ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Minimum Support Price: ಅನ್ನದಾತರಿಗೆ ಕೇಂದ್ರದಿಂದ ಸಿಹಿಸುದ್ದಿ: ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

Pralhad Joshi: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ 2026-27ರ ಮಾರುಕಟ್ಟೆ ಋತುವಿಗಾಗಿ ಎಲ್ಲಾ ಕಡ್ಡಾಯ ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರ ಇದೀಗ ಹಿಂಗಾರು ಹಂಗಾಮು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಅತಿವೃಷ್ಟಿಯಿಂದ ತತ್ತರಿಸಿರುವ ರೈತ ಸಮುದಾಯದ ನೆರವಿಗೆ ಧಾವಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ 2026-27ರ ಮಾರುಕಟ್ಟೆ ಋತುವಿಗಾಗಿ ಎಲ್ಲಾ ಕಡ್ಡಾಯ ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಅನುಮೋದನೆ ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

2026-27ರ ಮಾರುಕಟ್ಟೆ ಋತುವಿನಲ್ಲಿ ಕುಸುಬೆಗೆ ಅತಿ ಹೆಚ್ಚು ಅಂದರೆ ಕ್ವಿಂಟಲ್‌ಗೆ ₹600 ಬೆಂಬಲ ಬೆಲೆ ಘೋಷಿಸಲಾಗಿದೆ. ಮಸೂರ್ ಕ್ವಿಂಟಲ್‌ಗೆ ₹300, ಸಾಸಿವೆ, ಕಡಲೆ, ಬಾರ್ಲಿ ಮತ್ತು ಗೋಧಿಗೆ ಕ್ರಮವಾಗಿ ₹250, ₹225, ₹170 ಮತ್ತು ₹160 ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Pralhad Joshi  (4)

ಹಿಂಗಾರು ಮಾರುಕಟ್ಟೆ ಋತುವಿನ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ 2018-19ರ ಕೇಂದ್ರ ಬಜೆಟ್ ಘೋಷಣೆಗೆ ಅನುಗುಣವಾಗಿದೆ. ದೇಶಾದ್ಯಂತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಎಂಎಸ್‌ಪಿ (MSP) ನಿಗದಿಪಡಿಸಲಾಗಿದೆ. ಉತ್ಪಾದನಾ ವೆಚ್ಚಕ್ಕಿಂತ ನಿರೀಕ್ಷಿತ ಲಾಭವಾಗಿ ಗೋಧಿಗೆ 109 ಪ್ರತಿಶತ, ಸಾಸಿವೆಗೆ 93 ಪ್ರತಿಶತ, ಮಸೂರಕ್ಕೆ 89 ಪ್ರತಿಶತ, ಕಡಲೆಗೆ 59 ಪ್ರತಿಶತ, ಬಾರ್ಲಿಗೆ 58 ಪ್ರತಿಶತ ಮತ್ತು ಕುಸುಬೆಗೆ 50 ಪ್ರತಿಶತ ಲಾಭ ರೈತರಿಗೆ ಲಭಿಸಲಿದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ | SSC Recruitment 2025: ದ್ವಿತೀಯ ಪಿಯುಸಿ ಪಾಸಾದವರಿಗೆ ಗುಡ್‌ನ್ಯೂಸ್‌; 7,565 ಕಾನ್‌ಸ್ಟೇಬಲ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

2026-27ರ ಹಿಂಗಾರು ಮಾರುಕಟ್ಟೆಯಲ್ಲಿ ಗೋಧಿಗೆ ₹160 ಬೆಂಬಲ ಬೆಲೆ ಸೇರಿ ₹2585, ಬಾರ್ಲಿಗೆ ₹170 ಬೆಂಬಲ ಬೆಲೆ ಸೇರಿ ₹2150, ಕಡಲೆಗೆ ಬೆಂಬಲ ಬೆಲೆ ₹225 ಸೇರಿ ₹5875, ಮಸೂರ್ ಗೆ ಬೆಂಬಲ ಬೆಲೆ ₹300 ಸೇರಿ ₹7000, ಸಾಸಿವೆಗೆ ₹250 ಬೆಂಬಲ ಬೆಲೆ ಸೇರಿ ₹6200 ಮತ್ತು ಕುಸುಬೆಗೆ ಅತಿ ಹೆಚ್ಚು ಬೆಂಬಲ ಬೆಲೆ ₹600 ಸೇರಿ ₹6540 ದರ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ ನೀಡಿದ್ದಾರೆ.