ಕೆಲವರಿಗೆ ಜಗತ್ತಿನಲ್ಲಿ ಕೇವಲ ಕೆಟ್ಟದ್ದು ಮತ್ತು ಕೆಟ್ಟವರೇ ಕಾಣಿಸುತ್ತಿರುತ್ತಾರೆ. ಸ್ವತಃ ತಮ್ಮ ಬಗ್ಗೆ, ತಾವಿರುವ ಸ್ಥಿತಿಯ ಬಗ್ಗೆಯೂ ಅವರಿಗೆ ನೆಮ್ಮದಿ ಇರುವುದಿಲ್ಲ. ಇಂಥವರು ಬದಲಾಗಲು ಸಾಧ್ಯವೇ ಇಲ್ಲವೇ? ಈ ಬರಹದಲ್ಲಿರುವ ಸರಳ ಸೂತ್ರಗಳನ್ನು ಅನುಸರಿಸಿದರೆ ಖಂಡಿತ ಪಾಸಿಟಿವ್ ಆಟಿಟ್ಯೂಡ್, ಪಾಸಿಟಿವ್ ಥಿಂಕಿಂಗ್ ಬೆಳೆಸಿಕೊಳ್ಳುವ ವ್ಯಕ್ತಿಯಾಗಿ ನೀವು ಬದಲಾಗಬಹುದು.
ಪ್ರಶ್ನೆ: ನಾನು 40 ವರ್ಷದ ಮಹಿಳೆ, ನೆಗೆಟಿವ್ ಥಿಂಕಿಂಗ್ ಹೆಚ್ಚಾಗಿದೆ. ಒಂದು ತರಹದ ಆತಂಕ, ಕಿರಿಕಿರಿ ಮತ್ತು ಅಶಾಂತಿಯಿಂದ ಬಳಲುತ್ತಿದ್ದೇನೆ. ಮನೆಯಲ್ಲಿ ಕಲಹಗಳು ಹೆಚ್ಚಾಗಿದ್ದು ಬದುಕೇ ಬೇಸರವಾಗಿದೆ. ಇತ್ತೀಚೆಗೆ ದೈಹಿಕ ಅನಾರೋಗ್ಯವೂ ಹೆಚ್ಚಾಗಿದೆ. ಇದರಿಂದ ನಾನು ಹೊರಬರುವುದು ಹೇಗೆ? ದಯವಿಟ್ಚು ತಿಳಿಸಿಕೊಡಿ.
- ಹೆಸರು ಬೇಡ, ಬೆಂಗಳೂರು
ಉತ್ತರ: ನಿಮ್ಮ ಮಾನಸಿಕ ತೊಳಲಾಟವನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು. ನಿಮ್ಮ ಅನಿಸಿಕೆ ಸರಿಯಾಗಿದೆ. ನಕಾರಾತ್ಮಕ ಯೋಚನೆಗಳಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳು ಉಂಟಾಗುವುದುಂಟು. ಇದರಿಂದಾಗಿ ಸಂಬಂಧಗಳಲ್ಲಿ ಅಪನಂಬಿಕೆ, ತಪ್ಪು ತಿಳಿವಳಿಕೆಗಳು, ಕಲಹಗಳು, ಭಯ ಮತ್ತು ಆತಂಕ ಹೀಗೆ ಅನೇಕ ಅಹಿತಕರ ಪರಿಣಾಮಗಳು ಊಂಟಾಗುವುದುಂಟು. ಏಕಾಗ್ರತೆಯಿಂದ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗದೆ ನಿಮ್ಮ ದಿನಚರಿಯೂ ಬಹಳಷ್ಚು ಬದಲಾಗುತ್ತದೆ. ಮನಸ್ಸು ಸದಾ ಕಿರಿಕಿರಿಯಾಗಿ ವಿಚಲಿತಗೊಳ್ಳುತ್ತದೆ.
ನಕಾರಾತ್ಮಕ ಭಾವನೆಗಳು ಒಮ್ಮೆಲೆ ನಮ್ಮ ಮನಸ್ಸಿನ ಮೇಲೆ ದಾಳಿ ಮಾಡುವುದಿಲ್ಲ. ಮೊದಲು ಮೆಲ್ಲನೆ ಮನಸ್ಸಿನಲ್ಲಿ ನೆಲೆ ಮಾಡಿಕೊಳ್ಳುತ್ತವೆ. ನಂತರ ಬೃಹದಾಕಾರವಾಗಿ ಬೆಟ್ಟದಂತೆ ಬೆಳೆದು ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತದೆ. ಹಾಗಾದರೆ, ನಮ್ಮೊಳಗಿರುವ ಈ ನಕಾರಾತ್ಮಕ ಭಾವನೆಗಳನ್ನು ಕಂಡು ಹಿಡಿಯುವುದು ಹೇಗೆ? ಇವುಗಳನ್ನು ಹತೋಟಿಗೆ ತೆಗೆದುಕೊಂಡು ಇದರಿಂದ ಮುಕ್ತರಾಗುವುದು ಹೇಗೆ?
ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲು ನೆಗಟಿವ್ ಥಿಕಿಂಗ್ ಎಂದರೇನು ಮತ್ತು ಅದಕ್ಕೇನು ಕಾರಣ ಎನ್ನುವುದನ್ನು ತಿಳಿದುಕೊಳ್ಳೋಣ.
ನೆಗೆಟೀವ್ ಥಿಕಿಂಗ್ ಎಂದರೇನು?
ನೆಗೆಟೀವ್ ಥಿಕಿಂಗ್ (ನಕಾರಾತ್ಮಕ ಆಲೋಚನೆ) ಎನ್ನುವುದು ಪುನರಾವರ್ತಿತ ಮತ್ತು ನಿಷ್ಪ್ರಯೋಜಕ ಆಲೋಚನೆಗಳಾಗಿರುತ್ತವೆ. ಈ ಆಲೋಚನೆಗಳು ಸಾಮಾನ್ಯವಾಗಿ ನಿಮ್ಮ ಬಗ್ಗೆ, ಇತರರ ಬಗ್ಗೆ ಅಥವಾ ಸಮಾಜದ ಕುರಿತು ನಕಾರಾತ್ಮಕ ಅಭಿಪ್ರಾಯಗಳು, ನಿರೀಕ್ಷೆಗಳು ಮತ್ತು ದೃಷ್ಟಿಕೋನಗಳನ್ನು ಹೊಂದಿರುತ್ತವೆ.
ಈ ರೀತಿಯ ಆಲೋಚನೆಗಳು ಅಹಿತಕರ ಭಾವನೆಗಳಿಗೆ, ಆತಂಕ, ಮತ್ತು ಖಿನ್ನತೆಗೆ ಕಾರಣವಾಗಬಹುದು ಮತ್ತು ದೈಹಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು. ಮಾನಸಿಕ ಯೋಗಕ್ಷೇಮವನ್ನು ಸುಧಾರಿಸಲು ಈ ಆಲೋಚನಾ ಮಾದರಿಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.
ನೆಗೆಟೀವ್ ಥಿಂಕಿಂಗ್‌ನಿಂದ ಆಗುವ ಪರಿಣಾಮಗಳೇನು?
ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಗಳು ಪರಸ್ಪರ ಸಂಬಂಧ ಹೊಂದಿರುತ್ತವೆ. ನಾವು ಹೇಗೆ ಭಾವಿಸುತ್ತೇವೆ ಮತ್ತು ವರ್ತಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಆಲೋಚನೆಗಳು ಪರಿಣಾಮ ಬೀರುತ್ತವೆ. ಪಾಸಿಟಿವ್ ಆಲೋಚನೆಗಳಿಂದ ಪಾಸಿಟೀವ್ ಭಾವನೆಗಳು ಮನಸ್ಸಿನಲ್ಲಿ ಮೂಡುತ್ತವೆ. ನಡವಳಿಕೆಗಳು ಸಹ ಪಾಸಿಟಿವ್ ಆಗಿ ಇರುತ್ತವೆ. ಅದೇ ರೀತಿ, ನೆಗೆಟಿವ್ ಆಲೋಚನೆಗಳಿಂದ ನೆಗೆಟಿವ್ ಭಾವನೆಗಳು ಮತ್ತು ನಡವಳಿಕೆಗಳು ಸಂಭವಿಸುತ್ತದೆ. ನಾವೆಲ್ಲರೂ ನಿಷ್ಪ್ರಯೋಜಕ ಆಲೋಚನೆಗಳನ್ನು ಹೊಂದಿರಬಹುದು. ಅವು ಕಾಣಿಸಿಕೊಂಡಾಗ ಕಾಲಕಾಲಕ್ಕೆ ಏನು ಮಾಡಬೇಕೆಂದು ತಿಳಿದುಕೊಳ್ಳುವುದು ಸಹ ಮುಖ್ಯ, ಇಲ್ಲದಿದ್ದರೆ ಅವು ನಮ್ಮ ಬದುಕಿನ ಹಾದಿಯನ್ನೇ ಬದಲಿಸಿಬಿಡುತ್ತದೆ.
ನೆಗೆಟಿವ್ ಥಿಂಕಿಂಗ್ ದುಃಖ, ಭಯ, ಆತಂಕ, ಕೋಪ, ಮತ್ತು ಅಸೂಯೆಗಳಿಗೆ ದಾರಿ ಮಾಡಿಕೊಡುತ್ತದೆ. ಸಂಬಂಧಗಳಲ್ಲಿ ಅನಗತ್ಯ ಕಲಹಗಳು, ಸಂಶಯ, ಅಭದ್ರತೆ, ತಪ್ಪು ತಿಳಿವಳಿಕೆ ಮುಂತಾದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ವೈಯಕ್ತಿಕವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಥವಾ ಹೊಸ ಕೆಲಸಗಳು, ಪ್ರಯತ್ನಗಳನ್ನು ಮಾಡುವ ಸಂದರ್ಭದಲ್ಲಿ ಫಲಿತಾಂಶ ಕುರಿತು ನೆಗೆಟಿವ್ ಥಿಂಕ್ ಮಾಡುವುದು ಸಾಮಾನ್ಯವಾಗಿ ಬಿಡುತ್ತದೆ.
ನೆಗೆಟೀವ್ ಆಲೋಚನೆಗಳಿಂದ ವೈಯಕ್ತಿಕ ಬೆಳವಣಿಗೆಗೆ ಕುಂದುಂಟಾಗುವ ಸಾಧ್ಯತೆ ಹೆಚ್ಚು. ನಕಾರಾತ್ಮಕ ಆಲೋಚನೆಗಳು ಸಾಮಾಜಿಕ ಆತಂಕ, ಖಿನ್ನತೆ, ಒತ್ತಡ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಕೂಡ ಉಂಟುಮಾಡುವ ಸಾಧ್ಯತೆಯನ್ನು ಹೊಂದಿರುತ್ತದೆ.
ಕಾರಣ ತಿಳಿಯುವುದು ಅಗತ್ಯ
ನೆಗೆಟೀವ್ ಥಿಂಕಿಂಗ್‌ಗೆ ಏನು ಕಾರಣ ಎಂದು ಮೊದಲು ತಿಳಿದುಕೊಳ್ಳಿ. ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಕಾರಣಗಳು ಇರಬಹುದು. ನೀವು ಯಾವ ವಿಷಯಗಳ ಕುರಿತು ಹೆಚ್ಚು ಯೋಚನೆ ಮಾಡಿರುತ್ತೀರೆಂದು ಗಮನಿಸಿ ಪಟ್ಚಿ ಮಾಡಿಕೊಳ್ಳಿ. ಕೆಲವೊಮ್ಮೆ ಬಾಲ್ಯದ ಅಘಾತಗಳು, ಹಿಂದಿನ ಕಹಿ ಘಟನೆಗಳು, ಅತಿಯಾದ ಒತ್ತಡದ ಸನ್ನಿವೇಶಗಳು (ಉದ್ಯೋಗದ ಒತ್ತಡ, ಕೌಟುಂಬಿಕ ಒತ್ತಡ) ದಾಂಪತ್ಯದ ಕಲಹಗಳು, ಬಡತನ, ಆಥಿ೯ಕ ಸಮಸ್ಯೆ, ದೈಹಿಕ ಅನಾರೋಗ್ಯ ಇತ್ಯಾದಿಗಳು ಸಹ ನೆಗೆಟಿವ್ ಥಿಂಕಿಂಗ್ ಬೆಳೆಯಲು ಕಾರಣವಾಗಿರಬಹುದು.
ಒಂದು ವೇಳೆ ವ್ಯಕ್ತಿಯು ಖಿನ್ನತೆ (depression) ಅಥವಾ ಆತಂಕ (anxiety disorder) ಮುಂತಾದ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದರೆ ನೆಗೆಟಿವ್ ಆಲೋಚನೆಗಳು ಬರುವುದು ಸಾಮಾನ್ಯ. ಸಾಮಾಜಿಕ ನಿರೀಕ್ಷೆಗಳು ಒತ್ತಡವಾಗಿ ಬದಲಾಗಿ, ಅವೇ ನಕಾರಾತ್ಮಕ ಆಲೋಚನೆಗಳಾಗಿ ಬೆಳೆಯುವುದುಂಟು.
ಸೌಂದರ್ಯ, ವೃತ್ತಿ ಅಥವಾ ಸಾಮಾಜಿಕ ಸ್ಥಾನಮಾನಕ್ಕೆ ಸಂಬಂಧಿಸಿದ ಸಾಮಾಜಿಕ ಒತ್ತಡಗಳು ಆತ್ಮವಿಶ್ವಾಸ ಮತ್ತು ಆತ್ಮಗೌರವದ ಕೊರತೆಯನ್ನು ಉಂಟುಮಾಡಿ, ಆ ಮೂಲಕ ನಕಾರಾತ್ಮಕ ಆಲೋಚನೆಗಳಿಗೆ ಕಾರಣವಾಗಬಹುದು.
ನಕಾರಾತ್ಮಕ ಆಲೋಚನೆಗಳನ್ನು ತಡೆಯಲು ಕೆಲ ಮಾರ್ಗಗಳು
ಸ್ವ ಅರಿವು ಮತ್ತು ಸಾವಧಾನ:
ನಕಾರಾತ್ಮಕ ಆಲೋಚನೆಗಳನ್ನು ತಡೆಗಟ್ಟುವಲ್ಲಿ ಸ್ವಯಂ ಅರಿವಿನ ಪಾತ್ರ ದೊಡ್ಡದು. ನಿಮ್ಮ ಆಲೋಚನೆಗಳ ಕುರಿತು ಅರಿವು ಬೆಳೆಸಿಕೊಳ್ಳಿ. ನಿಮ್ಮ ಆಲೋಚನೆಗಳನ್ನು ಗಮನಿಸಿಕೊಳ್ಳಿ. ಅವುಗಳ ಪರಿಣಾಮ ನಿಮಗೆ ಹೇಗೆ ಅನ್ನಿಸುತ್ತದೆ ಮತ್ತು ನಿಮಗೆ ಈ ಆಲೋಚನೆಗಳು ಉಪಯುಕ್ತವಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಿ. ನಿಮ್ಮ ಈ ಆಲೋಚನೆಗಳು ಸಕಾರಾಕ್ಮಕವಾಗಿವೆಯೇ ಅಥವಾ ನಕಾರಾತ್ಮಕವಾಗಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. ನಕಾರಾಕ್ಮಕ ಆಲೋಚನೆಗಳು ಯಾವ ಕಾರಣಕ್ಕಾಗಿ, ಯಾವಾಗ ಮತ್ತು ಎಷ್ಟು ಹೊತ್ತು ನಿಮ್ಮನ್ನು ಆವರಿಸಿರುತ್ತವೆ ಎನ್ನುವುದನ್ನು ತಿಳಿದುಕೊಂಡರೆ ಇವುಗಳನ್ನು ನಿರ್ಮೂಲನ ಮಾಡುವುದು ಸುಲಭ.
