ಬೆಂಗಳೂರು: ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಆಯೋಜಿಸಲಾಗುವ ʼಅಪ್ಪುಕಪ್ ಸೀಸನ್ 3ʼ (Appu Cup Season 3) ರ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಶುಕ್ರವಾರ ನಗರದ ಕಿಂಗ್ಸ್ ಕ್ಲಬ್‌ನಲ್ಲಿ ಚಾಲನೆ ನೀಡಲಾಯಿತು. ತೆರೆ ಮೇಲೆ ಮನರಂಜಿಸುವ ತಾರೆಯರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಕಾತುರದಿಂದ ಕಾಯುತ್ತಿದ್ದುದು ಕಣ್ಣಿಗೆ ಹಬ್ಬದಂತಿತ್ತು. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಗೆ ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಲಾಯಿತು.
ವೇದಿಕೆಯ ಮೇಲೆ ನಟ ಅನಿರುದ್ಧ್, ನಿರ್ದೇಶಕ ಇಂದ್ರಜಿತ್ ಲಂಕೇಶ್ ಸೇರಿದಂತೆ ವಿವಿಧ ತಂಡದ ನಾಯಕರು ಮತ್ತು ಮಾಲೀಕರು, ಪಂದ್ಯಾವಳಿಯ ನಿರ್ದೇಶಕ ಉಮೇಶ್, ಆಯೋಜಕ ಚೇತನ್ ಸೂರ್ಯ ಉಪಸ್ಥಿತರಿದ್ದರು.

ಪಂದ್ಯದ ಆರಂಭವು ʼಜೇಮ್ಸ್ ವಾರಿಯರ್ಸ್ʼ ಮತ್ತು ʼಯುವರತ್ನ ಚಾಂಪಿಯನ್ಸ್ʼ ತಂಡದ ನಡುವೆ ನಡೆಯಿತು. ಈ ಪಂದ್ಯದ ನಾಲ್ಕು ವಿಭಾಗಗಳಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮುಂದಾಳತ್ವ ವಹಿಸಿರುವ ʼಯುವರತ್ನ ಚಾಂಪಿಯನ್ಸ್ʼ ತಂಡ ಮೂರರಲ್ಲಿ ಮುಂಚೂಣಿಯಲ್ಲಿದ್ದು, ಗೆಲುವನ್ನು ಸಾಧಿಸಿದೆ. ʼಯುವರತ್ನ ಚಾಂಪಿಯನ್ಸ್ʼ ತಂಡದಲ್ಲಿ ಮಹೇಶ್, ಸಿದ್ಧೇಶ್, ಮಂಜು, ಸ್ಫೂರ್ತಿ, ಕಾರ್ತಿಕ್ (ನಿರ್ದೇಶಕ), ರಂಜನ್, ಅರ್ಪಿತಾ ಗೌಡ, ರಿತ್ವಿ ಜಗದೀಶ್, ಹರಿ, ಲಾವಣ್ಯ, ಮತ್ತು ಐಶ್ವರ್ಯ ಸೇರಿದಂತೆ ಇನ್ನೂ ಹಲವಾರು ಕಲಾವಿದರಿದ್ದರು.

ಈ ಸುದ್ದಿಯನ್ನೂ ಓದಿ | Neetha Ambani: ಸ್ವದೇಶ್‌ನ ಮಧುರೈ ಟ್ರೆಡಿಷನಲ್ ಸೀರೆಯಲ್ಲಿ ಮಿಂಚಿದ ನೀತಾ ಅಂಬಾನಿ
ನಂತರದಲ್ಲಿ ವೀರ ಕನ್ನಡಿಗ ಬುಲ್ಸ್, ಗಂಧದ ಗುಡಿ ವಾರಿಯರ್, ಜಾಕಿ ರೈಡರ್ಸ್, ಜೇಮ್ಸ್ ವಾರಿಯರ್ಸ್, ಅರಸು ಹಂಟರ್ಸ್, ಬಿಂದಾಸ್ ರಾಯಲ್ ಚಾಲೆಂಜರ್ಸ್, ದೊಡ್ಮನೆ ಡ್ರಾಗನ್ಸ್, ಪೈಥಾನ್ಸ್, ಮೌರ್ಯ ವೀವರ್ಸ್ ತಂಡಗಳ ನಡುವೆ ಸ್ಪರ್ಧೆಯು ಬಿರುಸಾಗಿ ಜರುಗಿತು. ಪಂದ್ಯಾವಳಿಯನ್ನು ವೀಕ್ಷಿಸಲು ಅನೇಕ ನಟ ಮತ್ತು ನಟಿಯರು ಪಾಲ್ಗೊಂಡಿದ್ದು ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾಯಿತು.