Kantara Chapter 1 Movie: ʼಕಾಂತಾರ: ಚಾಪ್ಟರ್ 1ʼ ಚಿತ್ರ ಯಾಕಾಗಿ ನೋಡಬೇಕು? ಇಲ್ಲಿದೆ 5 ಕಾರಣಗಳು
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಕಾಂತಾರ: ಚಾಪ್ಟರ್ 1' ಚಿತ್ರ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಈಗಾಗಲೇ ಕುತೂಹಲ ಕೆರಳಿಸಿರುವ ಈ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಕಾರಣ ಚಿತ್ರತಂಡ ವಿವಿಧ ನಗರಗಳಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದೆ. ಈ ಚಿತ್ರ ಯಾಕಾಗಿ ವೀಕ್ಷಿಸಬೇಕು ಎನ್ನುವುದಕ್ಕೆ 5 ಮುಖ್ಯ ಕಾರನ ಇಲ್ಲಿದೆ.
ತುಳುನಾಡ ಜಾನಪದ ಕಥೆ
2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಈ ಬಾರಿ ರಿಷಬ್ ಶೆಟ್ಟಿ ತುಳುನಾಡಿನ ಜಾನಪದ ಕಥೆಯೊಂದನ್ನು ಹೆಕ್ಕಿ ತಂದಿದ್ದಾರೆ. 4-5ನೇ ಶತಮಾನದಲ್ಲಿ ನಡೆಯುವ ಕಥೆ ಇದಾಗಿದ್ದು, ಅಂದಿನ ಕರಾವಳಿಯ ಜನ-ಜೀವನ ಹೇಗಿತ್ತು ಎನ್ನುವುದನ್ನು ತೆರೆಮೇಲೆ ಅನಾವರಣಗೊಳಿಸಿದ್ದಾರೆ. ತುಳುನಾಡಿನ ವಿಶಿಷ್ಟ ಭೂತಾರಾಧನೆ, ಬುಡಕಟ್ಟು ಜನಾಂಗದ ಬದುಕು ಬವಣೆ, ರಾಜಾಡಳಿತದ ಮೂಲಕ ಕಥೆ ಸಾಗಲಿದೆ. ಕದಂಬ ರಾಜವಂಶ ಆಡಳಿತದ ಕಾಲಘಟ್ಟದಲ್ಲಿ ಕಥೆ ನಡೆಯಲಿದೆ.
ರಿಷಬ್ ಶೆಟ್ಟಿ-ರುಕ್ಮಿಣಿ ವಸಂತ್ ಜೋಡಿಯ ಮೋಡಿ
ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿಗೆ ರುಕ್ಮಿಣಿ ವಸಂತ್ ಜೋಡಿಯಾಗಿದ್ದು, ಅವರು ತೆರೆಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ʼಕಾಂತಾರʼ ಚಿತ್ರದಲ್ಲಿನ ರಿಷಬ್ ಶೆಟ್ಟಿ ನಟನೆ ಗಮನ ಸೆಳೆದಿದ್ದಲ್ಲದೆ ರಾಷ್ಟ್ರ ಪ್ರಶಸ್ತಿಯೂ ತಂದುಕೊಟ್ಟಿತ್ತು. ಹೀಗಾಗಿ ಅವರು ಈ ಬಾರಿ ಯಾವ ರೀತಿ ಅಭಿನಯಿಸಿದ್ದಾರೆ ಎನ್ನುವ ಪ್ರಶ್ನೆ ಇದ್ದೇ ಇದೆ. ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ ಎ ಮತ್ತು ಸೈಡ್ ಬಿ ಮೂಲಕ ಸಹಜಾಭಿನಯದಿಂದಲೇ ರುಕ್ಮಿಣಿ ವಸಂತ್ ಸಿನಿ ರಸಿಕರ ಗಮನ ಸೆಳೆದಿದ್ದು, ಇಲ್ಲಿ ರಾಜಕುಮಾರಿ ಕನಕವತಿ ಪಾತ್ರ ನಿರ್ವಹಿಸಿದ್ದಾರೆ. ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಅವರ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಕಾರಣಕ್ಕೂ ಕುತೂಹಲ ಕೆರಳಿಸಿದೆ.
