-ಕೇಶವ ಪ್ರಸಾದ್ ಬಿ.
ಮುಂಬೈ: ರಾಜ್ಯದಲ್ಲಿ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ಗಳನ್ನು ಕಳಿಸಿರುವ ವಿಧಾನದ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ಸಲಹೆಗಾರರ ತಂಡವು ತನ್ನ ಸಂಶೋಧನಾ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ಅದು ಏನು ಹೇಳಿದೆ ಎಂಬುದರ ವಿವರ ಇಲ್ಲಿದೆ. ಜಿಎಸ್‌ಟಿ ಸ್ವತಂತ್ರ ಭಾರತದ ಆರ್ಥಿಕ ಇತಿಹಾಸದಲ್ಲಿಯೇ ಮಹತ್ವದ ಪರೋಕ್ಷ ತೆರಿಗೆ ಸುಧಾರಣೆಯಾಗಿದೆ. ಪಾರದರ್ಶಕತೆ, ಏಕರೂಪದ ಮಾರುಕಟ್ಟೆ, (Stock Market) ಆದಾಯ ಸಂಗ್ರಹಣೆಯಲ್ಲಿ ಹೆಚ್ಚಳ ಉಂಟು ಮಾಡುವುದು ಹಾಗೂ ಅನೌಪಚಾರಿಕ ವ್ಯಾಪಾರಗಳನ್ನು ಸಂಘಟಿತಗೊಳಿಸುವುದು ಇದರ ಉದ್ದೇಶವಾಗಿದೆ. ಜಿಎಸ್‌ಟಿಯ ಈ ಉದ್ದೇಶಗಳು ಈಡೇರುತ್ತಿರುವುದರ ಬಗ್ಗೆ ನಾವು ಸಂಭ್ರಮಿಸುತ್ತಿರುವ ಹೊತ್ತಿನಲ್ಲಿಯೇ, ಈಗ ಉಂಟಾಗಿರುವ ಸವಾಲುಗಳ ಬಗ್ಗೆ ಯೋಚಿಸಬೇಕಾಗಿದೆ. ಕರ್ನಾಟಕದಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ಅನೇಕ ಮಂದಿ ಸಣ್ಣ ವ್ಯಾಪಾರಿಗಳು, ಬೀದಿ ಬದಿಯ ವರ್ತಕರಿಗೆ, ಅವರ ಯುಪಿಐ ಟ್ರಾನ್ಸಕ್ಷನ್‌ಗಳನ್ನು ಅಧರಿಸಿದ ಭಾರಿ ಮೊತ್ತದ ಜಿಎಸ್‌ಟಿ ತೆರಿಗೆ ನೋಟಿಸ್‌ಗಳನ್ನು ಕಳಿಸಿರುವುದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಎಸ್‌ಬಿಐನ ವರದಿ ಹೇಳಿದೆ.
ಆರ್ಥಿಕ ಚಟುವಟಿಕೆಗಳ ನಿಖರ ಚಿತ್ರಣವನ್ನು ಪಡೆಯುವುದು, ತೆರಿಗೆ ಸೋರಿಕೆಯನ್ನು ತಡೆಯುವುದು ಈ ಜಿಎಎಸ್‌ಟಿ ನೋಟಿಸ್‌ಗಳ ಹಿಂದಿನ ಉದ್ದೇಶವಾದರೂ, ನೋಟಿಸ್ ಕಳಿಸಿರುವ ರೀತಿಯಲ್ಲಿ ಸಮತೋಲನ ಮತ್ತು ಸಂವೇದನಾಶೀಲತೆ ಇರಲೇಬೇಕಿತ್ತು. ಈ ರೀತಿಯ ತೀಕ್ಷ್ಣ, ಕಠಿಣ ಕ್ರಮಗಳನ್ನು ದಿಢೀರ್ ಕೈಗೊಳ್ಳುವುದರಿಂದ ಸಣ್ಣ ವ್ಯಾಪಾರಿಗಳ ಸಮುದಾಯವು ಮತ್ತೆ ನಗದು ವ್ಯವಹಾರಕ್ಕೆ ಹಿಂತಿರುಗುವ ಸಾಧ್ಯತೆ ಇದೆ. ಇದರಿಂದಾಗಿ ಸಣ್ಣ ವ್ಯಾಪಾರಿಗಳನ್ನು ಔಪಚಾರಿಕ ವಲಯಕ್ಕೆ ಸೇರ್ಪಡೆಗೊಳಿಸುವ ಮೂಲ ಅಶಯಕ್ಕೇ ಧಕ್ಕೆಯಾಗಲಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ಕಳವಳ ವ್ಯಕ್ತಪಡಿಸಿದೆ.
