಳಗಿದವರು ಎಂದು ಕರೆದುಕೊಳ್ಳುವುದೇ ಒಂದು ಹೆಮ್ಮೆ. ಈ ವಿಷಯದಲ್ಲಿ ನಾನು, ‘ಪಬ್ಲಿಕ್ ಟಿವಿ’ ರಂಗನಾಥ್, ‘ಕನ್ನಡಪ್ರಭ’ದ ಈಗಿನ ಸಂಪಾದಕ ರವಿ ಹೆಗಡೆ, ‘ಎಕನಾಮಿಕ್ ಟೈಮ್ಸ್’ ಪತ್ರಿಕೆಯ ಕೆ.ಆರ್.ಬಾಲಸುಬ್ರಮಣ್ಯ ನಿಜಕ್ಕೂ ಪುಣ್ಯವಂತರು.

ಕನ್ನಡಿಗರಿಗೆ ಜಾರ್ಜ್ ಅವರನ್ನು ಪರಿಚಯಿಸಿದವರು ವೈಎನ್ಕೆ. ಹಾಗೆ ವೈಎನ್ಕೆಯವರನ್ನು ಇಂಗ್ಲಿಷ್ ಸಮೂಹಕ್ಕೆ ಪರಿಚಯಿಸಿದವರು ಜಾರ್ಜ್. ಅವರಿಬ್ಬರೂ ಒಟ್ಟಿಗೆ ಹೊರಟರೆ ಕನ್ನಡ-ಇಂಗ್ಲಿಷ್ ಕೈಹಿಡಿದು ಹೊರಟಂತೆ ಭಾಸವಾಗುತ್ತಿತ್ತು. ನಾನು ಬ್ರಿಟನ್‌ಗೆ ಉನ್ನತ ವ್ಯಾಸಂಗಕ್ಕೆ ಹೋಗಲು ಪ್ರೇರೇಪಿಸಿದವರೂ ಜಾರ್ಜ್ ಅವರೇ. ಆ ದಿನಗಳಲ್ಲಿ ಅವರು ನೀಡಿದ ಬೆಂಬಲ ನನ್ನನ್ನು ಈ ಹಂತದವರೆಗೆ ಕೈಹಿಡಿದು ಕರೆದುಕೊಂಡು ಬಂದಿದೆ. ಯಾವ ಮಾನದಂಡ ಹಿಡಿದರೂ ಜಾರ್ಜ್ ಒಬ್ಬ ಅಪರೂಪದ, ಪಕ್ಕಾ ಕಸುಬಿ.

ಮಹಾನ್ ಕರ್ಮಯೋಗಿ. ಪತ್ರಿಕೆಯ ಜೀವ ಸವೆಸಿದವರು, ಜೀವನ ಕಂಡವರು. ಎಡಿಟಿಂಗ್ ಕುರಿತು ಅವರು ಬರೆದ ಪುಸ್ತಕ ಓದಿ ಕೊಂಡರೂ ಅತ್ಯುತ್ತಮ ಡೆ ಪತ್ರಕರ್ತರಾಗಬಹುದು. ಜಾರ್ಚ್ ಅವರನ್ನು ಭೇಟಿಯಾಗಲೇ ಬೇಕೆಂದಿಲ್ಲ, ಅವರು ಎಲ್ಲಾ ಇದ್ದರೂ ಪ್ರಭಾವಲಯ ಸೃಷ್ಟಿಸುವವರು. ಅವರ ಜತೆ ಗುರುತಿಸಿಕೊಳ್ಳುವುದು, ಅವರ ಶಿಷ್ಯ ಎಂದು ಕರೆಯಿಸುಕೊಳ್ಳುವುದು ಯಾವ ಪತ್ರಕರ್ತ ನಿಗಾದರೂ ದೊಡ್ಡ ಗೌರವ, ಅರ್ಹತೆ. ವೃತ್ತಿಯಲ್ಲಿ ಅವರು ಅಂಥ ಎತ್ತರವನ್ನೇರಿದವರು.

‘ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ತಮ್ಮ ವೃತ್ತಿಸೊಬಗಿನ ದಿನಗಳನ್ನು ಕಂಡ ಜಾರ್ಜ್, ಇಂದಿಗೂ ಮೌಲ್ಯ, ವೃತ್ತಿಪರತೆಯನ್ನೇ ನಂಬಿ ಕೊಂಡು ಬದುಕುತ್ತಿರುವ ಅಪರೂಪದ ಜೀವಿ. ಮೊನ್ನೆ ಪ್ರೆಸ್ ಕ್ಲಬ್ ಚುನಾವಣೆ ಸಂದರ್ಭದಲ್ಲಿ, ಜಾರ್ಜ್ ಜತೆ ಸುಮಾರು ಎರಡು ಗಂಟೆ ಕಾಲ ಕಳೆಯುವ ಅವಕಾಶ ಸಿಕ್ಕಿತ್ತು. ವಯಸ್ಸಾದರೂ ಮುಪ್ಪನ್ನು ಹತ್ತಿರ ಬಿಟ್ಟುಕೊಂಡಿರಲಿಲ್ಲ. ಕೊನೆಯಲ್ಲಿ ತೊಂಬತ್ನಾಲ್ಕರ ಹರೆಯ ದಲ್ಲೂ ಜಾರ್ಜ್ ಸ್ವತಃ ಕಾರನ್ನು ತಾವೇ ಡ್ರೈವ್ ಮಾಡಿಕೊಂಡು ಹೋದರು..! ಕಾರು ಮರೆಯಾಗುವ ತನಕ ನಾನು ನೋಡುತ್ತಾ ಬೆರಗಾಗಿ ನಿಂತಿದ್ದೆ.