ಬೆಂಗಳೂರು: ಒಂದು ಕಾಲದಲ್ಲಿ ಚಿತ್ರದ ಆಡಿಯೊ ಹಿಟ್ ಆಯಿತೊ ಇಲ್ಲವೋ ಎಂದು ನಿರ್ಧಾರವಾಗುತ್ತಿದ್ದದ್ದು ಎಷ್ಟು ಕ್ಯಾಸೆಟ್‌ಗಳು ಮಾರಾಟವಾಯಿತು ಎಂಬುದರ ಆಧಾರದ ಮೇಲೆ. ಅದರೆ ಕಾಲ ಬದಲಾದಂತೆ ಕ್ಯಾಸೆಟ್‌ಗಳನ್ನು ಬಹುತೇಕ ಎಲ್ಲರೂ ಮರೆತು ಹೋಗಿರುವ ಸಂದರ್ಭದಲ್ಲಿ ʼಫುಲ್ ಮೀಲ್ಸ್ʼ (Full Meals Movie) ಚಿತ್ರತಂಡ ತಮ್ಮ ಚಿತ್ರದ ʼವಾಹ್ ಏನೋ ಹವಾʼ ಹಾಡನ್ನು ಕ್ಯಾಸೆಟ್‌ನಲ್ಲಿ ಬಿಡುಗಡೆ ಮಾಡುವ ಮೂಲಕ ಎಲ್ಲರನ್ನೂ ಹಳೆಯ ನೆನಪುಗಳಿಗೆ ದೂಡುವುದರೊಂದಿಗೆ ತಮ್ಮ ಕ್ರಿಯಾತ್ಮಕ ಪ್ರಯತ್ನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ವಿಜಯ ನಗರದ ಮಾರುತಿ ಮಂದಿರದಲ್ಲಿ ಆಯೋಜಿಸಲಾಗಿದ್ದ ʼಫುಲ್ ಮೀಲ್ಸ್ʼ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ ಆಶ್ಚರ್ಯ ಕಾದಿತ್ತು.. ಚಿತ್ರದ ಸಂಗೀತ ನಿರ್ದೇಶಕ ಗುರುಕಿರಣ್, ನಾಯಕ ಲಿಖಿತ್ ಶೆಟ್ಟಿ, ನಿರ್ದೇಶಕ ಎನ್. ವಿನಾಯಕ, ನಾಯಕಿಯರಾದ ಖುಷೀ ರವಿ ಮತ್ತು ತೇಜಸ್ವಿನಿ ಶರ್ಮ ಅವರು ಹಾಡಿನ ಕ್ಯಾಸೆಟ್ ಅನ್ನು ಪ್ರದರ್ಶಿಸಿ ವಿಭಿನ್ನವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಗುರು ಕಿರಣ್ ಟೇಪ್ ರೆಕಾರ್ಡರ್‌ನಲ್ಲಿ ಹಾಡನ್ನು ಹಾಕುವ ಮುಖಾಂತರ ಹಾಡನ್ನು ಲೋಕಾರ್ಪಣೆ ಮಾಡಿ, ನೆರೆದಿದ್ದ ಎಲ್ಲರೂ ಕೆಲಕಾಲ ಹಳೆಯ ನೆನಪುಗಳನ್ನು ಮೆಲಕು ಹಾಕುವಂತೆ ಮಾಡಿದರು. ಬಿಡುಗಡೆಯಾದ ‘ವಾಹ್ ಏನೋ ಹವಾʼ ಮೆಲೋಡಿ ಪ್ರೇಮಗೀತೆ ಎಲ್ಲರ ಗಮನ ಸೆಳೆಯಿತು.
