ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Pustaka: ವಿಶ್ವೇಶ್ವರ ಭಟ್ಟರ 100ನೇ ಕೃತಿ ಸೇರಿದಂತೆ ವಿಶ್ವವಾಣಿ ಪುಸ್ತಕದ 8 ಕೃತಿಗಳು ಇಂದು ಬಿಡುಗಡೆ

Book Release: ಜುಲೈ 26ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‌‌ನಲ್ಲಿರುವ ಎಫ್‌‌ಕೆಸಿಸಿಐ ಸಭಾಂಗಣದಲ್ಲಿ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ವಿಶ್ವೇಶ್ವರ ಭಟ್ಟರ 100ನೇ ಕೃತಿ ಸೇರಿ 8 ಕೃತಿಗಳು ಇಂದು ಬಿಡುಗಡೆ

Prabhakara R Prabhakara R Jul 25, 2025 10:04 PM

ಬೆಂಗಳೂರು: ಪತ್ರಕರ್ತ ವಿಶ್ವೇಶ್ವರ ಭಟ್ ಅವರ ನಾಲ್ಕು ಪುಸ್ತಕ ಸೇರಿದಂತೆ ವಿಶ್ವವಾಣಿ ಪುಸ್ತಕ ಪ್ರಕಾಶನದ 8 ಕೃತಿಗಳು ಇಂದು ( ಜುಲೈ 26ರಂದು ಶನಿವಾರ) ಸಂಜೆ 5 ಗಂಟೆಗೆ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‌‌ನಲ್ಲಿರುವ ಎಫ್‌‌ಕೆಸಿಸಿಐ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಈ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಮತ್ತು ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿ ಸಂಪಾದಕರಾದ ಶೋಭಾ ಮಳವಳ್ಳಿ ಭಾಗವಹಿಸಲಿದ್ದಾರೆ‌.

ಉದ್ಯಮಿ ಹಾಗೂ ಲೇಖಕರಾದ ಎಸ್. ಷಡಕ್ಷರಿ, ಉದ್ಯಮಿ ಮತ್ತು ಅಂಕಣಕಾರರಾದ ಕಿರಣ್ ಉಪಾಧ್ಯಾಯ, ಪತ್ರಕರ್ತರಾದ ರಾಜು ಅಡಕಳ್ಳಿ, ನಿರೂಪಕಿ ಹಾಗೂ ಲೇಖಕಿ ರೂಪಾ ಗುರುರಾಜ್ ಅವರು ಉಪಸ್ಥಿತರಿರಲಿದ್ದಾರೆ. ಜತೆಗೆ ವಿಶ್ವವಾಣಿ ಪ್ರಧಾನ ಸಂಪಾದಕರಾದ ಪ್ರೀತಿಯ ವಿಶ್ವೇಶ್ವರ ಭಟ್ ಇರುತ್ತಾರೆ.

ಬಿಡುಗಡೆಯಾಗಲಿರುವ ಪುಸ್ತಕಗಳ ವಿವರ ಹೀಗಿದೆ:

ವಿದೇಶ ಕಾಲ- ಇದು ವಿಶ್ವೇಶ್ವರ ಭಟ್ ಅವರ 100ನೇ ಪುಸ್ತಕ:

Videsha Kala

ಅಮೆರಿಕದಿಂದ ಉಗಾಂಡಾ ತನಕ, ದುಬೈನಿಂದ ಸುಡಾನ್‌‌ ತನಕ, ಚೀನಾದಿಂದ ಸೀಶೆಲ್ಸ್‌‌ ತನಕ... ಈವರೆಗೆ ನೂರಕ್ಕೂ ಹೆಚ್ಚು ದೇಶಗಳಲ್ಲಿ 380ಕ್ಕೂ ಹೆಚ್ಚು ಬಾರಿ ವಿಶ್ವೇಶ್ವರ ಭಟ್ಟರು ಪ್ರವಾಸ ಮಾಡಿದ್ದಾರೆ. ವರ್ಷದಲ್ಲಿ ಕನಿಷ್ಠ 150 ದಿನ ವಿದೇಶಗಳಲ್ಲೇ ಕಳೆಯುವ ವಿಶ್ವೇಶ್ವರ ಭಟ್ಟರ ಪ್ರವಾಸದ ವಿಶಿಷ್ಟ ಅನುಭವಗಳ ಸಾರ 'ವಿದೇಶ ಕಾಲ' ಕೃತಿಯಲ್ಲಿದೆ.

ಒಮಾನಿನ ಭಯಾನಕ ಮರುಭೂಮಿ; ಉಗಾಂಡಾ, ಕಾಂಗೊ, ರವಾಂಡಾದ ಗಡಿ ಸಂಧಿಸುವ ವಿರುಂಗಾ ಅರಣ್ಯ ಪ್ರದೇಶದಲ್ಲಿನ ಮೌಂಟನ್ ಗೋರಿಲ್ಲಾಗಳು, ಸಾವಿರ ಸಾವಿರ ಕಡಲಾಮೆಗಳು ಒಂದೆಡೆ ಮೊಟ್ಟೆ ಇಡುವ ಮಸ್ಕತ್‌‌ನ ಸುರ್ ಪ್ರದೇಶ, ಲಕ್ಷಾಂತರ ಪ್ರಾಣಿಗಳು ಗುಳೆ ಹೋಗುವ ಕೀನ್ಯಾದ ಮಸೈ ಮರಾ, ದಕ್ಷಿಣ ಆಫ್ರಿಕಾದ ಕೇಫ್‌‌ಟೌನ್‌‌ನಲ್ಲಿ ನಡೆಯುವ ಉಷ್ಟ್ರಪಕ್ಷಿಗಳ ರೇಸ್! ರೋಮಾಂಚನಗೊಳಿಸುವ ಇಂಥ ಹಲವು ರೋಚಕ ಕಥನಗಳು ಈ ಪುಸ್ತಕದಲ್ಲಿವೆ.

  • ಪ್ರವಾಸ ಪ್ರಿಯರ ಸಂಗ್ರಹದಲ್ಲಿ ಇರಲೇಬೇಕಾದ ಕೃತಿ ಇದು.
  • ಬೆಲೆ 500 ರೂ.
  • ಎಲ್ಲ ಪ್ರಮುಖ ಪುಸ್ತಕ ಅಂಗಡಿಗಳಲ್ಲಿ ಲಭ್ಯ.



ಸಂಪಾದಕರ ಸದ್ಯಶೋಧನೆ ಭಾಗ 7- ಇದು ವಿಶ್ವೇಶ್ವರ ಭಟ್ ಅವರ ಮತ್ತೊಂದು ಕೃತಿ

Sampadakara Sadya shodhane (1)

ಕಳೆದ 25 ವರ್ಷಗಳಿಂದ ಪ್ರಮುಖ ಪತ್ರಿಕೆಗಳ ಸಂಪಾದಕರಾಗಿರುವ ವಿಶ್ವೇಶ್ವರ ಭಟ್ ಅವರು ವಾರಕ್ಕೆ ನಾಲ್ಕು ಅಂಕಣಗಳನ್ನು ಬರೆದುಕೊಂಡು ಬಂದವರು. ಇಷ್ಟೂ ಸಾಲದೆಂಬಂತೆ, ವಿಶ್ವವಾಣಿ ಪತ್ರಿಕೆಯಲ್ಲಿ ಕಳೆದ ಐದು ವರ್ಷಗಳಿಂದ ಪ್ರತಿದಿನವೂ ಬರೆಯುತ್ತಿರುವ ಅಂಕಣವೇ 'ಸಂಪಾದಕರ ಸದ್ಯಶೋಧನೆ'.

ಈ ಕೃತಿಯ ಬಗ್ಗೆ ವಿಶ್ವೇಶ್ವರ ಭಟ್ ಅವರು ಹೀಗೆನ್ನುತ್ತಾರೆ:

ದೈನಂದಿನ ಅಂಕಣ ಬರೆಯುವುದು ಸುಲಭವಲ್ಲ ಎಂಬ ಪರಿಜ್ಞಾನವಿದ್ದೂ, ಸುಖಾಸುಮ್ಮನೆ ಉಸಾಬರಿ ತಂದುಕೊಂಡವರಂತೆ ಬರೆಯಲು ಆರಂಭಿಸಿದ ಅಂಕಣವಿದು. ಆದರೆ ಬರೆಯಲು ಆರಂಭಿಸಿದ ನಂತರ, ನನಗೆ ಅತ್ಯಂತ ಇಷ್ಟವಾದ ಮತ್ತು ಸಲೀಸಾದ ಅಂಕಣವೂ ಇದೇ. ಇದು ಆ ಹೊತ್ತಿನ ಶೋಧನೆ, ನಿವೇದನೆ.

ನನಗೆ ಬಂದ ವಾಟ್ಸ್‌‌ಆ್ಯಪ್ ಸಂದೇಶ, ಎಂದೋ ಪ್ರಯಾಣಿಸಿದ ವಿಮಾನದ ಬೋರ್ಡಿಂಗ್ ಪಾಸ್, ವಿಧಾನಸೌಧ ಲಿಫ್ಟ್ ಆಪರೇಟರ್‌‌ಗಳ ಸಂಕಟ, ಅನಾಮಧೇಯರ ಮಿಸ್ಡ್ ಕಾಲ್‌‌ಗಳಿಂದ ಹಿಡಿದು, ಇಂಗ್ಲೆಂಡಿನ ರಾಣಿಯ ಬ್ಯಾಗ್ ಖಯಾಲಿ, ಆಕೆಯ ಟೇಲರ್‌‌ನ ಪರಿತಾಪ, ಭಾಷಾ ಗೊಂದಲ, ಹನ್ನೆರಡು ನಿಮಿಷಗಳ ವಿಮಾನ ಪ್ರಯಾಣದ ಮಜಕೂರು... ಹೀಗೆ ಅನೇಕ ಸಂಗತಿಗಳು ಈ ಅಂಕಣದಲ್ಲಿ ಹಾದು ಹೋಗಿವೆ.

ವಿಷಯ ಯಾವುದೇ ಇರಬಹುದು, ಆದರೆ ಬರೆದುದೆಲ್ಲವೂ ಸ್ವಾರಸ್ಯಕರವಾಗಿರಬೇಕು, ಓದುಗರಿಗೆ ಹೊಸತು ಎನಿಸಬೇಕು ಎಂಬ ಒಂದೇ ಒಂದು ನಿಯಮವನ್ನು ಹಾಕಿಕೊಂಡು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವ ಬರಹಗಳಿವು.

  • ಈ ಪುಸ್ತಕದ ಬೆಲೆ 250 ರೂ.


ಸಂಪಾದಕರ ಸದ್ಯಶೋಧನೆ 8- ಇದು ವಿಶ್ವೇಶ್ವರ ಭಟ್ ಅವರ ಜನಪ್ರಿಯ ಅಂಕಣಗಳ ಮತ್ತೊಂದು ಸಂಗ್ರಹ

Sampadakara Sadya shodhane

ಸಂಪಾದಕನಾದವನು ಓದಬೇಕು ಹಾಗೂ ಬರೆಯಬೇಕು. ಇವೆರಡರ ಮಧ್ಯೆ ಸಮಯ ಮಾಡಿಕೊಂಡು ಸಂಶೋಧನೆ, ಅಧ್ಯಯನ, ವಿವಿಧ ರಂಗಗಳ ಜನರ ಭೇಟಿ ಮತ್ತು ಪ್ರವಾಸವನ್ನು ಮಾಡಬೇಕು. ಇವೇನು ವಿಶೇಷ ಗುಣಗಳಲ್ಲ. ಸಂಪಾದಕ ಇರಬೇಕಾದುದೇ ಹಾಗೆ. ಆಗಲೇ ನಿರಂತರ ಬರೆಯಲು ಸಾಧ್ಯ.

ಅಂಕಣ ಬರೆಯುವ ಸಂಪಾದಕನಿಗೆ ತನ್ನ ಅನುಭವವೇ ಮೂಲ ದ್ರವ್ಯ. ಅರ್ಧ ಶತಮಾನ ಕಾಲ ಜಗತ್ತಿನ ನೂರಾರು ಪತ್ರಿಕೆಗಳಿಗೆ ಅಂಕಣ ಬರೆದ ಆರ್ಟ್ ಬುಕ್ವಾಲ್ಡ್, ಹೆಂಡತಿಯೊಂದಿಗಿನ ಕ್ಷುಲ್ಲಕ ಜಗಳವನ್ನೂ ತನ್ನ ಅಂಕಣದಲ್ಲಿ ಸ್ವಾರಸ್ಯದ ಸರಕಾಗಿಸುತ್ತಿದ್ದ. ಬರಹ ಬಹು ಆಯಾಮ ಪಡೆಯುವುದು ಆಗಲೇ.

ದೈನಂದಿನ ಅಂಕಣ ಬರೆಯುವಾಗ ಪ್ರತಿ ದಿನವೂ ತಲೆ ಮೇಲೆ ಸೇಬುಹಣ್ಣು ಬೀಳುವುದಿಲ್ಲ. ಆದರೆ ಓದುಗರ ಮುಂದೆ ನೆಪಗಳನ್ನು ಹೇಳಲಾಗುವುದಿಲ್ಲ. ಪ್ರತಿದಿನವೂ ಓದುಗರಿಗೆ ವಿಸ್ಮಯ ಕ್ಷಣಗಳನ್ನು ಕಟ್ಟಿಕೊಡಬೇಕಾದುದು ಅಂಕಣಕಾರನ ಕರ್ತವ್ಯ.

ಅಂಕಣಕಾರನಿಗೆ ಯಾವ ವಿಷಯವೂ ವರ್ಜ್ಯವಲ್ಲ. ಎಲ್ಲ ವಿಷಯಗಳನ್ನು ತುಂಬಿಕೊಳ್ಳುತ್ತ ಹೋಗಬೇಕು. ಈ ಕೃತಿ ಓದುವಾಗ, ನಿಮಗೆ ಅನೇಕ ಹೊಸ ಹೊಳಹುಗಳು ಸಿಗಬಹುದು.

  • ಈ ಪುಸ್ತಕದ ಬೆಲೆ 250 ರೂ.



ಒಂದೊಳ್ಳೆ ಮಾತು-4; ಇದು ಲೇಖಕಿ ರೂಪಾ ಗುರುರಾಜ್‌ ಅವರ ಕೃತಿ

ಇದು ವಿಶ್ವವಾಣಿಯಲ್ಲಿ ಪ್ರಕಟವಾಗುತ್ತಿರುವ ರೂಪಾ ಗುರುರಾಜ್ ಅವರ ಸ್ಫೂರ್ತಿದಾಯಕ ಮಾತುಗಳ ದೈನಿಕ ಅಂಕಣಗಳ ಸಂಗ್ರಹ. ರೂಪಾ ಅವರದು ಬಹುಶ್ರುತ ಪ್ರತಿಭೆ. ಇವರು ಉತ್ತಮ ನಿರೂಪಕಿ, ಸಂದರ್ಶಕಿ, ಕಂಠದಾನ ಕಲಾವಿದೆ. ಒಂದೊಳ್ಳೆ ಮಾತಿನ ಮೂಲಕ ತಮ್ಮ ಅಂತಃಸತ್ವವನ್ನು ಸಾಬೀತುಪಡಿಸಿದ್ದಾರೆ.

ಪುರಾಣ, ಉಪನಿಷತ್ತು, ಭಗವದ್ಗೀತೆ, ರಾಮಾಯಣ, ಮಹಾಭಾರತದ ಕಥೆಗಳನ್ನು ಪ್ರಸ್ತುತ ವಿದ್ಯಮಾನಗಳಿಗೆ ಸಮಕಾಲೀನಗೊಳಿಸಿ, ಅಸಂಖ್ಯ ಓದುಗರಲ್ಲಿ ಸ್ಫೂರ್ತಿ ತುಂಬುತ್ತಿದ್ದಾರೆ. ಸ್ಫೂರ್ತಿದಾಯಕ, ಪ್ರೇರಣದಾಯಕ ಹಾಗೂ ಸೋತ ಬದುಕಿನಿಂದ ಗೆಲುವು ಕಂಡುಕೊಳ್ಳುವ ಆತ್ಮವಿಶ್ವಾಸ ಮೂಡಿಸುವ ರೂಪಾ ಅಂಕಣ ನಿಜಕ್ಕೂ ಚೇತೋಹಾರಿ.ಇಲ್ಲಿನ ಪ್ರತಿ ಅಧ್ಯಾಯವೂ ಸದಾ ನೆನಪಿಸಿಕೊಳ್ಳಬೇಕಾದ ಒಂದು ಅಮೂಲ್ಯ ನೀತಿ-ಸಂದೇಶವನ್ನು ಒಳಗೊಂಡಿರುವುದು ವಿಶೇಷ. Good words cool more than cold water ಎಂಬ ಮಾತಿದೆ. ಇದು ರೂಪಾ ಅವರ ಈ ಕೃತಿಗೆ ಹೆಚ್ಚು ಒಪ್ಪುತ್ತದೆ.

ಈ ಪುಸ್ತಕದ ಬೆಲೆ 250 ರೂ.



ಗೆದ್ದವರ ಕಥೆಗಳು- ಇದು ಪತ್ರಕರ್ತ ರಾಜು ಅಡಕಳ್ಳಿ ಅವರ ಕೃತಿ

Geddavara kathegalu

'ಲೋಕಧ್ವನಿ' ಪತ್ರಿಕೆಯಲ್ಲಿ ಬರೆಯುತ್ತಿರುವ 'ವ್ಯಕ್ತಿ ಶಕ್ತಿ' ಅಂಕಣ ಬರಹಗಳ ಪುಸ್ತಕವೇ 'ಗೆದ್ದವರ ಕಥೆಗಳು'. ವ್ಯಕ್ತಿ ಶಕ್ತಿ, ಹೊಸಮುಖ, ಸ್ಫೂರ್ತಿವಂತರು ಈ ಸರಣಿಯ ಕೃತಿಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತರು, ಸಾಧಕರು ರಾಜ್ಯ-ದೇಶ, ವಿಶ್ವ ಮಟ್ಟದಲ್ಲಿ ಮಾದರಿಯಾಗಿ ನಿಂತ ವ್ಯಕ್ತಿ ಚಿತ್ರಣಗಳು ಇಲ್ಲಿವೆ.

ವ್ಯಕ್ತಿ ಮೀರಿದ ಶಕ್ತಿಯಾಗಿರುವ ಸ್ವರ್ಣವಲ್ಲಿ ಶ್ರೀಗಳಿಂದ ಹಿಡಿದು, ನೌಕಾಪಡೆಯಲ್ಲೇ ಬಾಳನೌಕೆ ಸಾಗಿಸಿದ ನಿಖಿಲ್ ತನಕ ಮೂವತ್ನಾಲ್ಕು ಜನರ 'ಗೆದ್ದವರ ಕಥೆಗಳು' ಇಲ್ಲಿ ಹರಳುಗಟ್ಟಿವೆ. ರಾಜು ಅಡಕಳ್ಳಿ ಅವರು ಇಂಥ ಸಾಧಕರ ವ್ಯಕ್ತಿತ್ವ ಕಟ್ಟಿಕೊಡುವ, ಸರಳ ಭಾಷಾ ಶೈಲಿಯ ‌ನಿರೂಪಣಾ ವಿಧಾನ ಓದುಗರನ್ನು ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಪ್ರತಿಯೊಬ್ಬರ ಬಾಳ ಕಥನಗಳಲ್ಲೂ ಒಂದೊಂದು ಸ್ಫೂರ್ತಿದಾಯಕ ಅಂಶಗಳಿವೆ.

ಜೀವನದ ಏರಿಳಿತಗಳಲ್ಲೂ ಬದುಕನ್ನು ಹಸನು ಮಾಡಿಕೊಂಡ 'ಗೆದ್ದವರ ಕಥೆಗಳು' ಓದುಗರ ಮನ ಸೆಳೆಯುವುದರಲ್ಲಿ ಸಂಶಯವೇ ಇಲ್ಲ. ಕಲೆ, ಸಾಹಿತ್ಯ, ಯಕ್ಷಗಾನ, ವೈದ್ಯಕೀಯ, ಕೃಷಿ ಹೀಗೆ ನಾನಾ ಕ್ಷೇತ್ರಗಳ ವ್ಯಕ್ತಿಗಳು ಈ ಕೃತಿಯಲ್ಲಿ ಸಿಗುತ್ತಾರೆ.

  • ಈ ಪುಸ್ತಕದ ಬೆಲೆ 250 ರೂ.



ಉಭಯದೇಶವಾಸಿ- ಇದು ಕಿರಣ್ ಉಪಾಧ್ಯಾಯ ಅವರ ನೂತನ ಕೃತಿ

Ubayadeshavasi

ವಿದೇಶವಾಸಿ, ಪರದೇಶವಾಸಿ, ಹೊರದೇಶವಾಸಿ, ದೂರದೇಶವಾಸಿ...ಇದೀಗ ಉಭಯದೇಶವಾಸಿ!

ಬಹ್ರೈನ್ ದೇಶದಲ್ಲಿ ನೆಲೆಸಿರುವ ಕಿರಣ್ ಮೂಲತಃ ಉದ್ಯಮಿ. ಪ್ರವೃತ್ತಿಯಲ್ಲಿ ಅಂಕಣಕಾರರು. ಅವರ ಈ ಎಲ್ಲ ಕೃತಿಗಳೂ ವಿಶ್ವವಾಣಿ ಪುಸ್ತಕದಿಂದ ಪ್ರಕಟಗೊಂಡಿವೆ. ಕಿರಣ್ ಸದಾ ಸಕಾರಾತ್ಮಕ ಮತ್ತು ಕ್ರಿಯಾಶೀಲ. ಓದು, ಶೋಧ, ಅಧ್ಯಯನ, ಹರಟೆ, ಪ್ರವಾಸ...ಇವು ವೃತ್ತಿಯ ಆಚೆ ಕಿರಣ್‌‌ಗೆ ಇರುವ ಹವ್ಯಾಸಗಳು.

'ಉಭಯದೇಶವಾಸಿ' ಕೃತಿಯ ಬಗ್ಗೆ ಹೇಳುವುದಾದರೆ, ಉಭಯ ಅಂದರೆ ಎರಡು. ವಿಜ್ಞಾನದ ಪ್ರಕಾರ ನೀರು ಮತ್ತು ನೆಲದಲ್ಲಿ ವಾಸಿಸುವ ಜೀವಿಗಳನ್ನು ಉಭಯವಾಸಿ ಅಂತೀವಿ.‌ ಆದರೆ ಕಿರಣ್ ದೇಶ-ವಿದೇಶದಲ್ಲಿ ವಾಸಿಸುತ್ತಲೇ ಎರಡೂ ದೇಶಗಳ ಕೊಂಡಿಯಂತೆ ಇಲ್ಲಿನ ಬರಹಗಳನ್ನು ರೂಪಿಸಿದ್ದಾರೆ. ವ್ಯಾಪಾರ, ವ್ಯವಹಾರ, ಸುತ್ತಾಟ, ಸಂಸಾರ...ಈ ಎಲ್ಲ ಜಂಜಾಟಗಳ ನಡುವೆಯೂ ಅಪ್ಪಟ ಅಕ್ಷರ ಪ್ರೀತಿಯನ್ನು ಇಟ್ಟುಕೊಂಡಿರುವುದಕ್ಕೆ ನಿದರ್ಶನ ಕಿರಣ್ ಅವರ 'ಉಭಯದೇಶವಾಸಿ' ಕೃತಿ.

  • ಈ ಪುಸ್ತಕದ ಬೆಲೆ 250 ರೂ.



ಯಶಸ್ವಿ ಬದುಕಿಗೆ ಸರಳ ಸೂತ್ರಗಳು- ಇದು ಎಸ್ ಷಡಕ್ಷರಿ ಅವರ ಸಂಗ್ರಹಯೋಗ್ಯ ಕೃತಿ

Yashaswi Badukige sarala sutragalu

ಎಸ್ ಷಡಕ್ಷರಿ ಅವರು ಉದ್ಯಮಿಯಾಗಿದ್ದರೂ ಜನಪ್ರಿಯರಾಗಿದ್ದು ಅಕ್ಷರೋದ್ಯಮಿಯಾಗಿ. ಏಕೆಂದರೆ ಕಳೆದ ಹದಿನಾರು ವರ್ಷಗಳಿಂದ ನಿರಂತರವಾಗಿ ದೈನಂದಿನ ಅಂಕಣ ಬರೆದು ಮನೆಮಾತಾಗಿದ್ದಾರೆ. ಷಡಕ್ಷರಿ ಅವರ 'ಕ್ಷಣ ಹೊತ್ತು ಆಣಿಮುತ್ತು' ಪುಸ್ತಕಗಳ ಮಾರಾಟ ಕನ್ನಡ ಪುಸ್ತಕೋದ್ಯಮದಲ್ಲಿ ಅಪೂರ್ವ ದಾಖಲೆ. ಈ ಕೃತಿ ಅಸಂಖ್ಯ ಜನರಿಗೆ ಸಾಂತ್ವನ ನೀಡಿ, ಅವರ ಬದುಕನ್ನೇ ಬದಲಿಸಿದೆ.

'ಯಶಸ್ವಿ ಬದುಕಿಗೆ ಸರಳ ಸೂತ್ರಗಳು' ಕೃತಿಯ ನುಡಿಮುತ್ತುಗಳಲ್ಲಿ ಜೀವನದ ಸಾರವೇ ಅಡಗಿದೆ. ಸರ್ವಜ್ಞನ ತ್ರಿಪದಿ, ಡಿವಿಜಿಯವರ ಮಂಕುತಿಮ್ಮನ ಕಗ್ಗ, ಶರಣರ ವಚನಗಳು ನಮ್ಮ ಬದುಕಿಗೆ ಹೇಗೆ ದಾರಿದೀಪಗಳಾಗಿವೆಯೋ, ಹಾಗೆಯೇ ಷಡಕ್ಷರಿ ಅವರ ಇಲ್ಲಿನ ವಿಚಾರಗಳು ಓದುಗರಿಗೆ ತೋರುದೀಪಗಳಾಗಿವೆ.

ವ್ಯಂಗ್ಯ, ವಿಡಂಬನೆ, ಹಾಸ್ಯಲೇಪಿತ, ವಿಚಾರಪೂರ್ಣ ಚಿಕ್ಕ ಚೊಕ್ಕ 'ಯಶಸ್ವಿ ಬದುಕಿಗೆ ಸರಳ ಸೂತ್ರಗಳು' ಓದುಗರ ಮನಸ್ಸಿಗೆ ಹಿತ ನೀಡುತ್ತವೆ. ಈ ಸೂತ್ರಗಳು ಸದಾ ಅನುಕರಣೀಯ. ಅದೇ ಈ ಕೃತಿಯ ಸೊಗಸು, ಸಾರ್ಥಕ್ಯ.

  • ಈ ಪುಸ್ತಕದ ಬೆಲೆ 250 ರೂ.



Ask The Editor ಭಾಗ 3

Vishweshwar Bhat's Ask the Editor

ಇದು ವಿಶ್ವೇಶ್ವರ ಭಟ್ ಅವರ ಮತ್ತೊಂದು ವಿಶಿಷ್ಟ ಕೃತಿ. ಸತಾಯಿಸುವ ಪ್ರಶ್ನೆಗಳಿಗೆ ಸಂತೈಸುವ ಸ್ವಾರಸ್ಯಕರ ಉತ್ತರಗಳು ಇಲ್ಲಿವೆ. ಓದುಗರು ಏನೇ ಕೇಳಿದರೂ, ಸಂಪಾದಕರು ಅವರಿಗೆ ಉತ್ತರಿಸಬೇಕು. ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡಾಗಲೂ ಪರಿಹಾರ ಸೂಚಿಸಬೇಕು, ಸಂಪಾದಕರಿಗೇ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರೂ, ಹಿಂದೆಮುಂದೆ ನೋಡದೇ ಉತ್ತರಿಸಬೇಕು. ಓದುಗರು ಮತ್ತು ಸಂಪಾದಕರ ಮಧ್ಯೆ ಮಹಾಗೋಡೆ ಇರಬಾರದು ಎಂಬ ಆಶಯದಿಂದ ಆರಂಭಿಸಿದ ಅಂಕಣವಿದು.

ಉದಾಹರಣೆಗೆ ಜ್ಯೋತಿಕಾ ಎಂಬ ಯುವತಿಯ ಪ್ರಶ್ನೆ ಹೀಗಿತ್ತು:

ಸಂಪಾದಕರೇ, ನನ್ನ ಸ್ನೇಹಿತೆ ‌ನಿಮ್ಮ ಪತ್ರಿಕೆಯನ್ನು ಓದುತ್ತಾಳೆ. ನನ್ನದೊಂದು ಸಮಸ್ಯೆಯನ್ನು ಅವಳ ಮುಂದೆ ಹೇಳಿದೆ. ಅದಕ್ಕೆ ಅವಳು, ನೀನೇಕೆ ನಿನ್ನ ಸಮಸ್ಯೆಯನ್ನು ಭಟ್ಟರ ಮುಂದೆ ಹೇಳಿಕೊಳ್ಳಬಾರದು? ಎಂದು ಹೇಳಿದಳು. ನನ್ನ ಸಮಸ್ಯೆ ಅಂದ್ರೆ, ನಾನು ಇಷ್ಟು ದಿನ ಒಬ್ಬನನ್ನು ಪ್ರೀತಿಸುತ್ತಿದ್ದೆ. ಈಗ ಮತ್ತೊಬ್ಬ ಸಿಕ್ಕಿದ್ದಾನೆ. ಅವರಿಬ್ಬರನ್ನೂ ನನ್ನಿಂದ ಬಿಟ್ಟಿರಲು ಆಗುತ್ತಿಲ್ಲ. ಏಕಕಾಲಕ್ಕೆ ಇಬ್ಬರನ್ನು ಪ್ರೀತಿಸುವುದು ತಪ್ಪಾ?

ಇದಕ್ಕೆ ಸಂಪಾದಕರು ಕೊಟ್ಟ ಉತ್ತರ ಹೀಗಿದೆ:

ಜ್ಯೋತಿಕಾ ಅವರೇ, ಈ ಪ್ರಶ್ನೆಯನ್ನು ನನ್ನ ಮುಂದೆ ಕೇಳುವ ಬದಲು, ಏಕಕಾಲದಲ್ಲಿ ಆ ಇಬ್ಬರನ್ನೂ ಒಟ್ಟಿಗೇ ಎದುರಾ ಬದುರಾ ಕೂರಿಸಿಕೊಂಡು ಅವರ ಮುಂದೆ ಹೇಳಬೇಕಿತ್ತು. ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನನಗೆ ತಿಳಿಸಿ. ನಿಮ್ಮ ಪ್ರಸ್ತಾಪವನ್ನು ಅವರಿಬ್ಬರೂ ಒಪ್ಪಿದರೆ, ಸಮಸ್ಯೆಯೇ ಇಲ್ಲ. ಅವರಿಬ್ಬರ ಪ್ರತಿಕ್ರಿಯೆ ತಿಳಿದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ! ನಂತರ ನನ್ನ ಉತ್ತರವನ್ನು ಹೇಳುತ್ತೇನೆ. ದಯವಿಟ್ಟು ನನಗಾಗಿ ಈ ಉಪಕಾರ ಮಾಡಿ!

ಓದುಗರ ಪ್ರಶ್ನೆ ಚಿತ್ರ-ವಿಚಿತ್ರ! ಅವುಗಳಿಗೆ ಸಂಪಾದಕ ವಿಶ್ವೇಶ್ವರ ಭಟ್ ಅವರ ಉತ್ತರವೂ ಅಷ್ಟೇ ಮಾರ್ಮಿಕ ಮತ್ತು ಮಜವಾಗಿರುತ್ತದೆ. ಓದುಗರು ಮತ್ತು ಸಂಪಾದಕರ ಈ ಪ್ರಶ್ನೋತ್ತರಗಳನ್ನು ಓದುವುದೇ ಒಂದು ವಿಶಿಷ್ಟ ಅನುಭವ!

-ಈ ಪುಸ್ತಕದ ಬೆಲೆ 250 ರೂ.



  • ಎಲ್ಲ ಪ್ರಮುಖ ಪುಸ್ತಕ ಅಂಗಡಿಗಳಲ್ಲಿ ಈ ಕೃತಿಗಳು ಲಭ್ಯ.
  • QR CODE ಸ್ಕ್ಯಾನ್ ಮಾಡಿ, ಫೋನ್ ಪೇ / ಗೂಗಲ್ ಪೇ ಮಾಡಿದ ಸ್ಕ್ರೀನ್ ಶಾಟ್ ನೊಂದಿಗೆ ನಿಮ್ಮ ವಿಳಾಸವನ್ನು 63623 93966 ಈ ನಂಬರ್‌‌ಗೆ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಪುಸ್ತಕ ತಲುಪಿಸಲಾಗುತ್ತದೆ.