Wednesday, 5th October 2022

ಕಾಯಕದಿಂದ ಜನನಾಯಕ

ಅದು 2019ರ ಜನವರಿ 22. ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ದಿನ, ಮರೆಯಲಾಗದ ಕ್ಷಣ. ಹೌದು ಆ ದಿನ ಚಂದ್ರಯಾನ 2ರ ಉಡಾವಣೆ ಇತ್ತು. ಈ ಕಾರ್ಯಕ್ರಮಕ್ಕೆ ಯಾಕಿಷ್ಟು ಮಹತ್ವ ಎಂದರೆ ಚಂದ್ರನ ಕತ್ತಲಿನ ಭಾಗದಲ್ಲಿ ರೋವರ್ ಮತ್ತು ಲ್ಯಾಂಡರ್ ಇಳಿಯುವ ಮೊದಲ ಯತ್ನ ಅದಾಗಿತ್ತು.

ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಲು ಬೆಂಗಳೂರಿನ ಇಸ್ರೊ ಕೇಂದ್ರಕ್ಕೆ ಆಗಮಿಸಿದ್ದರು. ಉಡಾವಣೆಯೇನೋ ಸುಗಮವಾಗಿಯೇ ಆಗಿತ್ತು. ಇನ್ನೇನು ಚಂದ್ರನ ಅಂಗಳದ ಮೇಲೆ ರೋವರ್ ಇಳಿಯಬೇಕಿತ್ತು. ಅಷ್ಟರಲ್ಲೇ, ಒಂದು ಮೈಲು ಅಂತರದಲ್ಲಿ ಸಂಪರ್ಕ ಕಡಿದುಹೋಗಿತ್ತು. ಅಂದುಕೊಂಡಂತೆ ಅದು
ಲ್ಯಾಂಡ್ ಆಗಲೇ ಇಲ್ಲ. ಅಲ್ಲಿ ನೆರೆದಿದ್ದ ವಿಜ್ಞಾನಿಗಳಿಗೆಲ್ಲ ಬೇಸರ, ನಿರಾಶೆ, ಹತಾಶೆ.

ಇಸ್ರೊ ಅಧ್ಯಕ್ಷ ಶಿವನ್ ಅವರಂತೂ ಬಿಕ್ಕಿ ಬಿಕ್ಕಿ ಅಳತೊಡಗಿದರು. ಅವರಿಂದ ಆ ವೈಫಲ್ಯದ ದುಃಖ ತಡೆಯಲಾಗಲಿಲ್ಲ. ಕಣ್ಣೀರಿಡುತ್ತಲೇ ಈ ಸುದ್ದಿಯನ್ನು ಪ್ರಧಾನಿಗೆ ಅರುಹಿದರು. ಮರುಕ್ಷಣ ಮೌನಕ್ಕೆೆ ಜಾರಿದರು. ಆಗ ಮೋದಿ ಅವರ ನೆರವಿಗೆ ಬಂದರು. ಅವರ ಕೈಹಿಡಿದರು. ಭುಜ ನೇವರಿಸಿದರು. ಬೆನ್ನು ಸವರಿದರು. ಶಿವನ್ ಕಣ್ಣೀರಿಗೆ ಹೆಗಲಾದರು. ಇದು ಒಂದು ಪ್ರಸಂಗವಾದರೆ, 2014ರ ಮಂಗಳ ಯಾನ ಯಶಸ್ವಿಯಾದ ಸಂದರ್ಭಕ್ಕೂ ಪ್ರಧಾನಿ ಸಾಕ್ಷಿಯಾಗಿದ್ದರು. ಆಗ ಮಾತನಾಡಿದ್ದ ಪ್ರಧಾನಿ ಈ ಅದ್ಭುತ ಯಶಸ್ಸಿಗಾಗಿ ವಿಜ್ಞಾನಿಗಳನ್ನು ಅಭಿನಂದಿಸಿದರು. ಆದರೆ ‘ಒಂದೊಮ್ಮೆ ಈ ಕಾರ್ಯಕ್ರಮ ಫಲವಾಗಿದ್ದರೂ ನಾನು ನಿಮ್ಮ ಜತೆಗೆ ಇರುತ್ತಿದ್ದೆ’ ಎಂದೂ ಆ ಸಂದರ್ಭದಲ್ಲಿ ಹೇಳಿದ್ದರು. ಅಂದು ಆಡಿದ ಮಾತನ್ನು 2019ರಲ್ಲಿ ಚಂದ್ರಯಾನ ವಿಫಲವಾದ ಸಂದರ್ಭದಲ್ಲಿ ಮಾಡಿ ತೋರಿಸಿದ್ದರು. ಇದು ಪ್ರಧಾನಿ ಮೋದಿ ಅವರ ಧೀಮಂತ ನಾಯಕತ್ವಕ್ಕೆ ಒಂದು ನಿದರ್ಶನ.
ಇಂಥ ಹತ್ತು ಹಲವು ನಾಯಕತ್ವ ಗುಣಗಳಿಗೆ ಅವರು ಜೀವಂತ ಉದಾಹರಣೆಯಾಗಿದ್ದಾರೆ. ಅವರ ಒಂದೊಂದು ನಿರ್ಧಾರಗಳಲ್ಲಿ, ಹೆಜ್ಜೆಯಲ್ಲಿ, ಕ್ರಮದಲ್ಲಿ ಭಿನ್ನ ವಿಭಿನ್ನ ರೀತಿಯ ನಾಯಕತ್ವ ಗುಣಗಳ ಅನಾವರಣವಾಗುತ್ತದೆ.

