Dadasaheb Phalke Award: ಡಾ. ರಾಜ್‌ಕುಮಾರ್, ರಜನಿಕಾಂತ್...: ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಪ್ರತಿಭೆಗಳಿವರು
ಭಾರತೀಯ ಸಿನಿಮಾರಂಗದ ಅತ್ಯುನ್ನತ ಪ್ರಶಸ್ತಿ ಎನಿಸಿಕೊಂಡಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು (Dadasaheb Phalke Award) ಮಲಯಾಳಂ ಸೂಪರ್ ಸ್ಟಾರ್, ಬಹುಭಾಷಾ ನಟ ಮೋಹನ್‌ಲಾಲ್ (Mohanlal) ಅವರಿಗೆ ಕೇಂದ್ರ ಸರ್ಕಾರ ಘೋಷಿಸಿದೆ. ಸೆಪ್ಟೆಂಬರ್ 23ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸಿನಿಮಾ ಕ್ಷೇತ್ರಕ್ಕೆ ಅತ್ಯುನ್ನತ ಕೊಡುಗೆ ನೀಡಿದ ಕಲಾವಿದರು, ತಂತ್ರಜ್ಞರನ್ನು ಗುರುತಿಸಿ ಅವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1969ರಲ್ಲಿ ಸ್ಥಾಪಿಸಲಾಗಿದ್ದು, ಕನ್ನಡದ ಹೆಮ್ಮೆಯ ಕಲಾವಿದ ಡಾ. ರಾಜ್‌ಕುಮಾರ್ ಅವರಿಗೂ ಸಂದಿದೆ. ಇದುವರೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಪ್ರತಿಭಾವಂತರ ವಿವರ ಇಲ್ಲಿದೆ.
ಡಾ. ರಾಜ್‌ಕುಮಾರ್
ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರಿಗೆ 1995ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತು. ಚಿತ್ರರಂಗಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಯಿತು. 1983ರಲ್ಲಿ ಕೇಂದ್ರ ಸರ್ಕಾರ ಪದ್ಮ ಭೂಷಣ ಘೋಷಿಸಿತ್ತು. ವಿಶೇಷ ಎಂದರೆ ಅವರ 39 ಚಿತ್ರಗಳು 63 ಬಾರಿ ವಿವಿಧ ಭಾಷೆಗಳಿಗೆ ರಿಮೇಕ್ ಆಗಿವೆ. ಅಲ್ಲದೆ ಬಹುತೇಕ ಅವರ ಚಿತ್ರಗಳಿಗೆ ಅವರೇ ಹಾಡಿದ್ದಾರೆ. 1992ರಲ್ಲಿ ʼಜೀವನ ಚೈತ್ರʼ ಚಿತ್ರದ ʼನಾದಮಯʼ ಹಾಡಿಗಾಗಿ ಉತ್ತಮ ಗಾಯಕ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಹಾಡಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ನಟ ಡಾ. ರಾಜ್‌ಕುಮಾರ್.
ಬಿ.ಎನ್. ರೆಡ್ಡಿ
ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಬಿ.ಎನ್. ರೆಡ್ಡಿ ಅವರಿಗೆ 1974ರಲ್ಲಿ ದಾದಾಸಾಹೇಬ್ ಅವಾರ್ಡ್ ಲಭಿಸಿತು. ಅದೇ ವರ್ಷ ಪದ್ಮ ಭೂಷಣ ಪ್ರಶಸ್ತಿಯೂ ಅವರನ್ನು ಅರಸಿಕೊಂಡು ಬಂತು. ಇವರು ರಾಷ್ಟ್ರ ಚಲನಚಿತ್ರ ಪ್ರಸಸ್ತಿ ಪುರಸ್ಕೃತರೂ ಹೌದು.
ಎಲ್.ವಿ. ಪ್ರಸಾದ್
ಆಂಧ್ರ ಪ್ರದೇಶ ಮೂಲದ ಚಿತ್ರ ನಿರ್ದೇಶಕ, ನಿರ್ಮಾಪಕ, ನಟ ಮತ್ತು ಉದ್ಯಮಿ ಎಲ್.ವಿ. ಪ್ರಸಾದ್ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1982 ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿತು. ಇವರು ಕೂಡ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.
ಬಿ. ನಾಗಿ ರೆಡ್ಡಿ
ತೆಲುಗು ಚಿತ್ರರಂಗದ ಜನಪ್ರಿಯ ನಿರ್ಮಾಪಕ. ಇವರು ಕನ್ನಡ, ಹಿಂದಿ ಸಿನಿಮಾದ ಮೂಲಕವೂ ಗುರುತಿಸಿಕೊಂಡಿದ್ದಾರೆ. 1986 ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆಯಿತು. ʼಮದುವೆ ಮಾಡಿ ನೋಡುʼ ಕನ್ನಡ ಚಿತ್ರಕ್ಕಾಗಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ಅಕ್ಕಿನೇನಿ ನಾಗೇಶ್ವರ್ ರಾವ್
ಟಾಲಿವುಡ್‌ನ ನಟ ಮತ್ತು ನಿರ್ಮಾಪಕರಾಗಿದ ಅಕ್ಕಿನೇನಿ ನಾಗೇಶ್ವರ್ ರಾವ್ ಸುಮಾರು 7 ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಇವರಿಗೆ 1990ರಲ್ಲಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರಿಗೆ ಕೇಂದ್ರ ಸರ್ಕಾರ ಪದ್ಮ ಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ನೀಡಿದೆ.
