ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕದನ ವಿರಾಮ ಮಾತುಕತೆಯಲ್ಲಿ ಭಾರತ 3ನೇ ದೇಶದ ಮಧ್ಯಸ್ಥಿಕೆ ಒಪ್ಪಿಕೊಳ್ಳಲಿಲ್ಲ; ಪಾಕಿಸ್ತಾನದಿಂದಲೇ ಸ್ಪಷ್ಟನೆ

ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ತಾನೇ ಮಧ್ಯಸ್ಥಿಕೆ ವಹಿಸಿದ್ದು ಎನ್ನುವ ಅಮೆರಿಕ ವಾದ ಸಂಪೂರ್ಣ ಸುಳ್ಳು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಈ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್‌ ಇಶಾಕ್ ದಾರ್ ಮಾತನಾಡಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದಲ್ಲಿ ಅಮೆರಿಕದ ಪಾತ್ರವೇನೂ ಇಲ್ಲ ಎಂದು ತಿಳಿಸಿದ್ದಾರೆ.

ಇಸ್ಲಾಮಾಬಾದ್‌: ಜಮ್ಮು ಕಾಶ್ಮೀರದ ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಆಪರೇಷನ್‌ ಸಿಂದೂರ್‌ (Operation Sindoor) ಮೂಲಕ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಂಡಿದೆ. ಅದಾದ ಬಳಿಕ ಭಾರತ-ಪಾಕ್‌ ಮಧ್ಯೆ ಮೂಡಿದ ಸಂಘರ್ಷವನ್ನು ತಾನೇ ನಿಲ್ಲಿಸಿದ್ದು ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಹೇಳಿಕೆ ಸುಳ್ಳು ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಈ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್‌ ಇಶಾಕ್ ದಾರ್ (Mohammad Ishaq Dar) ಮಾತನಾಡಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದಲ್ಲಿ ಅಮೆರಿಕದ ಪಾತ್ರವೇನೂ ಇಲ್ಲ ಎಂದು ತಿಳಿಸಿದ್ದಾರೆ. ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿತ್ತು ಎನ್ನುವ ಮಾತನ್ನು ಭಾರತ ಪದೇ ಪದೆ ನಿರಾಕರಿಸುತ್ತಲೇ ಬಂದಿದೆ. ಇದೀಗ ಈ ವಾದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.

ಅಲ್ ಜಝೀರ ವಾಹಿನಿಯೊಂದಿಗೆ ಮಾತನಾಡಿದ ಇಶಾಕ್ ದಾರ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ʼʼಭಾರತವು ಕದನ ವಿರಾಮ ಮಾತುಕತೆಯಲ್ಲಿ ಅಥವಾ ಬೇರಾವುದೇ ದ್ವಿಪಕ್ಷೀಯ ಮಾತುಕತೆಯಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಎಂದಿಗೂ ಸ್ವೀಕರಿಸಲಿಲ್ಲʼʼ ಎಂದು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್‌ ಸಿಂಧೂರ್‌ ಬಗ್ಗೆ ಅಮೆರಿಕಕ್ಕೆ ವಿವರಿಸಿದ ಅಜಿತ್‌ ದೋವಲ್‌; ಸಂಘರ್ಷ ಶೀಘ್ರದಲ್ಲಿಯೇ ಕೊನೆಯಾಗಲಿ ಎಂದ ಡೊನಾಲ್ಡ್‌ ಟ್ರಂಪ್‌

ʼʼಕಾಶ್ಮೀರದ ವಿಷಯದಲ್ಲಿ ಅಮೆರಿಕದ ಮೂಲಕ ಮಾತುಕತೆಯ ಪ್ರಸ್ತಾಪ ಬಂದಿತ್ತು. ಆದರೆ ಭಾರತವು ಈ ವಿಷಯವು ದ್ವಿಪಕ್ಷೀಯವಾಗಿಯೇ ಉಳಿಯಬೇಕೆಂದು ಆಗ್ರಹಿಸಿತು. ಮಾತ್ರವಲ್ಲ ಮೂರನೇ ದೇಶದ ಮೂಲಕ ನಡೆಯುವ ಕದನ ವಿರಾಮದ ಮಾತುಕತೆಗೆ ಭಾರತ ಒಪ್ಪಲಿಲ್ಲʼʼ ಎಂದು ಇಶಾಕ್ ದಾರ್ ಹೇಳುವ ಮೂಲಕ ಅಮೆರಿಕ ವಾದದಲ್ಲಿ ಯಾವುದೇ ಉರುಳಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ತಮ್ಮನ್ನು ಆಹ್ವಾನಿಸಲಾಗಿದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನೂ ಅವರು ನಿರಾಕರಿಸಿದ್ದಾರೆ.

ʼʼಆಪರೇಷನ್‌ ಸಿಂದೂರ್‌ ಬಳಿಕ ನಡೆದ ಕದನ ವಿರಾಮದ ವೇಳೆ ಪಾಕಿಸ್ತಾನವು 3ನೇ ದೇಶದ ಮಧ್ಯಸ್ಥಿಕೆಗೆ ತಯಾರಿದ್ದರೂ ಭಾರತ ಮಾತುಕತೆ ಏನಿದ್ದರೂ ದ್ವಿಪಕ್ಷಿಯವಾಗಿರಬೇಕು ಎಂದು ಸ್ಪಷ್ಟವಾಗಿ ಸೂಚಿಸಿತ್ತುʼʼ ಎಂದಿದ್ದಾರೆ.

ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯ ವೇಳೆ ಪಾಕಿಸ್ತಾನವು ಹಲವು ಜಾಗತಿಕ ನಾಯಕರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ʼʼಭಾರತ-ಪಾಕಿಸ್ತಾನ ಯುದ್ಧದ ವೇಳೆ ಅಮೆರಿಕ ನಡೆದುಕೊಂಡ ರೀತಿಯನ್ನು ಮೆಚ್ಚಿಕೊಳ್ಳಲೇ ಬೇಕು. ನಾವು ಕದನ ವಿರಾಮಕ್ಕಾಗಿ ಯಾರನ್ನೂ ಕೇಳಿಕೊಂಡಿರಲಿಲ್ಲ. ನಾವು ಮೇ 7ರ ವಾಯು ದಾಳಿ ನಡೆಸುವುದಕ್ಕಿಂತ ಮೊದಲು ಮತ್ತು ಮೇ 10ರ ನಂತರ ಹಲವು ಜಾಗತಿಕ ನಾಯಕರೊಂದಿಗೆ ನಾನು ಸುಮಾರು 60 ಬಾರಿ ಮಾತುಕತೆ ನಡೆಸಿದ್ದೇನೆ. ನನಗೆ ಗೊತ್ತು ಬಹುತೇಕ ದೇಶಗಳು-ಅದು ಮುಸ್ಲಿಂ ರಾಷ್ಟ್ರವಿರಲಿ, ಮುಸ್ಲಿಮೇತರ ರಾಷ್ಟ್ರವಿರಲಿ ಶಾಂತಿಯನ್ನು ಬಯಸುತ್ತವೆ. ರಾಜತಾಂತ್ರಿಕತೆ ಮತ್ತು ಮಾತುಕತೆಯನ್ನು ಎದುರು ನೋಡುತ್ತವೆʼʼ ಎಂದಿದ್ದಾರೆ.

ಈ ಹಿಂದೆ ಡೊನಾಲ್ಡ್‌ ಟ್ರಂಪ್‌ ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದಕ್ಕೆ ತಾನೇ ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿದ್ದರು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಸಹಿತ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದವು.