ಬೆಂಗಳೂರು: ಇದೊಂದು ಕರಾಳ ದಿನ, ನಾಚಿಕೆಗೇಡಿನ ಸಂಗತಿ. ಕನ್ನಡದ ಕೀರ್ತಿಯನ್ನು ದೇಶಾದ್ಯಂತ ಪಸರಿಸಿದ ನಾಯಕನಿಗೆ 10 ಗುಂಟೆ ಜಾಗ ನೀಡದೆ ಸರ್ಕಾರ ಅವಮಾನ ಮಾಡಿದೆ. ಸಮಾಧಿ ನೆಲಸಮ ಮಾಡಿರುವ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಇಷ್ಟೆಲ್ಲಾ ಆದ ಮೇಲೆ ನಾವು ಸರ್ಕಾರ ಅಥವಾ ವಿಷ್ಣುವರ್ಧನ್ ಅವರ ಕುಟುಂಬಸ್ಥರ ಜತೆ ಏನೂ ಮಾತುಕತೆ ನಡೆಸಲು ಹೋಗಲ್ಲ. ಇಡೀ ದೇಶ ನೋಡುವಂತೆ ಮಾಡಲಿದ್ದೇವೆ ಎಂದು ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ, ಪುಸ್ತಕೋದ್ಯಮಿ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ವಿಷ್ಣುವರ್ಧನ್ ಅವರ ಕುಟುಂಬಸ್ಥರಿಗೆ ಈ ಬಗ್ಗೆ ಖುಷಿ ಇದೆ. ಯಾಕೆಂದರೆ ಅವರು ಇದರ ವಿರುದ್ಧವಾಗಿದ್ದರು. ಮೈಸೂರಿನಲ್ಲಿ ಜಾಗ ನೀಡಿರುವುದರಿಂದ ಅವರಿಗೆ ಖುಷಿಯಿದೆ. ಇನ್ನು ನಮಗೆ ಹೈಕೋರ್ಟ್‌ನಲ್ಲಿ ನಮಗೆ ವಿರುದ್ಧವಾಗಿ ತೀರ್ಪು ಬಂದಿದೆ. ಸ್ಮಾರಕದ ಬಗ್ಗೆ ಕೇಳಿದರೆ ಕುಟುಂಬಸ್ಥರು ಕೇಳಬೇಕು, ನೀವ್ಯಾರು ಎಂದು ಅಭಿಮಾನಿಗಳನ್ನು ಕೋರ್ಟ್ ಪ್ರಶ್ನಿಸಿತ್ತು ಎಂದು ತಿಳಿಸಿದ್ದಾರೆ.
ಬಾಲಣ್ಣ ಕುಟುಂಬಸ್ಥರು ಈ ಜಾಗದಲ್ಲಿ ಮಾಲ್, ವಾಣಿಜ್ಯ ಚಟುವಟಿಕೆ ನಡೆಸಲು ಮುಂದಾಗಿದ್ದಾರೆ. ಇಲ್ಲಿ 150 ಕೋಟಿ ಹೂಡಿಕೆಯಾಗುತ್ತಿದೆ. ನಾವು 2 ಕೋಟಿ ಹಣ ಕೊಡುತ್ತೇವೆ, ಜಾಗ ಕೊಡಿ ಎಂದರೂ ಅವರು ಒಪ್ಪಲಿಲ್ಲ. ಇಷ್ಟೆಲ್ಲಾ ಆದ ಮೇಲೆ ನಾವು ಸರ್ಕಾರ ಅಥವಾ ವಿಷ್ಣುವರ್ಧನ್ ಅವರ ಕುಟುಂಬಸ್ಥರ ಜತೆ ಏನೂ ಮಾತುಕತೆ ನಡೆಸಲು ಹೋಗಲ್ಲ. ಇಡೀ ದೇಶ ನೋಡುವಂತೆ ಮಾಡಲಿದ್ದೇವೆ. ಒಂದು ವಾರದಲ್ಲಿ ಸಭೆ ಕರೆಯುತ್ತೇವೆ, ಮುಂದಿನ ತೀರ್ಮಾನ ಮಾಡುತ್ತೇವೆ. ವಿಷ್ಣುವರ್ಧನ್ ಅವರನ್ನು ಎರಡನೇ ಬಾರಿ ಸಾಯಿಸಿದ್ದಾರೆ ಎಂದು ಅಭಿಮಾನಿಗಳು ನೊಂದಿರುವುದಾಗಿ ಹೇಳಿದ್ದಾರೆ.
ಹತ್ತು ಗುಂಟೆ ಜಾಗ ಕೊಡಲಾಗದ ನಾಚಿಕಗೇಡಿನ ಸರ್ಕಾರ
ಕೊನೆಗೂ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ನೆಲಸಮ ಮಾಡಿಬಿಟ್ಟರು! ಹನ್ನೊಂದು ವರ್ಷಗಳ ಹೋರಾಟ ನೀರಲ್ಲಿ ಹೋಮ ಮಾಡಿದಂತಾಯಿತು. ಡಾ.ವಿಷ್ಣುವರ್ಧನ್ ಅವರಿಗೆ ಹತ್ತು ಗುಂಟೆ ಜಾಗ ಕೊಡಲಾಗದ ನಾಚಿಕಗೇಡಿನ ಸರ್ಕಾರ ಇದು. ಅದರ ಮೇಲೆ ನಂಬಿಕೆ ಕಳೆದುಕೊಂಡು ನಾವು ಕೋರ್ಟ್ ಮೆಟ್ಟಿಲೇರಿದ್ದೆವು. ಕೋರ್ಟ್ ಅತ್ಯಂತ ಸ್ಪಷ್ಟವಾಗಿ ಹೇಳಿದ್ದು... ಈ ವಿಷಯವಾಗಿ ಅಭಿಮಾನಿಗಳಾದ ನಿಮಗೆ ಯಾವುದೇ ಹಕ್ಕಿಲ್ಲ. ಅವರ ಕುಟುಂಬ ಅಥವಾ ಸರ್ಕಾರವಷ್ಟೇ ಕೇಳಬೇಕು ಎಂದುಬಿಟ್ಟಿತು. ಕುಟುಂಬದವರಂತೂ ನಮಗೆ ಮೈಸೂರಿನಲ್ಲಿ ಜಾಗ ಸಿಕ್ಕಿದೆ, ಅಲ್ಲಿ ಸ್ಮಾರಕವೂ ಆಗಿದೆ ಆದ್ದರಿಂದ ಅಭಿಮಾನ್ ಸ್ಟುಡಿಯೋದ ಜಾಗವನ್ನು ನಾವು ಕೇಳುವುದಿಲ್ಲ ಎಂದುಬಿಟ್ಟರು ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Dr. Vishnuvardhan's samadhi: ನಟ ಡಾ.ವಿಷ್ಣುವರ್ಧನ್ ಸಮಾಧಿ ರಾತ್ರೋ ರಾತ್ರಿ ನೆಲಸಮ; ಅಭಿಮಾನಿಗಳ ಆಕ್ರೋಶ
ಸರ್ಕಾರದ ಸಚಿವರಾದ ಡಿಕೆ ಶಿವಕುಮಾರ್ , ಶಿವರಾಜ್ ತಂಗಡಗಿ ಅವರಿಗೆ ಮನವಿ ಕೊಟ್ಟಾಗ ಅವರು ಪುಣ್ಯಭೂಮಿ ಉಳಿಸುವ ಭರವಸೆ ಕೊಟ್ಟರು. ಆ ಎಲ್ಲದರ ಜೊತೆ ಇದುವರೆಗೆ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಇಷ್ಟೆಲ್ಲದರ ನಂತರ ನಮಗೆ ಹೇಳಲು, ಕೇಳಲು ಇನ್ನೇನಿತ್ತು? ರಾತ್ರೋರಾತ್ರಿ ನೂರಾರು ಪೋಲೀಸರ ನೇತೃತ್ವದಲ್ಲಿ ಈ ನೆಲಸಮ ಕಾರ್ಯಾಚರಣೆ ನಡೆದಿದೆ. ಒಬ್ಬ ಮೇರು ಕಲಾವಿದನಿಗೆ ಹತ್ತು ಗುಂಟೆ ಜಾಗ ಕೊಡಲಾಗದಂತಹ ವ್ಯವಸ್ಥೆಗೆ ದಿಕ್ಕಾರವಿರಲಿ. ಬಾಲಣ್ಣನ ವಂಶಸ್ಥರೆನಿಸಿಕೊಂಡವರು ಸಮಾಧಿ ಜಾಗದಲ್ಲಿ ಮಾಲ್ ಕಟ್ಟಲು ಹೊರಟಿದ್ದಾರೆ. ಅವರಿಗೆ ಬೆನ್ನೆಲುಬಾಗಿ ಒಬ್ಬ ರಾಜಕಾರಣಿಯೂ ಜೊತೆಯಾಗಿದ್ದಾನೆ. ಹಣಕ್ಕಾಗಿ ಇಷ್ಟು ನೀಚ ಬಾಳು ಬಾಳಬೇಕಾ? ಧಿಕ್ಕಾರವಿರಲಿ... ರಾತ್ರೋರಾತ್ರಿ ಹೇಡಿಗಳ ಹಾಗೆ ನೆಲಸಮ ಮಾಡುವುದು ಬಿಟ್ಟು ಹಗಲಲ್ಲಿ ಮಾಡುವ ಎದೆಗಾರಿಕೆಯಾದರೂ ಅವರಿಗೆ ಇರಬೇಕಿತ್ತು. ಕರಾಳ ದಿನ ಎಂದು ಹೇಳಿದ್ದಾರೆ.