ಹಾಸನ: ತಾಯಿಯೊಬ್ಬಳು ತಾನು ಹೆತ್ತ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಲೆ (Murder case) ಮಾಡಿದ ಆರೋಪ ಕೇಳಿ ಬಂದಿದೆ. ಹಾಸನ (Hassan crime news) ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲೂಕಿನಲ್ಲಿ ಇಂಥದ್ದೊಂದು ಆಘಾತಕಾರಿ ಘಟನೆ ನಡೆದಿದೆ. ತಾಯಿಯೊಬ್ಬಳು 6 ವರ್ಷದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಬಾಲಕಿಯ ಕೂಗು ಕೇಳಿ ಅಕ್ಕಪಕ್ಕದ ಜಮೀನಿನಲ್ಲಿದ್ದ ಜನ ಓಡಿ ಬಂದು ರಕ್ಷಿಸಲು ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.
ಜಿನ್ನೇನಹಳ್ಳಿಕೊಪ್ಪಲು ಗ್ರಾಮದಲ್ಲಿ 6 ವರ್ಷದ ಬಾಲಕಿ ಸಾನ್ವಿಯನ್ನು ಆಕೆಯ ತಾಯಿ ಶ್ವೇತಾ ಎಂಬಾಕೆಯೇ ಕೊಂದಿರುವ ಆರೋಪ ಕೇಳಿ ಬಂದಿದೆ. ಏಳು ವರ್ಷದ ಹಿಂದೆ ಶಿವಮೊಗ್ಗ ಮೂಲದ ರಘು ಎಂಬವರ ಜೊತೆ ಶ್ವೇತಾ ವಿವಾಹವಾಗಿತ್ತು. ಮದುವೆಯಾಗಿ ಎರಡೇ ವರ್ಷಕ್ಕೆ ದಂಪತಿ ನಡುವೆ ಜಗಳ ಶುರುವಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಪತಿಯಿಂದ ಅಂತರ ಕಾಯ್ದುಕೊಂಡಿದ್ದ ಶ್ವೇತಾ ದೂರವೇ ಇದ್ದಳು. ಹಲವು ಬಾರಿ ರಾಜಿ ಸಂಧಾನ ಮಾಡಿದರೂ ಹೊಂದಾಣಿಕೆಯಾಗಿರಲಿಲ್ಲ. ಈ ನಡುವೆ ಶ್ವೇತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಬಾಲಕಿ ಸಾನ್ವಿಯ ಆರೈಕೆಯ ಜವಾಬ್ದಾರಿಯನ್ನು ರಘು ಪೋಷಕರು ಹೊತ್ತಿದ್ದರು.
ಶನಿವಾರ ಬೆಂಗಳೂರಿನಿಂದ ಮಗಳು ಸಾನ್ವಿಯನ್ನು ಕರೆದುಕೊಂಡು ತವರು ಮನೆಗೆ ಶ್ವೇತಾ ಬಂದಿದ್ದಳು. ನಿನ್ನೆ ಬೆಳಿಗ್ಗೆ ಗ್ರಾಮದ ಕಟ್ಟೆಯ ಕಡೆಗೆ ಹೋಗುತ್ತೇನೆಂದು ಪುತ್ರಿ ಸಾನ್ವಿಯನ್ನು ಕರೆದುಕೊಂಡು ಹೋಗಿದ್ದ ಶ್ವೇತಾ, ಬಳಿಕ ಜಮೀನಿನ ಬಳಿ ನೀರಿನಲ್ಲಿ ಮುಳುಗಿಸಿ ಹತ್ಯೆಗೆ ಯತ್ನಿಸಿದ್ದಾಳೆ. ಮಗು ಕಿರುಚಾಡುತ್ತಿದ್ದನ್ನು ಕೇಳಿ ಓಡಿ ಬಂದ ಅಕ್ಕಪಕ್ಕದ ಜಮೀನಿನ ರೈತರು, ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಕೂಡಲೇ ವರಸೆ ಬದಲಿಸಿದ ಶ್ವೇತಾ, ನಾನು ಹಾಗೂ ಮಗು ಇಬ್ಬರೂ ಸಾಯಲು ಪ್ರಯತ್ನಿಸಿದ್ದೆವು ಎಂದಿದ್ದಾಳೆ.
ತಕ್ಷಣವೇ ಗ್ರಾಮಸ್ಥರೆಲ್ಲ ಬಾಲಕಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆತಂದಿದ್ದು, ಅಷ್ಟರಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ. ಈ ವೇಳೆ ಮಗಳ ಸಾವಿನ ಸುದ್ದಿ ಕೇಳಿ ತಂದೆ ರಘು ಹಾಗೂ ಕುಟುಂಬಸ್ಥರು ಧಾವಿಸಿ ಓಡೋಡಿ ಬಂದಿದ್ದಾರೆ. ಹಿರಿಸಾವೆ ಠಾಣೆಗೆ ದೂರು ನೀಡಿದ್ದಾರೆ. ಶವಾಗಾರದ ಬಳಿ ಬಂದ ತಂದೆ ರಘು, ಮಗಳ ಶವ ನೋಡಿ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಮಗು ಅಂತಿಮ ದರ್ಶನಕ್ಕೆ ಶ್ವೇತಾ ಸಂಬಂಧಿಕರು ಹಾಗೂ ರಘು ಕುಟುಂಬಸ್ಥರ ನಡುವೆ ಜಗಳ ನಡೆಯಿತು. ಎರಡೂ ಕಡೆಯವರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ನಡುವೆ ಅಲ್ಲೇ ಸ್ಥಳದಲ್ಲಿದ್ದ ಹಿರಿಸಾವೆ ಪಿಎಸ್ಐ ರೂಪಾ ಬಿರಾದಾರ್ ಪರಿಸ್ಥಿತಿ ನಿಭಾಯಿಸಿದ್ದಾರೆ.
ಇದನ್ನೂ ಓದಿ: Murder Case: ಲೈಂಗಿಕ ಕ್ರಿಯೆಗೆ ಸಹಕರಿಸದ ಬಾಲಕಿಯ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದ ದುರುಳರ ಬಂಧನ