ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dinesh Gundu Rao: 8 ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಯಶಸ್ವಿ ಕೌನ್ಸೆಲಿಂಗ್ ವರ್ಗಾವಣೆ: ದಿನೇಶ್ ಗುಂಡೂರಾವ್

ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಲಾ ಒಬ್ಬರು ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರು ಇರುವಂತೆ ವರ್ಗಾವಣೆ ಪ್ರಕ್ರಿಯೆ ಮಾಡಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ಪಡೆಯಲಾಗುವುದು. ಇದರಿಂದಾಗಿ ತಾಲೂಕು ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ವೈದ್ಯರು ಲಭ್ಯತೆ ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.‌

ಬೆಂಗಳೂರು: 8 ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಎಲ್ಲ ವೃಂದದ ಸಿಬ್ಬಂದಿ/ನೌಕರರ ವರ್ಗಾವಣೆಯನ್ನು ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕೌನ್ಸೆಲಿಂಗ್‌ನಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ತಜ್ಞ ವೈದ್ಯರನ್ನು ಒದಗಿಸಿಕೊಡಲಾಗಿದೆ ಎಂದು ತಿಳಿಸಿದರು.

ತಾಲೂಕು ಆಸ್ಪತ್ರೆಗಳ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಈ ಬಾರಿ ನಡೆದ ಕೌನ್ಸೆಲಿಂಗ್ ವರ್ಗಾವಣೆಯಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಕ್ಕಳ ಆರೈಕೆ ವಿಭಾಗದಲ್ಲಿ ದೀರ್ಘಕಾಲದಿಂದ ಖಾಲಿಯಿದ್ದ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲಾಗಿದೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ತಲಾ ಒಬ್ಬರು ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು ಮತ್ತು ಮಕ್ಕಳ ತಜ್ಞರು ಇರುವಂತೆ ವರ್ಗಾವಣೆ ಪ್ರಕ್ರಿಯೆ ಮಾಡಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ಪಡೆಯಲಾಗುವುದು. ಇದರಿಂದಾಗಿ ತಾಲೂಕು ಆಸ್ಪತ್ರೆಗಳಲ್ಲಿ ದಿನದ 24 ಗಂಟೆ ವೈದ್ಯರು ಲಭ್ಯ ಇರಲಿದ್ದಾರೆ ಎಂದು ಅವರು ಹೇಳಿದರು.‌

ಇಲಾಖೆಯಲ್ಲಿ ವೈದ್ಯರ ಕೊರತೆ ಇರುವುದರಿಂದ ಕೆಲವು ಕಡೆ ಹುದ್ದೆ ಭರ್ತಿಯಾಗಿರಲಿಲ್ಲ. ಈ ಬಾರಿಯ ಕೌನ್ಸೆಲಿಂಗ್ ವರ್ಗಾವಣೆಯಲ್ಲಿ ಇದನ್ನು ಸರಿಪಡಿಸಲಾಗಿದೆ. ಕೆಲವು ಕಡೆ ಈಗಾಗಲೇ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ ತಿಳಿಸಲಾಗಿದೆ. 2 ಸಾವಿರ ಎಂಬಿಬಿಎಸ್ ವೈದ್ಯರು, 185 ತಜ್ಞ ವೈದ್ಯರ ಕೊರತೆ ಇದೆ. ಇದನ್ನು ಸರಿದೂಗಿಸಲು ಸರ್ಕಾರಿ ವೈದ್ಯಕೀಯ ಸೀಟು ಪಡೆದ ಎಂಬಿಬಿಎಸ್, ಎಂಡಿ ವೈದ್ಯಕೀಯ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ಸಮಾಲೋಚನಾ ವಿಧಾನದ ಮೂಲಕ 2011ರಲ್ಲಿಯೇ ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು ಎಂದು ಕಾಯ್ದೆ ತರಲಾಗಿತ್ತು. ಆದರೆ ಇದುವರೆಗೂ ಈ ವಿಧಾನದ ಅನುಸರಿಸಿರಲಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ ತಪ್ಪಿಸಿ ಪಾರದರ್ಶಕ ವರ್ಗಾವಣೆಯನ್ನು ಈ ಬಾರಿ ಆರೋಗ್ಯ ಇಲಾಖೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಜೂನ್‌ 19ರಿಂದ ಜುಲೈ 3ರವೆರೆಗೆ ನಡೆದ ಆರೋಗ್ಯ ಇಲಾಖೆ ವರ್ಗಾವಣೆ ಪ್ರಕ್ರಿಯೆಯಲ್ಲಿ 5,676 ಅಧಿಕಾರಿ ಮತ್ತು ಸಿಬ್ಬಂದಿ ಹೊಸ ಕಾರ್ಯಕ್ಷೇತ್ರವನ್ನು ಪಡೆದುಕೊಂಡಿದ್ದಾರೆ. ಗ್ರೂಪ್ ಎ ವಿಭಾಗದಲ್ಲಿ 21, ಗ್ರೂಪ್ ಬಿಯಲ್ಲಿ 15, ಗ್ರೂಪ್ ಸಿಯಲ್ಲಿ 4,046 ಸಿಬ್ಬಂದಿ ಹಾಗೂ ಗ್ರೂಪ್ ಡಿಯಲ್ಲಿ 680 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಆಯುಷ್ ಇಲಾಖೆಯಲ್ಲಿ 235 ಅಧಿಕಾರಿ ಮತ್ತು ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಈ ಪೈಕಿ 131 ಎ ಗ್ರೂಪ್ ಹುದ್ದೆಗಳು, 9 ಬಿ ಗ್ರೂಪ್ ಹುದ್ದೆಗಳು, 62 ಸಿ ಗ್ರೂಪ್ ಹುದ್ದೆಗಳು ಹಾಗೂ 33 ಡಿ ಗ್ರೂಪ್ ಹುದ್ದೆಗಳಿವೆ. ಆಹಾರ ಮತ್ತು ಸುರಕ್ಷತಾ ಇಲಾಖೆಯಲ್ಲಿ ಗ್ರೂಪ್ ಎಯಲ್ಲಿ 12, ಗ್ರೂಪ್ ಬಿಯಲ್ಲಿ 16 ಮತ್ತು ಗ್ರೂಪ್ ಸಿಯಲ್ಲಿ 17 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಆಯುಷ್ ಇಲಾಖೆಯಲ್ಲಿ ಕಡ್ಡಾಯ ಗ್ರಾಮೀಣ ಸೇವೆಗೆ ವೈದ್ಯಾಧಿಕಾರಿಗಳನ್ನು ನಿಯೋಜಿಸುವ ನಿಟ್ಟಿನಲ್ಲಿ 12 ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಾಧಿಕಾರಿಗಳಿಗೆ ಸೂಪರ್ ನ್ಯೂಮರರಿ ಹುದ್ದೆಗಳನ್ನು ಸೃಷ್ಟಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ‌

ಈ ಸುದ್ದಿಯನ್ನೂ ಓದಿ | Cabinet Decisions: ಕಾರ್ಮಿಕರಿಗೆ ಗುಡ್‌ನ್ಯೂಸ್‌; ವಿಮಾ ಸೊಸೈಟಿ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ

ಆಶಾ ಕಾರ್ಯಕರ್ತೆಯರಿಗೆ ಅಗತ್ಯ ವೇತನ ದೊರೆಯುತ್ತಿದೆ

ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ. ಪ್ರೋತ್ಸಾಹಧನ ದೊರೆಯುತ್ತಿದೆ. ರಾಜ್ಯ ಸರ್ಕಾರ 5 ಸಾವಿರ ರೂ. ಖಚಿತ ಪ್ರೋತ್ಸಾಹ ಧನ ನೀಡುತ್ತಿದೆ. ಕೇಂದ್ರ ಸರ್ಕಾರ ವೇತನ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 60:40ರ ಅನುಪಾತದಲ್ಲಿ ರಾಜ್ಯ ಸರ್ಕಾರದ ಪಾಲುದಾರಿಕೆಯೊಂದಿಗೆ 1,500 ರೂ. ಪ್ರೋತ್ಸಾಹಧನ ಹೆಚ್ವಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಖಚಿತ ಪ್ರೋತ್ಸಾಹಧನ 10 ಸಾವಿರ ರೂ. ದಾಟಲಿದ್ದು, ಕಾರ್ಯಕರ್ತೆಯರು ನಡೆಸುವ ಕಾರ್ಯಗಳಿಗೆ ನೀಡುವ ಇನ್ಸೆಂಟಿವ್ ಲೆಕ್ಕ ಹಾಕಿದರೆ 12 ರಿಂದ 13 ಸಾವಿರ ರೂ.ವರೆಗೆ ಆಶಾ ಕಾರ್ಯಕರ್ತೆಯರಿಗೆ ವೇತನ ದೊರೆಯಲಿದೆ. ಈ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ತಿಳಿಹೇಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಸ್ಪಷ್ಟಪಡಿಸಿದರು.