ಬೆಂಗಳೂರು: ಕಳೆದ ಬುಧವಾರ ನಿಧನರಾದ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪನವರ ಉಯಿಲು(ವಿಲ್) ಬಹಿರಂಗವಾಗಿದ್ದು, ಭೈರಪ್ಪನವರು ತಮ್ಮ ಆಸ್ತಿಯನ್ನು ಸಾಹಿತ್ಯ ಭಂಡಾರದ ಎಂ.ಜಿ. ಅರುಣ ಅವರಿಗೆ ಬರೆದಿದ್ದಾರೆ. ಆದರೆ ಈ ಆಸ್ತಿಯನ್ನು ನೂತನವಾಗಿ ರಚಿತವಾದ ಎಸ್.ಎಲ್.ಭೈರಪ್ಪ ಪ್ರತಿಷ್ಠಾನದ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ನಮೂದಿಸಿದ್ದಾರೆ.

ತಮ್ಮ ಚರ ಮತ್ತು ಸ್ಥಿರ ಆಸ್ತಿ 2025ರ ಜನವರಿ ೩೦ರ ತಿದ್ದುಪಡಿ ಉಯಿಲಿನಲ್ಲಿ ತಮ್ಮ ಸಮಸ್ತ ಆಸ್ತಿಯೂ ಎಸ್.ಎಲ್.ಭೈರಪ್ಪ ಪ್ರತಿಷ್ಠಾನದ ಕಾರ್ಯಚಟುವಟಿಕೆಗೆ ಬಳಕೆಯಾಗಬೇಕು ಎಂದು ಬರೆದಿರುವ ಭೈರಪ್ಪ ಅವರು, ಅರುಣ ಅವರಿಗೆ ೫೦ ಲಕ್ಷ ರು. ಕೊಡುಗೆ(ಗಿಫ್ಟ್) ನೀಡಿದ್ದಾರೆ. ಈ ೫೦ ಲಕ್ಷ ರು. ಹೊರತುಪಡಿಸಿ, ಇನ್ಯಾವುದೇ ಆಸ್ತಿ, ನಗದನ್ನು ವೈಯಕ್ತಿಕ ಕಾರ್ಯಕ್ಕೆ ಅರುಣ ಅವರು ಬಳಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.
ತಿದ್ದುಪಡಿ ಉಯಿಲಿನಲ್ಲಿ ಪುತ್ರನಿಗೆ ೫೦ ಲಕ್ಷ ನೀಡುವುದಾಗಿ ಹೇಳಿದ್ದರೂ, ಅಂತ್ಯಸಂಸ್ಕಾರದ ವಿಷಯದಲ್ಲಿ ಸಿದ್ಧಪಡಿಸಿರುವ ಮತ್ತೊಂದು ತಿದ್ದುಪಡಿ ಉಯಿಲಿನಲ್ಲಿ ಈ ಕೊಡುಗೆಯನ್ನು ರದ್ದುಪಡಿಸಿರುವುದರಿಂದ ಭೈರಪ್ಪನವರ ಎರಡನೇ ಪುತ್ರ ಎಸ್.ಬಿ. ಉದಯಶಂಕರ ಅವರಿಗಾಗಲಿ, ಪತ್ನಿ ಎಸ್.ಬಿ. ಸರಸ್ವತಿ ಅವರಿಗಾಗಿ ಭೈರಪ್ಪನವರ ಚರ-ಸ್ಥಿರಾಸ್ತಿಯಲ್ಲಿ ಯಾವ ಪಾಲನ್ನು ನೀಡಿಲ್ಲ.

ಭೈರಪ್ಪನವರ ಮೊದಲ ಮಗ ಸಾಕಷ್ಟು ಆರ್ಥಿಕವಾಗಿ ಸ್ಥಿತಿವಂತರಾಗಿರುವುದರಿಂದ ಅವರಿಗೆ ಯಾವುದೇ ಪಾಲನ್ನು ನೀಡುತ್ತಿಲ್ಲ ಎಂದು ಮೊದಲ ಉಯಿಲಿನಲ್ಲಿಯೇ ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ಕುವೆಂಪು ನಗರದಲ್ಲಿರುವ ತಮ್ಮ ನಿವಾಸವನ್ನು ‘ಎಸ್.ಎಲ್.ಭೈರಪ್ಪ ಪ್ರತಿಷ್ಠಾನ’ದ ಕಚೇರಿ ಹಾಗೂ ಸ್ಮಾರಕವನ್ನಾಗಿ ಮಾಡಬೇಕು. ಪತ್ನಿ ಸರಸ್ವತಿಯವರ ಜೀವಿತಾವಧಿವರೆಗೆ ಈ ಮನೆಯಲ್ಲಿಯೇ ಇರಲು ಅವಕಾಶ ನೀಡಬೇಕು. ಆದರೆ ಮನೆಯನ್ನು ಮಾರಾಟ ಅಥವಾ ಪರಭಾರೆ ಮಾಡುವಂತಿಲ್ಲ. ಅವರ ಕಾಲಾನಂತರ ಈ ಮನೆಯನ್ನು ‘ಎಸ್.ಎಲ್.ಭೈರಪ್ಪ ಪ್ರತಿಷ್ಠಾನ’ಕ್ಕೆ ಹಸ್ತಾಂತರಿಸಬೇಕು.
ಅಲ್ಲಿ ಪುಸ್ತಕ ಭಂಡಾರ, ಹಸ್ತ ಪ್ರತಿಗಳು, ಸಂಗೀತದ ಕ್ಯಾಸೆಟ್ ರೆಕಾರ್ಡ್‌ಗಳನ್ನು ಬಳಸಿಕೊಂಡು, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮತ್ತು ತಮ್ಮ ಸಾಹಿತ್ಯದ ಪ್ರಸಾರಕ್ಕೆ ಪೂರಕವಾದ ಚಟುವಟಿಕೆ ಗಳನ್ನು ನಡೆಸಬೇಕು ಎಂದು ಭೈರಪ್ಪನವರು ಉಲ್ಲೇಖಿಸಿದ್ದಾರೆ. ಇದರೊಂದಿಗೆ ಈಗಾಗಲೇ ಅರುಣ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿರುವ ಎಸ್.ಎಲ್. ಭೈರಪ್ಪ ಪ್ರತಿಷ್ಠಾನದ ಮೂಲಕ ಕನ್ನಡದ ಉದಯೋನ್ಮುಖ ಬರಹಗಾರರಿಗೆ ಉತ್ತೇಜನ ನೀಡುವ ಯೋಜನೆಗಳ ಮೂಲಕ ಮುಂದಿನ ತಲೆಮಾರು ಕೂಡ ಸಾಹಿತ್ಯ ಸೇವೆಗೆ ಸಿದ್ಧವಾಗಲು ಅಣಿಗೊಳಿಸುವ ಕಾರ್ಯಕ್ರಮಗಳನ್ನು ರೂಪಿಸ ಬೇಕು. ಅಲ್ಲದೇ ಬಡ ಮಕ್ಕಳಿಗೆ ಶಿಕ್ಷಣ, ಅನ್ನದಾನ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬರೆದಿದ್ದಾರೆ.

೨೦೨೦ ಆಗಸ್ಟ್ ೧೪ರಂದು ಭೈರಪ್ಪನವರು ಮೊದಲ ಬಾರಿಗೆ ವಿಲ್ ಮಾಡಿದ್ದರು. ಅದಾಗಿ ಎರಡು ವರ್ಷಗಳ ನಂತರ, ಅಂದರೆ ೨೦೨೨ರ ಮಾ.೧೫ರಂದು ಹಳೆಯ ವಿಲ್ ಅನ್ನು ರದ್ದುಪಡಿಸಿ ಮತ್ತೊಂದು ವಿಲ್ ಅನ್ನು ಮಾಡಿದ್ದರು. ಆ ವಿಲ್‌ನಲ್ಲಿ ತಮ್ಮ ಮೈಸೂರಿನ ವಾಸದ ಮನೆಯನ್ನು ಕಿರಿಯ ಮಗ ಎಸ್.ಬಿ. ಉದಯಶಂಕರನಿಗೆ ಬರೆದಿದ್ದರು. ತಮ್ಮ ಪತ್ನಿಗೆ ಆ ವಾಸದ ಮನೆಯ ಅನುಭವಿಸುವ ಹಕ್ಕನ್ನು ಮಾತ್ರ ನೀಡಿದ್ದರು.
ಸದರಿ ಮನೆಯ ಯಾ ಪರಭಾರೆ ಅಥವಾ ಮಾರಾಟದ ಹಕ್ಕನ್ನು ಪತ್ನಿಗೆ ನೀಡಿರಲಿಲ್ಲ. ಅದಾದ ಮೂರು ವರ್ಷಗಳ ನಂತರ ಅಂದರೆ ೨೦೨೫ ಜನವರಿ ೩೦ರಂದು ಈ ಉಯಿಲಿಗೆ ತಿದ್ದುಪಡಿ ಮಾಡಿದ್ದಾರೆ. ತಿದ್ದುಪಡಿ ಮಾಡಲಾದ ಈ ಉಯಿಲಿನಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಿರುವ ಭೈರಪ್ಪನವರು ತಮ್ಮ ಪತ್ನಿ ಮೈಸೂರು ಮನೆಯಲ್ಲಿ ವಾಸಿಸಬಹುದು. ಆದರೆ ಮಾರಾಟ ಅಥವಾ ಪರಭಾರೆಯ ಹಕ್ಕನ್ನು ನೀಡಿಲ್ಲ. ಹಾಗೆಯೇ, ತಮ್ಮ ಎರಡನೇ ಮಗ ಉದಯಶಂಕರನಿಗೆ ನೀಡಿದ್ದ ಮನೆಯ ಮಾಲೀಕತ್ವವನ್ನು ರದ್ದುಪಡಿಸಿದ್ದಾರೆ.

ತಮ್ಮ ಬರಹಗಳಿಗೆ ಸಂಬಂಧಪಟ್ಟ ಎಲ್ಲಾ ಹಕ್ಕುಗಳು, ಹಸ್ತಪ್ರತಿಗಳು, ಕೃತಿಗಳಿಗೆ ಸಂಬಂಧಿಸಿದ ರಾಯಲ್ಟಿ ಹಾಗೂ ಸರ್ವಸ್ವಾಮ್ಯಗಳು ಸಾಹಿತ್ಯ ಭಂಡಾರದ ಅರುಣನಿಗೆ ಸೇರತಕ್ಕದ್ದು. ಅದನ್ನು ಅರುಣ ಅವರು ಸ್ವಂತಕ್ಕೆ ಬಳಸಿಕೊಳ್ಳದೆ ಪ್ರತಿಷ್ಠಾನಕ್ಕೆ ನೀಡಬೇಕು ಎಂದು ತಿಳಿಸಿದ್ದಾರೆ.

2022 ಮಾಚ್ 15ರಂದು ಮಾಡಿದ ವಿಲ್‌ನಲ್ಲಿ ಭೈರಪ್ಪನವರು ಮೈಸೂರು ತಾಲೂಕು ಇಲವಾಲ ಹೋಬಳಿ, ಹುಲಿಯಾಳು ಗ್ರಾಮದ ೧೦೨ನೇ ಸಂಖ್ಯೆಯ ನಿವೇಶನವನ್ನು ತಮ್ಮ ಕಾಲಾನಂತರ ಎರಡನೇ ಮಗ ಉದಯಶಂಕರನಿಗೆ ಸಂಪೂರ್ಣ ವಾಗಿ ಸೇರತಕ್ಕದ್ದು ಎಂದು ಬರೆದಿದ್ದರು. ತಿದ್ದುಪಡಿ ಉಯಿಲಿನಲ್ಲಿ ಈ ನಿವೇಶನದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದರಿಂದ ಈ ನಿವೇಶನ ಉದಯಶಂಕರ ಅವರಿಗೆ ಸೇರಲಿದೆ.
