ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ನಾವು ಯಾರನ್ನೂ ವಿಭಜಿಸುವುದಿಲ್ಲ ಎಂದ ಡಿ.ಕೆ. ಶಿವಕುಮಾರ್‌

DK Shivakumar: ಲಿಂಗಾಯತ ಧರ್ಮದ ವಿಚಾರವಾಗಿ ಕಾಂಗ್ರೆಸ್‌ನಲ್ಲೇ ಭಿನ್ನಮತವಿದೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ʼನಾವು ಯಾರನ್ನೂ ವಿಭಜಿಸುವುದಿಲ್ಲ. ಈ ವಿಚಾರ ಆ ಸಮಾಜಕ್ಕೆ ಹಾಗೂ ಜನರಿಗೆ ಬಿಡುತ್ತೇವೆ. ಆ ಸಮುದಾಯದ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್.

ಬೆಂಗಳೂರು: ʼನಾವು ಯಾರನ್ನೂ ವಿಭಜಿಸುವುದಿಲ್ಲ. ಈ ವಿಚಾರ ಆ ಸಮಾಜಕ್ಕೆ ಹಾಗೂ ಜನರಿಗೆ ಬಿಡುತ್ತೇವೆ. ಈ ಸಮುದಾಯದ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ನಾವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಮಾತ್ರ ಅವರ ಸಮುದಾಯದ ಗುರುತು ಕೇಳುತ್ತಿದ್ದೇವೆ. ಇದರ ಹೊರತಾಗಿ ನಮ್ಮ ಮುಂದೆ ಬೇರೆ ಯಾವುದೇ ಆಲೋಚನೆಗಳಿಲ್ಲ. ಅವುಗಳ ಬಗ್ಗೆ ನಾವು ಚಿಂತಿಸುವುದಿಲ್ಲʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಸ್ಪಷ್ಟಪಡಿಸಿದರು.

ಲಿಂಗಾಯತ ಧರ್ಮದ ವಿಚಾರವಾಗಿ ಕಾಂಗ್ರೆಸ್‌ನಲ್ಲೇ ಭಿನ್ನಮತವಿದೆ ಎಂದು ಮಾಧ್ಯಮಗಳು ಎಂದು ಕೇಳಿದ ಪ್ರಶ್ನೆಗೆ ವಿಧಾನಸೌಧದಲ್ಲಿ ಮಂಗಳವಾರ ಡಿಸಿಎಂ ಪ್ರತಿಕ್ರಿಯಿಸಿದ್ದಾರೆ.

ಶಾಲೆಗಳಿಗೆ 10 ದಿನ ದಸರಾ ರಜೆ ವಿಸ್ತರಣೆ

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ಬೇಕೆನ್ನುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕಕ್ಷಕರ ಸಂಘದ ಮನವಿ ಮೇರೆಗೆ ಇದೇ ತಿಂಗಳು 18 ರವರೆಗೆ ಅಂದರೆ 10 ದಿನಗಳ ಕಾಲ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.90ರಷ್ಟು ಜನರು ಸಮೀಕ್ಷೆಗೆ ಸಹಕಾರ ನೀಡಿದ್ದಾರೆ. ಸರ್ಕಾರದ ಪರವಾಗಿ ಅವರಿಗೆ ಅಭಿನಂದಿಸುತ್ತೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ತರಬೇತಿ ಹಾಗೂ ಚುನಾವಣಾ ಆಯೋಗದ ಕೆಲಸಗಳ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಸ್ವಲ್ಪ ತಡವಾಗಿ ಆರಂಭಿಸಿದ್ದೇವೆ. ಈ ಭಾಗದಲ್ಲಿ ಸಮೀಕ್ಷೆ ಮಂದಗತಿಯಲ್ಲಿದ್ದು, ಶೇ.25ರಷ್ಟು ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಐದೂ ಪಾಲಿಕೆ ಆಯುಕ್ತರು ಹಾಗೂ ಶಿಕ್ಷಣ ಇಲಾಖೆಯ ಜತೆಗೆ ಸಭೆ ಮಾಡಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಎಲ್ಲಾ ಜನರಿಗೆ ನ್ಯಾಯ ಒದಗಿಸಿಕೊಡಲು ಸರ್ಕಾರ ಸಮೀಕ್ಷೆ ನಡೆಸುತ್ತಿದೆ. ಬೆಂಗಳೂರು ನಗರದಲ್ಲಿರುವ ಜನರು ಈ ಸಮೀಕ್ಷೆಗೆ ಸಂಪೂರ್ಣ ಸಹಕಾರ ನೀಡಬೇಕು. ಈ ಸಮೀಕ್ಷೆಯಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಿಯೂ ಸಾರ್ವಜನಿಕರು ಮಾಹಿತಿ ಸಲ್ಲಿಸಬಹುದು. ನಿಮಗೆ ಇಚ್ಛೆಯಿರುವಷ್ಟು ಮಾಹಿತಿ ನೀಡಬಹುದು. ಇಲ್ಲಿ ಸರ್ಕಾರ ಹೆಚ್ಚಿನ ಒತ್ತಡ ಹಾಕುವುದಿಲ್ಲ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Kuruba community: ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ST ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು: ಸಿಎಂ

ಗ್ರಾಮೀಣ ಭಾಗದ ಜನರ ಬದುಕಿನ ಪ್ರಗತಿ ಬಗ್ಗೆ ಅರಿಯಲು ಕೆಲವು ಪ್ರಶ್ನೆಗಳನ್ನು ಸೇರಿಸಲಾಗಿದೆ. ಅನೇಕರು ಗ್ರಾಮೀಣ ಭಾಗದಿಂದ ಬಂದು ಇಲ್ಲಿ ವಾಸವಾಗಿದ್ದಾರೆ. ಇವರ ಜೀವನದಲ್ಲಿ ಶೈಕ್ಷಣಿಕ ಪರಿಸ್ಥಿತಿ, ಆರ್ಥಿಕ ಶಕ್ತಿ ಬಗ್ಗೆ ತಿಳಿಯಲು ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇವೆ. ಇನ್ನು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಅವರ ನೇತೃತ್ವದಲ್ಲಿ ಸಿಎಂ ಹಾಗೂ ನನ್ನನ್ನು ಭೇಟಿ ಮಾಡಿ ತಮ್ಮ ಮನವಿ ನೀಡಿದ್ದಾರೆ. ಈ ಸಮೀಕ್ಷೆಯಲ್ಲಿ ಭಾಗವಹಿಸುತ್ತೇವೆ, ನಮಗೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಕೋರಿದ್ದಾರೆ. ಇದು ಖಾಸಗಿ ಹಾಗೂ ಪಿಯುಸಿಗಳಿಗೆ ಅನ್ವಯವಾಗುವುದಿಲ್ಲ ಎಂದರು.‌