ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಲ್ಲಿ ಅಕ್ರಮ ನಿರ್ಮಾಣಕ್ಕೆ ಕಡಿವಾಣ; ವಾಸಯೋಗ್ಯ ಪ್ರಮಾಣ ಪತ್ರವಿಲ್ಲದ 4 ಲಕ್ಷ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕಕ್ಕೆ ತಡೆ

DK Shivakumar: ಬೆಂಗಳೂರಿನ ಧರ್ಮರಾಯಸ್ವಾಮಿ ದೇವಾಲಯದ ಬಳಿಯ ನಗರ್ತಪೇಟೆಯಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ಸ್ಥಳಕ್ಕೆ ಡಿಸಿಎಂ ಶಿವಕುಮಾರ್ ಅವರು ಭಾನುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ನಂತರ ಘಟನಾ ಸ್ಥಳ ಹಾಗೂ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಬೆಂಗಳೂರು, ಆ.17: "ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಹಾಗೂ ದುರ್ಬಲಗೊಂಡಿರುವ ಕಟ್ಟಡಗಳನ್ನು ಮೊದಲು ಭದ್ರಗೊಳಿಸುವ ಕೆಲಸವಾಗಬೇಕು. ಇಂತಹ ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಧರ್ಮರಾಯಸ್ವಾಮಿ ದೇವಾಲಯದ ಬಳಿಯ ನಗರ್ತಪೇಟೆಯಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ಸ್ಥಳಕ್ಕೆ ಡಿಸಿಎಂ ಶಿವಕುಮಾರ್ ಅವರು ಭಾನುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ನಂತರ ಘಟನಾ ಸ್ಥಳ ಹಾಗೂ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

"ಎರಡು, ಮೂರು ಮಹಡಿಗಳನ್ನು ಕಟ್ಟುವ ಕಡೆಗಳಲ್ಲಿ ಎಂಟತ್ತು ಮಹಡಿಗಳನ್ನು ನಿರ್ಮಾಣ ಮಾಡಲಾಗಿದೆ. ಹಲವಾರು ಕಟ್ಟಡಗಳು ವಾಸಕ್ಕೆ ಯೋಗ್ಯವಿಲ್ಲದಂತಾಗಿವೆ. ಇಂತಹ ಕಟ್ಟಡಗಳನ್ನು ಹೊಡೆದು ಹಾಕುವುದು ನಂತರದ ವಿಚಾರ. ಇದರ ಬಗ್ಗೆ ಮೊದಲು ಸಮೀಕ್ಷೆ ನಡೆಸಲಾಗುವುದು.‌ ಇದು ಒಂದೇ ದಿನಕ್ಕೆ ಮುಗಿಯುವ ಕೆಲಸವಲ್ಲ. ವರ್ಷಗಟ್ಟಲೆ ಹಿಡಿಯುತ್ತದೆ. ದೆಹಲಿ, ಮುಂಬೈನಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ಒಳಗೆ ಬಂದು ನೋಡಿದಾಗ ನನಗೆ ಗಾಬರಿಯಾಯಿತು. ಇಂತಹ ಇಕ್ಕಟ್ಟಿನ ಜಾಗದಲ್ಲಿ ಬೆಂಕಿ ಅವಘಡ ನಡೆದರೆ ಜನ ಓಡಿ ಹೋಗುತ್ತಾರೆ, ಆಗ ಕಾಲ್ತುಳಿತ ಉಂಟಾಗಿಯೇ ಜನ ಸಾಯುತ್ತಾರೆ" ಎಂದರು.

ಮೃತರಿಗೆ ತಲಾ ಐದು ಲಕ್ಷ ಪರಿಹಾರ

"ನಿರ್ಲಕ್ಷ್ಯ ವಹಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.‌ ಅವಘಡ ನಡೆದ ಕಟ್ಟಡದ ಮಾಲೀಕರನ್ನೂ ಸಹ ಬಂಧಿಸಲಾಗಿದೆ. ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅವಘಡದಲ್ಲಿ ಮೃತಪಟ್ಟ ಪ್ರತಿ ವ್ಯಕ್ತಿಗಳ ಕುಟುಂಬಸ್ಥರಿಗೆ ರೂ. 5 ಲಕ್ಷ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ" ಎಂದು ತಿಳಿಸಿದರು.

"ಕೂಡಲೇ ದುರ್ಬಲ ಕಟ್ಟಡಗಳನ್ನು ಕೆಡವಲು ಹೋಗುವುದಿಲ್ಲ. ಮಾಲೀಕರು ಕೂಡಲೇ ದುರಸ್ಥಿಗೆ ಒಳಪಡಿಸಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಏಕೆಂದರೆ ದುರ್ಬಲಗೊಂಡಿರುವ ಕಟ್ಟಡಗಳು ಕುಸಿತವಾಗಿ ದೊಡ್ಡ ಸಮಸ್ಯೆ ಎದುರಾಗುವುದು ಬೇಡ. ಭವಿಷ್ಯದಲ್ಲಿ ಈ ರೀತಿಯಾಗಿ ಕಟ್ಟಡಗಳ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ" ಎಂದು ಹೇಳಿದರು.

ಶೇ.70 ರಷ್ಟು ಕಟ್ಟಡಗಳು ಅಕ್ರಮ

ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಕೇಳಿದಾಗ, "ನಗರದಲ್ಲಿ ಶೇ.70 ರಷ್ಟು ಕಟ್ಟಡ ನಿರ್ಮಾಣ ಅಕ್ರಮವಾಗಿದೆ. ನೂತನ ಬಿಡಿಎ ಲೇಔಟ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಹಡಿ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ಈಗ ಸುಪ್ರೀಂ ಕೋರ್ಟ್ ತೀರ್ಪು ವಾಸಯೋಗ್ಯ ಪ್ರಮಾಪತ್ರವಿಲ್ಲದೇ ನೀರು, ವಿದ್ಯುತ್ ಸಂಪರ್ಕ ನೀಡಬಾರದು ಎಂದು ಮಾರ್ಗದರ್ಶನ ನೀಡಿದೆ. ಈ ಕಾರಣಕ್ಕೆ 4 ಲಕ್ಷ ಸಂಪರ್ಕಗಳನ್ನು ನಿಲ್ಲಿಸಲಾಗಿದೆ. 30/40 ಅಳತೆಯ ಎರಡು ಮಹಡಿಯ ಕಟ್ಟಡಗಳಿಗೆ ವಿನಾಯಿತಿ ನೀಡಬೇಕು ಎನ್ನುವ ವಿಚಾರವನ್ನು ಕ್ಯಾಬಿನೆಟ್ ಮುಂದೆ ತರಲಾಗುವುದು. ಸಂಪುಟ ಸಹೋದ್ಯೋಗಿಗಳು ಏನು ಹೇಳುತ್ತಾರೊ ನೋಡೋಣ" ಎಂದರು.

ಚಿಕ್ಕಪೇಟೆ, ನಗರ್ತಪೇಟೆ ಇವುಗಳು ಹೆಸರಿಗೆ ವಾಸಸ್ಥಳಗಳು, ಆದರೆ ವ್ಯಾಪಾರಿ ಕೇಂದ್ರಗಳಾಗಿ ಬದಲಾಗಿವೆ ಎಂದು ಕೇಳಿದಾಗ, "ಜನರ ಬಡತನದ ಬದುಕು. ಅಗ್ನಿಶಾಮಕ ನಿಯಮದ ಪ್ರಕಾರ ಹೋದರೆ ಎಲ್ಲಾ ಕಟ್ಟಡಗಳನ್ನು ಒಡೆದು ಹಾಕಬೇಕಾಗುತ್ತದೆ" ಎಂದರು.

"ಅನೇಕ ಕಟ್ಟಡಗಳ ಮೇಲ್ಬಾಗಕ್ಕೆ ಹತ್ತಲು ಸಹ ಆಗುತ್ತಿಲ್ಲ. ಶಾರ್ಟ್ ಸರ್ಕೀಟ್ ಆದ ಕಾರಣಕ್ಕೆ ಬೆಂಕಿ ಹೊತ್ತುಕೊಂಡು ಸಾವನ್ನಪ್ಪಿದ್ದಾರೆ. ಮೃತರೆಲ್ಲಾ ರಾಜಸ್ಥಾನ ಮೂಲದವರು.‌ ಎಲ್ಲಿಯವರು ಆದರೇನು ಬದುಕು ಕಟ್ಟಿಕೊಳ್ಳಲು ಇಲ್ಲಿಗೆ ಬಂದಿದ್ದರು" ಎಂದರು.

"ಎರಡು ದಿನಗಳ ಹಿಂದೆ ಸಿಲಿಂಡರ್ ಸ್ಪೋಟಗೊಂಡು ಮನೆ ಹಾನಿಯಾಗಿದೆ, ಜನರ ಗಾಯಗೊಂಡಿದ್ದಾರೆ. ಬೆಂಕಿಗೆ ಸಿಲುಕಿ ಐದು ಮಂದಿ ಸತ್ತಿದ್ದಾರೆ. ಬಾಡಿಗೆಗಾಗಿ ಹೀಗೆ ಕಟ್ಟಡಗಳನ್ನು ನಿರ್ಮಾಣ ಮಾಡಿರುವುದೇ ಇದೆಲ್ಲದಕ್ಕೂ ಕಾರಣ.‌‌ ಇದು ಸರಿಯಲ್ಲ" ಎಂದರು.

ಈ ಸುದ್ದಿಯನ್ನೂ ಓದಿ | Namma Metro: ಬೆಂಗಳೂರು ಅಭಿವೃದ್ಧಿಗೆ 1.50 ಲಕ್ಷ ಕೋಟಿ ಅನುದಾನ ನೀಡಿ; ಪ್ರಧಾನಿ ಮೋದಿಗೆ ಮನವಿ ಪತ್ರ ಸಲ್ಲಿಸಿದ ಡಿಕೆಶಿ

ಧರ್ಮಸ್ಥಳ ಬಿಜೆಪಿಯವರ ಮನೆ ಆಸ್ತಿಯಲ್ಲ

ಬಿಜೆಪಿಯವರು ಧರ್ಮಸ್ಥಳ ಯಾತ್ರೆ ಮಾಡುತ್ತಿರುವ ಬಗ್ಗೆ ಕೇಳಿದಾಗ, "ಇದು ರಾಜಕೀಯದ ಯಾತ್ರೆ. ಧರ್ಮದ ಯಾತ್ರೆಯಲ್ಲ.‌ ಧರ್ಮಸ್ಥಳ ಬಿಜೆಪಿಯವರ ಮನೆ ಆಸ್ತಿಯಲ್ಲ. ಸಾರ್ವಜನಿಕರ ಸ್ವತ್ತು" ಎಂದರು.