ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SC certificates: ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರಿಗೆ ಎಸ್‌ಸಿ ಪ್ರಮಾಣಪತ್ರ: ರಾಜ್ಯ ಸರ್ಕಾರ ಆದೇಶ

Social welfare department: 1950ರಲ್ಲಿ ಹಿಂದೂಗಳನ್ನು ಮಾತ್ರ ಎಸ್‌ಸಿ ಎಂದು ಸಾಂವಿಧಾನಿಕ ಆದೇಶದ ಮೂಲಕ ಪರಿಗಣಿಸಲಾಗಿತ್ತು. ನಂತರ 1956ರ ತಿದ್ದುಪಡಿ ಮೂಲಕ ದಲಿತ ಸಿಖ್ಖರನ್ನು, 1990ರ ತಿದ್ದುಪಡಿಯ ಮೂಲಕ ದಲಿತ ಬೌದ್ಧರನ್ನು ಎಸ್‌ಸಿಗಳೆಂದು ಪರಿಗಣಿಸಬಹುದು ಎಂದು ಬದಲಿಸಲಾಯಿತು.

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಯವರ ಪೈಕಿ ಯಾರಾದರೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರೆ, ಅಂಥವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ (SC certificates) ನೀಡುವಂತೆ ರಾಜ್ಯ ಸರ್ಕಾರ ಮತ್ತೊಮ್ಮೆ ಆದೇಶ ಹೊರಡಿಸಿದೆ. ಮತಾಂತರಗೊಂಡವರಿಗೆ ಜಾತಿ ಪ್ರಮಾಣಪತ್ರ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟಿಕರಣ ನೀಡಿ ಆದೇಶ ಹೊರಡಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಹಲವು ಸಂಘ-ಸಂಸ್ಥೆಗಳು ಮನವಿ ಸಲ್ಲಿಸಿದ್ದವು. ಈ ಕಾರಣಕ್ಕೆ ಮತ್ತೊಮ್ಮೆ ಇಲಾಖೆ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರ 1990ರ ನ. 20ರಂದು ಬರೆದ ಪತ್ರದಲ್ಲಿದ್ದ ಸೂಚನೆಯಂತೆ, 'ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಯವರಿಗೆ ಎಸ್‌ಸಿ ಪ್ರಮಾಣಪತ್ರ ನೀಡುವಂತೆ ಮತ್ತು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ನಮೂದಿಸುವಂತೆ ಜಾತಿ ಪ್ರಮಾಣಪತ್ರ ನೀಡುವ ಪ್ರಾಧಿಕಾರಿಗಳಿಗೆ ರಾಜ್ಯ ಸರ್ಕಾರ 2013ರ ಡಿ. 9ರಂದೇ ಆದೇಶ ನೀಡಿತ್ತು. ಅದರಂತೆ ಇದೀಗ ರಾಜ್ಯ ಸರ್ಕಾರ ಮತ್ತೊಮ್ಮೆ ಆದೇಶ ಹೊರಡಿಸಿದೆ.

'ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರು ಜಾತಿ ಪ್ರಮಾಣಪತ್ರ ಪಡೆಯಲು ಸಲ್ಲಿಸುವ ಅರ್ಜಿಗಳಲ್ಲಿ ಧರ್ಮದ ಕಾಲಂನಲ್ಲಿ 'ಬೌದ್ಧ' (ಬುದ್ಧಿಸಂ) ಎಂದು ನಮೂದಿಸಲು ಅವಕಾಶ ಕಲ್ಪಿಸಬೇಕು. ಅರ್ಜಿದಾರರು ಅಥವಾ ಪೋಷಕರು ಇಚ್ಛಿಸಿದರೆ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಸರ್ಕಾರಿ, ಖಾಸಗಿ ಶಾಲೆಗಳು ಮತ್ತು ಇತರ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿನ ದಾಖಲೆಗಳಲ್ಲಿ ಧರ್ಮದ ಕಾಲಂನಲ್ಲಿಯೂ ಬೌದ್ಧ ಎಂದು ನಮೂದಿಸಲು ಅವಕಾಶ ನೀಡಬೇಕು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ನಿಗಮ ಮಂಡಳಿಗಳು, ಇತರ ಸಂಸ್ಥೆಗಳು ಈ ಆದೇಶದಂತೆ ಕ್ರಮ ವಹಿಸಬೇಕು' ಎಂದು ತಿಳಿಸಿದೆ.

ದಲಿತ ಸಿಖ್ಖರು, ಬೌದ್ಧರಿಗೆ ಮಾತ್ರ ಸಿಗಲಿದೆ ಎಸ್‌ಸಿ ಸರ್ಟಿಫಿಕೇಟ್‌

1950ರಲ್ಲಿ ಹಿಂದೂಗಳನ್ನು ಮಾತ್ರ ಎಸ್‌ಸಿ ಎಂದು ಸಾಂವಿಧಾನಿಕ ಆದೇಶದ ಮೂಲಕ ಪರಿಗಣಿಸಲಾಗಿತ್ತು. ನಂತರ 1956ರ ತಿದ್ದುಪಡಿ ಮೂಲಕ ದಲಿತ ಸಿಖ್ಖರನ್ನು, 1990ರ ತಿದ್ದುಪಡಿಯ ಮೂಲಕ ದಲಿತ ಬೌದ್ಧರನ್ನು ಎಸ್‌ಸಿಗಳೆಂದು ಪರಿಗಣಿಸಬಹುದು ಎಂದು ಬದಲಿಸಲಾಯಿತು. ಆದರೆ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರನ್ನು ಎಸ್‌ಸಿ ಎಂದು ಪರಿಗಣಿಸುವ ಬಗ್ಗೆ ಯಾವುದೇ ತಿದ್ದುಪಡಿ ಆಗಿಲ್ಲ.