ಬೆಂಗಳೂರು: ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂತಸದ ಸಮಯದಲ್ಲಿ ನೂತನ ಚಿತ್ರದ ಘೋಷಣೆಯಾಗಿದೆ. ಎಸ್.ವಿ.ಸಿ. ಫಿಲಂಸ್ ಲಾಂಛನದಲ್ಲಿ ಎಂ. ಮುನೇಗೌಡ ಅವರು ನಿರ್ಮಿಸುತ್ತಿರುವ ʼಪ್ರೊಡಕ್ಷನ್ ನಂ 3ʼ ಚಿತ್ರವನ್ನು ʼಬಹದ್ದೂರ್ʼ, ʼಭರ್ಜರಿʼ, ʼಭರಾಟೆʼ, ʼಜೇಮ್ಸ್ʼ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿದ್ದಾರೆ. ಗಣೇಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ಮೂರನೇ ಚಿತ್ರವನ್ನು ಘೋಷಿಸಿರುವ ನಿರ್ಮಾಪಕ ಎಂ. ಮುನೇಗೌಡ ಅವರು ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಈ ಹಿಂದೆ ʼಭುವನಂ ಗಗನಂʼ ನಿರ್ಮಿಸಿದ್ದ ಎಂ. ಮುನೇಗೌಡ ಅವರು ಪ್ರಸ್ತುತ ʼಅಯೋಗ್ಯ 2ʼ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗ ಮೂರನೇ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಚೇತನ್ ಕುಮಾರ್ ಅವರ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರವಿದು. ಈ ನೂತನ ಚಿತ್ರದ ಚಿತ್ರೀಕರಣ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಶಿವು ಗೌಡ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ʼಪ್ರೊಡಕ್ಷನ್ ನಂ 3ʼ ಚಿತ್ರದ ತಾರಾಬಳಗ ಹಾಗೂ ತಂತ್ರಜ್ಞರ ಕುರಿತು ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರ ಬೀಳಲಿದೆ.
ಈ ಸುದ್ದಿಯನ್ನೂ ಓದಿ | LV Autorikshaw Handbag 2025: ಆಟೋರಿಕ್ಷಾ ಹ್ಯಾಂಡ್‌ಬ್ಯಾಗ್ ಅನಾವರಣಗೊಳಿಸಿದ ಲೂಯಿಸ್ ವ್ಯುಟನ್; ಬೆಲೆ ಕೇಳಿದ್ರೆ ದಂಗಾಗುತ್ತೀರಾ!