ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ ಏರ್ ಶೋ (Air show) ನಡೆಸಲು ರಕ್ಷಣಾ ಇಲಾಖೆ ಅನುಮತಿ ನೀಡಿದ್ದು, ರಕ್ಷಣಾ ಸಚಿವರಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಧನ್ಯವಾದ ಹೇಳಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಸಚಿವರಿಗೆ ಧನ್ಯವಾದ ಹೇಳಿದ್ದಾರೆ. ಕರ್ನಾಟಕ ಸರ್ಕಾರ, ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.
ಮೈಸೂರು ದಸರಾಗೆ ತನ್ನದೇ ಆದ ಇತಿಹಾಸ ಇದೆ. ನಾಡಹಬ್ಬ ದಸರಾ ನೋಡಲು ಲಕ್ಷಾಂತರ ಜನರು ಬರುತ್ತಾರೆ. ಶ್ರದ್ಧಾ, ಭಕ್ತಿಗೆ ಸಾಕ್ಷಿಯಾದ ಮೈಸೂರು ದಸರಾದಲ್ಲಿ ಏರ್ ಶೋಗೆ ಅನುಮತಿ ನೀಡಿರುವುದಕ್ಕೆ ಧನ್ಯವಾದಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಾರಿಯ ದಸರಾವನ್ನು ಅದ್ಧೂರಿ ಜತೆಗೆ ಅಚ್ಚುಕಟ್ಟಾಗಿ ಜನಪರವಾಗಿ ಆಚರಣೆ ಮಾಡಬೇಕೆಂದು ಸರ್ಕಾರ ನಿರ್ಧಾರ ಮಾಡಿದೆ. ಅಲ್ಲದೆ, ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಲು ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಮುಂದಾಗಿದ್ದರು. ದಸರಾದಲ್ಲಿಏರ್ ಶೋ ಪ್ರದರ್ಶನಕ್ಕೆ ಚಿಂತನೆ ನಡೆಸಿ ಕಳೆದ ತಿಂಗಳು ಹೊಸದಿಲ್ಲಿಗೆ ತೆರಳಿದ್ದ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ಮಾತುಕತೆ ಇದೀಗ ಫಲಪ್ರದವಾಗಿದ್ದು, ರಾಜ್ಯದ ಬೇಡಿಕೆಯಾದ ಏರ್ ಶೋಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ವೈಮಾನಿಕ ಪ್ರದರ್ಶನವನ್ನು ಮೈಸೂರಿಗರೂ ಎರಡು - ಮೂರು ಬಾರಿ ಕಣ್ತುಂಬಿಕೊಂಡಿದ್ದಾರೆ. ಈ ಹಿಂದೆ 2023, 2019 ಹಾಗೂ 2017 ರಲ್ಲಿ ಏರ್ ಶೋ ದಸರಾದಲ್ಲಿ ನಡೆದಿತ್ತು. ಕಳೆದ ವರ್ಷ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ಮೈಸೂರು ದಸರಾದಲ್ಲಿ ಡ್ರೋಣ್ ಶೋ ನಡೆಸಲಾಗಿತ್ತು. ಈ ಎರಡು ಶೋ ನೋಡಲು ಜನರು ಆಗಮಿಸಿದ್ದರು.
ಇದನ್ನೂ ಓದಿ: Bomb Hoax: ಏರ್ ಶೋ ನಡುವೆಯೇ ಬೆಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