ಕವಿತಾ ಭಟ್
ತೆಳ್ಳಗಿರುವ ಹುಡುಗಿಯರು ಮದುವೆಯಾದ ನಂತರ ಅದೇಕೆ ದಪ್ಪಗಾಗುತ್ತಾರೆ? ದಪ್ಪಗಾದವರು ತೆಳ್ಳಗಾಗಲು ಯತ್ನಿಸಿ ದರೂ ಯಶಸ್ಸು ತುಸು ಕಠಿಣ. ಏಕಿರಬಹುದು!
ಮದುವೆಯ ಮೊದಲು ತೆಳ್ಳಗೆ, ಬಳಕುವ ಬಳ್ಳಿಯಂತಿರುವ ಹುಡುಗಿಯರು ಒಂದು ಮಗುವಾಗುತ್ತಲೂ ದಪ್ಪವಾಗಿಬಿಡುತ್ತಾರೆ.
ವರ್ಷಗಳ ನಂತರ ಸಂಬಂಧಿಕರ, ಪರಿಚಯದವರ ಕಣ್ಣಿಗೇನಾದರೂ ಬಿದ್ದರೆ ‘ಅರೇ.. ಮೊದಲಿಗಿಂತ ಗುಂಡು ಗುಂಡಗೆ ಆಗಿದ್ದೀ
ಯಲ್ಲ!’ ಎನ್ನುವ ಮಾತಿನೊಂದಿಗೇ ಮಾತನ್ನು ಆರಂಭಿಸುತ್ತಾರೆ.
ಅವರು ಅತ್ಯಂತ ಸಹಜವಾಗಿ ಆಡಿದ್ದರೂ ನಮಗದು ವ್ಯಂಗ್ಯವೆನ್ನಿಸಿ ಮುಜುಗರವಾಗುತ್ತದೆ. ಮಾರ್ಡನ್ ಡ್ರೆಸ್ ತೊಟ್ಟಾಗ ಅಥವಾ ಚಂದದ ಸೀರೆ ಉಟ್ಟಾಗ ಆತ್ಮೀಯ ಗೆಳತಿಯರು ಸಹ ಎಲ್ಲಾ ಸರಿ ಕಣೇ.. ‘ಒಂದೈದು ಕೆಜಿ ಇಳಿಸಿಬಿಡು ಇನ್ನೂ ಸಖತ್ ಕಾಣ್ತೀಯ’ ಎಂದಾಗಂತೂ ಆ ಕ್ಷಣ ಅಲ್ಲಿಂದ ಮಾಯವಾಗಬೇಕು ಎನ್ನಿಸಿಬಿಡುತ್ತದೆ. ಇನ್ನು ಗಂಡನಂತೂ ನಮ್ಮ ದಪ್ಪದ ಮೇಲೆಯೇ ಜೋಕ್ ಹೊಡೆಯುವಾಗ ಮೈಯೆ ಉರಿದು ಹೋಗುತ್ತದೆ.
ನಿಲುವುಗನ್ನಡಿಯ ಮುಂದೆ ನಿಂತರೆ ಹಾಳಾದ ಕನ್ನಡಿ ಕೂಡ ವಿವಾಹಪೂರ್ವದಲ್ಲಿದ್ದ ಸಪೂರ ಸೊಂಟದ ಸುಂದರಿಯನ್ನೇ ಪ್ರತಿಬಿಂಬಿಸಿ ಅಣುಕಿಸಿ ನಗುತ್ತಿರುತ್ತದೆ. ಜೀನ್ಸ್ ತೊಡುವ ಮನಸಾದರೆ ತೊಡೆಗಳು ಬಿಗಿದು ಕಾಣುತ್ತವೇನೋ ಎಂಬ ಆತಂಕ. ಸ್ಲೀವ್ಲೆಸ್ ಡ್ರೆಸ್ ಹಾಕೋಣವೆಂದರೆ ಪುಟಿದು ಕಾಣುವ ತೋಳುಗಳು ಬೇಸರ ತರಿಸುತ್ತವೆ. ದುಪ್ಪಟ್ಟ ಇಲ್ಲದ ಕುರ್ತಾಗಳನ್ನು ಹಾಕೋಣವೆಂದರೆ ಸೊಂಟದ ಸುತ್ತದ ಬೊಜ್ಜು ಇಣುಕುತ್ತದೆ. ಈ ಎಲ್ಲಾ ರೇಜಿಗೆಳಿಂದಾಗಿ ಬರೀ ಸೀರೆಯನ್ನೋ ಅಥವಾ ದೊಗಳೆ ಚೂಡಿದಾರವನ್ನೋ ಹಾಕಿ ಹೊರಟೆವೆಂದರೆ ನಮ್ಮ ಮನಸ್ಸೇ ಪಿರಿಪಿರಿ ಶುರು ಮಾಡುತ್ತದೆ.