ಸಾವಧಾನ ಎಂದರೆ ಪ್ರಜ್ಞಾಪೂವ೯ಕವಾಗಿ ಆ ಕ್ಷಣದಲ್ಲಿ (ವಾಸ್ತವದಲ್ಲಿ ಅಥವಾ ವರ್ತಮಾನದಲ್ಲಿ) ಬದುಕುವುದು. ಪ್ರತಿಯೊಂದು ಕ್ಷಣವೂ ನೀವು ಮಾಡುವ ಆಲೋಚನೆಗಳು, ನಿಮ್ಮಲ್ಲಿ ಮೂಡುವ ಭಾವನೆಗಳು ಮತ್ತು ನಿಮ್ಮ ನಡವಳಿಕೆಗಳನ್ನು ಪ್ರಜ್ಞಾಪೂವ೯ಕವಾಗಿ ಗಮನಿಸಿಕೊಳ್ಳುತ್ತಾ ನಿರ್ವಹಿಸುವುದರಿಂದ ನೀವು ಹೆಚ್ಚು ಜಾಗೃತರಾಗುತ್ತೀರಿ. ಹಾಗೆಯೇ, ಒಂದು ವೇಳೆ ನಕಾರಾತ್ಮಕ ಆಲೋಚನೆಗಳು ಅತಿಯಾದರೆ ಮಾನಸಿಕವಾಗಿ ದಣಿದಂತೆ ಭಾಸವಾಗುತ್ತದೆ. ಕೆಲಸಗಳಲ್ಲಿ ಆಸಕ್ತಿ ಮತ್ತು ಏಕಾಗ್ರತೆ ಕುಂದುತ್ತದೆ. ಕಿರಿಕಿರಿ ಕೋಪ ಸಾಮಾನ್ಯವಾಗಿರುತ್ತದೆ. ಇವುಗಳೆಲ್ಲ ನೆಗೆಟೀವ್ ಥಿಂಕಿಂಗ್‌ನ ಲಕ್ಷಣಗಳು. ಇಂಥ ಸಂದರ್ಭದಲ್ಲಿ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಪ್ರಜ್ಞಾಪೂವ೯ಕವಾಗಿ ಈ ಅಂಶಗಳನ್ನು ಗಮನಿಸಲು ಆರಂಭಿಸಿದರೆ ನೆಗೆಟಿವ್ ಥಿಂಕಿಂಗ್ ತಡೆಯುವುದು ಸುಲಭವಾಗುತ್ತದೆ.
ಆಲೋಚನೆಗಳನ್ನು ಬದಲಿಸಿ:
ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಗುರುತಿಸಿಕೊಂಡ ನಂತರ ಅಂಥ ಆಲೋಚನೆಗಳನ್ನು ಉಪಯುಕ್ತವಾದ ಸಕಾರಾತ್ಮಕ ಆಲೋಚನೆಗಳಿಂದ ಬದಲಿಸಿ. ಸಕಾರಾತ್ಮಕ ಆಲೋಚನೆಗಳು ನಿಮಗೆ ಪ್ರಯೋಜನಕಾರಿಯಾಗಿದ್ದು ನಿಮ್ಮ ಬೆಳವಣಿಗೆ ಮತ್ತು ನೆಮ್ಮದಿಗೆ ಕಾರಣವಾಗುತ್ತವೆ. ನಕಾರಾತ್ಮಕ ಆಲೋಚನೆಗಳನ್ನು ಪೂರ್ಣವಾಗಿ ತಡೆಯುವುದು ಅಥವಾ ನಿರಾಕರಿಸುವ ಬದಲು ಅವುಗಳನ್ನು ಸ್ವೀಕರಿಸುವುದು ಒಳ್ಳೆಯದು. ಸೋಲು, ಪ್ರತಿಕ್ರಿಯೆ ಮತ್ತು ಟೀಕೆಗಳನ್ನು ನಿಭಾಯಿಸಲು ಕಲಿಯುವುದರಿಂದ ನಕಾರಾತ್ಮಕ ಆಲೋಚನೆಗಳನ್ನು ತಡೆಯಬಹುದು.
ಡೈರಿ ಬರೆಯಿರಿ:
ನಿಮ್ಮ ಆಲೋಚನೆಗಳನ್ನು ಟ್ರ್ಯಾಕ್ ಮಾಡಲು ಡೈರಿಯನ್ನು ಬರೆಯುವುದು ಉಪಯುಕ್ತ. ನಿಮ್ಮ ಆಲೋಚನೆಗಳನ್ನು ಬರೆದಾಗ, ನಿಮ್ಮ ಆಲೋಚನೆಗಳ ಕುರಿತು ನಿಮಗೆ ಸ್ಪಷ್ಟತೆ ಸಿಗುತ್ತದೆ. ಹಾಗೆಯೇ ನಕಾರಾತ್ಮಕ ಆಲೋಚನೆಗಳನ್ನು ಸೂಕ್ತವಾಗಿ ಅವಲೋಕಿಸಿ ಅವುಗಳನ್ನು ತಡೆಯಲು ಸಹ ಸಾಧ್ಯವಾಗುತ್ತದೆ.
ಪಾಸಿಟೀವ್ ಥಿಂಕಿಂಗ್:
ಸಮಸ್ಯೆಗಳು ಮತ್ತು ಕೊರತೆಗಳ ಮೇಲೆ ಹರಿಸುವ ಗಮನವನ್ನು ನಿಮ್ಮ ಗುರಿಯತ್ತ ಮತ್ತು ಅದನ್ನು ಸಾಧಿಸಲು ಮಾಡಬೇಕಾಗಿರುವ ಪ್ರಯತ್ನಗಳತ್ತ ಹರಿಸಿ. ನಿಮ್ಮ ಸುತ್ತಮುತ್ತಲಿರುವ ವ್ಯಕ್ತಿಗಳಲ್ಲಿ ನಿಮಗೆ ಇಷ್ಟವಿಲ್ಲದಿರುವ ಅಥವಾ ನಿಮಗೆ ನೋವು ಕೊಡುವಂತಹ ಸ್ವಭಾವಗಳನ್ನು, ಅಭಿಪ್ರಾಯಗಳನ್ನು ಬಿಡಿ. ಅವರ ಒಳ್ಳೆಯ ಗುಣ ಮತ್ತು ಚಿಂತನೆಗಳನ್ನು ನೋಡಲು ಪ್ರಾರಂಭಿಸಿ. ಜನಗಳ ಒಳ್ಳೆಯ ಗುಣ, ಸಾಧನೆಗಳನ್ನು ಗುರುತಿಸಿ ಪ್ರಾಮಾಣಿಕವಾಗಿ ಪ್ರಶಂಸಿಸಿ. ನಿಮಗಿರುವ ಸಾಮರ್ಥ್ಯಗಳ ಮೇಲೆ ವಿಶ್ವಾಸ ಬೆಳೆಸಿಕೊಳ್ಳಿ. ನಿಮ್ಮ ದೌರ್ಬಲ್ಯಗಳನ್ನು ಗುರುತಿಸಿಕೊಳ್ಳಿ, ಒಪ್ಪಿಕೊಳ್ಳಿ.
ಪ್ರತಿಕೂಲ ಪರಿಸ್ಥಿತಿಗಳು ಎದುರಾದಾಗ 'ನನ್ನ ಕೈಲಿ ಏನು ಮಾಡಲು ಸಾಧ್ಯವಾಗುತ್ತದೆ? ನನ್ನ ಯಾವ ಪ್ರಯತ್ನದಿಂದ ಪರಿಸ್ಥಿತಿ ಸುಧಾರಿಸಬಹುದು' ಎಂದು ಪ್ರಶ್ನಿಸಿಕೊಳ್ಳಿ. ಹಾಗೆಯೇ, ನಿಮ್ಮ ಪ್ರಯತ್ನ ಮತ್ತು ಹತೋಟಿಗೆ ಮೀರಿದ ವಿಷಯವನ್ನು ಬಿಟ್ಟುಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪ್ರತಿದಿನ ನಿಮ್ಮ ಬಳಿ ಏನಿದೆಯೋ ಅದಕ್ಕೆ, ಈವರೆಗಿನ ಸಂಪಾದನೆಗೆ ಕೃತಜ್ಞತೆ ಸಲ್ಲಿಸುವುದು ರೂಢಿಸಿಕೊಳ್ಳಿ. ಹೀಗೆ ಮಾಡುವುದರಿಂದ ಪಾಸಿಟಿವ್ ಆಲೋಚನೆಗಳು ಹೆಚ್ಚಾಗುತ್ತವೆ.
ನಿಮ್ಮ ನೆಗೆಟಿವ್ ಆಲೋಚನೆಗಳನ್ನು ಬದಲಿಸುವ ಕೀಲಿ ನಿಮ್ಮ ಬಳಿಯೇ ಇದೆ. ನಕಾರಾಕ್ಮಕ ಆಲೋಚನೆಗಳು ನಿಮ್ಮಲ್ಲಿ ಮನೆ ಮಾಡಲು ಹೆಚ್ಚು ಅವಕಾಶ ನೀಡಬೇಡಿ. ಅವುಗಳ ಹಿಂದಿರುವ ಕಾರಣಗಳನ್ನು ತಿಳಿದುಕೊಂಡು, ಮುಕ್ತರಾಗಿರಿ. ಒಮ್ಮೆಲೆ, ಪೂರ್ಣವಾಗಿ ನಿರ್ಮೂಲನ ಮಾಡಲು ಸಾಧ್ಯವಿಲ್ಲದಿದ್ದರೂ, ಕ್ರಮೇಣ ಇದು ಸಾಧ್ಯವಾಗುತ್ತದೆ ಎನ್ನುವ ವಿಶ್ವಾಸವಿರಲಿ.
ಇದಾಗಿಯೂ ಒಂದು ವೇಳೆ ನಿಮಗೆ ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ನಿಮ್ಮ ಸಮಸ್ಯೆಗಳು ಬಗೆಹರಿಯದಿದ್ದರೆ, ಆಪ್ತ ಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ.
ಲೇಖಕರು: ಡಿ. ಆರ್. ಭವ್ಯಾ ವಿಶ್ವನಾಥ್
ವಿಳಾಸ: ಮೈಂಡ್ ಟಾನಿಕ್, ಇಶಾ ಟವರ್ಸ್, ನಂ 26, 2ನೇ ಮಹಡಿ, 21ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಹತ್ತಿರ, ಬೆಂಗಳೂರು 560 070. ಇಮೇಲ್: bhavya.dear@gmail.com, ವಾಟ್ಸ್‌ಆ್ಯಪ್ ಸಂಖ್ಯೆ: 99457 43542