ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯು ಪರೀಕ್ಷಾ ತರಬೇತಿಗೆಂದು (Coaching centre) ನಿಗದಿಪಡಿಸಿರುವ 112.87 ಕೋಟಿ ರೂಗಳ ಅನುದಾನ ಸಂಪೂರ್ಣವಾಗಿ ಅವ್ಯವಹಾರವಾಗಿದ್ದು, ಈ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಸಚಿವ ಎನ್. ಮಹೇಶ್ (N Mahesh) ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ನುರಿತ ತರಬೇತಿ ಸಂಸ್ಥೆಗೆ ಟೆಂಡರ್ ನೀಡದೆ, ಟೆಂಡರ್‌ನಲ್ಲಿ ಎಲ್-1 ಆಗಿದ್ದ ಕಡಿಮೆ ಗುಣಮಟ್ಟದ ತರಬೇತಿ ಸಂಸ್ಥೆಗೆ ಟೆಂಡರ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಎಸ್.ಸಿ. ಮತ್ತು ಎಸ್.ಟಿ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿಗೆಂದು ಸರ್ಕಾರ 112.87 ಕೋಟಿ ಅನುದಾನವನ್ನು ನಿಗದಿಪಡಿಸಿದೆ. ಈ ವರ್ಷ ಪೊಲೀಸ್ ಇಲಾಖೆಯ ನೇಮಕಾತಿ ನಡೆದ ನಂತರ ಎಸ್.ಐ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ನಡೆಯುತ್ತಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯದ ನಾಲ್ಕು ಆಡಳಿತ ವಿಭಾಗಗಳಿಗೆ ಎಸ್.ಐ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷಾ ತರಬೇತಿಗಾಗಿ ಸುಮಾರು 40 ಕೋಟಿ ಹಣವನ್ನು ಕಬ್ಬೂರ್ ಅಕಾಡೆಮಿ ಮತ್ತು ಎಸ್.ವಿ. ವಿಸ್ಡಮ್ ಅಕಾಡೆಮಿ ವಿಜಯಪುರ ತರಬೇತಿ ಸಂಸ್ಥೆಗಳಿಗೆ ಟೆಂಡರ್ ನೀಡಿದ್ದಾರೆ. ಟೆಂಡರ್‌ನ ಷರತ್ತುಗಳಲ್ಲಿ ತರಬೇತಿ ಸಂಸ್ಥೆಯು 5 ವರ್ಷಗಳ ಅನುಭವ ಇರಬೇಕು ಮತ್ತು ಸಂಸ್ಥೆಯ ವಾರ್ಷಿಕ ವಹಿವಾಟು 9 ಕೋಟಿ ಇರಬೇಕು. ಆದರೆ ಎಸ್.ವಿ. ವಿಸ್ಡಮ್ ಅಕಾಡೆಮಿ ಅವರಿಗೆ 2 ವರ್ಷಗಳ ಅನುಭವವಿದೆ ಮತ್ತು ಸದರಿ ಸಂಸ್ಥೆ 9 ಕೋಟಿ ವಹಿವಾಟು ಮಾಡಿರುವುದಕ್ಕೆ ದಾಖಲೆ ನೀಡಿರುವುದಿಲ್ಲ ಎಂದು ಆರೋಪಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ 2024-25ನೇ ಸಾಲಿನ ಎಸ್.ಐ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷಾ ತರಬೇತಿಯಲ್ಲಿ ಅವ್ಯವಹಾರ ನಡೆದಿದ್ದು, ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯು.ಪಿ.ಎಸ್.ಸಿ., ಕೆ.ಪಿ.ಎಸ್.ಸಿ, ರೈಲ್ವೆ ಮಂಡಳಿ ನೇಮಕಾತಿ, ಬ್ಯಾಂಕ್ ಮಂಡಳಿ ನೇಮಕಾತಿಗಳಲ್ಲಿ ಎಸ್.ಸಿ ಮತ್ತು ಎಸ್.ಟಿ ಮಕ್ಕಳು ಮತ್ತು ಅರ್ಹ ಅಭ್ಯರ್ಥಿಗಳು ಅವರಿಗೆ ಪೂರ್ವ ಪರೀಕ್ಷಾ ತರಬೇತಿ ನೀಡುತ್ತಾರೆ. ತರಬೇತಿ ಸಂಸ್ಥೆಯ ಹೆಸರು ಪರೀಕ್ಷಾ ಪೂರ್ವ ತರಬೇತಿ ಎಂದು ಇತ್ತು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಪರೀಕ್ಷಾ ಪೂರ್ವ ತರಬೇತಿಯನ್ನು ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರವೆಂದು ಮಾಡಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ದಲಿತರ ಮೇಲೆ ಕಾಳಜಿ ಇದ್ದಿದ್ದರೆ ಡಾ. ಅಂಬೇಡ್ಕರ್ ತರಬೇತಿ ಕೇಂದ್ರ ಎಂದು ಮಾಡಬಹುದಾಗಿತ್ತು. ಆದರೆ ಇಂದಿರಾ ಗಾಂಧಿ ಅವರಿಗೆ ಋಣ ತೀರಿಸಲು ಮತ್ತು ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಇಂದಿರಾ ಗಾಂಧಿ ತರಬೇತಿ ಕೇಂದ್ರವೆಂದು ಮಾಡಿದ್ದಾರೆ ಎಂದು ದೂರಿದರು.
ಪರೀಕ್ಷಾ ಪೂರ್ವ ತರಬೇತಿಗೆ ಟೆಂಡರಿನ ಎಲ್-1 ವ್ಯವಸ್ಥೆಯು ಇರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಎಲ್-1 ವ್ಯವಸ್ಥೆಯನ್ನು ಏಕೆ ತಂದಿದ್ದಾರೆ ಎಂದು ಪ್ರಶ್ನಿಸಿದರು. 2025-26ನೇ ಸಾಲಿನಲ್ಲಿ ಪರೀಕ್ಷಾ ಪೂರ್ವ ತರಬೇತಿಗೆ ಟೆಂಡರಿನ ಎಲ್-1 ವ್ಯವಸ್ಥೆ ಮಾಡುತ್ತಿರುವುದನ್ನು ಕೈಬಿಡಬೇಕು. ನುರಿತ ತರಬೇತಿ ಸಂಸ್ಥೆಗೆ ಟೆಂಡರ್ ನೀಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ | PM Narendra Modi: ರಾಜಸ್ಥಾನದಲ್ಲಿ 1.22 ಲಕ್ಷ ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ತರಬೇತಿ ಕೇಂದ್ರವು ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕೊಡುವುದಕ್ಕೆ ಇದೆ. ಆದರೆ ಇವರು ಡ್ರೋನ್ ಟ್ರೈನಿಂಗ್, ಡ್ರ್ರೋನ್ ಜಾಹೀರಾತು ಮತ್ತು ಇತರೆ ಚಟುವಟಿಕೆಗಳು, ಸೋಷಿಯಲ್ ಮೀಡಿಯಾ ಹೆಲ್ಪ್ ಲೈನ್, ಸೋಷಿಯಲ್ ಮೀಡಿಯಾ ಸಿಟಿಜನ್ ಜರ್ನಲಿಸಂ ವರ್ಕ್‍ಶಾಪ್, ಇತ್ಯಾದಿ ವರ್ಕ್‍ಶಾಪ್‍ಗಳಿಗೆ ತರಬೇತಿ ನೀಡುವುದಕ್ಕೆ ಟೆಂಡರ್ ತೆಗೆದುಕೊಂಡಿದ್ದಾರೆ ಎಂದು ದೂರಿದರು. ಕೌಶಲ್ಯ ತರಬೇತಿಗೆ ಬೇರೆ ಇಲಾಖೆ ಇದೆ. ಆದರೆ ಪರೀಕ್ಷಾ ಪೂರ್ವ ತರಬೇತಿ ಹೆಸರಿನಲ್ಲಿ ಕೌಶಲ್ಯ ತರಬೇತಿ ನೀಡುತ್ತಿರುವುದು ಸರಿಯಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಸಚಿವ ಎನ್. ಮಹೇಶ್ ಆಕ್ಷೇಪಿಸಿದರು.