ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trump's Renewed Tariff: ಮತ್ತೆ ಟ್ರಂಪ್ ಟಾರಿಫ್‌ ಬೆದರಿಕೆ; ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

Stock Market: ಭಾರತದ ವಿರುದ್ಧ ಮತ್ತಷ್ಟು ಟಾರಿಫ್‌ ಹೇರುವ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದು, ಇದರ ಬೆನ್ನಲ್ಲೇ ಸೆನ್ಸೆಕ್ಸ್‌ ಮತ್ತು ನಿಫ್ಟಿ ಮಂಗಳವಾರ (ಆಗಸ್ಟ್‌ 5) ಬೆಳಗ್ಗಿನ ವಹಿವಾಟಿನಲ್ಲಿ ಇಳಿಕೆ ದಾಖಲಿಸಿತು. ಸೆನ್ಸೆಕ್ಸ್‌ 308 ಅಂಕ ಕಳೆದುಕೊಂಡು 80,710ಕ್ಕೆ ಸ್ಥಿರವಾಯಿತು. ನಿಫ್ಟಿ 73 ಅಂಕ ನಷ್ಟದಲ್ಲಿ 24,649ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎಲ್ಲ ಪ್ರಮುಖ ಸೆಕ್ಟರ್‌ಗಳ ಇಂಡೆಕ್ಸ್‌ಗಳು ಇಳಿಕೆ ಆಗಿದೆ.

-ಕೇಶವ ಪ್ರಸಾದ್‌ ಬಿ.

ಮುಂಬೈ: ಸೆನ್ಸೆಕ್ಸ್‌ (Sensex) ಮತ್ತು ನಿಫ್ಟಿ (Nifty) ಮಂಗಳವಾರ (ಆಗಸ್ಟ್‌ 5) ಬೆಳಗ್ಗಿನ ವಹಿವಾಟಿನಲ್ಲಿ ಇಳಿಕೆ ದಾಖಲಿಸಿತು. ಬೆಳಗ್ಗೆ 11.30ಕ್ಕೆ ಸೆನ್ಸೆಕ್ಸ್‌ 350 ಅಂಕ ಕಳೆದುಕೊಂಡು 80,702 ರ ಮಟ್ಟದಲ್ಲಿದ್ದರೆ, ನಿಫ್ಟಿ 88 ಅಂಕ ನಷ್ಟದಲ್ಲಿ 24,639ರ ಮಟ್ಟದಲ್ಲಿ ಇತ್ತು. ಅಂತಿಮವಾಗಿ ಸೆನ್ಸೆಕ್ಸ್‌ 308 ಅಂಕ ಕಳೆದುಕೊಂಡು 80,710ಕ್ಕೆ ಸ್ಥಿರವಾಯಿತು. ನಿಫ್ಟಿ 73 ಅಂಕ ನಷ್ಟದಲ್ಲಿ 24,649ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎಲ್ಲ ಪ್ರಮುಖ ಸೆಕ್ಟರ್‌ಗಳ ಇಂಡೆಕ್ಸ್‌ಗಳು ಇಳಿಕೆ ಆಯಿತು. ನಿಫ್ಟಿ ಐಟಿ, ನಿಫ್ಟಿ ಫಾರ್ಮಾ ಸ್ಟಾಕ್ಸ್‌ ನಷ್ಟಕ್ಕೀಡಾಯಿತು (Stock Market). ಮುಖ್ಯವಾಗಿ ಭಾರತದ ವಿರುದ್ಧ ಮತ್ತಷ್ಟು ಟಾರಿಫ್‌ ಹೇರುವ ಟ್ರಂಪ್‌ (Trump's Renewed Tariff) ಅವರ ಬೆದರಿಕೆ ನಕಾರಾತ್ಮಕವಾಗಿ ಪರಿಣಮಿಸಿತು.

ಇಂಡಸ್‌ ಇಂಡ್‌ ಬ್ಯಾಂಕ್‌ ಷೇರಿನ ದರದಲ್ಲಿ 4.1% ಏರಿಕೆ ಆಯಿತು. ಬಿಸ್‌ಇನಲ್ಲಿ ಷೇರಿನ ದರ 837/- ಇತ್ತು. ಬ್ಯಾಂಕಿನ ಆಡಳಿತ ಮಂಡಳಿಯು ನೂತನ ಸಿಇಒ ಮತ್ತು ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿ ರಾಜೀವ್‌ ಆನಂದ್‌ ಅವರನ್ನು ನೇಮಿಸಿದ ಬಳಿಕ ಷೇರುಗಳ ದರ ಏರಿಕೆಯಾಗಿದೆ. ಅವರ ಅಧಿಕಾರಾವಧಿ ಮುಂದಿನ ಮೂರು ವರ್ಷಗಳಾಗಿದೆ. ಸತತ 11 ದಿನಗಳಿಂದ ವಿದೇಶಿ ಹೂಡಿಕೆದಾರರ ಹೂಡಿಕೆಯ ಹೊರ ಹರಿವು ಉಂಟಾಗಿದೆ. ಇದೂ ನಕಾರಾತ್ಮಕ ಪ್ರಭಾವ ಬೀರಿದೆ.



ಹೈವೇ ಇನ್‌ ಫ್ರಾಸ್ಟ್ರಕ್ಚರ್‌ ಕಂಪನಿಯ ಐಪಿಒ ಮಂಗಳವಾರ ಆರಂಭವಾಗಿದ್ದು, ಜಿಎಂಪಿ ಸ್ಟ್ರಾಂಗ್‌ ಆಗಿದೆ. ಜಿಎಂಪಿ 57% ಆಗಿದ್ದು, ಷೇರು ಲಿಸ್ಟ್‌ ಆದ ಬಳಿಕ ಹೂಡಿಕೆದಾರರಿಗೆ ಲಾಭದಾಯಕವಾಗುವ ನಿರೀಕ್ಷೆ ಇದೆ. ಆಗಸ್ಟ್‌ 7ಕ್ಕೆ ಐಪಿಒ ಮುಕ್ತಾಯವಾಗಲಿದೆ. ಎನ್‌ಎಸ್‌ಇನಲ್ಲಿ ಆಗಸ್ಟ್‌ 12ಕ್ಕೆ ಷೇರು ಲಿಸ್ಟ್‌ ಆಗಲಿದೆ. ಷೇರಿನ ಐಪಿಒ ದರ 65-70/- ಆಗಿದೆ.

ಈ ಸುದ್ದಿಯನೂ ಓದಿ: Donald Trump: ಭಾರತದ ಸರಕುಗಳ ಮೇಲಿನ ಸುಂಕ ಮತ್ತಷ್ಟು ಹೆಚ್ಚಿಸುವುದಾಗಿ ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಹೈವೇ ಇನ್‌ಫ್ರಾಸ್ಟ್ಕ್ಷರ್‌ ಕಂಪನಿಯು ಟೋಲ್‌ ಕಲೆಕ್ಷನ್‌ ಮತ್ತು ಇಪಿಸಿ ಇನ್‌ಫ್ರಾಸ್ಟ್ರಕ್ಚರ್‌ನಲ್ಲಿ ಮೂರು ದಶಕಗಳ ಅನುಭವವನ್ನು ಹೊಂದಿದೆ. ಸಿಮನ್ಸ್‌ ಎನರ್ಜಿ ಇಂಡಿಯಾ ಷೇರಿನ ದರದಲ್ಲಿ 5% ಏರಿಕೆ ಆಯಿತು.

ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಗ್ರೂಪ್‌ ಕಂಪನಿಗಳ ಷೇರುಗಳ ದರದಲ್ಲಿ ಕಳೆದ 5 ದಿನಗಳಲ್ಲಿ 14% ಇಳಿಕೆಯಾಗಿದೆ.

ಟ್ರಂಪ್‌ ಟ್ರೇಡ್‌ ವಾರ್‌ಗೆ ಭಾರತದ ತಿರುಗೇಟು

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗೆ ಭಾರತದಿಂದ ಅಮರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ 25% ತೆರಿಗೆಯನ್ನು ಘೋಷಿಸಿ ವಾಣಿಜ್ಯ ಸಂಘರ್ಷ ಆರಂಭಿಸಿರುವುದು ನಿಮಗೆ ಗೊತ್ತಿದೆ. ಆದರೆ ಆಗಸ್ಟ್‌ 4ರ ಸೋಮವಾರ ಮತ್ತೆ ಬೆದರಿಕೆ ಹಾಕಿದ್ದಾರೆ. ತಮ್ಮದೇ ಮಾಲಿಕತ್ವದ ಟ್ರುತ್‌ ಸೋಶಿಯಲ್‌ ಮೀಡಿಯಾ ಪ್ಲಾಟ್‌ ಫಾರ್ಮ್‌ನಲ್ಲಿ ಟ್ರಂಪ್‌ ಅವರು ಭಾರತದ ವಿರುದ್ಧ ಕಿಡಿ ಕಾರಿದ್ದಾರೆ. ಹಾಗಾದರೆ ಟ್ರಂಪ್‌ ಅವರ ಪೋಸ್ಟ್‌ನಲ್ಲಿ ಏನಿದೆ?