2014ರಲ್ಲಿ ಮೊದಲ ಬಾರಿಗೆ ಬಿಜೆಪಿ ಭರ್ಜರಿಯಾಗಿ ಗೆದ್ದು ಸರಕಾರ ರಚನೆಗೆ ಮುಂದಾದ ಸಂದರ್ಭ. ಆಗ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮ ಇತ್ತು. ಆಗ ಅವರು ಮಾಡಿದ್ದೇನು ಗೊತ್ತೆ? ಎಲ್ಲ ಸಾರ್ಕ್ ದೇಶಗಳ ಮುಖ್ಯಸ್ಥರನ್ನು ಸಮಾರಂಭಕ್ಕೆ ಆಹ್ವಾನಿಸಿದರು. ಇದನ್ನು ಕಂಡು ಇಡೀ ವಿಶ್ವ ಸಮುದಾಯ ಒಂದು ಕ್ಷಣ ಅಚ್ಚರಿಗೊಂಡಿತ್ತು. ಹುಬ್ಬೇರಿಸಿತ್ತು.
ಪ್ರಧಾನಿಯಾದ ಬಳಿಕ ಸಾಮಾನ್ಯವಾಗಿ ತಮ್ಮ ವರ್ಚಸ್ಸು ಪ್ರದರ್ಶನಕ್ಕೆ ಹಾಗೂ ವೃದ್ಧಿಗೆ ಅಮೆರಿಕದಂಥ ದೊಡ್ಡ ದೇಶಕ್ಕೆ ಮೊದಲು ಹೋಗುವುದು ವಾಡಿಕೆ. ಆದರೆ ಮೋದಿ ಅವರು ಪ್ರಧಾನಿಯಾದ ಬಳಿಕ ತಮ್ಮ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದು ಪಕ್ಕದ ಭೂತಾನ್‌ಗೆ. ಅನಂತರ ನೇಪಾಳಕ್ಕೆ. ಅಂದರೆ ನೆರೆಹೊರೆಯವರೊಡನೆ ಸ್ನೇಹ ಸಂಬಂಧ ವೃದ್ಧಿಸಲು ಮೊದಲ ಆದ್ಯತೆ ನೀಡಿದರು.

ಹಾಗೆಂದು ಅವರು ಬಲಾಢ್ಯ ರಾಷ್ಟ್ರಗಳನ್ನು ಕಡೆಗಣಿಸಿದರು ಎಂದಲ್ಲ. ಗುಜರಾತ್ ಸಿಎಂ ಆಗಿದ್ದಾಗ ಅಮೆರಿಕ ಭೇಟಿಗೆ ಅಲ್ಲಿನ
ಸರಕಾರ ವೀಸಾ ನೀಡಿರಲಿಲ್ಲ. ಆದರೆ ಅದ್ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅಮೆರಿಕಕ್ಕೆ ಹಲವಾರು ಬಾರಿ ಹೋದರು. ಅಲ್ಲಿ ಅವರ ’ಹೌಡಿ ಮೋದಿ’ ಕಾರ್ಯಕ್ರಮ ಸೂಪರ್ ಹಿಟ್ ಆಯಿತು. ಇದು ಮಾತ್ರವಲ್ಲದೆ ರಷ್ಯಾ, ಫ್ರಾನ್ಸ್‌, ಬ್ರಿಟನ್ ಜಪಾನ್
ಮೊದಲಾದ ಪ್ರಮುಖ ರಾಷ್ಟ್ರಗಳೊಡನೆ ಒಳ್ಳೆಯ ಸ್ನೇಹ ಸಂಪಾದಿಸಿದರು.

ಸಕಾಲಿಕ ನಿರ್ಧಾರಗಳು: ನಿರ್ಧಾರಗಳನ್ನೇ ತೆಗೆದುಕೊಳ್ಳುವುದಿಲ್ಲ, ಸಮಸ್ಯೆಗಳು ತಾವೇ ತಾವಾಗಿ ಕೊನೆಗೆ ಹೇಗೋ ಬಗೆಹರಿಯುತ್ತವೆ ಎಂಬ ಆರೋಪ ಮಾಜಿ ಪ್ರಧಾನಿ ದಿ.ನರಸಿಂಹರಾವ್ ಅವರ ಮೇಲಿತ್ತು. ಆದರೆ ಮೋದಿ ಅವರು ಸಕಾಲಿಕವಾಗಿ, ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಷ್ಣಾತರು. ಕರೋನಾ ಸಂದರ್ಭದಲ್ಲಿ ಇಡೀ ಜಗತ್ತು ಹಿಂದೆ ಮುಂದೆ ನೋಡುತ್ತಿರುವಾಗ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದರು. ಆರ್ಥಿಕ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಿಸಿದರು.

ಯುಕ್ತ ನಿರ್ಧಾರಗಳು: ದೇಶವನ್ನು ಕಾಡುತ್ತಿರುವ ಕೆಲವು ಸಮಸ್ಯೆಗಳು ಲಾಗಾಯ್ತಿನಿಂದಲೂ ಹಾಗೆಯೇ ಇವೆ. ಅನಕ್ಷರತೆ, ಬಡತನ, ನಿರುದ್ಯೋಗ ಇತ್ಯಾದಿ. ಆದರೆ ಆ ಪೈಕಿ ಮೋದಿಯವರು ಆದ್ಯತೆ ನೀಡಿದ್ದು ನೈರ್ಮಲ್ಯಕ್ಕೆೆ. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸ್ವಚ್ಛ ಭಾರತ ಅಭಿಯಾನಕ್ಕೆೆ ಚಾಲನೆ ನೀಡಿದರು. ಮಾತ್ರವಲ್ಲ, ಅದನ್ನು ತಪಸ್ಸಿನಂತೆ ಜಾರಿಗೆ ತಂದರು.

*ಜಮ್ಮು ಮತ್ತು ಕಾಶ್ಮೀರಕ್ಕೆೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿ ರದ್ದು ಪಡಿಸುವುದೂ ಮತ್ತೊಂದು ಇತಹದೇ ನಿರ್ಧಾರ.
*ತ್ರಿವಳಿ ತಲಾಖ್ ರದ್ದುಪಡಿಸಿದ್ದು ಮತ್ತೊಂದು ಜನಪ್ರಿಯವಲ್ಲದ ನಿರ್ಧಾರ.
*ಪೌರತ್ವ ಕಾಯಿದೆಗೆ ತಿದ್ದುಪಡಿಯೂ ಇದೇ ಮಾದರಿಯ ನಿರ್ಧಾರವಾಗಿತ್ತು.
*ಜಿಎಸ್‌ಟಿ ಮತ್ತಿತರ ವಿಚಾರಗಳಲ್ಲೂ ಅವರದ್ದು ಇದೇ ಥರದ ಕಠಿಣ ನಿಲುವು.

ವಿಶಿಷ್ಟ ನಿರ್ಧಾರಗಳು
ಲಾಕ್‌ಡೌನ್ ಸಂದರ್ಭದಲ್ಲಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತ ಕರೋನಾ ವಾರಿಯರ್ಸ್ ಎಂಬ ಪದ ಬಳಸಿ ಅವರ ಕೊಡುಗೆಯನ್ನು ಹೊಗಳಿದರು. ಅಲ್ಲದೆ ಅವರ ಗೌರವಾರ್ಥ ಗಂಟೆ, ಜಾಗಟೆ ಬಡಿಯುವ, ಚಪ್ಪಾಳೆ ತಟ್ಟುವ , ದೀಪ ಬೆಳಗಿಸುವ, ಸ್ವಾತಂತ್ರ್ಯೋತ್ಸವ ಸಮಯದಲ್ಲಿ ಅವರನ್ನು ಗೌರವಿಸುವಂತಹ ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡರು. ಇದಕ್ಕೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ದೊರಕಿತು. ಮೋದಿ ನಾಯಕತ್ವವನ್ನು ದೇಶ ಸಂಪೂರ್ಣ ಒಪ್ಪಿದೆ ಎಂದು ಆಗಲೇ ಜಗತ್ತಿಗೆ ಗೊತ್ತಾಯ್ತು. ಸ್ವಾವಲಬನೆಗೆ ಕೂಡ ಪ್ರಧಾನಿ ಭಾರಿ ಒತ್ತು ನೀಡಿದ್ದಾರೆ. ಇದರ ಫಲವಾಗಿ ಆತ್ಮನಿರ್ಭರ್, ಮೇಕ್ ಇನ್ ಇಂಡಿಯಾ,
ಸ್ಟ್ಯಾಂಡ್ ಅಪ್ ಇಂಡಿಯಾ ಮೊದಲಾದ ಹೊಸ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಇದರ ಜತೆಗೆ ಮುದ್ರಾ ಯೋಜನೆ, ಉರ್ಜಾ, ಉಡಾನ್, ಕೃಷಿ ಸಮ್ಮಾನ್ ಹೀಗೆ ಹತ್ತು ಹಲವು ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

ಕಾಯಕವೇ ಕೈಲಾಸ
ಮೋದಿ ಅವರ ಅತ್ಯಂತ ವಿಶೇಷ ಮತ್ತು ಮೆಚ್ಚತಕ್ಕ ಗುಣ ಎಂದರೆ ಅವರ ಕಾರ‌್ಯವೈಖರಿ. ಅವರು ಗುಜರಾತ್  ಮುಖ್ಯಮಂತ್ರಿಯಾಗಿ. ಈಗ ಪ್ರಧಾನಿಯಾದ ಬಳಿಕ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ದಿನದ 18 ಗಂಟೆ ಕೆಲಸ ಮಾಡುತ್ತಾರೆ. ಅಲ್ಲದೆ ಕೆಲಸವನ್ನು ಯಾರಿಗೋ ವಹಿಸಿ ಸುಮ್ಮನಾಗುವುದಿಲ್ಲ. ಬದಲಾಗಿ ಅವರೇ ಮೇಲ್ವಿಚಾರಣೆ ಮಾಡುತ್ತಾರೆ.  ಅಲ್ಲದೆ, ಸಹೋದ್ಯೋಗಿಗಳಿಗೂ ಜವಾಬ್ದಾರಿ ವಹಿಸುತ್ತಾರೆ. ಅದಕ್ಕಾಗಿಯೇ, ಗುಜರಾತ್ ಸರಕಾರದ ಸಾಧನೆಗಳ ಬಗ್ಗೆ ಆಗಾಗ ಹೊಗಳಿಕೆಯ ಮಾತುಗಳು ಕೇಳಿಬರುವುದು. ಇದು ಗುಜರಾತ್ ಮಾಡೆಲ್ ಎಂದೇ ಜನಜನಿತ. ಸಮಯ ವ್ಯರ್ಥ ಮಾಡಬಾರದು ಎಂದು ರಾತ್ರಿ ಪ್ರಯಾಣ (ವಿಶೇಷವಾಗಿ ವಿದೇಶ ಪ್ರಯಾಣ) ಮಾಡುತ್ತಾರೆ. ಅಲ್ಲದೆ ಒಟ್ಟಿಗೇ ಹಲವು ದೇಶಗಳಿಗೆ ಭೇಟಿ ಕೊಡುತ್ತಾರೆ. ಇದು ಅವರ ಕಾರ್ಯತತ್ಪರತೆಗೆ ಹಿಡಿದ ಕನ್ನಡಿ.

ನೇಶನ್ ಫಸ್ಟ್ ಪಾಲಿಸಿ
ಜನಪ್ರಿಯತೆ ಉಳಿಸಿಕೊಳ್ಳಲು ದೇಶದ ಹಿತ ಬಲಿಕೊಡುವ ನಿರ್ಧಾರಗಳನ್ನು ಅವರು ಕೈಗೊಳ್ಳಲಿಲ್ಲ. ಇದಕ್ಕೆ ಸಾಕಷ್ಟು
ಉದಾಹರಣೆಗಳು ಕಣ್ಣೆೆದುರಿಗೇ ಇವೆ. ನೋಟು ಅಮಾನ್ಯೀಕರಣವು ಇಂತಹ ಅತಿ ಕಠಿಣ ನಿರ್ಧಾರ. ಹೌದು. ಅಂಥದೊಂದು ನಿರ್ಧಾರ ಕೈಗೊಳ್ಳುವುದು ಸುಲಭವಲ್ಲ. ಅದಕ್ಕೆ ತುಂಬಾ ಧೈರ್ಯ ಬೇಕಾಗುತ್ತದೆ. ಆದರೆ ಮೋದಿ ಅಂಜಲಿಲ್ಲ, ಅಳುಕಲಿಲ್ಲ. ಈ ಕ್ರಮದ ಬಗ್ಗೆ ಸಾಕಷ್ಟು ವಿರೋಧ, ಅಪಸ್ವರ ಕೇಳಿಬಂದಿದ್ದು ನಿಜ. ಇಂತಹ ಜನವಿರೋಧಿ ನಿರ್ಧಾರ ಕೈಗೊಳ್ಳದಿರುವದು ಅವರಿಗೆ ಇರಲಿಲ್ಲ. ಆದರೆ ಅವರದು ನೇಶನ್ ಫಸ್ಟ್‌ ಪಾಲಿಸಿ.

ಸರ್ಜಿಕಲ್ ಸ್ಟ್ರೈಕ್
ಮೇಲೆ ತಿಳಿಸಿರುವ ದಿಟ್ಟ ನಿರ್ಧಾರಗಳಾದರೆ ಕೆಲವೊಮ್ಮೆ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯ ಮತ್ತು ಅತ್ಯಗತ್ಯ
ಎಂಬುದನ್ನು ತಮ್ಮ ಕ್ರಮದ ಮೂಲಕ ತೋರಿಸಿಕೊಟ್ಟಿದ್ದಾರೆ ಮೋದಿ. ಚೀನಾ ಸೈನಿಕರು ಗಡಿಯಲ್ಲಿ ನಮ್ಮ ಯೋಧರ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ತಕ್ಷಣ ಕಾರ್ಯಪ್ರವೃತ್ತವಾದ ಸರಕಾರ ಆ ದೇಶದಿಂದ ಹಲವು ವಸ್ತುಗಳ ಆಮದನ್ನು ಮುಲಾಜಿಲ್ಲದೆ ನಿಲ್ಲಿಸಿತು. ಅಲ್ಲದೆ 200ಕ್ಕೂ ಹೆಚ್ಚಿನ ಸಂಖ್ಯೆೆಯ ಚೀನಾ ಆ್ಯಪ್‌ಗಳನ್ನು ನಿಷೇಧಿಸಿತು. 2019ರ ಫೆಬ್ರವರಿಯಲ್ಲಿ ನಡೆದ ಘಟನೆ ದೇಶಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ಜಮ್ಮುವಿನ ಶ್ರೀನಗರ ಹೈವೇಯಲ್ಲಿ ತೆರಳುತ್ತಿ ದ್ದ ಭಾರತೀಯ ಯೋಧರ ವಾಹನಗಳ ಮೇಲೆ ಭಯೋತ್ಪಾದಕ ದಾಳಿ ನಡೆಯಿತು. ಇದರಲ್ಲಿ ಸಿಆರ್‌ಪಿಎಫ್‌ನ 46 ಯೋಧರು ಮೃತಪಟ್ಟರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಮೋದಿ ಪ್ರತಿಕಾರಕ್ಕೆ ಯೋಜನೆ ರೂಪಿಸಿದರು. ಇದರ ಫಲವಾಗಿ ನಡೆದಿದ್ದೇ ಬಾಲಾಕೋಟ್‌ನ ಉಗ್ರರ ನೆಲೆಗಳ ಮೇಲೆ ನಡೆದ ವಾಯುದಾಳಿ. ಇದು ಸರ್ಜಿಕಲ್ ಸ್ಟ್ರೈಕ್ ಎಂದೇ ಖ್ಯಾತವಾಯಿತು.

ಇದು ಅತ್ಯಂತ ಗುಪ್ತ ಮತ್ತು ಯೋಜಿತ ಕಾರ್ಯಾಚರಣೆಯಾಗಿತ್ತು. ಆ ಕಾರ್ಯಾಚರಣೆ ನಡೆದ ರಾತ್ರಿ ಸ್ವತ: ಮೋದಿ ವಾರ್ ರೋಮ್‌ನಲ್ಲಿ ಕುಳಿತು ಅದನ್ನು ವೀಕ್ಷಿಸಿದರು.

ಎ.ಸಿ. ರೂಮಿನ ನಾಯಕನಲ್ಲ ಮೋದಿ ಅವರು ಕೇವಲ ಎ.ಸಿ ರೋಮಿನಲ್ಲಿ ಕುಳಿತು ಎಲ್ಲರಿಗೂ ಆದೇಶ ನೀಡಿ ತಾವು ಮಾತ್ರ
ಆರಾಮವಾಗಿ ಇರುವಂಥವರಲ್ಲ. ಬದಲಾಗಿ ಅವರೇ ಫೀಲ್ಡಿಗೆ ಇಳಿಯುತ್ತಾರೆ. ಚುನಾವಣೆ ಸಮಯದಲ್ಲಿ ಇದು ಡಾಳಾಗಿ
ಗೋಚರಿಸುತ್ತದೆ. ಅವರು ಏಕಾಂಗಿಯಾಗಿ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸುವ ತಾಕತ್ತು, ವರ್ಚಸ್ಸು ಹೊಂದಿದ್ದಾರೆ. ಅಭಿವೃದ್ಧಿ ಕಾರ್ಯದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೆಜಿಸಿ ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುತ್ತಾರೆ. ಜನಧನ್ ಯೋಜನೆ, ಮುದ್ರಾ ಯೋಜನೆ ಇವೆಲ್ಲ ಇದಕ್ಕೆ ಉದಾಹರಣೆಗಳು.