Siren Ban: ರಾಜ್ಯದಲ್ಲಿ ವಿಐಪಿಗಳ ಸಂಚಾರದ ವೇಳೆ ಸೈರನ್ ಬಳಕೆಗೆ ಕಡಿವಾಣ
Siren Ban: ಸೈರನ್ ಬಳಕೆಯಿಂದ ಶಬ್ದ ಮಾಲಿನ್ಯದ ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಲ್ಲದೇ ಗಣ್ಯರು ಸಂಚರಿಸುವ ಮಾರ್ಗದ ಕುರಿತು ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಗುವುದಲ್ಲದೆ, ಅಪಾಯ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಸೈರನ್ ಬಳಕೆ ನಿಷೇಧಿಸಲಾಗಿದೆ.


ಬೆಂಗಳೂರು: ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಗಣ್ಯ ವ್ಯಕ್ತಿಗಳು ಸಂಚರಿಸುವ ಸಂದರ್ಭಗಳಲ್ಲಿ ವಾಹನಗಳ ಸೈರನ್ ಬಳಕೆಗೆ ಕಡಿವಾಣ (Siren Ban) ಹಾಕುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶಿಸಿದ್ದಾರೆ. ಸೈರನ್ ಬದಲಿಗೆ ಅಧಿಕಾರಿ ಹಾಗೂ ಸಿಬ್ಬಂದಿ ವೈರ್‌ಲೆಸ್ ಕಮ್ಯುನಿಕೇಶನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಸೈರನ್ ಬಳಕೆಯಿಂದ ಶಬ್ದ ಮಾಲಿನ್ಯದ ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಲ್ಲದೇ ಗಣ್ಯರು ಸಂಚರಿಸುವ ಮಾರ್ಗದ ಕುರಿತು ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಗುವುದಲ್ಲದೆ, ಅಪಾಯ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಸಾರ್ವಜನಿಕ ರಸ್ತೆಗಳ ಮೇಲೆ ಹಠಾತ್ತಾಗಿ ಸೈರನ್ ಬಳಸುವುದರಿಂದ ಇತರೆ ವಾಹನ ಚಾಲಕರಿಗೆ ಗೊಂದಲ ಉಂಟಾಗಿ ಯಾವ ಕಡೆ ಚಲಿಸಬೇಕೆಂಬುದು ತಿಳಿಯದೆ ಅಡ್ಡಾದಿಡ್ಡಿಯಾಗಿ ಚಲಿಸಿ ಬೆಂಗಾವಲು ಮತ್ತು ಇತರ ವಾಹನಗಳಿಗೆ ಗೊಂದಲ ಉಂಟುಮಾಡುವ ಸಾಧ್ಯತೆ ಇರುತ್ತದೆ.
ಈ ಸುದ್ದಿಯನ್ನೂ ಓದಿ | Actor Darshan: ದರ್ಶನ್ ಜಾಮೀನು ಭವಿಷ್ಯ ನಾಳೆ ನಿರ್ಧಾರ; ಸುಪ್ರೀಂ ಕೋರ್ಟ್‌ನತ್ತ ಎಲ್ಲರ ಚಿತ್ತ!
ಆದ್ದರಿಂದ, ವಾಹನಗಳ ತುರ್ತು ಚಲನವಲನದ ಅವಶ್ಯಕತೆಗಳಿಗೆ ಅನುಗುಣವಾಗಿ ದೂರಸಂಪರ್ಕ ಸಾಧನಗಳಾದ ವೈರ್‌ಲೆಸ್ ಕಮ್ಯುನಿಕೇಶನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೆಚ್ಚು ಶಿಸ್ತಿನ ಹಾಗೂ ಸುರಕ್ಷಿತ ಮಾರ್ಗವಾಗಿದೆ. ಸೈರನ್‌ಗಳನ್ನು ಕೇವಲ ತುರ್ತು ಸೇವಾ ವಾಹನಗಳಾದ ಆ್ಯಂಬುಲೆನ್ಸ್, ಪೊಲೀಸ್ ವಾಹನಗಳು, ಅಗ್ನಿಶಾಮಕ ವಾಹನಗಳು ಮತ್ತಿತರ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು ಎಂದು ಡಿಜಿ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ.