ಬೆಂಗಳೂರು : ಕಾರ್ಮಿಕನೊಬ್ಬ ಕೇಸರಿ ಶಾಲು (Saffron shawl) ಧರಿಸಿಕೊಂಡಿದ್ದಕ್ಕೆ ಹಲ್ಲೆ (Assault case) ಮಾಡಿದ್ದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ (Bengaluru crime) ಕಲಾಸಿಪಾಳ್ಯ ಪೊಲೀಸರು ಮೂವರು ಆರೋಪಿಗಳನ್ನು ಇದೀಗ ಆರೆಸ್ಟ್ ಮಾಡಿದ್ದಾರೆ. ಆರೋಪಿಗಳಾದ ತಬ್ರಾಜ್, ಇಮ್ರಾನ್ ಖಾನ್ ಹಾಗೂ ಅಜೀಜ್ ಖಾನ್ ಎಂಬ ಮೂವರು ಆರೋಪಿಗಳನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಆಗಸ್ಟ್ 24ರಂದು ಸುರೇಂದ್ರ ಕುಮಾರ್ ಎಂಬ ಕಾರ್ಮಿಕನ ಮೇಲೆ ಈ ಮೂವರು ಹಲ್ಲೆ ಮಾಡಿದ್ದರು.
ಹಲ್ಲೆಗೊಳಗಾದ ಸುರೇಂದ್ರ ಕುಮಾರ್ ಮತ್ತು ಹರಿಕೃಷ್ಣ ಎಂಬವರು ರಾಯಲ್ ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 24ರ ರಾತ್ರಿ 9:30ರ ಸುಮಾರಿಗೆ ಇವರು ಕೇಸರಿ ರುಮಾಲು ಧರಿಸಿಕೊಂಡು ಕೆಲಸ ಮಾಡುತ್ತಿದ್ದಾಗ ಈ ಮೂವರು ಆರೋಪಿಗಳು ಇವರ ಬಳಿಗೆ ಬಂದು, ʼನೀನು ಯಾಕೆ ಕೇಸರಿ ಟಾವೆಲ್ ಹಾಕಿದ್ದೀಯಾ?ʼ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ.
ಇದನ್ನು ನೋಡಿದ ಹರಿಕೃಷ್ಣ ಅವರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಹೋಗಿದ್ದಾರೆ. ಆಗ ಆರೋಪಿಗಳು ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ಬೈದು ಹರಿಕೃಷ್ಣ ಅವರ ಶರ್ಟ್ ಅನ್ನು ಹರಿದು ಹೊಡೆದಿದ್ದಾರೆ. ಬಳಿಕ, ಆರೋಪಿಗಳು ʼನಿಮ್ಮ ಕೂಲಿ ಮಾಡುವ ಹುಡುಗ ಯಾಕೆ ಕೇಸರಿ ಟಾವೆಲ್ ಹಾಕಿದ್ದಾನೆ. ಅದನ್ನು ತೆಗೆಸಿʼ ಎಂದು ಜೋರು ಮಾಡಿ ಅಲ್ಲಿಂದ ಹೊರಟು ಹೋಗಿದ್ದರು. ಈ ಬಗ್ಗೆ ಸುರೇಂದ್ರ ಹಾಗೂ ಹರಿಕೃಷ್ಣ ದೂರು ನೀಡಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದರು.
ಇದನ್ನೂ ಓದಿ: Devarayanadurga Temple: ಕುಂಕುಮ ಇಡುವಾಗ ಅನುಚಿತ ವರ್ತನೆ; ವೃದ್ಧ ಅರ್ಚಕನ ಮೇಲೆ ಯುವಕರಿಂದ ಮನಸೋ ಇಚ್ಛೆ ಹಲ್ಲೆ