ಹಾವೇರಿ: ಸರಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಅಕ್ರಮವಾಗಿ ಬೇರೆ ರಾಜ್ಯಗಳಿಗೆ ಸಾಗಣೆ ಮಾಡುವ ದಂಧೆ ಜಿಲ್ಲೆಯಲ್ಲಿ ಹವ್ಯಾಹತವಾಗಿ ನಡೆಯುತ್ತಿದೆ. ಈ ನಡುವೆ ಪಡಿತರ ಅಕ್ಕಿ ಅಕ್ರಮ ದಾಸ್ತಾನು (Ration Rice smuggling) ಆರೋಪದ ಹಿನ್ನೆಲೆಯಲ್ಲಿ ವರದಿ ಮಾಡಲು ಹೋದ ವೇಳೆ ಮಾಧ್ಯಮದವರ ಹಲ್ಲೆಗೆ ಯತ್ನಿಸಿ, ವಿಡಿಯೊ ಮಾಡುತ್ತಿದ್ದ ಕ್ಯಾಮೆರಾವನ್ನು ಒಡೆದು ಹಾಕಿರುವ ಘಟನೆ ಶನಿವಾರ ನಡೆದಿದೆ. ಹಾವೇರಿ ಶಹರದ ಸಚಿನ್ ಕಬ್ಬೂರ್ ಹಲ್ಲೆ ಮಾಡಿದ ವ್ಯಕ್ತಿ.
ಸಚಿನ್ ಕಬ್ಬೂರ್ ವಿರುದ್ಧ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಆರೋಪ ಕೇಳಿಬಂದಿದೆ. ಹಾವೇರಿ ಶಹರದ ಅಕ್ಕಿ ಪೇಟೆಯಲ್ಲಿ ಪಡಿತರ ಅಕ್ಕಿ ಇರುವ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ವರದಿ ಮಾಡಲು ಹೋದಾಗ ಹಲ್ಲೆ ಯತ್ನ ನಡೆದಿದೆ. ಮಾಧ್ಯಮದವರ ಮೇಲೆ ಸಚಿನ್ ಕಬ್ಬೂರ್ ಹಲ್ಲೆಗೆ ಯತ್ನಿಸಿದ್ದು, ಕ್ಯಾಮೆರಾವನ್ನು ಒಡೆದು ಹಾಕಿದ್ದಾನೆ.
ಅಕ್ರಮ ಅಕ್ಕಿ ದಂಧೆ ಮಾಡುವ ಸಚಿನ್ ಕಬ್ಬೂರ ಮೇಲೆ ಹತ್ತಾರು ಕೇಸ್‌ಗಳು ದಾಖಲಾಗಿದ್ದರೂ ಪಡಿತರ ಅಕ್ಕಿ ದಂಧೆಯನ್ನು ಎಂದಿನಂತೆ ಮುಂದುವರಿಸಿದ್ದಾನೆ ಎನ್ನಲಾಗಿದೆ. ಜಿಲ್ಲೆಯ ಬಹುತೇಕ ಕಡೆ ನ್ಯಾಯಬೆಲೆ ಅಂಗಡಿಗಳ ಪಕ್ಕದಲ್ಲೇ ಕಾಳಸಂತೆ ಅಂಗಡಿಗಳು ಓಪನ್ ಮಾಡಿಕೊಂಡಿದ್ದಾರೆ. ಹಾವೇರಿ ನಗರದಲ್ಲೇ ರಾಜಾರೋಷವಾಗಿ ಅಕ್ಕಿ ದಂಧೆ ನಡೆಸುತ್ತಿರುವ ಸಚಿನ್ ಕಬ್ಬೂರ್, ಪೊಲೀಸರು ಹಾಗೂ ಅಧಿಕಾರಿಗಳಿಗೆ ಲಂಚ ಕೊಟ್ಟು ಅಕ್ಕಿ ಮಾರಾಟ ದಂಧೆ ನಡೆಸುತ್ತಿದ್ದಾನೆ ಎಂಬ ಆರೋಪವಿದೆ.
ಐಷಾರಾಮಿ ಆಡಿ ಕಾರ್‌ನಲ್ಲಿ ಬಂದಿದ್ದ ಸಚಿನ್ ಕಬ್ಬೂರ್ ಮಾಧ್ಯಮದವರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಲ್ಲದೇ ಅವರಿಗೆ ಜೀವ ಬೆದರಿಕೆ ಕೂಡ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಗೆ ಒಳಗಾದ ಮಾಧ್ಯಮದವರು ಹಾವೇರಿ ಶಹರ ಠಾಣೆಗೆ ದೂರು ನೀಡಿದ್ದಾರೆ.
ಶಾರ್ಟ್ ಸರ್ಕ್ಯೂಟ್; ಹೊತ್ತಿ ಉರಿದ ಮೊಬೈಲ್, ಫರ್ನಿಚರ್ ಅಂಗಡಿಗಳು

ಹಾವೇರಿ: ನಗರದ ಬಸ್ ನಿಲ್ದಾಣದ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮೊಬೈಲ್ , ಫರ್ನಿಚರ್ ಅಂಗಡಿಗಳು ಹೊತ್ತಿ ಉರಿದ ಘಟನೆ ನಡೆದಿದೆ. ಶಹರದ ಜಿಲ್ಲಾ ಬಸ್ ನಿಲ್ದಾಣದ ಬಳಿಯ ಫರ್ನಿಚರ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಹುಬ್ಬಳ್ಳಿ ಮುಖ್ಯ ರಸ್ತೆಗೆ ಮುಖ ಮಾಡಿಕೊಂಡ ಮೊದಲ ಮಹಡಿಯಲ್ಲಿರುವ ಫರ್ನಿಚರ್ ಹಾಗೂ ಮೊಬೈಲ್ ಅಂಗಡಿಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಶನಿವಾರ ರಾತ್ರಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು.