ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಕಾವೇರಿ ಆರತಿ ಕಾರ್ಯಕ್ರಮಕ್ಕೆ ವಾರದಲ್ಲಿ ನೀಲನಕ್ಷೆ: ಡಿ.ಕೆ.ಶಿವಕುಮಾರ್

DK Shivakumar: ಕಾವೇರಿ ಆರತಿಗೆ ಸರ್ಕಾರ 92 ಕೋಟಿ ರೂ. ನೀಡಲು ತೀರ್ಮಾನಿಸಿದ್ದು, ಇದರ ಜತೆಗೆ ಬೇರೆ ಇಲಾಖೆಗಳು ಅಗತ್ಯ ಸಹಕಾರ ನೀಡಲಿವೆ. ಕನಿಷ್ಠ ಸುಮಾರು 10 ಸಾವಿರ ಜನರು ಕೂತು ಈ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಬೇಕು. ಎಷ್ಟು ದಿನ ಕಾರ್ಯಕ್ರಮ ಮಾಡಬೇಕು ಎಂಬುದನ್ನು ಸಮಿತಿ ತೀರ್ಮಾನ ಮಾಡಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್.

ಮಂಡ್ಯ: ನಾಡಿನ ವಿವಿಧ ಸಂಸ್ಕೃತಿ ಒಳಗೊಂಡಂತೆ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಮಿತಿಯು ನೀಲನಕ್ಷೆ ರೂಪಿಸುತ್ತಿದ್ದು, ವಾರದಲ್ಲಿ ಸಿದ್ಧವಾಗಲಿದೆ. ದಸರಾಗೆ ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar)‌ ತಿಳಿಸಿದರು. ಮಂಡ್ಯ ಜಿಲ್ಲೆ ಕೆಆರ್‌ಎಸ್‌ನಲ್ಲಿ ʼಕಾವೇರಿ ಆರತಿʼ ನಡೆಸುವ ಸಂಬಂಧ ಶುಕ್ರವಾರ ಅವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ ಸಂಸ್ಕೃತಿ, ಧಾರ್ಮಿಕ ಆಚರಣೆ ಸೇರಿಸಿ ಕಾರ್ಯಕ್ರಮ ರೂಪಿಸಲು ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದ ಸಮಿತಿಗೆ ಸಲಹೆ ನೀಡಿದ್ದೇನೆ. ಈ ಸಮಿತಿ ಮುಂದಿನ 8-10 ದಿನಗಳಲ್ಲಿ ಕಾರ್ಯಕ್ರಮದ ನೀಲನಕ್ಷೆ ಸಿದ್ಧಪಡಿಸಲಿದೆ ಎಂದು ತಿಳಿಸಿದರು.

ಕೊಡಗಿನಿಂದ ಹಿಡಿದು, ದಕ್ಷಿಣ ಕನ್ನಡ, ಕರಾವಳಿ, ಮಲೆನಾಡು, ಬೆಂಗಳೂರು, ಮೈಸೂರು, ಚಾಮರಾಜನಗರ ಭಾಗದ ಜನರು ಈ ತಾಯಿಗೆ ನಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಕಾವೇರಿ ನೀರು ಬಳಸುವ ತಮಿಳುನಾಡಿನ ಜನರೂ ಕೂಡ ಬಂದು ಕಾವೇರಿ ತಾಯಿಗೆ ಪೂಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಈ ಕಾವೇರಿ ಆರತಿ ಕಾರ್ಯಕ್ರಮ ವಿನ್ಯಾಸ, ಸ್ವರೂಪ ಸೇರಿದಂತೆ ಇತರೆ ರೂಪುರೇಷೆಗಳ ಬಗ್ಗೆ ಅಧಿಕಾರಿಗಳು ಹಾಗೂ ನಮ್ಮ ನಾಯಕರ ಜತೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