ಜಿಎಸ್‌ಟಿಯ ಹಿಂದೆ ಪಾರದರ್ಶಕತೆ ಮತ್ತು ಕಂದಾಯ ಸೃಷ್ಟಿಯ ಭದ್ರ ಬುನಾದಿಯಿದೆ. ಆದರೆ ಇದು ದೀರ್ಘಕಾಲೀನವಾಗಿ, ಯಶಸ್ವಿಯಾಗಿ ಮುಂದುವರಿಯಬೇಕಿದ್ದರೆ, ಅದರಿಂದ ಎಲ್ಲ ಪಾಲುದಾರರಿಗೂ ಅನುಕೂಲ ಸಿಗುವಂತಿರಬೇಕು. ಯಾರಿಗೂ ಅದರಿಂದ ತೊಂದರೆ ಆಗಬಾರದು. ವಿಶೇಷವಾಗಿ ಸಣ್ಣ ವ್ಯಾಪಾರಿಗಳನ್ನು ದಂಡಿಸುವಂತಿರದೆ, ಅವರನ್ನು ಬಲಪಡಿಸುವಂತಿರಬೇಕು. ಸಮಗ್ರತೆ, ನ್ಯಾಯಸಮ್ಮತ ಅನುಷ್ಠಾನ ಇಲ್ಲಿ ನಿರ್ಣಾಯಕ ಎಂದು ಎಸ್‌ಬಿಐ ವರದಿ ಹೇಳಿದೆ.
ದೇಶದಲ್ಲಿ ಜಿಎಸ್‌ಟಿ ಜಾರಿಯಾಗಿ ಎಂಟು ವರ್ಷಗಳು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‌ಬಿಐ ಸಂಶೋಧನಾ ವರದಿಯಲ್ಲಿ ಕೆಲವು ಸ್ವಾರಸ್ವಕರ ವಿಚಾರಗಳನ್ನು, ಅಂಕಿ ಅಂಶಗಳನ್ನು ತಿಳಿಸಲಾಗಿದೆ.
- ದೊಡ್ಡ ರಾಜ್ಯಗಳು IGST ಸಂಗ್ರಹ ಹೆಚ್ಚಳಕ್ಕೆ ಪುಷ್ಟಿ ನೀಡಿವೆ. ಜಿಎಸ್‌ಟಿಯ ಪ್ರತಿ 5 ತೆರಿಗೆದಾರರಲ್ಲಿ ಒಬ್ಬರು ಮಹಿಳಾ ತೆರಿಗೆದಾರರಾಗಿದ್ದಾರೆ.
- ದೇಶದಲ್ಲಿ ಒಟ್ಟು 1 ಕೋಟಿ 52 ಲಕ್ಷ ಸಕ್ರಿಯ ಜಿಎಸ್‌ಟಿ ರಿಜಿಸ್ಟ್ರೇಶನ್ಸ್‌ಗಳು ಇವೆ. ಟಾಪ್ ಐದು ರಾಜ್ಯಗಳು 50 ಪರ್ಸೆಂಟ್ ರಿಜಿಸ್ಟ್ರೇಶನ್ ಪಾಲನ್ನು ಹೊಂದಿವೆ.
