ಬೆಂಗಳೂರು: ಪ್ರಧಾನಿ ಮೋದಿ ಅವರಿಗೆ ಡಬಲ್ ಡೆಕ್ಕರ್, ಮೆಟ್ರೋ ನಿಲ್ದಾಣಗಳಿಗೆ ಪ್ರತಿಷ್ಠಿತ ಕಂಪನಿಗಳ ಹೆಸರಿಡಲು ನಿಧಿ ಸಂಗ್ರಹ, ಸಿಎಸ್‌ಆರ್ ಯೋಜನೆಗಳ ಬಗ್ಗೆ ವಿವರಿಸಿದಾಗ ʼವೆರಿಗುಡ್ ಡಿ.ಕೆ., ಒಳ್ಳೆ ಕೆಲಸ ಮಾಡುತ್ತಿದ್ದೀರಾʼಎಂದು ಹೊಗಳಿದರು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ನಗರದ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳ ಜತೆ ಸೋಮವಾರ ಅವರು ಮಾತನಾಡಿದರು.
ಮೋದಿಯವರ ಜತೆ ನೀವು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿವೆಯಲ್ಲ ಎಂದು ಕೇಳಿದಾಗ, ʼಬೆಂಗಳೂರು ಅಭಿವೃದ್ದಿ ಸಚಿವನಾಗಿ ನಾನು ಅವರ ಬಳಿ ಮಾತನಾಡದೆ ಇನ್ಯಾರು ಮಾತನಾಡಲು ಸಾಧ್ಯ? ಎಲೆಕ್ಟ್ರಾನಿಕ್ ಸಿಟಿ ಭಾಗದ ಮೆಟ್ರೋ ನಿಲ್ದಾಣಗಳಿಗೆ ಇನ್ಫೋಸಿಸ್, ಡೆಲ್ಟಾ, ಬಯೋಕಾನ್ ಅವರ ಹೆಸರನ್ನು ಇಡಲು ಅವರಿಂದ 50,100 ಕೋಟಿ ನಿಧಿ ಸಂಗ್ರಹಿಸಲಾಗಿದೆ. ಈಗ ಬಾಗಮನೆ ಅವರು ಸಹ ನಿಧಿ ನೀಡುತ್ತೇವೆ ಎಂದಿದ್ದಾರೆ. ಇದೆಲ್ಲವನ್ನು ಪ್ರಧಾನಿ ಅವರಿಗೆ ತಿಳಿಸಿದೆʼ ಎಂದು ಹೇಳಿದರು.
ನಾನೇನು ಬಿಜೆಪಿಗೆ ಓಡಿಹೋಗುತ್ತಿಲ್ಲ
ನಾನೇನು ಬಿಜೆಪಿಗೆ ಓಡಿ ಹೋಗುತ್ತಿಲ್ಲ, ನನಗೆ ಅದರ ಅವಶ್ಯಕತೆಯೂ ಇಲ್ಲ. ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮಾಧ್ಯಮದವರು ನಿಧಿ ನೀಡಿದರೆ ನಿಮ್ಮ ಹೆಸರಿನಲ್ಲಿಯೂ ಮೆಟ್ರೋ ನಿಲ್ದಾಣಗಳ ನಾಮಕರಣ ಮಾಡಲಾಗುವುದು. ಈ ಯೋಜನೆ ಬೇರೆ ಎಲ್ಲಿಯೂ ಇಲ್ಲ. ಈ ಮಾದರಿಯನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು.
ನಾನು ಬೆಂಗಳೂರು ಅಭಿವೃದ್ದಿ ಸಚಿವ. ಮೆಟ್ರೋ ಕೂಡ ನನ್ನ ವ್ಯಾಪ್ತಿಗೆ ಬರುತ್ತದೆ. ಹೀಗಿದ್ದಾಗ ನಾನು ಏನು ಕೆಲಸ ಮಾಡಬೇಕೋ ಅದನ್ನು ಮಾಡಿದ್ದೇನೆ. ಅವರನ್ನು ನಾನು ಸ್ವಾಗತಿಸಬೇಕಿತ್ತು. ಆದರೆ ಒಂದೇ ಕಾರ್ಯಕ್ರಮವಾಗಿ ಮೊಟಕು ಮಾಡಿದ ಕಾರಣಕ್ಕೆ ಸೋಮಣ್ಣ ಅವರಿಗೆ ಆ ಅವಕಾಶ ನೀಡಲಾಯಿತು. ಅವರೂ ಸಹ ನಮ್ಮ ರಾಜ್ಯದವರು. ಆದರೆ ನಾವು ನಮ್ಮ ರಾಜ್ಯದ ಬಗ್ಗೆ ಅವಕಾಶ ಸಿಕ್ಕಾಗ ಪ್ರಧಾನಿ ಅವರ ಬಳಿ ಹೇಳಬೇಕಲ್ಲವೇ? ಈ ಕಾರಣಕ್ಕೆ ನಾನು ಅವರಿಗೆ ಮನವಿ ನೀಡಿ ಅನುದಾನದ ಬಗ್ಗೆ ಮಾತನಾಡಿದ್ದೇನೆʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | BRBNMPL Recruitment 2025: ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್‌ನಲ್ಲಿದೆ 88 ಹುದ್ದೆ; ಐಟಿಐ ಪಾಸಾದವರು ಅಪ್ಲೈ ಮಾಡಿ
1985ರಲ್ಲಿ ಚುನಾವಣೆಗೆ ಸ್ಪರ್ಧಿಸಿದವನು ನಾನು. 1989ರಲ್ಲಿ ವಿಧಾನಸೌಧದ ಮೆಟ್ಟಿಲು ಹತ್ತಿದವನು. ನಾನು ಅಷ್ಟು ಉನ್ನತ ಸ್ಥಾನಕ್ಕೆ ತೆರಳದೇ ಇರಬಹುದು, ಆದರೆ ನಾನೊಬ್ಬ ಹಿರಿಯ ನಾಯಕ. ವಯಸ್ಸು ಚಿಕ್ಕದಿರಬಹುದು, ಆದರೆ ಸಾರ್ವಜನಿಕ ಜೀವನದಲ್ಲಿ ನನಗೂ ಅನುಭವವಿದೆ ಎಂದರು.