ಬೆಂಗಳೂರು : ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashok) ಅವರ ಬೆಂಗಾವಲು ವಾಹನ ಚಾಲಕ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಾಪೂಜಿನಗರದ ಮನೆಯಲ್ಲಿ ಶರಣಗೌಡ ರಾಮಗೋಳ್ (33) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶರಣ ಗೌಡ ಅವರಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಸಹ ಇದ್ದು, ಪತ್ನಿ ಶೈಲಶ್ರೀ ಅವರು ಮಾಗಡಿ ಸಂಚಾರ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದಾರೆ.
ಇನ್ನು ಶರಣಗೌಡ ಪೊಲೀಸ್ ಬೆಂಗಾವಲು ವಾಹನ ಚಾಲಕರಾಗಿದ್ದು, ಕಳೆದ ಐದು ವರ್ಷಗಳಿಂದ ಅಶೋಕ್ ಅವರ ಬೆಂಗಾವಲು ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಆರ್ ಅಶೋಕ್ ಸಹ ವಿಕ್ಟೋರಿಯಾ ಆಸ್ಪತ್ರೆಯತ್ತ ದೌಡಾಯಿಸಿದ್ದು, ಪೊಲೀಸ್ ತನಿಖೆಯಲ್ಲಿ ಶರಣಗೌಡ ಆತ್ಮಹತ್ಯೆಗೆ ಕಾರಣ ತಿಳಿದುಬರಬೇಕಿದೆ.
ಇದನ್ನೂ ಓದಿ: Self Harming: ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಹಿರಿಯ ಐಪಿಎಸ್ ಅಧಿಕಾರಿ; ಕಾರಣ ನಿಗೂಢ
ಅಶೋಕ್ ಪ್ರತಿಕ್ರಿಯೆ
ಈ ಬಗ್ಗೆ ಆರ್.ಅಶೋಕ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈಗ ವಿಚಾರ ಗೊತ್ತಾಯ್ತು. ನಾನು ಎರಡು ದಿನ ಊರಲ್ಲಿ ಇರಲಿಲ್ಲ. ವಿಚಾರ ತಿಳಿದ ಕೂಡಲೇ ಇಲ್ಲಿಗೆ ಬಂದೆ. ನನ್ನ ಜೊತೆ ಎರಡು ವರ್ಷಗಳಿಂದ ಕೆಲಸ ಮಾಡಿದ್ದಾರೆ. ತುಂಬಾ ಸೈಲೆಂಟ್ ವ್ಯಕ್ತಿ. ಮಾತು ಬಹಳ ಕಡಿಮೆ. ತನ್ನ ಕೆಲಸ ಆಯ್ತು, ತಾನಾಯ್ತು ಅಂತ ಇದ್ದವರು. ಇವತ್ತು ಡ್ಯೂಟಿಗೆ ಬರಲ್ಲ, ಮಂತ್ರಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದ್ದರಂತೆ ಎಂದು ಬೇಸರ ವ್ಯಕ್ತಪಡಿಸಿದರು.
ಫ್ಯಾಮಿಲಿ ಚೆನ್ನಾಗಿದೆ. ಹಣಕಾಸಿನ ಸಮಸ್ಯೆ ಇರಲಿಲ್ಲ. ಈ ನವರಾತ್ರಿ ಹಬ್ಬಕ್ಕೆ ನಾನು ಸ್ವೀಟ್ಸ್ , ಬಟ್ಟೆ ಕೊಟ್ಟಿದ್ದೆ, ಆಗ ಅಚಾನಕ್ ಆಗಿ ನನಗೆ ನಮಸ್ಕಾರ ಮಾಡಿದ್ರು, ಸಾಮಾನ್ಯವಾಗಿ ಪೊಲೀಸ್ ಯಾರೂ ಹಾಗೆ ಕಾಲಿಗೆ ಬೀಳಲ್ಲ. ಆದರೆ ಅವತ್ತು ನನಗೆ ನಮಸ್ಕಾರ ಮಾಡಿದ್ರು. ಅಂತಹ ಒಳ್ಳೆಯ ವ್ಯಕ್ತಿಯನ್ನು ಇಂದು ಕಳೆದುಕೊಂಡಿದ್ದೇವೆ. ಡಿಸಿಪಿ ಜೊತೆ ಮಾತನಾಡಿದ್ದೇನೆ. ಡೆತ್ ನೋಟ್ ಏನಾದ್ರೂ ಸಿಕ್ಕಿದೆಯಾ ಎಂದು ನೋಡಬೇಕು ಎಂದು ಹೇಳಿದರು.