- ಜಿಎಸ್‌ಟಿ ಜಾರಿಯಾಗಿ ಕೇವಲ 5 ವರ್ಷಗಳಲ್ಲಿಯೇ ಜಿಎಸ್‌ಟಿ ಸಂಗ್ರಹದ ಪ್ರಮಾಣ ಡಬಲ್ ಆಗಿದೆ. ಪ್ರತಿ ತಿಂಗಳಿನ ಸರಾಸರಿ ಜಿಎಸ್‌ಟಿ ಕಲೆಕ್ಷನ್ ಈಗ 2 ಲಕ್ಷ ಕೋಟಿ ರುಪಾಯಿಗಳಾಗಿದೆ.
- ಒಟ್ಟು ಆದಾಯದಲ್ಲಿ ಟಾಪ್ 5 ರಾಜ್ಯಗಳು 41% ನೀಡುತ್ತಿವೆ.
- ಜಿಎಸ್‌ಟಿಯಲ್ಲಿ ಲಿಮಿಟೆಡ್ ಲಾಯಬಿಲಿಟಿ ಪಾರ್ಟನರ್ ಶಿಪ್ (LLP) ಮತ್ತು ಪ್ರೈವೇಟ್ ಲಿಮಿಟೆಡ್ ಕಂಪನಿಗಳ ನೋಂದಣಿ ಹೆಚ್ಚಿನ ಸಂಖ್ಯೆಯಲ್ಲಿ ಆಗಿದೆ.
- ಜಿಎಸ್‌ಟಿ ಸಂಗ್ರಹದಲ್ಲಿ ಟಾಪ್ 5ರಲ್ಲಿರುವ ರಾಜ್ಯಗಳು- ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ತಮಿಳುನಾಡು, ಹರಿಯಾಣ.
- ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ಬಳಿಕ ಎರಡನೇ ಸ್ಥಾನ ಕರ್ನಾಟಕಕ್ಕೆ ಇದೆ.
ಸೆನ್ಸೆಕ್ಸ್ ಇವತ್ತು 539 ಅಂಕ ಏರಿಕೆಯಾಗಿದ್ದು 82,726ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ159 ಅಂಕ ಏರಿಕೆಯಾಗಿ 25,219ಕ್ಕೆ ಸ್ಥಿರವಾಯಿತು. ಮುಖ್ಯವಾಗಿ ಅಮೆರಿಕ ಮತ್ತು ಜಪಾನ್ ನಡುವೆ ವ್ಯಾಪಾರ ಒಪ್ಪಂದ ಅಂತಿಮವಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಷೇರು ಮಾರುಕಟ್ಟೆ ಚೇತರಿಸಿತು. ಇದು ಭಾರತೀಯ ಮಾರುಕಟ್ಟೆಯ ಮೇಲೆ ಕೂಡ ಸಕಾರಾತ್ಮಕ ಪ್ರಭಾವ ಬೀರಿತು. ನಿಫ್ಟಿ 25,100 ಅಂಕಗಳ ಗಡಿ ದಾಟಲು ಕಾರಣವಾಯಿತು,
ಏಷ್ಯಾದ್ಯಂತ ಸ್ಟಾಕ್ ಇಂಡೆಕ್ಸ್‌ಗಳು ಇವತ್ತು ಚೇತರಿಸಿತ್ತು. ಮುಂಬರುವ ಚೀನಾ-ಅಮೆರಿಕ ಟ್ರೇಡ್ ಡೀಲ್ ಕೂಡ ಯಶಸ್ವಿಯಾಗಬಹುದು ಎಂಬ ವಿಶ್ವಾಸವನ್ನು ಇದು ಮೂಡಿಸಿದೆ. ಆದರೆ ಭಾರತ- ಅಮೆರಿಕ ನಡುವೆ ಇನ್ನೂ ವ್ಯಾಪಾರ ಒಪ್ಪಂದ ಅಂತಿಮವಾಗಿಲ್ಲ. ಕೆಲ ವಿಚಾರಗಳಿಗೆ ಸಂಬಂಧಿಸಿ ಇನ್ನೂ ಒಮ್ಮತ ಉಂಟಾಗದಿರುವುದು ಇದಕ್ಕೆ ಕಾರಣ.
ಏಷ್ಯಾದ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಚೇತರಿಕೆ ಮತ್ತು ಅಮೆರಿಕ-ಜಪಾನ್ ಟ್ರೇಡ್ ಡೀಲ್ ಆಗಿರುವುದರ ಬಗ್ಗೆ ಅಮೆರಿಕದ ಘೋಷಣೆಯ ಬೆನ್ನಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ಇವತ್ತು ಬೆಳಗಿನ ವಹಿವಾಟಿನಲ್ಲೇ ಚೇತರಿಸಿತು. ಜಪಾನ್‌ನಲ್ಲೂ ಕಳೆದ ಒಂದು ವರ್ಷದಲ್ಲಿನ ಗರಿಷ್ಠ ಮಟ್ಟಕ್ಕೆ ಸೂಚ್ಯಂಕಗಳು ಚೇತರಿಸಿವೆ.
ಸ್ಟಾಕ್ ಹೋಮ್‌ನಲ್ಲಿ ಮುಂದಿನ ವಾರ ಚೀನಾ ಮತ್ತು ಅಮೆರಿಕದ ನಿಯೋಗಗಳು ಮಾತುಕತೆ ನಡೆಸಲಿವೆ. ಆಗಸ್ಟ್ 12ರ ಡೆಡ್‌ಲೈನ್ ಅನ್ನು ವಿಸ್ತರಿಸುವ ಬಗ್ಗೆ ಚರ್ಚೆಯಾಗಲಿದೆ. ಜಾಗತಿಕ ಟ್ರೇಡ್ ಟೆನ್ಷನ್ ತಿಳಿಯಾಗುತ್ತಿರುವುದು ಈಕ್ವಿಟಿ ಮಾರುಕಟ್ಟೆಗೆ ಆಶಾದಾಯಕವಾಗಿದೆ. ಇದು ಜಾಗತಿಕ ಬೆಳವಣಿಗೆಯ ಮೇಲಿನ ಅನಿಶ್ಚಿತತೆಯನ್ನು ಕಡಿಮೆ ಮಾಡಲಿದೆ.
ಇಂದು ಲಾಭ ಗಳಿಸಿದ ಷೇರುಗಳು
ಟಾಟಾ ಮೋಟಾರ್ಸ್
ಮಾರುತಿ ಸುಜುಕಿ
ಅದಾನಿ ಪೋರ್ಟ್ಸ್
ಎಟರ್ನಲ್
ಮಹೀಂದ್ರಾ & ಮಹೀಂದ್ರಾ
ಇಂದು ನಷ್ಟಕ್ಕೀಡಾದ ಷೇರುಗಳು
ಟೈಟನ್
ಎಸ್‌ಬಿಐ
ಎಚ್‌ಡಿಎಫ್‌ಸಿ ಬ್ಯಾಂಕ್
ಎಚ್‌ಯುಎಲ್
ಇಂದು ಇಂಡೆಕ್ಸ್‌ಗಳ ಪೈಕಿ ನಿಫ್ಟಿ ರಿಯಾಲ್ಟಿ ಇಂಡೆಕ್ಸ್ 2% ಇಳಿಕೆ ದಾಖಲಿಸಿತು. ನಿಫ್ಟಿ ಆಟೊ, ಮೆಟಲ್, ಫಾರ್ಮಾ, ತೈಲ ಮತ್ತು ಅನಿಲ ಸೆಕ್ಟರ್ ಇಂಡೆಕ್ಸ್ ಗಳು ಇಳಿಯಿತು. ಆಟೊಮೊಬೈಲ್ ಮತ್ತು ಹಣಕಾಸು ಷೇರುಗಳು ಸಕಾರಾತ್ಮಕವಾಗಿತ್ತು. ಬಹುತೇಕ ಎಲ್ಲ ಇಂಡೆಕ್ಸ್‌ಗಳು ಲಾಭ ಗಳಿಸಿತು. ಸ್ಮಾಲ್ ಕ್ಯಾಪ್ಸ್ ಮತ್ತು ನಿಡ್ ಕ್ಯಾಪ್ಸ್ ಮಾತ್ರ ಫ್ಲಾಟ್ ಆಗಿತ್ತು. ಗ್ಲೋಬಲ್ ಟ್ರೇಡ್ ಟೆನ್ಷನ್ಸ್ ಕಡಿಮೆಯಾಗುತ್ತಿರುವುದನ್ನು ಸ್ಟಾಕ್ ಮಾರ್ಕೆಟ್ ಗ್ರಹಿಸಿದೆ.
