ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Twin Cloudbursts: ಉಕ್ಕೇರಿದ ಪ್ರವಾಹಕ್ಕೆ ಬದುಕು ಛಿದ್ರ ಛಿದ್ರ; ಉತ್ತರಕಾಶಿಯ ಅವಳಿ ಮೇಘಸ್ಫೋಟದ ದುರಂತ ಚಿತ್ರಣ

ಡೆಹ್ರಾಡೂನ್‌: ಕಳೆದ ವರ್ಷ ಜುಲೈ ಅಂತ್ಯದಲ್ಲಿ ಕೇರಳದ ವಯನಾಡಿನಲ್ಲಿ ಭೀಕರ ಪ್ರವಾಹ ಉಂಟಾಗಿ ಊರಿಗೆ ಊರೇ ಕೊಚ್ಚಿ ಹೋಗಿತ್ತು. ಅಂತಹದ್ದೇ ದುರಂತವೊಂದು ಇದೀಗ ಉತ್ತರಾಖಂಡದಲ್ಲಿ ನಡೆದಿದೆ. ಉತ್ತರಕಾಶಿ ಜಿಲ್ಲೆಯಲ್ಲಿ ಮಂಗಳವಾರ (ಆಗಸ್ಟ್‌ 5)ರಂದು ಅವಳಿ ಮೇಘಸ್ಫೋಟ ಸಂಭವಿಸಿ ದಿಢೀರ್‌ ಪ್ರವಾಹ ಉಂಟಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ 8ರಿಂದ 10 ಸೈನಿಕರು ನಾಪತ್ತೆಯಾಗಿದ್ದಾರೆ. ಸದ್ಯ ಅವಘಡದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ದುರಂತ ಭೂಮಿಯ ಮನಕಲುಕುವ ಚಿತ್ರಣ ಇಲ್ಲಿದೆ.

1/6

ಕೊಚ್ಚಿ ಹೋದ ಧರಾಲಿ ಗ್ರಾಮ

ಉತ್ತರಾಖಂಡದಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಉತ್ತರಕಾಶಿ ಜಿಲ್ಲೆಯಲ್ಲಿ ಮಂಗಳವಾರ (ಆಗಸ್ಟ್‌ 5) ಮೇಘಸ್ಫೋಟ ಸಂಭವಿಸಿದೆ. ಮೊದಲು ಧರಾಲಿ ಬಳಿಕ ಸುಖಿ ಟಾಪ್‌ ಗ್ರಾಮದಲ್ಲಿ ಮೇಘಸ್ಫೋಟ ಉಂಟಾಗಿದ್ದು, ದಿಢೀರ್‌ ಪ್ರವಾಹ ಜನವಸತಿ ನುಗ್ಗಿದೆ. ಇದರಿಂದ ಧರಾಲಿ ಗ್ರಾಮವೇ ಕೊಚ್ಚಿ ಹೋಗಿದೆ.

2/6

ಸೈನಿಕರು ನಾಪತ್ತೆ

ದಿಢೀರ್‌ ಪ್ರವಾಹದಿಂದ ಕೆಳ ಹರ್ಸಿಲ್‌ ಪ್ರದೇಶದಲ್ಲಿದ್ದ ಶಿಬಿರದಿಂದ 8ರಿಂದ 10 ಭಾರತೀಯ ಸೇನೆಯ ಯೋಧರು ನಾಪತ್ತೆಯಾಗಿದ್ದಾರೆ. ಸದ್ಯ ಇವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

3/6

ಧರಾಲಿ ಗ್ರಾಮದಲ್ಲಿ 4 ಮಂದಿ ಸಾವು

ಮೂಲಗಳ ಪ್ರಕಾರ ಧರಾಲಿ ಗ್ರಾಮದಲ್ಲಿ 4 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಸುಖಿ ಟಾಪ್‌ ಗ್ರಾಮದಲ್ಲಿ ಯಾವುದೇ ಜೀವ ಹಾನಿಯಾಗಿವ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4/6

ರಕ್ಷಣಾ ಕಾರ್ಯಾಚರಣೆ

ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌, ಭಾರತೀಯ ಸೇನೆ, ಜಿಲ್ಲಾಡಳಿತ ಸಿಬ್ಬಂದಿ ಧಾವಿಸಿದ್ದಾರೆ. ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

5/6

ಹಠಾತ್ ಪ್ರವಾಹ

ಗಂಗೋತ್ರಿ ಧಾಮ್‌ಗೆ ಹೋಗುವ ಮಾರ್ಗದಲ್ಲಿನ ಪ್ರಮುಖ ತಾಣ ಧರಾಲಿಯಲ್ಲಿ ಖಿರ್ ಗಂಗಾ ನದಿಗೆ ಭೀಕರ ಹಠಾತ್ ಪ್ರವಾಹ ಅಪ್ಪಳಿಸಿದೆ. ಸುಮಾರು 20ರಿಂದ 25 ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಈ ಪ್ರವಾಹದಲ್ಲಿ ಕೊಚ್ಚಿಹೋಗಿವೆ. 10ರಿಂದ 12 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದ ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ, ಉಧಮ್ ಸಿಂಗ್ ನಗರ, ನೈನಿತಾಲ್, ಅಲ್ಮೋರಾ, ಬಾಗೇಶ್ವರ್, ಚಂಪಾವತ್ ಮತ್ತು ಪಿಥೋರಗಢದಲ್ಲಿ ರೆಡ್ ಅಲರ್ಟ್ ನೀಡಲಾಗಿದೆ.

6/6

ಪ್ರಧಾನಿ ನರೇಂದ್ರ ಮೋದಿ ಸೂಚನೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಉತ್ತರಕಾಶಿಯಲ್ಲಿ ತ್ವರಿತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ʼʼಮುಖ್ಯಮಂತ್ರಿ ಪುಷ್ಕರ್‌ ಧಾಮಿ ಅವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದ್ದೇನೆ. ರಕ್ಷಣಾ ತಂಡಗಳು ಕಾರ್ಯ ನಿರತವಾಗಿವೆʼʼ ಎಂದು ಮೋದಿ ತಿಳಿಸಿದ್ದಾರೆ.