ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr. Sharanabasappa Appa: ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯ; ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶ್ರದ್ಧಾಂಜಲಿ

ಕಲಬುರಗಿಯ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಶರಣಬಸವೇಶ್ವರ ಮಹಾದಾಸೋಹ ಪೀಠದ 8ನೇ ಪೀಠಾಧಿಪತಿ, ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಇಹಲೋಕ ತ್ಯಜಿಸಿದ್ದಾರೆ.

ಕಲಬುರಗಿ: ಶೈಕ್ಷಣಿಕ ಕ್ರಾಂತಿಯ ಹರಿಕಾರ, ಶರಣಬಸವೇಶ್ವರ ಮಹಾದಾಸೋಹ ಪೀಠದ 8ನೇ ಪೀಠಾಧಿಪತಿ, ವಿದ್ಯಾಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ (Dr. Sharanabasappa Appa) (91) ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಜು. 25ರಂದು ರಾತ್ರಿ ಉಸಿರಾಟದ ಸೋಂಕಿನ ತೊಂದರೆಯಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಅವರನ್ನು ಮಹಾದಾಸೋಹ ಮನೆಯಲ್ಲಿರುವ ಸಕಲ ವೈದ್ಯಕಿಯ ಚಿಕಿತ್ಸಾ ಸೌಲಭ್ಯ ಹೊಂದಿರುವ ವಿಶೇಷ ಕೋಣೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ʼʼಶರಣರ ನಾಡು ಕಲಬುರಗಿಯ ಮಹಾದಾಸೋಹಿ, ಶರಣ ಬಸವೇಶ್ವರ ಮಹಾಸಂಸ್ಥಾನದ ಮಠಾಧೀಶರಾದ ಡಾ. ಶರಣಬಸಪ್ಪ ಅಪ್ಪಾನವರು ಲಿಂಗೈಕ್ಯರಾದ ಸುದ್ದಿ ನೋವುಂಟು ಮಾಡಿದೆ. ಬಸವಾದಿ ಶರಣರು ತೋರಿದ ಕಾಯಕ ಮತ್ತು ದಾಸೋಹದ ಹಾದಿಯಲ್ಲಿ ನಡೆಯುತ್ತಾ, ಸಮಾಜದ ಏಳಿಗೆಗಾಗಿ ಸದಾ ತುಡಿಯುತ್ತಿದ್ದ ನಿಜ ಬಸವಾನುಯಾಯಿ ಶರಣಬಸಪ್ಪ ಅಪ್ಪನವರ ಅಗಲಿಕೆಯಿಂದ ನಾಡು ಬಡವಾಗಿದೆʼʼ ಎಂದು ನುಡಿದಿದ್ದಾರೆ.

ʼʼಅವರ ಆತ್ಮಕ್ಕೆ ಶಾಂತಿ ಸಿಗಲಿ, ಗುರುಗಳ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಭಕ್ತವೃಂದಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆʼʼ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Sharanabasappa Appa: ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ. ಶರಣಬಸವಪ್ಪ ಅಪ್ಪಾ ಲಿಂಗೈಕ್ಯ



ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ಬಗ್ಗೆ ಬರೆದುಕೊಂಡಿದ್ದಾರೆ. ʼʼಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಧರ್ಮ ಜಾಗೃತಿ, ಸಮಾಜ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿದ ಅವರ ನಿಧನದಿಂದ ಒಬ್ಬ ಶ್ರೇಷ್ಠ ಕಾಯಕಯೋಗಿ ಗುರುಗಳನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆಶೀರ್ವಾದ ಭಕ್ತರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತಾ, ಅವರ ಅಪಾರ ಭಕ್ತರಿಗೆ, ಶಿಷ್ಯರಿಗೆ, ಗುರುಗಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆʼʼ ಎಂದಿದ್ದಾರೆ.



ಸಚಿವ ಪ್ರಿಯಾಂಕ್‌ ಖರ್ಗೆ ಸಂತಾಪ ಸೂಚಿಸಿ, ʼʼಶರಣರ ನಾಡಾದ ಕಲಬುರಗಿಯಲ್ಲಿ ಶರಣ ಪರಂಪರೆಯ ಪ್ರಮುಖ ಕೇಂದ್ರವಾಗಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಶರಣಬಸಪ್ಪ ಅಪ್ಪಾ ಅವರು ಲಿಂಗಕ್ಯರಾಗಿರುವುದು ಅತೀವ ನೋವಿನ ವಿಷಯವಾಗಿದೆ. ಕಾಯಕ ಜೀವಿಯಾಗಿ, ಮಹಾ ದಾಸೋಹಿಯಾಗಿ, ಶರಣಪರಂಪರೆಯ ಉದಾತ್ತ ಚಿಂತನೆಗಳ ವಕ್ತಾರರಾಗಿ, ಕಲಬುರಗಿ ಜನತೆಗೆ ತಾತ್ವಿಕ ಮಾರ್ಗದರ್ಶಕರಾಗಿದ್ದ ಶ್ರೀಗಳು ಸಮಸ್ತ ಜನರ ಏಳಿಗೆ ಬಯಸುತ್ತಾ, ಜಿಲ್ಲೆಯ ಸೌಹಾರ್ಧ ಪರಂಪರೆಗೆ ಶಕ್ತಿಯಾಗಿದ್ದರುʼʼ ಎಂದಿದ್ದಾರೆ.

ಮುಂದುವರಿದು, ʼʼನಾನು ಅವರಿಂದ ರಾಜಕೀಯ ಮೌಲ್ಯಗಳ, ಬದುಕಿನ ಮೌಲ್ಯಗಳ ಅರಿವನ್ನು ಪಡೆದಿದ್ದೇನೆ, ನನಗೆ ಅವರು ಬಹುದೊಡ್ಡ ಪ್ರೇರಕ ಶಕ್ತಿಯಾಗಿ, ಮಾರ್ಗದರ್ಶಕರಾಗಿ ಮುನ್ನಡೆಸಿದವರಾಗಿದ್ದರು, ಇಂದು ಅವರಿಲ್ಲ ಎಂದು ಕಲ್ಪಿಸಿಕೊಳ್ಳುವುದು ನನಗೆ ಅತ್ಯಂತ ಕಷ್ಟದ ಸನ್ನಿವೇಶ. ಬಂದೆನವಾಜ್ ದರ್ಗಾದ ಡಾ. ಸಯ್ಯದ್ ಶಾ ಖುಸ್ರೋ ಹುಸೇನಿಯವರು ಮತ್ತು ಶರಣಬಸವೇಶ್ವರ ಮಠದ ಪೂಜ್ಯ ಶರಣಬಸಪ್ಪ ಅಪ್ಪಾ ಈ ಇಬ್ಬರೂ ಕಲಬುರಗಿಯ ಭಾವೈಕ್ಯತೆಗೆ ಎರಡು ಕಣ್ಣುಗಳಂತಿದ್ದವರು, ಒಂದು ವರ್ಷದ ಅವಧಿಯಲ್ಲಿ ಈ ಇಬ್ಬರೂ ಮಹನೀಯರನ್ನು ಕಳೆದುಕೊಳ್ಳುವ ಮೂಲಕ ಎರಡು ಕಣ್ಣುಗಳನ್ನು ಕಳೆದುಕೊಂಡು ಕತ್ತಲಲ್ಲಿ ನಿಂತಂತೆ ಭಾಸವಾಗುತ್ತಿದೆʼʼ ಎಂದು ಹೇಳಿದ್ದಾರೆ.

ʼʼಸದಾ ಸಮಾಜದ ಔನತ್ಯವನ್ನು ಬಯಸುತ್ತಿದ್ದ ಶ್ರೀ ಡಾ. ಶರಣಬಸಪ್ಪಾ ಅಪ್ಪ ಅವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದುದು, ವಿದ್ಯೆ ಎಂಬುದು ಅಭ್ಯಾಸಿಗನ ಕೈವಶ. ಅದು ಕೇವಲ ಉಳ್ಳವರ ಸೊತ್ತಲ್ಲ ಎಂಬ ಆಶಯದೊಂದಿಗೆ ತಮ್ಮ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸರ್ವರಿಗೂ ಜ್ಞಾನದಾಸೋಹ ನೀಡಿದ್ದಾರೆ. 91 ವರ್ಷಗಳ ತುಂಬು ಜೀವನದಲ್ಲಿ ಅವರು ಸಮಾಜಕ್ಕೆ ನೀಡಿದ್ದು ಅಪಾರ. ಕಲಬುರಗಿ ಜಿಲ್ಲೆಯ ಜನತೆಯ ಏಳಿಗೆಯಲ್ಲಿ ಅವರ ಈ ಜ್ಞಾನದಾಸೋಹವು ಪ್ರಮುಖ ಮೆಟ್ಟಿಲಾಗಿದೆ ಎಂದರೆ ಅತಿಶಯೋಕ್ತಿಯಲ್ಲʼʼ ಎಂದು ತಿಳಿಸಿದ್ದಾರೆ.

ʼʼಮಹಾ ದಾಸೋಹಿ ಶ್ರೀ ಶರಣಬಸಪ್ಪ ಅಪ್ಪಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ನಾನೂ ಸೇರಿದಂತೆ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ, ಎಲ್ಲರಿಗೂ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ದೊರಕಲಿ ಎಂದು ಆಶಿಸುತ್ತೇನೆ. ಶ್ರೀಗಳು ನೀಡಿದ ಮಾರ್ಗದರ್ಶನವು ನಮ್ಮೆಲ್ಲರಿಗೂ ಸದಾ ಪ್ರೇರಕ ಶಕ್ತಿಯಾಗಿರಲಿದೆ ಎಂದು ಭಾವಿಸಿದ್ದೇನೆʼʼ ಎಂದಿದ್ದಾರೆ.

ಸಚಿವ ಎಚ್‌.ಕೆ. ಪಾಟೀಲ್‌, ಡಾ. ಶರಣ್‌ ಪ್ರಕಾಶ್‌ ಪಾಟೀಲ್‌, ಎಂ.ಬಿ. ಪಾಟೀಲ್‌, ಸಂತೋಷ್‌ ಲಾಡ್‌, ಗಾಲಿ ಜನಾರ್ದನ ರೆಡ್ಡಿ, ಈಶ್ವರ ಖಂಡ್ರೆ, ಬಿ.ವೈ. ರಾಘವೇಂದ್ರ, ವಿಜಯ್‌ ಸಿಂಗ್‌, ಬಿ. ಶ್ರೀರಾಮುಲು, ಬಸವರಾಜ್‌ ಎಸ್‌. ಬೊಮ್ಮಾಯಿ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.