ಚೆಸ್ಕಾಂ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಪ್ರವಾಸೋದ್ಯಮ, ಧಾರ್ಮಿಕ ದತ್ತಿ ಇಲಾಖೆ, ಇಬ್ಬರು ಜಿಲ್ಲಾಧಿಕಾರಿಗಳು, 2 ಸ್ಥಳೀಯ ಶಾಸಕರು ಹಾಗೂ ಪರಿಷತ್ ಸದಸ್ಯರು, ಸಿಇಓಗಳು, ಬಿಡ್ಬ್ಲ್ಯೂಎಸ್ಎಸ್‌ಬಿ ಮುಖ್ಯಸ್ಥರು ಸೇರಿ ಸಮಿತಿ ರಚಿಸಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸುವ ಕೆಲಸ ಮಾಡಲಿದ್ದಾರೆ. ಚೆಸ್ಕಾಂ ಸಂಸ್ಥೆ ದೀಪಾಲಂಕಾರ ವ್ಯವಸ್ಥೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾವೇರಿ ಆರತಿಗೆ ಸರ್ಕಾರ 92 ಕೋಟಿ ರೂ. ನೀಡಲು ತೀರ್ಮಾನಿಸಿದ್ದು, ಇದರ ಜತೆಗೆ ಬೇರೆ ಇಲಾಖೆಗಳು ಅಗತ್ಯ ಸಹಕಾರ ನೀಡಲಿವೆ. ಕನಿಷ್ಠ ಸುಮಾರು 10 ಸಾವಿರ ಜನರು ಕೂತು ಈ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಬೇಕು. ಎಷ್ಟು ದಿನ ಕಾರ್ಯಕ್ರಮ ಮಾಡಬೇಕು ಎಂಬುದನ್ನು ಸಮಿತಿ ತೀರ್ಮಾನ ಮಾಡಲಿದೆ. ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡಿ ಇಲ್ಲಿನ ರಸ್ತೆಗಳ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇನೆ. ಧಾರ್ಮಿಕ ದತ್ತಿ ಇಲಾಖೆಯವರು ಕಾರ್ಯಕ್ರಮದಲ್ಲಿ ಯಾವ ರೀತಿ ಪೂಜೆ, ವೇದಗೋಷ್ಠಿ ಮಾಡಬೇಕು ಎಂದು ವರದಿ ನೀಡಿದ್ದು, ಎಲ್ಲವನ್ನು ಕ್ರೂಢೀಕರಿಸಿ ಅಂತಿಮ ರೂಪುರೇಷೆ ನೀಡಲಾಗುವುದು. ಈ ವಿಚಾರವಾಗಿ ಯಾವುದಾದರೂ ಸಂಘಟನೆಗಳು ನಮ್ಮ ಜತೆ ಚರ್ಚೆ ಮಾಡಲು ಇಚ್ಛಿಸಿದರೆ ಕರೆದು ಮಾತನಾಡುತ್ತೇವೆ. ಬೇರೆಯವರ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಬೃಂದಾವನ ಉದ್ಯಾನವನ ಉನ್ನತೀಕರಣಕ್ಕಾಗಿ ಯೋಜನಾ ಪ್ರಾಧಿಕಾರ

ಇನ್ನು ಬೃಂದಾವನ ಉದ್ಯಾನವನ ಉನ್ನತೀಕರಣಕ್ಕಾಗಿ ನಾನು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅಲ್ಲಿ ಯೋಜನಾ ಪ್ರಾಧಿಕಾರ ಮಾಡಲು ತೀರ್ಮಾನಿಸಿದ್ದು, ನಾಲ್ಕು ಪಂಚಾಯ್ತಿ ಸೇರಿಸಲಾಗುತ್ತಿದೆ. ಪಂಚಾಯ್ತಿಗಳ ಅಸ್ಥಿತ್ವಕ್ಕೆ ತೊಂದರೆ ಆಗುವುದಿಲ್ಲ. ಅವುಗಳು ತಮ್ಮ ಕಾರ್ಯ ಮುಂದುವರಿಸಲಿವೆ. ಅವರ ಅಧಿಕಾರ ಮೊಟಕುಗೊಳಿಸುವುದಿಲ್ಲ. ರಸ್ತೆ, ಪಾರ್ಕ್ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಕಾನೂನು ಪ್ರಕಾರ ಜಾಗ ನೀಡುವ ಕೆಲಸವನ್ನು ಯೋಜನಾ ಪ್ರಾಧಿಕಾರ ಮಾಡಲಿದೆ. ಇದು ಅಭಿವೃದ್ಧಿ ಪ್ರಾಧಿಕಾರವಲ್ಲ, ಯೋಜನಾ ಪ್ರಾಧಿಕಾರ ಮಾತ್ರ. ಚಾಮುಂಡಿ ಬೆಟ್ಟ, ಮಲೆ ಮಹದೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ಯೋಜನಾ ಪ್ರಾಧಿಕಾರದಂತೆ ಇದು ಇರಲಿದೆ. ಇಲ್ಲಿಂದ ಬಂದ ಹಣವನ್ನು ಇಲ್ಲಿನ ಅಭಿವೃದ್ಧಿಗೆ ವಿನಿಯೋಗಿಸಲು ಈ ಪ್ರಾಧಿಕಾರ ಯೋಜನೆ ರೂಪಿಸಲಿದೆ ಎಂದು ತಿಳಿಸಿದರು.

ಬೃಂದಾವನ ಉದ್ಯಾನವನ ಉನ್ನತೀಕರಣಕ್ಕೆ 7 ಸಂಸ್ಥೆಗಳು ಮುಂದಾಗಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಇದರ ರೂಪುರೇಷೆ ಸಿದ್ಧಪಡಿಸಲಾಗುವುದು. ಈ ಭಾಗದಲ್ಲಿ ಏನೇ ಉದ್ಯೋಗ ಸೃಷ್ಟಿಯಾದರೂ ಈ ಭಾಗದ ಪಂಚಾಯ್ತಿ ವ್ಯಾಪ್ತಿಯ ಜನರಿಗೆ ಮೊದಲು ಆದ್ಯತೆ ನೀಡಲು ಷರತ್ತು ಹಾಕಲಾಗಿದೆ. ಸ್ಥಳೀಯ ಯುವಕರಿಗೆ ಈ ಸಂಸ್ಥೆಗಳು ತರಬೇತಿ ನೀಡಿ ಉದ್ಯೋಗ ನೀಡಬೇಕು ಎಂದು ಸೂಚಿಸಲಾಗಿದೆ ಎಂದರು.

ಕಾವೇರಿ ಆರತಿಯನ್ನು ಯಾವಾಗ ಮಾಡಬಹುದು ಎಂದು ಕೇಳಿದಾಗ, ನಾನು ದಸರಾ ಜತೆಯಲ್ಲೇ ಮಾಡಲು ತರಾತುರಿಯಲ್ಲಿದ್ದೇನೆ. ಈ ವಿಚಾರವಾಗಿ ಸಚಿವ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಈ ಸಮಿತಿ ರೂಪುರೇಷೆಗಳನ್ನು ಎಷ್ಟು ಬೇಗ ನೀಡುತ್ತಾರೋ ನೋಡೋಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಎಲ್ಲಿ ಮಾಡಲಾಗುವುದು ಎಂದು ಕೇಳಿದಾಗ, ʼನಾನು ಜಾಗ ಪರಿಶೀಲನೆ ಮಾಡಿದ್ದೇನೆ. ಈ ವಿಚಾರವಾಗಿ ತಾಂತ್ರಿಕ ಸಮಿತಿ ಅಭಿಪ್ರಾಯ ಪಡೆಯಲಾಗಿದೆ. ನೀರು ಸಂಗ್ರಹವಿರಬೇಕು, ಅಣೆಕಟ್ಟಿನಿಂದ ಸ್ವಲ್ಪ ದೂರದಲ್ಲಿ ಇರಬೇಕು. ಪಾರ್ಕಿಂಗ್ ವ್ಯವಸ್ಥೆ, ಕಲಾವಿದರು, ಪೂಜೆ ಮಾಡುವವರಿಗೆ ಜಾಗ ಕಲ್ಪಿಸಬೇಕು. ಇದಕ್ಕಾಗಿಯೇ ಪ್ರತ್ಯೇಕ ಜಾಗ ನಿರ್ಮಿಸಲಾಗುವುದು. ಬೋಟಿಂಗ್ ವ್ಯವಸ್ಥೆ ಜಾಗವೇ ಬೇರೆ, ಈ ಕಾರ್ಯಕ್ರಮದ ಜಾಗವೇ ಪ್ರತ್ಯೇಕವಾಗಿರಲಿದೆ. ಸಮಿತಿಯು ಈ ವಿಚಾರವಾಗಿ ತೀರ್ಮಾನ ಮಾಡಲಿದೆ ಎಂದರು.

ಈ ಸುದ್ದಿಯನ್ನೂ ಓದಿ | Tirupati Temple: ತಿರುಪತಿ ತಿರುಮಲ ದೇವಾಲಯದಲ್ಲಿರುವ ಚಿನ್ನ ಎಷ್ಟು ಗೊತ್ತಾ? ಈಗಿನ ಮೌಲ್ಯ ಕೇಳಿದ್ರೆ ಶಾಕ್‌ ಆಗ್ತೀರಾ !

ಬೃಂದಾವನ ಉದ್ಯಾನ ಅಭಿವೃದ್ಧಿಯಿಂದ ಅಣೆಕಟ್ಟಿಗೆ ತೊಂದರೆಯಾಗಲಿದೆ ಎಂದು ಕೆಲವು ಸಂಘಟನೆಗಳು ವಿರೋಧ ಮಾಡುತ್ತಿರುವ ಬಗ್ಗೆ ಕೇಳಿದಾಗ, ʼಈ ವಿಚಾರವಾಗಿ ಸಂಘಟನೆಗಳನ್ನು ಕರೆದು ಚರ್ಚೆ ಮಾಡಲಾಗುವುದು. ಈ ವಿಚಾರವಾಗಿ ಅನುಮಾನಗಳು ಮೂಡುವುದು ಸಹಜ. ಇದರಲ್ಲಿ ಅವರ ತಪ್ಪೇನು ಇಲ್ಲ. ಅಣೆಕಟ್ಟು ಉಳಿಸಬೇಕಾಗಿರುವುದು ನಮ್ಮ ಕರ್ತವ್ಯ. ಅವರು ಹೇಳುವ ಮುನ್ನವೇ ರಾಜ್ಯದ ಎಲ್ಲಾ ಅಣೆಕಟ್ಟುಗಳ ಗೇಟ್ ಬದಲಾವಣೆಗೆ ನಾನು ತೀರ್ಮಾನ ಮಾಡಿದ್ದೇನೆ. ಈ ವಿಚಾರವಾಗಿ ಯಾರಾದರೂ ನಮಗೆ ಹೇಳಿದ್ದರಾ? ಟಿಬಿ ಡ್ಯಾಂ ಅಣೆಕಟ್ಟಿನ ಗೇಟ್ ಸಮಸ್ಯೆ ಎದುರಾದ ನಂತರ ಕೆಆರ್‌ಎಸ್ ಅಣೆಕಟ್ಟಿನ ಗೇಟ್ ಬದಲಿಸಲು ತೀರ್ಮಾನಿಸಲಾಗಿದೆʼ ಎಂದು ತಿಳಿಸಿದರು.