ಮಂಡ್ಯ: ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಚಿವ ಎಚ್.ಸಿ.ಮಹದೇವಪ್ಪ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಚಿವ (HC Mahadevappa) ಮಾತನಾಡಿದ್ದು, ಕೆಆರ್‌ಎಸ್ ಗೇಟ್ನ (KRS Dam) ಹೆಬ್ಬಾಗಿಲಿನಲ್ಲಿ ಈಗಲೂ ಅಡಿಗಲ್ಲು ಇದ್ದು, ಈ ಸತ್ಯವನ್ನು ಹೇಳಲು ಯಾರಿಗೂ ಧೈರ್ಯ ಇಲ್ಲ. ಚರಿತ್ರೆ ಗೊತ್ತಿಲ್ಲದವರು ಚರಿತ್ರೆಯನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಟಿಪ್ಪು ಸುಲ್ತಾನ್ ದೇವದಾಸಿ ಪದ್ಧತಿ ರದ್ದು ಮಾಡಿದರು. ಟಿಪ್ಪು ಸುಲ್ತಾನ್ ಅವರ ಕಾಲದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಉಳ್ಳವರಿಗೆ ಕೊಟ್ಟಿರಲಿಲ್ಲ. ಟಿಪ್ಪು ಆ ಕಾಲದಲ್ಲೇ ದೇವದಾಸಿ ಪದ್ಧತಿ ರದ್ದು ಮಾಡಿದರು. ಆರ್ಥಿಕವಾಗಿ ಹಿಂದುಳಿದವರು ಮತ್ತು ಶೋಷಣೆಗೆ ಒಳಗಾದ ಮಹಿಳೆಯರನ್ನು ದೇವದಾಸಿ ಪದ್ಧತಿಗೆ ದೂಡುತ್ತಿದ್ದರು. ಆದರೆ ಈ ಪದ್ದತಿಯನ್ನು ವಿರೋಧಿಸಿದ್ದ ಅವರು ಇಲ್ಲದವರಿಗೆ ಭೂಮಿಯನ್ನು ವಿತರಿಸಿದ್ದ ಸಂಗತಿಯನ್ನು ನಾನು ಸದಾ ನೆನೆಯುವೆ ಎಂದು ತಿಳಿಸಿದ್ದಾರೆ.
ಟಿಪ್ಪು ಸುಲ್ತಾನ್ ಭಾರತ ದೇಶಕ್ಕೆ ರೇಷ್ಮೆ ಕೃಷಿ ತಂದರು. ಮೈಸೂರಿನ ಅರಮನೆ ಇದ್ದಿದ್ದು ಶ್ರೀರಂಗಪಟ್ಟಣದಲ್ಲಿ. ಟಿಪ್ಪು ಸುಲ್ತಾನ್ ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೊಡ್ಡ ಸ್ವಾತಂತ್ರ್ಯ ಸೇನಾನಿ ಎಂದು ಸಚಿವರು ಹೇಳಿದ್ದಾರೆ.
ಸಚಿವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಟಿಪ್ಪು ಸುಲ್ತಾನ್‌ನ ಹೊಗಳುವ ಭರದಲ್ಲಿ ಸಚಿವರು ಮೈಸೂರು ಅರಸರ ಸಾಧನೆಯನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸುದ್ದಿಯನ್ನೂ ಓದಿ | Belagavi News: ಮುಸ್ಲಿಂ ಮುಖ್ಯಶಿಕ್ಷಕನ ವರ್ಗಾವಣೆ ಮಾಡಿಸಲು ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ; ಮೂವರ ಬಂಧನ