ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಶಾಸಕರ ಜತೆ ಸಿಎಂ ಸಭೆ; ಅದರಲ್ಲಿ ತಪ್ಪೇನಿದೆ ಎಂದ ಡಿ.ಕೆ.ಶಿವಕುಮಾರ್

DK Shivakumar: ಉಪಮುಖ್ಯಮಂತ್ರಿಗಳನ್ನು ಸಿಎಂ ಕಡೆಗಣಿಸಿದ್ದಾರೆ ಎನ್ನುವ ಬಿಜೆಪಿ ಟೀಕೆಯ ಬಗ್ಗೆ ಡಿಸಿಎಂ ಡಿಕೆಶಿ ಅವರು ಪ್ರತಿಕ್ರಿಯಿಸಿ, ಅವರು ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ. ಅವರ ಪಕ್ಷ, ಮನೆಯೇ ಅಸ್ತವ್ಯಸ್ತವಾಗಿದೆ. ಅವರ ಪಕ್ಷದ ಒಳಗೆ ಅನೇಕ ಮೇಲಾಟಗಳು ನಡೆಯುತ್ತಿವೆ. ಅವರ ಪಕ್ಷದ ನಾಯಕರ ಹೇಳಿಕೆಗಳನ್ನು ಎಲ್ಲರೂ ನೋಡಿದ್ದಾರೆ ಎಂದು ಟೀಕಿಸಿದ್ದಾರೆ.

ಬೆಂಗಳೂರು, ಜು.29: “ಸಿಎಂ ಸಿದ್ದರಾಮಯ್ಯ ಅವರು ತಮಗೆ ಇರುವ ಅಧಿಕಾರವನ್ನು ಬಳಸಿಕೊಂಡು ಶಾಸಕರ ಸಭೆ ಮಾಡುತ್ತಿದ್ದು, ಇದರಲ್ಲಿ ತಪ್ಪೇನಿದೆ ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಉತ್ತರಿಸಿದರು. ಮುಖ್ಯಮಂತ್ರಿಗಳು ನಿಮಗೆ ಆಹ್ವಾನ ನೀಡದೆ ಶಾಸಕರ ಸಭೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಉತ್ತರಿಸಿದ್ದಾರೆ.

“ಸುರ್ಜೇವಾಲ ಅವರು ಶಾಸಕರನ್ನು ಭೇಟಿ ಮಾಡಿದ ಬಳಿಕ ಅನೇಕ ವಿಚಾರಗಳನ್ನು ಸಿಎಂ ಗಮನಕ್ಕೆ ತಂದಿದ್ದು, ಶಾಸಕರ ಅಹವಾಲುಗಳ ವಿಚಾರವಾಗಿ ಸಿಎಂ ಸಭೆ ಮಾಡುತ್ತಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ಈ ಬಗ್ಗೆ ನನಗೆ ಯಾವುದೇ ಆಕ್ಷೇಪ ಇಲ್ಲ. ಈ ವಿಚಾರದಲ್ಲಿ ನನಗೆ ಏನೂ ಕಷ್ಟವಾಗದಿದ್ದರೂ, ನಿಮಗೆ ಏಕೆ (ಮಾಧ್ಯಮಗಳು) ಕಷ್ಟವಾಗುತ್ತಿದೆ " ಎಂದು ಮರು ಪ್ರಶ್ನಿಸಿದರು.

ನೀವು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಆಗಿದ್ದು ನಿಮ್ಮನ್ನು ಕರೆದಿಲ್ಲ ಎಂದಾಗ, "ಈ ವಿಚಾರವಾಗಿ ನನಗೆ ಯಾವುದೇ ಆಕ್ಷೇಪವಿಲ್ಲ. ಬೆಂಗಳೂರಿನ ಅಭಿವೃದ್ಧಿಗೆ ನಾವು ಪ್ರತ್ಯೇಕ ಅಜೆಂಡಾ ಹೊಂದಿರುವ ಕಾರಣಕ್ಕೆ ಆನಂತರ ಚರ್ಚೆ ನಡೆಸುತ್ತೇವೆ. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ನಾನು ಸಹ ಒಂದಷ್ಟು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದೇನೆ” ಎಂದರು.

ಬಿಜೆಪಿ ತನ್ನ ಮನೆ ಸರಿಪಡಿಸಿಕೊಳ್ಳಲಿ:

ಉಪಮುಖ್ಯಮಂತ್ರಿಗಳನ್ನು ಸಿಎಂ ಕಡೆಗಣಿಸಿದೆ ಎನ್ನುವ ಬಿಜೆಪಿ ಟೀಕೆಯ ಬಗ್ಗೆ ಕೇಳಿದಾಗ, “ಅವರು ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ. ಅವರ ಪಕ್ಷ, ಮನೆಯೇ ಅಸ್ತವ್ಯಸ್ತವಾಗಿದೆ. ಅವರ ಪಕ್ಷದ ಒಳಗೆ ಅನೇಕ ಮೇಲಾಟಗಳು ನಡೆಯುತ್ತಿವೆ. ಅವರ ಪಕ್ಷದ ನಾಯಕರ ಹೇಳಿಕೆಗಳನ್ನು ಎಲ್ಲರೂ ನೋಡಿದ್ದಾರೆ. ಅವರ ಮಧ್ಯೆಯೇ ಸಾಕಷ್ಟು ತಿಕ್ಕಾಟಗಳು ನಡೆಯುತ್ತಿವೆ. ಮೊದಲು ಅವರ ಸಮಸ್ಯೆಗಳನ್ನು ಸರಿಮಾಡಿಕೊಳ್ಳಲಿ” ಎಂದರು.

ಬೆಂಗಳೂರು ಹಾಗೂ ನಾಗರಿಕರ ಹಿತಕ್ಕಾಗಿ ಪಾಲಿಕೆ ವಿಭಜನೆ:

"ನಾವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಮುಂದಾಗಿದ್ದು, ಈ ವಿಚಾರವಾಗಿ ವಿರೋಧ ಪಕ್ಷಗಳ ನಾಯಕರ ಅಭಿಪ್ರಾಯವನ್ನು ಪಡೆದಿದ್ದೇವೆ. ಪಾಲಿಕೆ ಚುನಾವಣೆ ಕುರಿತಾಗಿ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಬೇಕಾಗಿದೆ. ಬೆಂಗಳೂರು ಹಾಗೂ ನಾಗರಿಕರ ಹಿತಕ್ಕಾಗಿ ಪಾಲಿಕೆ ವಿಭಜನೆ ಮಾಡುತ್ತಿದ್ದೇವೆ. ನಾವು ಭೌಗೋಳಿಕ ಹಾಗೂ ಆಡಳಿತ, ಆರ್ಥಿಕತೆ ಹಾಗೂ ಭವಿಷ್ಯದಲ್ಲಿ ಬೆಂಗಳೂರಿನ ವಿಸ್ತರಣೆ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಮಾಡಿದ್ದೇವೆ. ಬಿಜೆಪಿಯವರು ರಾಜಕೀಯ ಕಾರಣಗಳಿಗೆ ನಮ್ಮನ್ನು ಟೀಕೆ ಮಾಡುತ್ತಾರೆ, ಮಾಡಲಿ. ಸಾರ್ವಜನಿಕವಾಗಿ ಟೀಕೆ ಮಾಡುತ್ತಾರೆ, ಮಾಡಲಿ. ನಾವು ಇಡೀ ಬೆಂಗಳೂರು ಹಾಗೂ ರಾಜ್ಯದ ಹಿತಕ್ಕೆ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ಹೇಳಿರುವುದರಲ್ಲಿ ತಪ್ಪೇನಿದೆ:

ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನ ತಪ್ಪಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಇದರಲ್ಲಿ ತಪ್ಪೇನಿದೆ. ಹಿರಿಯ ನಾಯಕರು ಅವರು, ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಇದರಲ್ಲಿ ಯಾವ ತರಹದ್ದು ತಪ್ಪೇನಿಲ್ಲ” ಎಂದರು.

ರಾಜ್ಯ ರಾಜಕಾರಣಕ್ಕೆ ಖರ್ಗೆ ಅವರು ಮರಳಿ ಬರುತ್ತಾರೆ ಎನ್ನುವ ಕೆಲವರ ಚರ್ಚೆ ಬಗ್ಗೆ ಕೇಳಿದಾಗ, “ಈ ಬಗ್ಗೆಯೂ ಚರ್ಚೆ ಮಾಡುವುದರಲ್ಲಿ ತಪ್ಪೇನಿದೆ. ಅವರವರ ಅಭಿಪ್ರಾಯ ಅವರು ತಿಳಿಸುತ್ತಾರೆ” ಎಂದರು.

ಗೊಬ್ಬರ ಕೇಳಿದವರಿಗೆ ಗುಂಡು ಹೊಡೆದಿದ್ದು ಬಿಜೆಪಿ

ಬಿಜೆಪಿಯವರು ಯೂರಿಯಾ ಕೊರತೆ ಬಗ್ಗೆ ಪ್ರತಿಭಟನೆ ನಡೆಸುವ ಬಗ್ಗೆ ಕೇಳಿದಾಗ, “ಬಿಜೆಪಿ ಅವರ ಮೇಲೆ ಅವರೇ ಪ್ರತಿಭಟನೆ ಮಾಡಿಕೊಳ್ಳಬೇಕು ಅಷ್ಟೇ. ಈ ಹಿಂದೆ ಗೊಬ್ಬರ ಕೊಡಲು ಆಗದೇ ರೈತರ ಮೇಲೆ ಗುಂಡು ಹಾರಿಸಿದ್ದರು. ನಾವು ಅಂತಹ ಕೆಲಸ ಮಾಡುವುದಿಲ್ಲ. ಮಳೆ ಹೆಚ್ಚಾಗಿರುವ ಕಾರಣ ಕೃಷಿ ಚಟುವಟಿಕೆ ಜಾಸ್ತಿಯಾಗಿದೆ. ಹೀಗಾಗಿ ರಸಗೊಬ್ಬರ ಬೇಡಿಕೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ಸಂಸದರು ಒಪ್ಪಿಕೊಂಡಿದ್ದಾರೆ. ಕೂಡಲೇ ಗೊಬ್ಬರ ಸಿಕ್ಕರೆ ನಮ್ಮ ರೈತರಿಗೆ ಒಳ್ಳೆಯದಾಗುತ್ತದೆ ಎಂದು ನಾವು ಒತ್ತಡ ಹಾಕುತ್ತಿದ್ದೇವೆ" ಎಂದರು.

“ಬಿಜೆಪಿ ಅವರ ಕೇಂದ್ರ ಕೃಷಿ ಸಚಿವರು, ರಾಸಾಯನಿಕ ಗೊಬ್ಬರ ಖಾತೆ ಸಚಿವರ ವಿರುದ್ಧ ಪ್ರತಿಭಟನೆ ಮಾಡಬೇಕಷ್ಟೆ. ನಮ್ಮ ಮೇಲೆ ಏಕೆ ಪ್ರತಿಭಟನೆ ಮಾಡುತ್ತಾರೆ. ಗೊಬ್ಬರವೇನು ನಮ್ಮ ಬಳಿ ಇದೆಯೇ? ಆ ಇಲಾಖೆ, ಗೊಬ್ಬರದ ಕಾರ್ಖಾನೆ ಏನು ನಮ್ಮ ಬಳಿ ಇದೆಯೇ? ಅವರು ಕೊಡುವುದನ್ನು ಹಂಚುವುದು ನಮ್ಮ ಕೆಲಸವಷ್ಟೇ” ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು 5 ವರ್ಷಕ್ಕೆ: ಬಸವರಾಜ ರಾಯರೆಡ್ಡಿ

“ನಾವು ಹಂಚುವುದರಲ್ಲಿ ತಾರತಮ್ಯ ಮಾಡಿದರೆ ಮಾತನಾಡಲಿ. ನಮ್ಮ ಬಳಿ ಎಲ್ಲ ಲೆಕ್ಕವೂ ಇದೆ. ಯಾವ ಯಾವ ಸೊಸೈಟಿಗಳಿಗೆ ಎಷ್ಟು ಹಂಚಲಾಗಿದೆ, ಯಾವ ಜಿಲ್ಲೆಯಲ್ಲಿ ಎಷ್ಟು ದಾಸ್ತಾನಿದೆ ಎನ್ನುವ ಎಲ್ಲ ಲೆಕ್ಕವೂ ಇದೆ. ಇದನ್ನು ಪರಿಶೀಲನೆ ನಡೆಸಲಿ, ಅದನ್ನು ಎಲ್ಲರೂ ನೋಡಲಿ. ನಾವುಗಳು ಯಾರೂ ರೈತರ ವಿರುದ್ಧ ಹೋಗಿಲ್ಲ, ಆ ಕೆಲಸ ಮಾಡುವುದೂ ಇಲ್ಲ” ಎಂದು ತಿಳಿಸಿದರು.