ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Banu Mushtaq: ಮೈಸೂರು ದಸರಾ ಉದ್ಘಾಟನೆಗೆ ಕವನದ ಮೂಲಕ ʼಬಾಗಿನʼ ನೀಡಿದ ಬಾನು ಮುಷ್ತಾಕ್‌

ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ (Sri Chamundeshwari) ಅಗ್ರಪೂಜೆಯೊಂದಿಗೆ ಪ್ರಾರಂಭವಾದ ವಿಶ್ವ ವಿಖ್ಯಾತ ಮೈಸೂರು ದಸರಾ (Mysuru dasara festival) ಮಹೋತ್ಸವವನ್ನು ಬಾನು ಮುಷ್ತಾಕ್ ಇಂದು ಉದ್ಘಾಟಿಸಿ ಮಾತನಾಡಿದ್ದಲ್ಲದೆ, ʼಬಾಗಿನ; ಹೆಸರಿನ ಕವನವೊಂದನ್ನು ವಾಚಿಸಿದರು.

ಮೈಸೂರು: ಸಂಸ್ಕೃತಿ ನಮ್ಮ ಬೇರು. ಸೌಹಾರ್ದ ನಮ್ಮ ಶಕ್ತಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ , ಪ್ರೀತಿಯ ಹೊಸ ಸುಧಾರಿತ ಸಮಾಜವನ್ನು ಕಟ್ಟೋಣ ಎಂದು ಬಾನು ಮುಷ್ತಾಕ್‌ ಆಶಿಸಿದ್ದಾರೆ. ಸಾಹಿತಿ ಹಾಗೂ 2025ರ ಅಂತಾರಾಷ್ಟ್ರೀಯ ಬೂಕರ್ ಬಹುಮಾನ ವಿಜೇತೆ ಬಾನು ಮುಷ್ತಾಕ್ (Banu Mushtaq) ಅವರು ಇಂದು ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ (Sri Chamundeshwari) ಅಗ್ರಪೂಜೆಯೊಂದಿಗೆ ಪ್ರಾರಂಭವಾದ ವಿಶ್ವವಿಖ್ಯಾತ ಮೈಸೂರು ದಸರಾ (Mysuru dasara festival) ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಮೈಸೂರು ಅರಸರ ಸಂಸ್ಕೃತಿಯ ಪರಂಪರೆಯಿಂದ ಹಿಡಿದು, ಕನ್ನಡ ಭಾಷೆಯ ಅಂತರಾಳದ ಹೃದಯಸ್ಪಂದನದವರೆಗೆ ಈ ಹಬ್ಬವು ನಮಗೆ ಸ್ಮರಿಸುತ್ತದೆ. ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ. ವಿಭಿನ್ನತೆಯಲ್ಲೇ ಏಕತೆಯ ಸುಗಂಧ. ಮಹಾರಾಜರು ಜಯಚಾಮರಾಜೇಂದ್ರ ಒಡೆಯರು ಮುಸ್ಲಿಂರ ನಂಬಿ, ಅವರನ್ನು ಅನುಮಾನಿಸದೇ, ಅಂಗರಕ್ಷಕರ ಪಡೆಯ ಸದಸ್ಯರಾಗಿದ್ದರು, ಇದು ನಮಗೆ ಬಹಳ ಹೆಮ್ಮೆಯ ಮತ್ತು ಅಪ್ಯಾಯಮಾನವಾದ ವಿಷಯ. ಸಂಸ್ಕೃತಿ ಎಂದರೆ ಹೃದಯದಗಲವನ್ನು ಹುಟ್ಟಿಸುವ ನನ್ನ ಧಾರ್ಮಿಕ ನಂಬಿಕೆ, ಯಾವಗಾಗಲೂ ಜೀವ ಪರ ಮಾನವೀಯಪರ. ಈ ನೆಲದ ಸಂಸ್ಕೃತಿಯ ಮೂಲ- ಎಲ್ಲರನ್ನೊಳಗೊಳ್ಳುವ ಎಲ್ಲರ ಬದುಕನ್ನು ಗೌರವಿಸುವ , ನಮ್ಮೆಲ್ಲರ ಸರ್ವ ಜನಾಂಗದ ಶಾಂತಿಯ ತೋಟ ಎಂದರು.

ತಾನೊಬ್ಬ ಕವಿಯತ್ರಿಯಾಗಿದ್ದು, ಕವಿತೆಯ ಮೂಲಕ ನನ್ನ ಸಂದೇಶವನ್ನು ತಿಳಿಸಲು ಬಯಸಿದ್ದು, ಮುಸ್ಲಿಂ ಹೆಣ್ಣುಮಗಳು ಬಾಗಿನವನ್ನು ಪಡೆದಾಗಿನ ತನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವ ಕವಿತೆಯನ್ನು ಓದಿದರು.

ಬಾಗಿನ

ಮೊರ ಅಂದರೆ ಗೊತ್ತಲ್ಲಾ. . ..

ಕೇರುತ್ತೆ ಅದು, ಅಲ್ಲಿ

ಇಲ್ಲಿ ಮತ್ತು ಎಲ್ಲೆಲ್ಲೂ

ಆ ದಿನ....

ಸೇವಂತಿಗೆ ಹೂವು ಚಳ್ಳನೆ ನಗು

ಚಿಮುಕಿಸುತ್ತಿತ್ತು. ದಿನ ತುಂಬಿದ್ದ

ಮೋಡ ಎರಡೂ ಕೈಯಲಿ ಸೊಂಟ

ಹಿಡಿದು ಬೆವರಿನಿಂದ ತೊಯ್ದು

ಉಸ್ಸೆಂದಾಗ

ಆಕಾಶ ಭೂಮಿ ಮತ್ತು ಸಮಸ್ತವೂ ಗಲಗಲ

ಅಂತ ಚಿಮ್ಮುತ್ತಿದ್ದವು. ಅಸೂಯೆಯಿಂದ ಸೂರ್ಯ

ಕೆಂಪಾಗಿದ್ದ , ನನಗಿಲ್ಲದ ವಾತ್ಸಲ್ಯದಲ್ಲಿ ಇವಳು

ಹೇಗೆ ಮಿನುಗುತ್ತಾಳೆ ಅಂತ

ಅದೇನೂ ಎಂದಿನ ದಿನವಾಗಿರಲಿಲ್ಲ

ಸಂಭ್ರಮಕೇ ದೊಡ್ಡ ಮುಳ್ಳು ಚಿಕ್ಕ ಮುಳ್ಳು

ಅಂಟಿ ಜೂಟಾಟವಾಡುತ್ತಿದ್ದವಲ್ಲಾ

ಅಚ್ಚ ಕೃಷಿಕ ಬಸವರಾಜಣ್ಣನ ಎಡ

ಹೆಗಲಿನ ವಲ್ಲಿಯೊಡನೆ ಮಣ್ಣಿನ

ಗುಣ ಹೀರಿದ್ದ ನಾನು ಬಾನು

ವಿನಿಂದ ಜಯಾ ಅಗಿದ್ದು ಹೀಗೆ

ಯಾವುದೇ ಗೋಡೆಗಳಿರಲಿಲ್ಲ ಬಿಡಿ

ಪ್ರೀತಿಯ ಒಳ ಒರತೆಗಳು

ಜಿನುಗುವುದು ಹೀಗೆ ನೋಡಿ

ಸಾಬರ ಮಗಳು ಸಾಬರ ಸೊಸೆಗೆ

ಜೀವದುಂಬಿದ ಹಸಿ ಮಣ್ಣಿನ ಬಾಗಿನ

“ಜಯಾ... ನಡಿಯವ್ವ ಹಬ್ಬಕೆ‘

ಅರಿಶಿನದ ಎಲೆ ಕಡುಬು

ಗಂಡನ ಮನೆಯ ಕಸೂತಿ ನೆರಿಗೆಗಳ

ಸದಾ ಚಿಮ್ಮುತ್ತಿದ್ದರೂಎದೆಯಾಳದಲಿ

ಪಿಸುಗುಟ್ಟಿದ್ದು ಆ ಎಲೆ ಹಸಿರು

ವಾತ್ಸಲ್ಯವ ನೆಯ್ದ ಸಾದಾ ಸೀರೆ

ಮಡಿಲಲಿ ತುಂಬಿಸಿ ಕವುಚಿದ ಮೊರವ

ಮರಳುವ ದಾರಿಯಲಿ ನಿಂತು

ಅರಳಿಮರವ ಕೇಳಿದ್ದೆ

ಹೇಗೆ ಕೊಂಡೊಯ್ಯಲಿ ಇದನು

ನನ್ನತ್ತೆ ಮನೆಗೆ ಅರಿಶಿನ ಕುಂಕುಮದೊಡನೆ

ಹೇಗೆ ಬಿಡಿಸಲಿ ಬಾಂಧವ್ಯದ ಎಳೆಗಳ

ರಂಗೋಲಿಯನು ಸಾಬರ ಮನೆ ಬಾಗಿಲಲಿ

ಕೊಡಲೇ ಯಾರಿಗಾದರೂ ದಾರಿಹೋಕರಿಗೆ?

ಕೊಡಬಹುದೇ ಆದನು ಯಾರಿಗಾದರೂ

ಆ ಒಲವನು ಬಲವನು

ಪಿತೃ ವಾತ್ಸಲ್ಯದ ಮಾತೃತ್ವವನು

ನೆನೆಸಿಕೊಂಡಾಗ ಈಗಲೂ

ಕಣ್ಣಂಚಿನಲಿ ತೇವ

ಮೊರದ ತುಂಬಾ ಬದುಕಿನ ಪಸೆಯ

ಹಸೆಯ ಬರೆದ ಬೇಸಿಗೆ ಹಕ್ಕಿಯ ವಿದಾಯ

ಬಸವರಾಜಣ್ಣ...

ನೀವು ಕೊಟ್ಟ ಮೊರ ಹೇಳುತ್ತೆ

ಮಿಡಿಯುತ್ತೆ ಸಹಸ್ರ ಆರೋಪಗಳೆದುರು

ಒಂಟಿಯಾಗಿ ನಿಲ್ಲುತ್ತೆ, ದ್ವೇಷದ ಎಲ್ಲಾ

ಭಾಷೆಗಳ ಕವುಚಿ ಹಾಕುತ್ತೆ ಮುಂಜಾವಿನ

ಹೊಂಬೆಳಕಿನೊಂದಿಗೆ ಪ್ರೀತಿಯ ನಿರ್ಮಲ

ಅಲೆಗಳು ಮೊರದ ತುಂಬಾ

ತೂರುತ್ತಿರುತ್ತವೆ

ಇದನ್ನೂ ಓದಿ: Mysuru Dasara 2025: ಚಾಮುಂಡೇಶ್ವರಿ ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಯನ್ನು ನಾಶ ಮಾಡಲಿ: ಬಾನು ಮುಷ್ತಾಕ್‌

ಹರೀಶ್‌ ಕೇರ

View all posts by this author