ಟ್ರಂಪ್‌ ಹೀಗೆ ಆರೋಪಿಸಿದ್ದಾರೆ- ಭಾರತವು ರಷ್ಯಾದಿಂದ ಕೇವಲ ಭಾರಿ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿಲ್ಲ. ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕೆ ಮಾರುತ್ತಿದೆ. ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದಿಂದ ಎಷ್ಟು ಜನ ಸಾಯುತ್ತಿದ್ದಾರೆ ಎಂಬುದಕ್ಕೆ ಭಾರತ ಕ್ಯಾರೇ ಮಾಡುತ್ತಿಲ್ಲ. ಹೀಗಾಗಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ತೆರಿಗೆಯನ್ನು ನಾನು ಹೆಚ್ಚಿಸುತ್ತೇನೆʼʼ ಎಂದು ಟ್ರಂಪ್‌ ನೇರವಾಗಿ ಬೆದರಿಕೆ ಹಾಕಿದ್ದಾರೆ.

ಇದಕ್ಕೆ ಭಾರತದ ವಿದೇಶಾಂಗ ಸಚಿವಾಲಯ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದೆ. ವಿದೇಶಾಂಗ ಸಚಿವಾಲಯವು ಒಟ್ಟು 6 ಮುಖ್ಯಾಂಶಗಳನ್ನು ಪ್ರಸ್ತಾಪಿಸಿ ಟ್ರಂಪ್‌ ಅವರಿಗೆ ಪ್ರತ್ಯುತ್ತರ ಕೊಟ್ಟಿದೆ. ಅದರ ವಿವರಗಳನ್ನು ನೋಡೋಣ. ಇದರೊಂದಿಗೆ ಭಾರತ ಮೊದಲ ಬಾರಿಗೆ ಟ್ರಂಪ್‌ ಸರಕಾರದ ಆರೋಪಗಳಿಗೆ ಅಧಿಕೃತವಾಗಿ 6 ಪಾಯಿಂಟ್‌ ಗಳಲ್ಲಿ ತೀಕ್ಷ್ಣವಾದ ಪ್ರತ್ಯುತ್ತರವನ್ನು ಕೊಟ್ಟಿದೆ.

  • ಉಕ್ರೇನ್‌ ಸಂಘರ್ಷದ ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದರಿಂದ ಅಮೆರಿಕ ಮತ್ತು ಯುರೋಪ್‌ ಭಾರತವನ್ನು ಟಾರ್ಗೆಟ್‌ ಮಾಡುತ್ತಿವೆ. ಹೌದು, ಭಾರತವು ರಷ್ಯಾದಿಂದ ತೈಲವನ್ನು ಆಮದು ಮಾಡುತ್ತಿದೆ. ಏಕೆಂದರೆ ಉಕ್ರೇನ್‌ ಸಂಘರ್ಷದ ಬಳಿಕ ಸಾಂಪ್ರದಾಯಿಕವಾಗಿ ಭಾರತಕ್ಕೆ ತೈಲ ಸರಬರಾಜು ಮಾಡುತ್ತಿದ್ದ ಕೊಲ್ಲಿ ರಾಷ್ಟ್ರಗಳು ಈಗ ಯುರೋಪ್‌ಗೆ ಹೆಚ್ಚು ಪೂರೈಸುತ್ತಿವೆ. ಆ ಸಮಯದಲ್ಲಿ ಅಮೆರಿಕ ಕೂಡ ಭಾರತವು ರಷ್ಯಾದಿಂದ ತೈಲ ಖರೀದಿಸಿದ್ದನ್ನು ಪ್ರೋತ್ಸಾಹಿಸಿತ್ತು. ಏಕೆಂದರೆ ಗ್ಲೋಬಲ್‌ ಎನರ್ಜಿ ಮಾರ್ಕೆಟ್‌ನ ಸ್ಥಿರತೆಯನ್ನು ಕಾಯ್ದುಕೊಳ್ಳಲು ಇದರಿಂದ ಸಹಾಯಕವಾಗುತ್ತಿತ್ತು.
  • ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ತರಿಸಿಕೊಳ್ಳುತ್ತಿರುವುದು ದೇಶದ ಗ್ರಾಹಕರಿಗೆ ಸಅಧ್ಯವಾದಷ್ಟು ಕಡಿಮೆ ದರದಲ್ಲಿ ತೈಲ ಸಿಗಲಿ ಎಂಬ ಕಾರಣಕ್ಕಾಗಿದೆ. ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದಕ್ಕೆ ಭಾರತವನ್ನು ಟೀಕಿಸುವ ರಾಷ್ಟ್ರಗಳು ಕೂಡ ರಷ್ಯಾ ಜತೆಗೆ ವ್ಯಾಪಾರ ಮಾಡುತಿವೆ. ನಮಗಾದರೋ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ರಷ್ಯಾದಿಂದ ತೈಲ ಖರೀದಿ ಅನಿವಾರ್ಯವಾಗಿದೆ.
  • ಐರೋಪ್ಯ ಒಕ್ಕೂಟವು 2024ರಲ್ಲಿ ರಷ್ಯಾದಿಂದ 67.5 ಶತಕೋಟಿ ಡಾಲರ್‌ ಮೌಲ್ಯದ ದ್ವಿಪಕ್ಷೀಯ ವ್ಯಾಪಾರವನ್ನು ಮಾಡಿದೆ.ಅನೇಕ ಸರಕುಗಳನ್ನು ಖರೀದಿಸಿದೆ. 2023ರಲ್ಲಿ 17.2 ಶತಕೋಟಿ ಡಾಲರ್‌ ಮೌಲ್ಯದ ಸೇವೆಗಳ ವ್ಯಾಪಾರವನ್ನೂ ರಷ್ಯಾ ಜತೆಗೆ ಮಾಡಿದೆ. ಇದು ಭಾರತವು ರಷ್ಯಾ ಜತೆಗೆ ಮಾಡುತ್ತಿರುವ ಒಟ್ಟು ವ್ಯಾಪಾರಕ್ಕಿಂತಲೂ ಜಾಸ್ತಿ. ಯುರೋಪ್‌ 2024ರಲ್ಲಿ ರಷ್ಯಾದಿಂದ ದಾಖಲೆಯ 16.5 ಮಿಲಿಯನ್‌ ಟನ್‌ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಂಡಿದೆ. 2022ರಲ್ಲಿ 15.21 ಮಿಲಿಯನ್‌ ಟನ್‌ ಎಲ್‌ಎನ್‌ಜಿಯನ್ನು ತರಿಸಿಕೊಂಡಿತ್ತು.
  • ಯುರೋಪ್-ರಷ್ಯಾ ನಡುವಣ ವ್ಯಾಪಾರ ಕೇವಲ ಇಂಧನವನ್ನು ಮಾತ್ರ ಒಳಗೊಂಡಿಲ್ಲ. ರಸಗೊಬ್ಬರ, ಮೈನಿಂಗ್‌ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು, ಮೆಶಿನರೀಸ್‌ ಮತ್ತು ಟ್ರಾನ್ಸ್‌ಪೋರ್ಟ್‌ ಎಕ್ವಿಪ್‌ ಮೆಂಟ್‌ ಗಳನ್ನೂ ಒಳಗೊಂಡಿವೆ.
  • ಸ್ವತಃ ಅಮೆರಿಕವು ತನ್ನ ನ್ಯೂಕ್ಲಿಯರ್‌ ಇಂಡಸ್ಟ್ರಿಗೆ ಬೇಕಾಗುವ ಯುರೇನಿಯಂ ಹೆಕ್ಸಾಫ್ಲೋರೈಡ್‌ ಅನ್ನು ರಷ್ಯದಿಂದ ಆಮದು ಮಾಡಿಕೊಳ್ಳುತ್ತಿದೆ. ಎಲೆಕ್ಟ್ರಾನಿಕ್‌ ವಾಹನಗಳ ಉದ್ದಿಮೆಗೆ ಬೇಕಾಗುವ ಪಲ್ಲಾಡಿಯಂ ಅನ್ನು ತರಿಸಿಕೊಳ್ಳುತ್ತಿದೆ. ರಸಗೊಬ್ಬರ ಮತ್ತು ರಾಸಾಯನಿಕಗಳನ್ನು ರಷ್ಯಾದಿಂದಲೇ ಆಮದು ಮಾಡುತ್ತಿದೆ.
  • ಈ ಹಿನ್ನೆಲೆಯಲ್ಲಿ ಭಾರತವನ್ನು ಟಾರ್ಗೆಟ್‌ ಮಾಡುತ್ತಿರುವುದು ಸಮಂಜಸವಲ್ಲ. ಅತಾರ್ಕಿಕವಾಗಿದೆ. ಯಾವುದೇ ಪ್ರಮುಖ ಆರ್ಥಿಕತೆಯಂತೆ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಮತ್ತು ಆರ್ಥಿಕ ಭದ್ರತೆಯನ್ನು ರಕ್ಷಿಸಿಕೊಳ್ಳಲಿದೆ.

ಹೀಗೆ 6 ಪಾಯಿಂಟ್‌ಗಳಲ್ಲಿ ಟ್ರಂಪ್‌ ಅವರ ಮುಖವಾಡವನ್ನು ಭಾರತದ ವಿದೇಶಾಂಗ ಸಚಿವಾಲಯ ಥಟ್ಟಂತ ಕಳಚಿ ಹಾಕಿದೆ.