ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಹಾಡ ಹಗಲೇ ಯುವಕನನ್ನು ಬರ್ಬರವಾಗಿ ಕೊಲೆಗೈದು ವಿಡಿಯೊ ಹಂಚಿಕೊಂಡ ಪಾಪಿ

ರಾಜಸ್ಥಾನದಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, ವಿಪಿನ್‌ ಅಲಿಯಾಸ್‌ ವಿಕ್ಕಿ ಎಂಬ ಯುವಕನನ್ನು ಅಸನ್‌ ಖಾನ್‌ ಎನ್ನುವಾತ ಚಾಕುವಿನಿಂದ 14 ಕಡೆ ಇರಿದು ಬರ್ಬರವಾಗಿ ಕೊಲೆಗೈದಿದ್ದಾನೆ. ಕೊಲೆ ಮಾಡಿದ ನಂತರ ಖಾನ್‌ ಸೋಶಿಯಲ್‌ ಮೀಡಿಯಾದಲ್ಲಿ ಚಾಕು ತೋರಿಸಿ ವಿಡಿಯೊ ಮಾಡಿ ನಾನೇ ಕೊಲೆ ಮಾಡಿದ್ದು ಎಂದು ನಿರ್ಭಯವಾಗಿ ಒಪ್ಪಿಕೊಂಡಿದ್ದಾನೆ.

ಅಸನ್‌ ಖಾನ್‌.

ಜೈಪುರ: ರಾಜಸ್ಥಾನದ ಜಾಂದೋಲಿ ಪ್ರದೇಶದಲ್ಲಿ ಸಂಭವಿಸಿದ ಕೊಲೆ ಪ್ರಕರಣ (Murder Case) ಎರಡು ಸಮುದಾಯಗಳ ನಡುವೆ ಕೋಮು ಗಲಭೆಗೆ ಕಾರಣವಾಗಿದೆ. ವಿಪಿನ್‌ ಅಲಿಯಾಸ್‌ ವಿಕ್ಕಿ ಎಂಬ ಯುವಕನನ್ನು ಅಸನ್‌ ಖಾನ್‌ ಎನ್ನುವಾತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಅಸನ್‌ ಖಾನ್‌ ಚಾಕುವಿನಿಂದ ವಿಪಿನ್‌ನ ದೇಹದ 14 ಕಡೆ ಇರಿದಿದ್ದಾನೆ. ಕೊಲೆ ಮಾಡಿದ ನಂತರ ಖಾನ್‌ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡು, ಚಾಕು ತೋರಿಸಿ ತಾನೇ ಕೊಲೆ ಮಾಡಿದ್ದು ಎಂದು ನಿರ್ಭಯವಾಗಿ ಒಪ್ಪಿಕೊಂಡಿದ್ದಾನೆ.

ಈ ವಿಡಿಯೊದಲ್ಲಿ ಖಾನ್‌ ಪ್ರತೀಕಾರ ತೀರಿಸಿಕೊಂಡಿರುವುದಾಗಿ ಹೇಳಿದ್ದಾನೆ. ಬಳಿಕ ಪರಿಸ್ಥಿತಿ ಗಂಭಿರವಾಗುತ್ತಿದ್ದಂತೆ ವಿಡಿಯೊ ಡಿಲೀಟ್‌ ಮಾಡಿದ್ದಾನೆ. ವಿಡಿಯೊ ಡಿಲೀಟ್‌ ಆದರೂ ಅಷ್ಟೊತ್ತಿಗಾಗಲೇ ಘಟನೆಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿ ಹಲವರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಸ್ಥಳಕ್ಕೆ ಧಾವಿಸಿದ ಪೋಲಿಸರ ಮೇಲೂ ಕಲ್ಲು ತೂರಾಟ ನಡೆದಿದೆ. ಈ ವೇಳೆ ಪ್ರತಿಭಟನಾಕಾರರು ಜೈಪುರ- ಆಗ್ರಾ ಹೆದ್ದಾರಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ.



ಘಟನೆಯ ವಿವರ

ಕೊಲೆಯಾದ ವಿಪಿನ್‌ ಎಂಬ ವ್ಯಕ್ತಿ ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೂ ದುಷ್ಕರ್ಮಿ ಖಾನ್‌ಗೂ ಹಿಂದಿನಿಂದಲೂ ದ್ವೇಷವಿತ್ತು. ಕೆಲ ತಿಂಗಳ ಹಿಂದೆ ಸಂಧಾನ ಮಾಡಿಕೊಂಡಿದ್ದರು. ಇದಾದ ಬಳಿಕ ಭಾನುವಾರ ರಾತ್ರಿ ಖಾನ್‌ ತನ್ನ ಆರು ಜನ ಸಹಚರರೊಂದಿಗೆ ವಿಪಿನ್‌ನನ್ನು ಬರ್ಬರವಾಗಿ ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಸುದ್ದಿಯನ್ನೂ ಓದಿ: Dowry Harrasment: ವರದಕ್ಷಿಣೆಗೆ ಮತ್ತೊಂದು ಬಲಿ; ಪತಿಯ ಕಿರುಕುಳ ತಾಳಲಾರದೆ ಶಾರ್ಜಾದಲ್ಲಿ ಕೇರಳದ 29 ವರ್ಷದ ಮಹಿಳೆ ಸಾವು

ಅಧಿಕಾರಿಗಳು ಹೇಳಿದ್ದೇನು?

ಜೈಪುರ ಎಸ್‌ಪಿ ಕುನ್ವರ್‌ ರಾಷ್ಟ್ರದೀಪ್‌ ಖಾಸಗಿ ಮಾಧ್ಯಮಕ್ಕೆ ಘಟನೆ ಬಗ್ಗೆ ಮಾಹಿತಿ ನೀಡಿ, "ಅಸನ್‌ ಕೊಲೆ ಮಾಡಿದ ನಂತರ ವಿಡಿಯೊ ಹಂಚಿಕೊಂಡಿದ್ದಾನೆ. ವ್ಯಾಪಕವಾಗಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ವಿಡಿಯೊ ಡಿಲೀಟ್‌ ಮಾಡಿದ್ದಾನೆ. ಈ ಪ್ರಕರಣದಲ್ಲಿ ಒಟ್ಟು 9 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಖಾನ್‌ನನ್ನು ಬಂಧಿಸಲು ವಿಶೇಷ ತಂಡವೊಂದನ್ನು ರಚಿಸಲಾಗಿದೆ. ಕೊಲೆಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿದ್ದು, ಸ್ಥಳೀಯರು ಮೃತದೇಹದ ಅಂತ್ಯಕ್ರಿಯೆಗೆ ನಿರಾಕರಿಸಿದ್ದಾರೆ. ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಪರಿಹಾರ ಧನದ ಜತೆಗೆ ಮೃತನ ಕುಟುಂಬಕ್ಕೆ ಸರ್ಕಾರಿ ಉದ್ಯೋಗದ ಒತ್ತಾಯವನ್ನೂ ಮುಂದಿಟ್ಟಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಐಜಿ ರಾಮೇಶ್ವರ್‌ ಮಾತನಾಡಿ, "ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ಬಂಧನ ಪ್ರಕ್ರಿಯೆ ನಡೆಯುತ್ತಿದೆ. 20ಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದು, 6 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಘಟನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು 200 ಪೊಲೀಸ್ ಸಿಬ್ಬಂದಿ, 25 ನಿರ್ಭಯ್ ಸ್ಕ್ವಾಡ್, 2 ಝೆರ್ಬಾ ಕಂಪನಿಗಳನ್ನು ನಿಯೋಜಿಸಲಾಗಿದೆ. ಡಿಐಜಿ ಸೇರಿದಂತೆ ಏಳು ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಕಾವಲಿದ್ದಾರೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಿಪಿನ್‌ ಸಹೋದರಿ ಪ್ರತಿಕ್ರಿಯೆ

ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ವಿಪಿನ್‌ನ ಸಹೋದರಿ ರೀನಾ, “ಎರಡು ಮಂದಿ ಮನೆಗೆ ಬಂದು ವಿಪಿನ್‌ನ್ನು ಕರೆದುಕೊಂಡು ಹೋದರು. ನಾನು ಹೊರಗಡೆ ಓಡಿ ಬಂದಾಗ ಅವನು ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ. ತುಂಬಾ ಕ್ರೂರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಆಸ್ಪತ್ರೆ ಕೊಂಡೊಯ್ಯುವವರೆಗೂ ಅವನು ಉಸಿರಾಡುತ್ತಿದ್ದ. ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ಘಟನೆಯ ಬಗ್ಗೆ ದುಷ್ಕರ್ಮಿಗಳು ವಿಡಿಯೊ ಹಂಚಿಕೊಂಡಿದ್ದಾರೆ. ನಮಗೆ ಸರ್ಕಾರ ಮತ್ತು ಅಧಿಕಾರಿಗಳು ನ್ಯಾಯ ಒದಗಿಸಬೇಕುʼʼ ಎಂದು ಆಗ್ರಹಿಸಿದ್ದಾರೆ.