ಶಿವಾಜಿ ಗಣೇಶನ್
ತಮಿಳು ಚಿತ್ರರಂಗದ ಮಹಾನ್ ಪ್ರತಿಭೆ ಸಿವಾಜಿ ಗಣೇಶನ್. ಅವರಿಗೆ 1996ರಲ್ಲಿ ದಾದಾಸಾಹೇಮ್ ಪ್ರಶಸ್ತಿ ಲಭಿಸಿತು. ಸುಮಾರು 288 ಸಿನಿಮಾಗಳಲ್ಲಿ ನಟಿಸಿರುವ ಅವರು ತಮಿಳಿನ ಜತೆಗೆ ಕನ್ನಡ, ಹಿಂದಿ, ಮಲಯಾಳಂ, ತೆಲುಗು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ಪದ್ಮ ಶ್ರೀ ಮತ್ತು ಪದ್ಮ ಭೂಷಣ ಪ್ರಶಸ್ತಿಯೂ ದೊರೆತಿದೆ.
ಅಡೂರು ಗೋಪಾಲಕೃಷ್ಣನ್
ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಮಲಯಾಳಂ ಚಿತ್ರರಂಗಕ್ಕೆ ಮೊದಲ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ತಂದುಕೊಟ್ಟವರು. ಅವರಿಗೆ 2004ರಲ್ಲಿ ಈ ಅವಾರ್ಡ್ ಲಭಿಸಿತು. ನಿರ್ಮಾಪಕ, ಚಿತ್ರಕಥೆ ರಚನೆಗಾರನಾಗಿಯೂ ಗುರುತಿಸಿಕೊಂಡಿರುವ ಅವರು ರಾಷ್ಟ್ರ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ಡಿ. ರಾಮ ನಾಯ್ಡು
ತೆಲುಗು ಚಿತ್ರ ನಿರ್ದೇಶಕ ಡಿ. ರಾಮ ನಾಯ್ಡು 2009ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡರು. ಜತೆಗೆ ಅವರು ರಾಷ್ಟ್ರ ಚಲನಚಿತ್ರ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ.
ಕೆ. ಬಾಲಚಂದರ್
ತಮಿಳು ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಕೆ. ಬಾಲಚಂದರ್ 2010ರಲ್ಲಿ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ ಪಡೆದುಕೊಂಡರು. ಅವರು ಪದ್ಮ ಶ್ರೀ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಹೌದು. ಇವರು ಕನ್ನಡದಲ್ಲಿಯೂ ಚಿತ್ರ ನಿರ್ದೇಶಿಸಿದ್ದಾರೆ.
ಕೆ. ವಿಶ್ವನಾಥ್
ತೆಲುಗು ಚಿತ್ರರಂಗದ ಹೆಸರಾಂತ ನಿರ್ದೇಶಕ, ನಟ, ಗೀತ ರಚೆಗಾರ ಕೆ. ವಿಶ್ವನಾಥ್ ಅವರನ್ನು ಅರಸಿಕೊಂಡು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದ್ದು 2016ರಲ್ಲಿ. ಇವರು ಇದಕ್ಕೂ ಮೊದಲು ಪದ್ಮ ಶ್ರೀ ಮತ್ತು ರಾಷ್ಟ್ರ ಚಲನಚಿತ್ರ ಪ್ರಸಸ್ತಿ ಪಡೆದುಕೊಂಡಿದ್ದರು.
ರಜನಿಕಾಂತ್
ಕಾಲಿವುಡ್ ಸೂಪರ್ ಸಾರ್, ಸ್ಟೈಲ್ ಕಿಂಗ್ ರಜನಿಕಾಂತ್ 2019ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವಿಕರಿಸಿದರು. ತಮಿಳು, ಕನ್ನಡ ಜತೆಗೆ ಇವರು ಹಿಂದಿ, ತೆಲುಗು, ಬೆಂಗಾಳಿ ಮತ್ತು ಮಲಯಾಳಂನಲ್ಲೂ ನಟಿಸಿದ್ದಾರೆ. ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ಪಡೆದ ರಜನಿಕಾಂತ್ ಈಗಲೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟರಲ್ಲಿ ಇವರೂ ಒಬ್ಬರು.
ಮೋಹನ್‌ಲಾಲ್
ಬಹುಭಾಷಾ ನಟ, ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರಿಗೆ 2023ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಪದ್ಮ ಶ್ರೀ ಮತ್ತು ಪದ್ಮ ಭೂಷಣ ಪುರಸ್ಕಾರಗಳಿಗೆ ಈಗಾಗಲೇ ಭಾಜನರಾಗಿರುವ ಅವರು ನಟ ಮಾತ್ರವಲ್ಲ ನಿರ್ಮಾಪಕ, ನಿರ್ದೇಶಕ, ಗಾಯಕ ಕೂಡ ಹೌದು. ಮೋಹನ್‌ಲಾಲ್ ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ.