ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ (2nd PUC Result 2025) ಮಂಗಳವಾರ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದರೆ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಗಳಿಸಿದೆ. ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ ಆಗಿದೆ. ಸದ್ಯ ಉತ್ತೀರ್ಣರಾದವರ ಫಲಿತಾಂಶವನ್ನು ಮಾತ್ರ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ತೇರ್ಗಡೆಯಾಗದವರಿಗೆ ಇನ್ನೂ ಎರಡು ಅವಕಾಶಗಳಿರಲಿವೆ. ಈ ಸಲ ಪರೀಕ್ಷೆ-2 ಮತ್ತು ಪರೀಕ್ಷೆ-3ಕ್ಕೆ ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಸದ್ಯ ಯಾರ್ಯಾರು ಪಾಸ್ ಆಗಿದ್ದಾರೋ ಅವರ ಲಿಸ್ಟ್ ಹಾಕಿದ್ದೇವೆ. ಉಳಿದವರನ್ನು ಫೇಲ್ ಅಂತ ಹೇಳಲು ಈಗಲೇ ಆಗಲ್ಲ. ಇನ್ನೂ ಪರೀಕ್ಷೆ 2, ಪರೀಕ್ಷೆ 3 ಬರೆಯಲು ಅವಕಾಶ ಇದೆ. ಯಾರು ತೇರ್ಗಡೆ ಹೊಂದಿಲ್ಲವೋ ಅವರಿಗೆ ಇನ್ನೂ ಎರಡು ಅವಕಾಶ ಇದೆ. ಈ ಸಲ ಎರಡನೇ ಮತ್ತು 3ನೇ ಪರೀಕ್ಷೆಗೆ ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ. ಇದು ಶಿಕ್ಷಣ ಇಲಾಖೆಯ ಮಹತ್ವದ ಹೆಜ್ಜೆ. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಜೆ ಸಮಯ ವಿಶೇಷ ತರಗತಿ ನಡೆಸಲು ಸೂಚನೆ ನೀಡಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.
ಬಾಲಕಿಯರೇ ಮೇಲುಗೈ
ದ್ವಿತೀಯ ಪಿಯುಸಿ ಪರೀಕ್ಷೆಯನ್ನು 6,37,805 ವಿದ್ಯಾರ್ಥಿಗಳು ಬರೆದಿದ್ದರು. 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ರಾಜ್ಯದ ಫಲಿತಾಂಶದ ಪ್ರಮಾಣ ಶೇಕಡಾ 73.45ರಷ್ಟಿದೆ. ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡದ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಮೊದಲ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ ಮೊದಲ ಸ್ಥಾನ ಪಡೆದಿದ್ದು, ಈಕೆ ದಕ್ಷಿಣ ಕನ್ನಡದ ಕೆನರಾ ಪಿಯು ಕಾಲೇಜು ವಿದ್ಯಾರ್ಥಿನಿ. ಇವರು 600ಕ್ಕೆ 599 ಅಂಕಗಳನ್ನು ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಇಂದು ಪಿಯು ಕಾಲೇಜು ವಿದ್ಯಾರ್ಥಿನಿ ಸಂಜನಾ ಬಾಯಿ 600ಕ್ಕೆ 597 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಶೇಕಡಾ 53.29ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ 76.07ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ 82.54ರಷ್ಟು ಉತ್ತೀರ್ಣರಾಗಿದ್ದಾರೆ.
ಇನ್ನು 134 ಕಾಲೇಜುಗಳಲ್ಲಿ ಶೇ.100 ರಿಸಲ್ಟ್ ಬಂದಿದೆ. 13 ಸರ್ಕಾರಿ ಕಾಲೇಜು ಶೇ.100 ಫಲಿತಾಂಶ ಬಂದಿದ್ದು, 123 ಸರ್ಕಾರಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.
ಫಲಿತಾಂಶ ನೋಡುವುದು ಹೇಗೆ?
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಪಿಯುಸಿ ಫಲಿತಾಂಶವನ್ನು karresults.nic.inನಲ್ಲಿ ವೀಕ್ಷಿಸಬಹುದು. ಫಲಿತಾಂಶದ ನಂತರ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಹಾಗೂ ಪರೀಕ್ಷೆ – 3 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಇದರಿಂದ ಎರಡನೇ ಪರೀಕ್ಷೆ ಪ್ರಯತ್ನಿಸಲಿರುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ದ್ವಿತೀಯ ಪಿಯುಸಿ ಫಲಿತಾಂಶ 2025 ಅನ್ನು SMS ಮತ್ತು ಡಿಜಿಲಾಕರ್ ಮೂಲಕವೂ ಪಡೆಯಬಹುದು.
2025ರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕರ್ನಾಟಕ ಮಂಡಳಿಯು ಮಾರ್ಚ್ 1 ರಿಂದ ಮಾರ್ಚ್ 20ರವರೆಗೆ ನಡೆಸಿತು. ಕರ್ನಾಟಕ ಮಂಡಳಿಯ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಲಾಯಿತು. ಕರ್ನಾಟಕ ಮಂಡಳಿಯ 12ನೇ ತರಗತಿ ಪರೀಕ್ಷೆಯ ನಂತರ, ಮಾರ್ಚ್ 21 ರಂದು ವಿದ್ಯಾರ್ಥಿಗಳಿಗೆ ಕೀ ಆನ್ಸರ್ಸ್ ಲಭ್ಯವಾಗುವಂತೆ ಮಾಡಲಾಯಿತು.
ಕಳೆದ ವರ್ಷ ಪರೀಕ್ಷೆ ಬರೆದ 6.81 ಲಕ್ಷ ವಿದ್ಯಾರ್ಥಿಗಳಲ್ಲಿ 5.52 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಒಟ್ಟಾರೆ ಉತ್ತೀರ್ಣ ಶೇಕಡಾ 81.15%. ಈ ವರ್ಷದ ಅಂಕಿಅಂಶಗಳು ಮತ್ತು ಮೆರಿಟ್ ಪಟ್ಟಿಗಳನ್ನು ಫಲಿತಾಂಶದ ಜೊತೆಗೆ ಬಹಿರಂಗಪಡಿಸಲಾಗುತ್ತದೆ.
ಇದನ್ನೂ ಓದಿ: HCL: ಎಚ್‌ಸಿಎಲ್ ಟಿಕ್ ಕಂಪನಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
ಮಂಡಳಿಯ ಅಧಿಕೃತ ವೆಬ್ ಸೈಟ್ ಗಳಾದ kseab.karnataka.gov.in ಮತ್ತು karresults.nic.in ನಲ್ಲಿ ನಿಮ್ಮ ನೋಂದಣಿ ಸಂಖ್ಯೆ ಹಾಕುವ ಮೂಲಕ ವೀಕ್ಷಿಸಬಹುದು. 2025 ರ ದ್ವಿತೀಯ ಪಿಯುಸಿ ಫಲಿತಾಂಶಗಳ ಮೇಲೆ ಕ್ಲಿಕ್ ಮಾಡಿ ನಿಮ್ಮ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ. ನಿಮ್ಮ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಅನ್ನು ಡೌನ್‌ಲೋಡ್ ಮಾಡಿ.