ಈ ಉಯಿಲಿನ ತಿದ್ದುಪಡಿ ಪತ್ರವನ್ನು ಬರೆಸುತ್ತಿರುವ ಸಮಯದಲ್ಲಿ ನನ್ನ ಪಂಚೇಂದ್ರಿಯಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ನನ್ನ ಯೋಚನಾ ಶಕ್ತಿ ಹಾಗೂ ಬುದ್ಧಿಶಕ್ತಿ ಸಂಪೂಣ ವಾಗಿ ನನ್ನ ಹತೋಟಿಯಲ್ಲಿದೆ. ಇತರರಿಂದ ಯಾವುದೇ ರೀತಿಯ ಒತ್ತಾಯ ಅಥವಾ ಒತ್ತಡಕ್ಕೆ ಒಳಗಾಗದೆ ನನ್ನ ಆತ್ಮ ಸಂತೋಷದಿಂದ ಈ ಉಯಿಲಿನ ತಿದ್ದುಪಡಿ ಪತ್ರವನ್ನು ಮಾಡಿಸುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ನನ್ನ ಉಯಿಲಿನ ತಿದ್ದುಪಡಿ
ಪತ್ರದ ಅಂಶಗಳೆಲ್ಲವೂ (ದಿ: ೧೫.೦೩.೨೦೨೨ರಂದು ಮಾಡಿಸಿರುವ ಮೂಲ ಉಯಿಲು ಸೇರಿದಂತೆ) ನನ್ನ ಕಾಲಾನಂತರವೇ ಜಾರಿಗೆ ಬರತಕ್ಕದ್ದು. ಈ ಉಯಿಲಿನ ತಿದ್ದುಪಡಿ ಪತ್ರವನ್ನು ಹಾಗೂ ಮೂಲ ದಿ.೧೫.೦೩.೨೦೨೨ ರ ಉಯಿಲನ್ನು ನನ್ನ ಜೀವಿತ ಕಾಲದಲ್ಲಿ ಪುನಃ ತಿದ್ದುಪಡಿ ಮಾಡುವ ಅಥವಾ ರದ್ದುಪಡಿಸುವ ಹಕ್ಕನ್ನು ನಾನು ಉಳಿಸಿಕೊಂಡಿರುತ್ತೇನೆ ಎಂದು ಬರೆದಿದ್ದಾರೆ. ಈ ಉಯಿಲನ್ನು ಮೈಸೂರಿನ ಖ್ಯಾತ ವಕೀಲ ಸಿ.ವಿ. ಕೇಶವಮೂರ್ತಿ ಅವರ ಸಮಕ್ಷಮದಲ್ಲಿ ಸಿದ್ಧಪಡಿಸಿದ್ದಾರೆ.
ಮೈಸೂರಿನ ಕುವೆಂಪು ನಗರ ನಿವಾಸಿ ಪಿ.ಜೆ. ರಾಘವೇಂದ್ರ ಹಾಗೂ ರಾಮಕೃಷ್ಣ ನಗರದ ನಿವಾಸಿಯಾಗಿರುವ ಎಸ್. ರವಿ ಅವರು ಸಾಕ್ಷಿಯಾಗಿ ಸಹಿ ಹಾಕಿದ್ದಾರೆ. ‘ಈ ಉಯಿಲಿನ ತಿದ್ದುಪಡಿ ಪತ್ರಕ್ಕೆ ಸಹಿ ಹಾಕುವ ಮುನ್ನ ಭೈರಪ್ಪ ಅವರನ್ನು ಪರೀಕ್ಷೆ ಮಾಡಿದ್ದೇನೆ. ಅವರೊಂದಿಗೆ ಸ್ವಲ್ವ ಹೊತ್ತು ಮಾತನಾಡಿದ್ದೇನೆ. ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಮರ್ಥರಿದ್ದಾರೆ’ ಎಂದು ಮೈಸೂರಿನ ಇಎಸ್‌ಐ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಮಂಜುನಾಥ್ ಅವರು ಉಯಿಲಿನಲ್ಲಿ ದೃಢೀಕರಿಸಿದ್ದಾರೆ.

