ತುಮಕೂರು: ಕಾಂಗ್ರೆಸ್ ಹೈಕಮಾಂಡ್ (Congress high command) ಸೂಚನೆಯಂತೆ ಸಚಿವ ಸಂಪುಟದಿಂದ ಕೆಎನ್ ರಾಜಣ್ಣ (KN Rajanna) ಅವರನ್ನ ವಜಾಗೊಳಿಸಲಾಗಿದೆ. ರಾಜಣ್ಣ ಮೇಲಿನ ದಿಢೀರ್ ಕ್ರಮ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ಸೃಷ್ಟಿಸಿದ್ದು, ಮಧುಗಿರಿಯಲ್ಲಿ (Madhugiri) ರಾಜಣ್ಣ ಬೆಂಬಲಿಗರು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಮುಖಂಡರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಮಧುಗಿರಿ (Tumkur news) ಬಂದ್ಗೆ ಕರೆ ನೀಡಿದ್ದಾರೆ. ಪ್ರತಿಭಟನೆ ವೇಳೆ ಅಭಿಮಾನಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ರಾಜಣ್ಣ ಅವರನ್ನು ವಜಾಗೊಳಿಸಿದ ಕ್ರಮವನ್ನು ಖಂಡಿಸಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಬೆಂಬಲಿಗರು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಬಿರುಸು ಪಡೆದು, ಬೆಂಬಲಿಗರು ಬಸ್ ತಡೆಯುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಣ್ಣ ಅವರ ಭಾವಚಿತ್ರ ಹಿಡಿದು ಬಸ್ ಕೆಳಗೆ ಮಲಗಿ, ಭಾವಚಿತ್ರ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜಣ್ಣ ಅಭಿಮಾನಿಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದು, ಬೆಂಕಿ ಹಚ್ಚಿಕೊಳ್ಳುವ ಮುನ್ನ ಆತನನ್ನು ರಕ್ಷಿಸಲಾಯಿತು.
ಕಾಂಗ್ರೆಸ್ ಮುಖಂಡರು ಇಂದು ಮಧುಗಿರಿ ಬಂದ್ಗೆ ಕರೆ ನೀಡಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಸ್ವಯಂಪ್ರೇರಿತ ಬಂದ್ ಆಚರಿಸಲು ಸೂಚನೆ ನೀಡಲಾಗಿದೆ. ಇದು ತುಮಕೂರು ಜಿಲ್ಲೆಗೆ ಆದ ದೊಡ್ಡ ಅನ್ಯಾಯ ಎಂದು ಅವರು ಹೇಳಿದ್ದಾರೆ. ಕೂಡಲೇ ಸಿಎಂ ಮರಪರಿಶೀಲಿಸಿ ಸರಿಪಡಿಸುವಂತೆ ಮುಖಂಡರು ಆಗ್ರಹಿಸಿದ್ದಾರೆ. ಮಧುಗಿರಿಯ ಎಲ್ಲಾ ಅಂಗಡಿ, ಮುಂಗಟ್ಟು ಬಂದ್ ಮಾಡಲು ತೀರ್ಮಾನಿಸಲಾಗಿದೆ. ಇದು ಪ್ರಾರಂಭವಷ್ಟೆ, ಮುಂದೆ ಇನ್ನು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಂಕೆ ನಂಜುಂಡರಾಜು ಹೇಳಿದ್ದಾರೆ.
ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿರುವುದಕ್ಕೆ ರಾಜಣ್ಣ ಅವರ ಆಪ್ತ ವಲಯದಲ್ಲಿ ಆಕ್ರೋಶ ತಾರಕಕ್ಕೇರಿದ್ದು, ಅವರ ಸ್ವಕ್ಷೇತ್ರ ಮಧುಗಿರಿಯಲ್ಲಿ ಪ್ರಮುಖರ ಸಭೆ ಆಯೋಜಿಸಲಾಗಿದೆ. ಸರ್ಕಾರದ ವಜಾ ಕ್ರಮ ಖಂಡಿಸಿ, ಮಧುಗಿರಿಯ ಎಂಎನ್‌ಕೆ ಕಲ್ಯಾಣ ಮಂಟಪದಲ್ಲಿ ಪ್ರಮುಖರ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಯಲಿದ್ದು, ಪ್ರತಿಭಟನೆಯ ರೂಪುರೇಷದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಪುರಸಭಾ ಸದಸ್ಯರು, ಕಾಂಗ್ರೆಸ್ ಮುಖಂಡರು, ಮತ್ತು ರಾಜಣ್ಣ ಅಭಿಮಾನಿ ಬಳಗ ಸೇರಿ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಧುಗಿರಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: KN Rajanna Resigns: ನನ್ನ ರಾಜೀನಾಮೆ ಹಿಂದೆ ದೊಡ್ಡ ಷಡ್ಯಂತ್ರವಿದೆ: ಕೆ.ಎನ್.ರಾಜಣ್ಣ ಮೊದಲ ಪ್ರತಿಕ್ರಿಯೆ