ಪಿರಿಯಾಪಟ್ಟಣ: ಒಕ್ಕಲಿಗ ಯುವ ಬ್ರಿಗೇಡ್‌ನ ಉತ್ತಮ ಕಾರ್ಯಗಳ ಮೂಲಕ ನಂಜೇಗೌಡ ನಂಜುಂಡ ಅವರು ಸಮುದಾಯದ ಆಸ್ತಿಯಾಗಿದ್ದಾರೆ ಎಂದು ಬೆಂಗಳೂರು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಡಾ.ನಿಶ್ಚಲಾನಂದನಾಥ ಮಹಾಸ್ವಾಮಿ ಅಭಿಪ್ರಾಯಪಟ್ಟರು .
ಪಟ್ಟಣದ ಡಿ.ದೇವರಾಜ್ ಅರಸು ಭವನದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡ ಸಂಸ್ಮರಣೊತ್ಸವ ಅಂಗವಾಗಿ ಪ್ರಗತಿಪರ ರೈತರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಧಾನ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು.

ಒಕ್ಕಲಿಗರ ಪ್ರತಿಭೆ ಆಕಾಶ ಎತ್ತರಕ್ಕಿದೆ. ಇತರೆ ರಾಷ್ಟ್ರ ಗಳಲ್ಲಿ ಸಂಘಟನೆ ಹೊಂದಿದ್ದಾರೆ. ಕೆಂಪೇಗೌಡ ಅವರು ಸೇರಿ ಅನೇಕ ಇತಿಹಾಸ ಪುರುಷರು ಈ ನಾಡಿನ ಅಭಿವೃದ್ಧಿಗೆ ತಮ್ಮ ಶ್ರಮಿಸಿದ್ದಾರೆ, ಇದನ್ನು ಮರೆಯಬಾರದು ಎಂದರು.

ನಂಜೇಗೌಡ ನಂಜುಂಡ ಅವರು ಕೂಡ ತಮ್ಮ ಸಾಮಾಜಿಕ ಸೇವೆಗಳ ಮೂಲಕ ಈ ಸಮುದಾಯದ ಆಸ್ತಿಯಾಗಿದ್ದಾರೆ. ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ವಿದ್ಯಾವಂತ, ಪ್ರತಿಭಾವಂತ ವಿದ್ಯಾರ್ಥಿಗಳ ಬಗ್ಗೆ ಚಿಂತಿಸುತ್ತಿದ್ದಾರೆ. ಆದ್ದರಿಂದ ಸಮುದಾಯಕ್ಕಾಗಿ ಶ್ರಮಿಸುವವರಿಗೆ ಸಹಕಾರ ನೀಡಬೇಕು ಎಂದರು.

ಕುಂಚಿಟಿಗರ ಮಹಾಸಂಸ್ಥಾನ ಮಠದ ಶ್ರೀ ಹನುಮಂತ ಮಹಾಸ್ವಾಮೀಜಿ ಮಾತನಾಡಿ, ಯಾವುದೇ ಸರ್ಕಾರ ಬಂದರೂ ರೈತರ ಬೆನ್ನು ಮೂಲೆ ಮುರಿಯುವ ಕೆಲಸವನ್ನು ಮಾಡುತ್ತಿವೆ. ಅಸೂಯೆ, ಸ್ವಾರ್ಥದಿಂದ ನಮ್ಮ ಸಮುದಾಯದಲ್ಲಿನ ಒಗ್ಗಟ್ಟು ಮುರಿಯುತ್ತಿದೆ. ನಂಜೇಗೌಡ ನಂಜುಂಡ ಅವರ ಸಾಮಾಜಿಕ ಕಳಕಳಿ, ನಿಸ್ವಾರ್ಥ ಸೇವೆ ಪ್ರಶಂಸನೀಯವಾಗಿದ್ದು, ಅವರ ಭವಿಸ್ಯದ ನಾಯಕತ್ವಕ್ಕೆ ಬುನಾದಿ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಉಪ ಕುಲಪತಿ ಡಾ.ಎಸ್.ವಿ.ಸುರೇಶ್, ಡಾ.ನವಿತ ತಿಮ್ಮಯ್ಯ, ಸ್ಮಾರ್ಟ್ ಕ್ವೀಕ್ ವ್ಯವಸ್ಥಾಪಕ ದೀಪುಗೌಡ, ಐಕಾನಿಕ್ ಹಾಸ್ಪಿಟಾಲಿಟಿ ವ್ಯವಸ್ಥಾಪಕ ನಿರ್ದೇಶಕ ಭರತ್ ದೇವರಾಜಪ್ಪ,ಬಿಜೆಪಿ ಅಧ್ಯಕ್ಷ ರಾಜೇಂದ್ರ ಮತ್ತಿತರರು ಹಾಜರಿದ್ದರು.