ಹಳೆಯ -ಟೋಗಳನ್ನು ನೋಡುವಾಗಲೆ ಎಷ್ಟು ಹದವಾಗಿ ಇzನಲ್ಲ! ಎಂದಿನಿಂದ ಹೀಗೆ ದಪ್ಪವಾದೆ ಎಂಬ ಹಳಹಳಿಕೆ. ಎರಡ್ಮೂರು ವರ್ಷಗಳ ಹಿಂದಿನ ಬ್ಲೌಸ್ಗಳು, ಇಷ್ಟಪಟ್ಟು ಕೊಂಡ ಡ್ರೆಸ್ಗಳು ಈಗ ಆಗದಿದ್ದಾಗ ಮನಸ್ಸು ಮುದುಡಿಕೊಳ್ಳುತ್ತದೆ. ಹೊರಗೆ ಹೋದಾಗ ಕಣ್ಣ ಮುಂದೆ ಹರಿದಾಡುವ ತೆಳ್ಳನೆಯ ಹೆಣ್ಣುಗಳನ್ನು ಕಂಡಾಗ ಶತಾಯಗತಾಯ ಮೊದಲಿನಂತೆ ಆಗಿಯೇ
ಸಿದ್ಧ ಎಂಬ ತೀರ್ಮಾನ ಮಾಡಿಕೊಳ್ಳುತ್ತೇವೆ.
ತೆಳ್ಳಗಾಗುವ ಸಾಹಸ
ಅಲ್ಲಿಂದ ಶುರುವಾಗುತ್ತದೆ ನೋಡಿ, ಸಪೂರವಾಗುವ ಹರಸಾಹಸ. ದಪ್ಪವಾಗುವಷ್ಟು ಸುಲಭವಾಗಿ ತೆಳ್ಳಗಾಗುವುದು ಕನಸಿನ ಮಾತೇ ಸರಿ. ಕಂಡ ಕಂಡ ಔಷಧಿಗಳನ್ನೆ ಬಳಸಿ ಆರೋಗ್ಯ ಹದಗೆಡಿಸಿಕೊಳ್ಳುವುದು, ಟಿವಿಯಲ್ಲಿ ತೋರಿಸುವ ಬೆಲ್ಟ್ಗಳನ್ನು ಬಿಗಿದುಕೊಳ್ಳುವುದು. ಯೂಟ್ಯೂಬ, ಗೂಗಲ್ ಜಾಲಾಡಿ ಯಾರ ಯಾರದ್ದೇ ಸಲಹೆಗಳನ್ನು ಶ್ರದ್ಧೆಯಿಂದ ಪಾಲಿಸುವುದು.
ಇಷ್ಟದ ತಿಂಡಿಗಳನ್ನು ತ್ಯಜಿಸುವುದು, ಬೋರಿಂಗ್ ಎನ್ನಿಸುವ ಓಟ್ಸ್ ತಿನ್ನುವುದು, ಗ್ರೀನ್ ಟೀಯಂತಹ ಪೇಯಗಳನ್ನೆಲ್ಲ ಕುಡಿಯು ವುದು, ಬೆಳಿಗ್ಗೆ ಬೇಗ ಎದ್ದು ಒಂದಷ್ಟು ಎಕ್ಸಸೈಜ್ ಮಾಡಿ ಹೈರಾಣಾಗುವುದು, ಇದನ್ನೇ ಬಂಡವಾಳವಾಗಿಸಿಕೊಂಡು
ಮೂರು ತಿಂಗಳಲ್ಲಿ ಹತ್ತು ಕೆಜಿ ಇಳಿಸಿ, ಒಂದು ವಾರದಲ್ಲಿ ಮೂರು ಕೆಜಿ ಇಳಿಸಿ ಎಂದೆಲ್ಲ ಹಣ ದೋಚುವವರಿಗೆ ಸುಲಭಕ್ಕೆ ಬಲಿ ಬೀಳುವುದು ಒಂದೇ ಎರಡೇ!
ಇಷ್ಟಾದ ಮೇಲೆ ಕೊಂಚ ತೆಳ್ಳಗಾದೆವೋ ಸರಿ, ಮೈ ತೂಕ ಒಂದು ಔನ್ಸಿನಷ್ಟೂ ಕಡಿಮೆಯಾಗಿಲ್ಲವೆಂದರೆ ಮಾತ್ರ ಜೀವನದ ಬಗ್ಗೆಯೇ ಜಿಗುಪ್ಸೆ ಹುಟ್ಟಿಬಿಡುತ್ತದೆ. ಅಲ್ಲದೆ ‘ತೆಳ್ಳಗಾಗಿರುವುದೇ ಸೌಂದರ್ಯದ ಪ್ರತೀಕವೇ?’ ಎಂಬ ಪ್ರಶ್ನೆ ಹಗಲಿರುಳು ಕಾಡುತ್ತದೆ. ಮೊದಲು, ನಾವು ನೋಡಲು ಸಪೂರವಾಗಿಬೇಕೋ ಅಥವಾ ನಮ್ಮೊಳಗೆ ನಾವು ಹಗುರತನ ಅನುಭವಿಸಬೇಕೋ ಎಂಬ ಪ್ರಶ್ನೆ ಕೇಳಿಕೊಳ್ಳಬೇಕು. ಹಗುರವಾಗಿರಬೇಕು, ಹಗುರವಾಗಿದ್ದೇವೆ ಎನ್ನುವುದಾದರೆ ಹೊರ ನೋಟಕ್ಕೆ ಕಾಣುವ ದೇಹದ ಗಾತ್ರದ ಬಗ್ಗೆ ಅಸ್ಸಲೂ ತಲೆ ಕೆಡಿಸಿಕೊಳ್ಳಬೇಡಿ.
ನಿಮ್ಮ ನಿತ್ಯದ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ತೊಂದರೆ ಇಲ್ಲವೆಂದರೆ, ಎಷ್ಟೇ ಓಡಾಡಿದರೂ ಶ್ರಮದ ಕೆಲಸ ಮಾಡಿದರೂ ಬೇಗನೆ ಸುಸ್ತಾಗುವುದಿಲ್ಲ ಎಂದರೆ, ಯಾವುದೇ ಸುತ್ತಾಟ ಅಲೆದಾಟಕ್ಕೂ ಸೈ ಎನ್ನುವುದಾದರೆ, ಆಲಸ್ಯವಿಲ್ಲದೇ ಹತ್ತಾರು ಚಟು ವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೀರಾದರೆ ನಿಮ್ಮ ದೇಹ ಹಗುರವಾಗಿ, ಆರೋಗ್ಯವಾಗಿದೆ ಎಂದರ್ಥ. ಅದನ್ನು ಮತ್ತಷ್ಟು ತೆಳ್ಳಗಾಗಿಸುವ ಭರದಲ್ಲಿ ಅನಗತ್ಯ ಒತ್ತಡಕ್ಕೆ ಸಿಲುಕಿಸಿ ಅಡ್ಡ ಪರಿಣಾಮ ತಂದುಕೊಳ್ಳಬೇಡಿ.
