Vitla Pindi Mahotsav: ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ, ಲೀಲೋತ್ಸವ ಸಂಭ್ರಮ; ಬಗೆ ಬಗೆಯ ವೇಷ, ಹುಲಿ ಕುಣಿತದ ವೈಭವಕ್ಕೆ ಮಾರುಹೋದ ಭಕ್ತರು
ಕೃಷ್ಣನೂರು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಾಗಿ ನೆರವೇರಿದೆ. ಉಡುಪಿ ಮಠದಲ್ಲಿ ಸೆಪ್ಟೆಂಬರ್ 14ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿದರೆ, ಸೆಪ್ಟೆಂಬರ್ 15ರಂದು ಅದ್ಧೂರಿಯಾಗಿ ವಿಟ್ಲಪಿಂಡಿ ಆಚರಿಸಲಾಯಿತು. ಈ ವೇಳೆ ಹುಲಿ ಕುಣಿತ, ವಿವಿಧ ವೇಷಗಳು ನೆರೆದವರ ಮೈರೋಮಾಂಚನಗೊಳಿಸಿತು. ಹೇಗಿತ್ತು ಕೃಷ್ಣನೂರಿನಲ್ಲಿ ಈ ಬಾರಿಯ ಅಷ್ಟಮಿ ವೈಭವ ಹೇಗಿತ್ತು ಎನ್ನುವ ವಿವರ ಇಲ್ಲಿದೆ.
ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆ ಉಡುಪಿ ಕೃಷ್ಣ ಮಠದ ಮುಂಭಾಗ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಭಾನುವಾರ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಮಕ್ಕಳೊಂದಿಗೆ ಕೆಲಹೊತ್ತು ಬೆರೆತರು.
ನೆರೆದ ಭಕ್ತರಿಗೆ ಮಠದಲ್ಲಿ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಕೃಷ್ಣ ಮಠದ ಸುತ್ತಮುತ್ತ ಮಾಡಲಾದ ವಿಶೇಷ ಹೂವಿನ ಅಲಂಕಾರ ಗಮನ ಸೆಳೆಯಿತು. ಸೇವಂತಿಗೆ, ಮಲ್ಲಿಗೆ , ಚೆಂಡು ಹೂ, ಕನಕಾಂಬರ, ತುಳಸಿ ಬಳಸಿ ಅಲಂಕಾರ ಮಾಡಲಾಗಿತ್ತು.
ಮಠದ ಆವರಣದಲ್ಲಿ ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಸಾಹಸ ಪ್ರದರ್ಶನ ರೋಮಾಂಚನಗೊಳಿಸಿತು.
ಕೃಷ್ಣ ಜಪದೊಂದಿಗೆ, ಭಕ್ತರ ಉದ್ಘೋಷದೊಂದಿಗೆ ಸಾಗಿದ ರಥಯಾತ್ರೆಯನ್ನು ಹಲವರು ಕಣ್ತುಂಬಿಕೊಂಡರು.
ಇನ್ನು ಉಡುಪಿ ನಗರದ ತುಂಬ ಹುಲಿ, ಯಕ್ಷಗಾನ ವೇಷಧಾರಿಗಳು ಕಂಡು ಬಂದರು. ಹಲವರು ಈ ವೇಷಗಳ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಹುಲಿ ವೇಷಧಾರಿಗಳನ್ನು ಭೇಟಿ ಮಾಡಿ ಸ್ಮಾಮೀಜಿಗಳು ಆಶೀರ್ವದಿಸಿದರು.
ಅಂಗಡಿ ಮುಗ್ಗಟ್ಟು, ಮನೆಗಳ ಎದುರು, ರಸ್ತೆಗಳಲ್ಲಿ ಬಣ್ಣ ಬಣ್ಣದ ವೇಷಧಾರಿಗಳು ಕಂಡುಬಂದರು. ದ್ವಿಚಕ್ರ ವಾಹನ, ತೆರೆದ ಜೀಪು, ಕಾರುಗಳಲ್ಲಿ ಸಂಚರಿಸಿ ಜನರನ್ನು ರಂಜಿಸಿದರು. ಆ ಮೂಲಕ ಹಬ್ಬಕ್ಕೆ ಇನ್ನಷ್ಟು ಕಳೆ ತುಂಬಿದರು.
ಇನ್ನು ರಥಬೀದಿ ಪರಿಸರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಪೊಲೀಸರ ಸರ್ಪಗಾವಲು ಕಂಡುಬಂತು. ಗೇಟ್‌ಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು. ರಾಜ್ಯ, ದೇಶದ ವಿವಿಧೆಡೆಗಳಿಂದ ಬಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.