ಕವಿರಾಜ್ ಸಾಹಿತ್ಯವಿರುವ ಈ ಹಾಡು ಡಿಜಿಕೆ ಆಡಿಯೋ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ವಿಜೇತ್ ಅರಸ್ ಮತ್ತು ಸುನಿಧಿ ಗಣೇಶ್ ಹಾಡಿಗೆ ಧ್ವನಿಯಾಗಿದ್ದಾರೆ. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುರುಕಿರಣ್, ಸಂಗೀತವನ್ನು ಪ್ರಸ್ತುತಪಡಿಸುವ ರೀತಿ ಬದಲಾಗಬಹುದು ಆದರೆ ಸಂಗೀತ ಎಂದಿಗೂ ಬದಲಾಗುವುದಿಲ್ಲ, ಈಗಿನ ಪೀಳಿಗೆಯ ಟ್ರೆಂಡ್‌ಗೆ ತಕ್ಕಂತೆ ಮಾಡಿರುವ ʼಫುಲ್ ಮೀಲ್ಸ್ʼ ನ ಹಾಡುಗಳನ್ನು ಪ್ರೇಕ್ಷಕರು ಮೆಚ್ಚುಕೊಳ್ಳುತ್ತಾರೆ ಎಂದರು.
ʼಫುಲ್ಸ್ ಮೀಲ್ಸ್ʼ ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನೆಮಾ. ಮನೋರಂಜನೆಯ ಜತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.
ನವೆಂಬರ್ ಇಪ್ಪತ್ತೊಂದಕ್ಕೆ ಸಿನೆಮಾ ಬಿಡುಗಡೆ ದಿನಾಂಕ ನಿಗದಿ ಮಾಡಿಕೊಂಡಿರುವ ಚಿತ್ರತಂಡ ಮುಂದಿನ ಹಂತಗಳಲ್ಲಿ ಚಿತ್ರದ ಉಳಿದ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಯೊಂದಿಗೆ ಮತ್ತಷ್ಟು ಪ್ರಚಾರ ಮಾಡುತ್ತಾ ನವೆಂಬರ್ ಇಪ್ಪತ್ತೊಂದಕ್ಕೆ ‘ಫುಲ್ ಮೀಲ್ಸ್ʼ ಸವಿಯಲು ಜನರನ್ನು ಚಿತ್ರಮಂದಿರದತ್ತ ಬರುವಂತೆ ಮಾಡುವ ಗುರಿಯನ್ನು ಹೊಂದಿದೆ.
ಒಂದು ಸಮಯದಲ್ಲಿ ಉದಯ ಮ್ಯೂಸಿಕ್‌ನಲ್ಲಿ ಜನಪ್ರಿಯ ನಿರೂಪಕರಾಗಿದ್ದ ಲಿಖಿತ್ ಶೆಟ್ಟಿ ಈ ಹಿಂದೆ ಸಂಕಷ್ಟಕರ ಗಣಪತಿ, ಪುನೀತ್ ರಾಜ್ ಕುಮಾರ್ ಅವರ ಪಿ. ಆರ್. ಕೆ ಪ್ರೊಡಕ್ಷನ್‌ನಲ್ಲಿ ಮೂಡಿಬಂದ ‘ಫ್ಯಾಮಿಲಿ ಪ್ಯಾಕ್ʼ ಚಿತ್ರಗಳ ಮೂಲಕ ನಾಯಕ ನಟರಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಕಳೆದ ವರ್ಷ ತೆರೆಕಂಡ ಕೆ.ಎಂ. ಚೈತನ್ಯ ನಿರ್ದೇಶನದ ಅಬ್ಬಬ್ಬ ಚಿತ್ರದಲ್ಲಿ ಕೂಡ ನಾಯಕನಾಗಿ ಗಮನ ಸೆಳೆದಿದ್ದರು. ‘ಫುಲ್ ಮೀಲ್ಸ್ʼ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ತೊಡಗಿಸಿಕೊಂಡಿರುವ ಲಿಖಿತ್ ಶೆಟ್ಟಿ ತಮ್ಮ ಹಿಂದಿನ ಸಿನೆಮಾಗಳಿಗಿಂತ ಹೆಚ್ಚಿನ ಯಶಸ್ಸನ್ನು ಕಾಣುವ ನಿರೀಕ್ಷೆಯಲ್ಲಿದ್ದಾರೆ.
ಈ ಸುದ್ದಿಯನ್ನೂ ಓದಿ | Dasara Shopping Trend 2025: ಮಾರುಕಟ್ಟೆಗೆ ಮರಳಿದ ದಸರಾ ಗೊಂಬೆಗಳು
ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗುರು ಕಿರಣ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ಮನೋಹರ್ ಜೋಷಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ. ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೊನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಗಣೇಶ್ ರಾವ್, ಕೋಟೆ ಪ್ರಭಾಕರ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಇದೆ.