ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB: ಈ ಸಲ ಕಪ್‌ ನಮ್ದು; 18 ವರ್ಷಗಳ ಬಳಿಕ ಐಪಿಎಲ್‌ ಕಿರೀಟ ತೊಟ್ಟ ಆರ್‌ಸಿಬಿ: ಇಲ್ಲಿದೆ ರೋಚಕ ಕ್ಷಣಗಳು

RCB crowned IPL Champions: ಕೊನೆಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಅಭಿಮಾನಿಗಳ ಕನಸು ನನಸಾಗಿದೆ. ಕೋಟ್ಯಂತರ ಮಂದಿಯ ಪ್ರಾರ್ಥನೆ ಫಲಿಸಿದೆ. 18 ವರ್ಷಗಳ ಬಳಿಕ ಆರ್‌ಸಿಬಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಟೂರ್ನಿಯ ಚಾಂಪಿಯನ್‌ ಎನಿಸಿಕೊಂಡಿದೆ. ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಐಪಿಎಲ್‌ ಕಿರೀಟ ಮುಡಿಗೇರಿಸಿಕೊಂಡಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಆರ್‌ಸಿಬಿ ತಂಡ, ಫೈನಲ್‌ ಹಣಾಹಣಿಯಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಇಲ್ಲಿದೆ ಬೆಂಗಳೂರು-ಪಂಜಾಬ್‌ ಪಂದ್ಯದ ರೋಚಕ ಕ್ಷಣಗಳು.

1/5

ಮಂಗಳವಾರ (ಜೂ. 3) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ರಾತ್ರಿ 7.30ಕ್ಕೆ ಐಪಿಎಲ್‌ 18ನೇ ಆವೃತ್ತಿಯ ಫೈನಲ್‌ ಹಣಾಹಣಿ ನಡೆಯಿತು. ರಜತ್‌ ಪಾಟೀದಾರ್‌ ನೇತೃತ್ವದ ಆರ್‌ಸಿಬಿ ಮತ್ತು ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಚೊಚ್ಚಲ ಕಿರೀಟಕ್ಕಾಗಿ ಸೆಣಸಾಡಿದವು.

2/5

ಟಾಸ್‌ ಗೆದ್ದ ಪಂಜಾಬ್‌ ಬೌಲಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟ್‌ ಬೀಸಿದ ಆರ್‌ಸಿಬಿ ನಿಗದಿತ 20 ಓವರ್‌ನಲ್ಲಿ 190 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. 35 ಎಸೆತಗಳಲ್ಲಿ 43 ರನ್‌ ಗಳಿಸಿದ ವಿರಾಟ್‌ ಕೊಹ್ಲಿ ಆರ್‌ಸಿಬಿ ಪರ ವೈಯಕ್ತಿಕ ಗರಿಷ್ಠ ಮೊತ್ತ ಕಲೆ ಹಾಕಿದರು. ಇನ್ನುಳಿದಂತೆ ಮಯಾಂಕ್‌ ಅಗರ್ವಾಲ್‌ (24), ರಜತ್‌ ಪಾಟಿದಾರ್‌ (26), ಲಿವಿಂಗ್‌ಸ್ಟನ್‌ (25), ಜಿತೇಶ್‌ ಶರ್ಮಾ (24) ರನ್‌ ಗಳಿಸಿದರು. ಪಂಜಾಬ್‌ ಪರ ಅರ್ಷ್‌ದೀಪ್‌ ಸಿಂಗ್‌ ಮತ್ತು ಜೇಮೀಸನ್ ತಲಾ 3 ವಿಕೆಟ್‌ ಕಿತ್ತರು.

3/5

ಇನ್ನು ಪಂಜಾಬ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 184 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್‌ ಪರ ಶಶಾಂಕ್‌ ಸಿಂಗ್‌ 30 ಬಾಲ್‌ನಲ್ಲಿ 61 ರನ್‌ ಗಳಿಸಿ ಔಟಾಗದೆ ಉಳಿದು ಹೋರಾಟದ ಸೂಚನೆ ನೀಡಿದರು. ಇನ್ನು ಜೋಶ್‌ ಇಂಗ್ಲಿಸ್‌ 39 ರನ್‌ಗಳ ಉತ್ತಮ ಕೊಡುಗೆ ನೀಡಿದರೂ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ. ಇನ್ನು ಆರ್‌ಸಿಬಿ ಪರ ಕೃನಾಲ್‌ ಪಾಂಡ್ಯ ಮತ್ತು ಭುವನೇಶ್ವರ್‌ ಕುಮಾರ್‌ ತಲಾ 2 ವಿಕೆಟ್‌ ಕಿತ್ತರು.

4/5

ಆರ್‌ಸಿಬಿ ಕಪ್‌ ಗೆಲ್ಲುತ್ತಿದ್ದಂತೆ ವಿರಾಟ್‌ ಕೊಹ್ಲಿ ಭಾವುಕರಾದರು. ''ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವಾಗಿತ್ತೋ, ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. ನಾನು ನನ್ನ ಯೌವನ, ನನ್ನ ಅನುಭವವನ್ನು ಈ ತಂಡಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ, ಗೆದ್ದ ನಂತರ ನಾನು ಭಾವುಕನಾದೆ'' ತಿಳಿಸಿದ್ದಾರೆ.

5/5

ಚೊಚ್ಚಲ ಕಪ್‌ ಗೆದ್ದುಕೊಂಡ ಬಳಿಕ ಮಾತನಾಡಿದ ರಜತ್‌ ಪಾಟಿದಾರ್‌ ʼʼಈ ಬಾರಿ ಕಪ್‌ ನಮ್ದುʼʼ ಎಂದು ಕನ್ನಡದಲ್ಲೇ ಹೇಳಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.