ಇಂದಿನ ಹೈಲೈಟ್ಸ್
- ಇನ್ಫೋಸಿಸ್ ಷೇರುಗಳು Q1 ರಿಸಲ್ಟ್‌ಗೆ ಮುನ್ನ 1% ಏರಿಕೆಯಾಗಿವೆ.
- JSW Infra ಷೇರುಗಳ ದರದಲ್ಲಿ 3% ಏರಿಕೆಯಾಗಿದೆ. ಕಂಪನಿಯು ಮೊದಲ ತ್ರೈಮಾಸಿಕದಲ್ಲಿ 390 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದು, 31% ಹೆಚ್ಚಳವಾಗಿದೆ.
- ಪೇಟಿಎಂ ಷೇರುಗಳ ದರದಲ್ಲಿ 3% ಹೆಚ್ಚಳವಾಗಿದ್ದು, ಮೊದಲ ತ್ರೈಮಾಸಿಕದಲ್ಲಿ 122 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿರುವುದು ಸಕಾರಾತ್ಮಕ ಪ್ರಭಾವ ಬೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪೇಟಿಎಂ ನಷ್ಟದಲ್ಲಿತ್ತು.
- IRFC ಷೇರು ದರದಲ್ಲಿ 4% ಏರಿಕೆಯಾಗಿದ್ದು, ಮೊದಲ ತ್ರೈಮಾಸಿಕದಲ್ಲಿ 1,746 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿರುವುದು ಪ್ರಭಾವ ಬೀರಿದೆ.
- ಡಿಕ್ಸಾನ್ ಟೆಕ್ನಾಲಜೀಸ್ ಷೇರು ದರದಲ್ಲಿ 3% ಏರಿಕೆಯಾಗಿದ್ದು, ಮೊದಲ ತ್ರೈಮಾಸಿಕದಲ್ಲಿ 280 ಕೋಟಿ ರುಪಾಯಿ ಲಾಭ ಗಳಿಸಿರುವುದು ಇದಕ್ಕೆ ಕಾರಣವಾಗಿದೆ.
ಸ್ಟಾಕ್ ಮಾರ್ಕೆಟ್ ಟ್ರೆಂಡ್ ಬಗ್ಗೆ ತಜ್ಞರು ಏನೆನ್ನುತ್ತಾರೆ ಎಂಬುದನ್ನು ನೋಡೋಣ. ಜಾಗತಿಕ ಮಟ್ಟದಲ್ಲಿ ಈಕ್ವಿಟಿ ಮಾರುಕಟ್ಟೆಗಳಲ್ಲಿ ಚೇತರಿಕೆ ಕಂಡು ಬರುತ್ತಿದೆ. ಎಲ್ಲ ಚಿಂತೆಗಳನ್ನು, ವಾಲ್ಯುಯೇಶನ್ ಕುರಿತ ಕಳವಳಗಳನ್ನು ಹಿಂದಿಕ್ಕಿ ಸೂಚ್ಯಂಕಗಳು ಏರುಗತಿಯಲ್ಲಿವೆ. ಸದ್ಯಕ್ಕೆ ಈ ಟ್ರೇಂಡ್ ಮುಂದುವರಿಯುವ ಸಾಧ್ಯತೆ ಇದೆ ಎಂದು ಜಿಯೊಜಿತ್ ಸಂಸ್ಥೆಯ ಇನ್ವೆಸ್ಟ್‌ಮೆಂಟ್ ಸ್ಟ್ರಾಟಜಿಸ್ಟ್ ಆಗಿರುವ ಡಾ. ವಿಕೆ ವಿಜಯ್ ಕುಮಾರ್ ತಿಳಿಸಿದ್ದಾರೆ.
ಕ್ಯೂ 1 ರಿಸಲ್ಟ್ ಬಳಿಕ ಬ್ಯಾಂಕಿಂಗ್ ಮತ್ತು ಡಿಜಿಟಲ್ ಷೇರುಗಳು ಚೇತರಿಸುತ್ತಿವೆ. ಪ್ರೈವೇಟ್ ಸೆಕ್ಟರ್‌ನಲ್ಲಿರುವ ಹೈ ಕ್ವಾಲಿಟಿ ಬ್ಯಾಂಕಿಂಗ್ ಷೇರುಗಳಿಗೆ ಬೇಡಿಕೆ ಉಂಟಾಗಿದೆ. ಮುಖ್ಯವಾಗಿ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಗಮನಸೆಳೆದಿದೆ. ಎಟರ್ನಲ್ ಮತ್ತು ಪೇಟಿಎಂನ ಕ್ಯೂ 1 ರಿಸಲ್ಟ್ ಆಶಾದಾಯಕವಾಗಿದೆ ಎಂದು ವಿಜಯ್ ಕುಮಾರ್ ಅವರು ಹೇಳಿದ್ದಾರೆ.
ಇವತ್ತು ಗ್ಲೋಬಲ್ ಮಾರ್ಕೆಟ್ ಬಗ್ಗೆ ಹೇಳುವುದಿದ್ದರೆ, ಜಪಾನ್‌ನಲ್ಲಿ ಸೂಚ್ಯಂಕಗಳು ಕಳೆದ ಒಂದು ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಯಿತು. ಅಮೆರಿಕ-ಜಪಾನ್ ವ್ಯಾಪಾರ ಒಪ್ಪಂದ ಅಂತಿಮ ಆಗುರುವುದು ಇದಕ್ಕೆ ಪ್ರಮುಖ ಕಾರಣ. ಜಪಾನ್‌ನ ಆಟೊಮೊಬೈಲ್‌ಗೆ ಆಮದು ಸುಂಕವನ್ನು ಅಮೆರಿಕ ಇಳಿಸಿದೆ. 15% ಸುಂಕವನ್ನು ಫೈನಲ್ ಮಾಡಿದೆ. ಈ ಹಿಂದೆ ಆಟೊಮೊಬೈಲ್ ಗೆ 25% ಸುಂಕವನ್ನು ಉದ್ದೇಶಿಸಲಾಗಿತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ 3,548 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಅಥವಾ ಡೊಮೆಸ್ಟಿಕ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ 5,239 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಬ್ರೆಂಟ್ ಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ 69 ಡಾಲರ್ ನಷ್ಟಿತ್ತು. ಡಾಲರ್ ಎದುರು ರುಪಾಯಿ ಮೌಲ್ಯ 86 ರುಪಾಯಿ 46 ಪೈಸೆಯಷ್ಟಿತ್ತು.
ಈ ಸುದ್ದಿಯನ್ನೂ ಓದಿ | Karnataka escoms: ಮಾಹಿತಿ ತಂತ್ರಜ್ಞಾನ ಉನ್ನತೀಕರಣ: ಜುಲೈ 25ರಿಂದ ಎರಡು ದಿನ ಎಸ್ಕಾಂಗಳ ಆನ್‌ಲೈನ್ ಸೇವೆ ಅಲಭ್ಯ