ಎಂ.ಗೋವಿಂದರಾಜ್ ಸ್ಮರಿಸಿದ ಭೈರಪ್ಪ
ಭೈರಪ್ಪನವರು ತಮ್ಮ ತಿದ್ದುಪಡಿ ವಿಲ್‌ನಲ್ಲಿ ಸಾಹಿತ್ಯ ಭಂಡಾರದ ಮಾಲೀಕರಾಗಿದ್ದ ದಿ. ಎಂ. ಗೋವಿಂದರಾವ್ ಅವರನ್ನು ನೆನಪಿಸಿಕೊಂಡಿದ್ದಾರೆ. ಗೋವಿಂದರಾವ್ ಅವರು ಬದುಕಿನಲ್ಲಿ ಕಂಡ ಏಳುಬೀಳುಗಳ ಸುದೀರ್ಘ ಅವಧಿಯಲ್ಲಿಯೂ ಪ್ರಕಾಶನ ಕ್ಷೇತ್ರದಲ್ಲಿ ಲಾಭಗಳಿಕೆಯ ಬಗ್ಗೆ ಎಂದೂ ಯೋಚಿಸದೇ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಸಾಹಿತ್ಯ ಸೇವೆಗೆ ಮುಡಿಪಾಗಿಟ್ಟಿದ್ದರು. ಅವರ ಕಾಲಾನಂತರವೂ ಕನ್ನಡ ಸಾಹಿತ್ಯ ಲೋಕಕ್ಕೆ ಸೇವೆಯನ್ನು ಮುಂದುವರಿಸುತ್ತಿರುವ ದಿ. ಗೋವಿಂದರಾವ್ ಅವರ ಮಕ್ಕಳ ಪೈಕಿ ಎಂ.ಜಿ.ಅರುಣನಿಂದ ಎಸ್.ಎಲ್.ಭೈರಪ್ಪ ಪ್ರತಿಷ್ಠಾನ ಅಥವಾ ಬೇರಾವುದೇ ಸೂಕ್ತವಾದ ಹೆಸರಿನಲ್ಲಿ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರ ಮೂಲಕ ಅಂತಹ ಚಟುವಟಿಕೆಗಳಿಗೆ ಬೆಂಬಲ ನೀಡಬೇಕೆಂಬ ಸದಿಚ್ಛೆಯು ನನಗೆ ಉಂಟಾಗಿದ್ದು, ಅದನ್ನು ಆತನ ಗಮನಕ್ಕೆ ಈಗಾಗಲೇ ತಂದಿದ್ದೇನೆ ಎಂದು ಭೈರಪ್ಪ ವಿಲ್‌ನಲ್ಲಿ ಹೇಳಿದ್ದಾರೆ. ಮನೆಯ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಭೈರಪ್ಪನವರು ತಮ್ಮ ಉಯಿಲಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಕುವೆಂಪುನಗರದಲ್ಲಿರುವ ಮನೆ ನಂ.1007 ನನ್ನ ಪತ್ನಿ ಎಸ್.ಬಿ.ಸರಸ್ವತಿಯ ಕಾಲಾನಂತರ ಈ ಸ್ವತ್ತು ಬೆಂಗಳೂರಿನ ಚಿಕ್ಕಕಲ್ಲಸಂದ್ರ ಬಡಾವಣೆಯಲ್ಲಿ ವಾಸವಾಗಿರುವ ದಿ. ಎಂ. ಗೋವಿಂದರಾವ್ ರವರ ಪುತ್ರ 65 ಷರ್ವ ವಯಸ್ಸಿನ ಎಂ.ಜಿ.ಅರುಣನಿಗೆ ಸೇರತಕ್ಕದ್ದೇ ವಿನಃ ಬೇರಾರಿಗೂ ಸೇರತಕ್ಕದ್ದಲ್ಲ. ಹೀಗಾಗಿ ನಾನು ಮೊದಲು ನನ್ನ ಮಗ ಉದಯಶಂಕರನಿಗೆ ನೀಡಿದ್ದ ಕೊಡುಗೆಯನ್ನು ರದ್ದುಪಡಿಸುತ್ತಿದ್ದೇನೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.
೨೦೨೨ ಮಾ.೧೫ರಂದು ಮಾಡಿದ ವಿಲ್‌ಗೆ ತಿದ್ದುಪಡಿ ಉಯಿಲಿನಲ್ಲಿ ಉದಯಶಂಕರ ಹಾಗೂ ಅರುಣನಿಗೆ ಮಾತ್ರ ಹಣ ನಗದೀಕರಿಸಿಕೊಳ್ಳುವ ಅಧಿಕಾರವಿರುತ್ತದೆ ಎಂದು ಹೇಳಿದ್ದ ಭೈರಪ್ಪ, ೨೦೨೫ ಜನವರಿ ೩೦ರಂದು ಮಾಡಿದ ಮತ್ತೊಂದು ಉಯಿಲಿನಲ್ಲಿ ಉದಯಶಂಕರನಿಗೆ ನೀಡಿದ್ದ ೫೦ ಲಕ್ಷ ರು. ಕೊಡುಗೆಯನ್ನು ರದ್ದುಪಡಿಸಿದ್ದಾರೆ.
2025ರ ಜನವರಿಯಲ್ಲಿ ವಿಲ್ ಬದಲು
೨೦೨೨ರಲ್ಲಿ ಭೈರಪ್ಪನವರು ಉಯಿಲು ಮಾಡುವ ಸಮಯದಲ್ಲಿಯೇ, ಮೊದಲ ಮಗ, ಲಂಡನ್ ವಾಸಿ ಎಸ್.ಬಿ. ರವಿಶಂಕರ ‘ತಮಗೆ ಏನು ಬೇಡ’ ಎಂದು ಹೇಳಿದ್ದರಿಂದ ಉಯಿಲಿನಲ್ಲಿ ಯಾವುದೇ ಕೊಡುಗೆಯನ್ನು ನೀಡಿರಲಿಲ್ಲ. ಉದಯಶಂಕರ ಅವರಿಗೆ ತಮ್ಮ ನಂತರ ಇಡೀ ಆಸ್ತಿ ಸೇರಬೇಕೆಂದು ಹೇಳಿದ್ದರು. ಇದಾದ ಬಳಿಕ ೨೦೨೫ರ ಜನವರಿ ೩೦ರಲ್ಲಿ ಮಾಡಿದ ವಿಲ್‌ನಲ್ಲಿ ಉದಯಶಂಕರನಿಗೆ ಕೇವಲ ೫೦ ಲಕ್ಷ ಮಾತ್ರ ಸೇರಬೇಕೆಂದು ಹೇಳಿದ್ದರು. ಇದಾದ ಬಳಿಕ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ೨೦೨೫ರ ಜೂನ್ ೧೭ರಂದು ಮಾಡಿದ್ದ ತಿದ್ದುಪಡಿ ವಿಲ್‌ನಲ್ಲಿ ಈ ಹಿಂದೆ ನೀಡಿದ್ದ ೫೦ ಲಕ್ಷ ರು. ಕೊಡುಗೆಯನ್ನು ರದ್ದುಪಡಿಸಿದ್ದರು. ಇದರನ್ವಯ ಮೊದಲ ಮಗನಿಗಾಗಲಿ, ಎರಡನೇ ಮಗನಿಗಾಗಲಿ, ಪತ್ನಿಗಾಗಲಿ ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ನೀಡಬೇಕೆಂದು ವಿಲ್‌ನಲ್ಲಿ ಬರೆದಿಲ್ಲ. ತಮ್ಮ ಖಾತೆಯಲ್ಲಿರುವ ಹಣದ ಪೈಕಿ ೫೦ ಲಕ್ಷ ರು.ಗಳನ್ನು ಮಾತ್ರ ಅರುಣ ತಮ್ಮ ಖಾಸಗಿಯಾಗಿ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಉಳಿದ ಹಣವನ್ನು ತಾನು ರಚಿಸಲಿರುವ ಟ್ರಸ್ಟ್‌ಗೆ ವರ್ಗಾಯಿಸಬೇಕು ಎಂದು ಅರುಣನಿಗೆ ಸೂಚಿಸಿದ್ದಾರೆ.