ಅದ್ಭುತ ಕ್ಯಾಮರಾ ವರ್ಕ್
ʼಕಾಂತಾರʼ ಚಿತ್ರದಲ್ಲಿ ಸಿನಿಮಾಟೋಗ್ರಫಿ ಗಮನ ಸೆಳೆದಿತ್ತು. ಅರವಿಂದ್ ಎಸ್. ಕಶ್ಯಪ್ ಅವರ ಕ್ಯಾಮರಾ ಕೈಚಳಕಕ್ಕೆ ಪ್ರೇಕ್ಷಕರು ಮನ ಸೋತಿದ್ದರು. ಭೂತ ಕೋಲ, ಕಂಬಳ, ಕಾಡು, ಜಾತ್ರೆಯನ್ನು ಅವರು ಅದ್ಭುತವಾಗಿ ಸೆರೆ ಹಿಡಿದಿದ್ದರು. ಈ ಭಾಗದಲ್ಲಿಯೂ ಅವರೇ ಕ್ಯಾಮರಾ ನಿರ್ವಹಿಸಿದ್ದು, ಮತ್ತೊಮ್ಮೆ ಕಾಂತಾರದ ಅದ್ಭುತ ಜಗತ್ತನ್ನು ನಿಮ್ಮೆದುರು ತೆರೆದಿಡಲಿದ್ದಾರೆ. ಬಹುತೇಕ ಚಿತ್ರೀಕರಣ ನೈಜ ಕಾಡಿನಲ್ಲೇ ನಡೆದಿದೆ.
ರೋಮಾಂಚನಗೊಳಿಸುವ ಸಂಗೀತ
ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿರುವ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ʼಕಾಂತಾರʼದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ʼವರಾಹ ರೂಪಂʼ, ʼಸಿಂಗಾರ ಸಿರಿಯೇʼ ಮುಂತಾದ ಹಾಡು ಇಂದಿಗೂ ಹಲವರ ಫೆವರೇಟ್ ಲಿಸ್ಟ್‌ನಲ್ಲಿದೆ. ಈ ಭಾಗದಲ್ಲಿಯೂ ಅವರು ಮುಂದುವರಿದಿದ್ದು, ಅವರ ಮಾಂತ್ರಿಕ ಸ್ಪರ್ಶ ಸಿಕ್ಕಿದೆ. ಈಗಾಗಲೇ ಚಿತ್ರದ ಮೊದಲ ಹಾಡು ʼಬ್ರಹ್ಮಕಲಶʼ ಹೊರ ಬಂದಿದ್ದು, ಈ ಶಿವಸ್ತುತಿ ಈಗಾಗಲೇ ಹಿಟ್ ಲಿಸ್ಟ್ ಸೇರಿದೆ. ಸಾಂಪ್ರದಾಯಿಕ, ಜಾನಪದ ಸಂಗೀತೋಪಕರಣದ ಬಳಕೆ, ಅಭಿ ವಿ. ಅವರ ಭಾವಪೂರ್ಣ ಧ್ವನಿ, ಶಶಿರಾಜ್ ಕಾವೂರು ಸಾಹಿತ್ಯ ನಿಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಮೂಡಿದೆ. ಟ್ರೈಲರ್ ಕಂಡುಬಂದಿರುವ ಹಿನ್ನೆಲೆ ಸಂಗೀತವೂ ಸಿನಿಪ್ರಿಯರನ್ನು ಆಕರ್ಷಿಸಿದೆ.
ಮೈ ನವಿರೇಳಿಸುವ ಆ್ಯಕ್ಷನ್
ಈ ಚಿತ್ರದಲ್ಲಿನ ಯುದ್ಧದ ಸನ್ನಿವೇಶವೇ ಹೈಲೈಟ್ ಆಗಿರಲಿದೆ ಎಂದು ಸಿನಿಮಾತಂಡ ಹೇಳಿದೆ. ಕಥೆಯ ಮುಖ್ಯ ಘಟ್ಟದಲ್ಲಿ ಬರುವ ಈ ಯುದ್ಧದ ದೃಶ್ಯಕ್ಕಾಗಿ ವಿಶೇಷ ಗಮನ ಹರಿಸಲಾಗಿದ್ದು, ಸುಮಾರು 28 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆಯಂತೆ. ದೇಶ-ವಿದೇಶಗಳ ಸ್ಟಂಟ್ ಮ್ಯಾನ್‌ಗಳು ಇದಕ್ಕಾಗಿ ಹಗಲಿರುಳು ಶ್ರಮಿಸಿದ್ದು, ರಿಷಬ್ ಶೆಟ್ಟಿ ಯಾವುದೇ ಡ್ಯೂಪ್ ಇಲ್ಲದೆ ಸ್ವತಃ ಫೈಟ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಯುದ್ಧದ ದೃಶ್ಯ ಇದರಲ್ಲಿದೆ ಎನ್ನಲಾಗುತ್ತಿದೆ. ಬಾಲಿವುಡ್ ನಟ ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮತ್ತಿತರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.