ಇನ್ನು ನೋಡುವುದಕ್ಕೂ ದಪ್ಪವಿದ್ದು, ಕೊಂಚ ಕೆಲಸ ಮಾಡಿದರೂ ಮಂಡಿ ನೋವು, ಸೊಂಟ ನೋವು, ಆಯಾಸ ಕಂಡರೆ ನಿಮ್ಮ ದೇಹಕ್ಕೆ ಮತ್ತಷ್ಟು ವ್ಯಾಯಾಮ, ಡಯಟ್ ಬೇಕು. ಇಡೀ ದಿನ ಮನೆಯಲ್ಲಿ ಬಿಡುವಿಲ್ಲದೇ ಕೆಲಸ ಮಾಡಿ ದಣಿದಾಗಲೂ ಈ ಅನಗತ್ಯ ಬೊಜ್ಜು ಅದ್ಯಾಕಾದರೂ ಸೇರಿಕೊಳ್ಳುತ್ತದೋ ಎಂಬ ಪ್ರಶ್ನೆ ಎಲ್ಲರಿಗೂ ಕಾಡಿಯೇ ಇರುತ್ತದೆ. ಹಾಗೆ ಮನೆ ಕೆಲಸ ಮಾಡಿಯೇ ಸಪೂರವಾಗಬಹುದಾಗಿದ್ದರೆ, ನಾವೆಲ್ಲಾ ಝಿರೋ ಸೈಜಿನ ನಟಿಯರನ್ನೂ ಹಿಂದಿಕ್ಕಿ ಬಿಡುತ್ತಿದ್ದೆವು.
ಮತ್ತು ಅವರೆ ಶೂ ಧರಿಸಿ ಜಿಮ್ಮಿನಲ್ಲಿ ಕಸರತ್ತು ಮಾಡುವುದನ್ನು, ಒಂದು ಬೌಲ್ ಸಲಾಡಿನಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳುವು ದನ್ನು ಬಿಟ್ಟು ಅಡುಗೆ ಮನೆ ಸೇರುತ್ತಿದ್ದರು! ಕೆಲಸ ಮಾಡುವುದೇ ಬೇರೆ, ಎಲ್ಲಾ ಅವಯವಗಳು ಚಟುವಟಿಕೆಯಿಂದಿರುವಂತೆ ದೇಹಕ್ಕೆ ಕೆಲಸ ಕೊಡುವುದೇ ಬೇರೆ. ವ್ಯಾಯಾಮ ಮಾಡುವುದು ಸಹ ಇದನ್ನೇ. ಹೀಗಾಗಿ ದಪ್ಪ ಇರುವವರು ದೈಹಿಕ ವ್ಯಾಯಾಮದ ಕಡೆ ಕೊಂಚ ಒತ್ತು ಕೊಟ್ಟರೆ ಸಾಕು.
ವಂಶವಾಹಿನಿ ಪ್ರಭಾವ?
ಮದುವೆ, ಹೆರಿಗೆ, ಆಪರೇಷನ್, ಹಾರ್ಮೋನ್ ಇಂಬ್ಯಾಲೆನ್ಸ್, ಹೊರಗೂ ದುಡಿಯುವ ಹೆಣ್ಣಾದರೆ ಸಮಯಕ್ಕೆ ಸರಿಯಾಗಿ ತಿನ್ನಲಾರದ, ವೈಯಕ್ತಿಕ ಕಾಳಜಿ ಮಾಡಿಕೊಳ್ಳಲಾಗದ ಗಡಿಬಿಡಿ ಈ ಎಲ್ಲಾ ಬದಲಾವಣೆಯಿಂದಾಗಿ ಹೆಣ್ಣು ಮಕ್ಕಳ ದೇಹದಲ್ಲಿ
ವ್ಯತ್ಯಯವಾಗುವುದು ಪ್ರಕೃತಿ ಸಹಜ. ಕೆಲವರು ಎರಡು ಮಕ್ಕಳಾದ ನಂತರವೂ, ಅದೇನೇ ತಿಂದುಂಡು ಮಾಡಿದರೂ ತೆಳ್ಳಗೇ ಇರುತ್ತಾರೆ. ಮತ್ತೆ ಬಹುತೇಕರು ಆಹಾರದ ವಾಸನೆಗೂ ದಪ್ಪವಾಗಿಬಿಡುತ್ತಾರೆ!
ಅದು ಅವರವರ ವಂಶವಾಹಿಯ ಬಳುವಳಿಯೂ ಆಗಿರಬಹುದು. ಅಲ್ಲದೆ ಜೀರ್ಣಶಕ್ತಿ ಸಹ ಆಯಾ ಮಹಿಳೆಯರ ತೂಕವನ್ನು ನಿರ್ಧರಿಸಿಬಿಡುತ್ತದೆ. ಆದಾಗ್ಯೂ ಹೆಚ್ಚು ತರಕಾರಿಯನ್ನು ಬಳಸಿ ಮಾಡುವ ಆಹಾರ ಸೇವಿಸುವುದು, ಹೊರಗಿನ ತಿನಿಸು ಕಡಿಮೆ
ಮಾಡುವುದು, ಮುಂಜಾನೆಗೆ ಒಂದರ್ಧ ಗಂಟೆ ಯೋಗ, ಸಾಧ್ಯವಾದರೆ ಸಂಜೆಗೊಂದು ವಾಕ್ ಇದ್ದರೆ ಒಳ್ಳೆಯದು. ಅದಕ್ಕೆ ಸಮಯ ಇಲ್ಲದಿದ್ದರೆ ತೊಂದರೆ ಇಲ್ಲ. ದಪ್ಪ ಎನ್ನುವ ಭಾವನೆಯನ್ನು ಮನಸ್ಸಿನಿಂದ ತೆಗೆದು ನೋಡಿ, ಅರ್ಧ ತೆಳ್ಳಗಾಗಿರುತ್ತೀರಿ.
ಬೇರೆಯವರ ಮಾತುಗಳಿಗೆ ಕಿವಿಗೊಡದೇ,ಯಾವ ಬಟ್ಟೆ ನಿಮಗೆ ಕಂಫರ್ಟ್ ಎನ್ನಿಸುತ್ತದೋ ಅವುಗಳನ್ನು ಆತ್ಮವಿಶ್ವಾಸ
ದಿಂದ ತೊಟ್ಟು ಬಿಡಿ.
ತಿನ್ನಬೇಕು ಎನ್ನಿಸುವುದನ್ನು ಅಳುಕಿಲ್ಲದೇ ತಿಂದು ಬಿಡಿ. ಅಷ್ಟಕ್ಕೂ ದಪ್ಪ ಇರುವುದರಿಂದ ಆಗುವುದಾದರೂ ಏನು? ಹೆಚ್ಚೆಂದರೆ ಮೊದಲಿನಂತೆ ಮಿಡಿಯಮ್ ಸೈಜ್ ಬಿಟ್ಟು, ಲಾರ್ಜ್ ಅಥವಾ ಇನ್ನೂ ದೊಡ್ಡ ಸೈಜ್ ಬಟ್ಟೆ ಬೇಕಾಗಬಹುದು ಅಷ್ಟೇ ತಾನೇ? ಅದಕ್ಯಾಕೆ ಚಿಂತೆ. ಹೆಣ್ಣೆಂದರೆ ಒಂದು ಸುಂದರ ಅನುಭೂತಿ. ಅವಳು ಹೇಗಿದ್ದರೂ ಚಂದವೇ.